ಡಿಜಿಪಿ ರಾಮಚಂದ್ರರಾವ್ ಅವರು ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎನ್ನಲಾದ ವಿಡಿಯೋಗಳು ವೈರಲ್ ಆಗಿದ್ದು, ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಚಾರಣೆ ನಡೆಸಿ, ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದರು.
ಬೆಳಗಾವಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಿಎಂ, “ಯಾವುದೇ ಉನ್ನತಮಟ್ಟದ ಅಧಿಕಾರಿಯೂ ಕಾನೂನಿಗಿಂತ ದೊಡ್ಡವರಲ್ಲ” ಎಂದು ಹೇಳಿದರು.
ಕಚೇರಿಯಲ್ಲಿ ಕುಳಿತು ಸಮವಸ್ತ್ರದಲ್ಲೇ ಡಿಜಿಪಿ ರಾಮಚಂದ್ರರಾವ್ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎನ್ನಲಾದ ವಿಡಿಯೋಗಳು ಹರಿದಾಡುತ್ತಿದೆ. ಸಾರ್ವಜನಿಕ ವಲಯದಲ್ಲಿ ಚರ್ಚೆಯ ವಿಷಯವಾಗಿದೆ.
ಈ ಹಿಂದೆ ಡಿಜಿಪಿ ರಾಮಚಂದ್ರ ರಾವ್ ಅವರ ಮಲ ಮಗಳು ನಟಿ ರನ್ಯಾ ರಾವ್ ಅಕ್ರಮವಾಗಿ ಚಿನ್ನ ಸಾಗಾಟ ಮಾಡಿದ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡು ಪ್ರಸ್ತುತ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಈಗ ಆಕೆಯ ಮಲ ತಂದೆಯದ್ದು ಎನ್ನಲಾದ ಖಾಸಗಿ ವಿಡಿಯೋ ವೈರಲ್ ಆಗಿದೆ.
ನಿಜವಾದ ಮತದಾರರಿಗೆ ಅನ್ಯಾಯವಾಗಬಾರದು: ಸಿಎಂ
ಚುನಾವಣಾ ಆಯೋಗ ನಡೆಸುವ ಎಸ್‌ಐಆರ್ ವಿಚಾರದಲ್ಲಿ ಕಾಂಗ್ರೆಸ್ ಎಂದಿಗೂ ರಾಜಕೀಯ ಮಾಡುವುದಿಲ್ಲ. ನಿಜವಾದ ಮತದಾರರು ಪಟ್ಟಿಯಿಂದ ಹೊರಗೆ ಉಳಿಯಬಾರದು ಎಂಬುವುದಷ್ಟೇ ನಮ್ಮ ಕಾಳಜಿಯಾಗಿದೆ ಎಂದು ಸಿಎಂ ಹೇಳಿದರು.
ರಾಜ್ಯದ 3 ಕೋಟಿ ಮತದಾರರ ಮ್ಯಾಪಿಂಗ್ ಆಗಿಲ್ಲವೆಂದು ತಿಳಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ, ಎಸ್‌ಐಆರ್ ಪ್ರಕ್ರಿಯೆ ಎಚ್ಚರಿಕೆಯಿಂದ ನಡೆಯಬೇಕಿದ್ದು, ಯಾವುದೇ ಮತದಾರರಿಗೆ ಅನ್ಯಾಯವಾಗದಂತೆ ಕಾರ್ಯನಿರ್ವಹಿಸಬೇಎಂದು ಬಿಎಲ್‌ಒಗಳಿಗೆ ಸೂಚಿಸಲಾಗಿದೆ ಎಂದರು.
ವಿರೋಧಪಕ್ಷಗಳು ಸುಳ್ಳು ಆರೋಪಗಳಿಂದ ಜನರ ದಾರಿ ತಪ್ಪಿಸುತ್ತಿದ್ದಾರೆ
ಶಾಸಕ ಜನಾರ್ದನ ರೆಡ್ಡಿಯವರು ಸಿಎಂ ಹಾಗೂ ಸಚಿವರು ರಾಜ್ಯವನ್ನು ಲೂಟಿ ಮಾಡುತ್ತಿದ್ದಾರೆಂದು ಆರೋಪಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಜನಾರ್ದನ ರೆಡ್ಡಿಯವರು ರಾಜ್ಯದ ಸಂಪತ್ತನ್ನು ಲೂಟಿ ಮಾಡಿ ಜೈಲಿಗೆ ಹೋಗಿದ್ದು, ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಕರಣವಿನ್ನೂ ನಡೆಯುತ್ತಿದೆ. ಅವರಿಗೆ ಆರೋಪಿಸಲು ಯಾವುದೇ ನೈತಿಕ ಅಧಿಕಾರವಿಲ್ಲ. ವಿರೋಧ ಪಕ್ಷಗಳು ಸುಳ್ಳು ಆರೋಪಗಳನ್ನು ಮಾಡುವುದರಲ್ಲಿ ನಿರತವಾಗಿದ್ದು, ಜನರನ್ನು ದಾರಿತಪ್ಪಿಸುತ್ತಿದ್ದಾರೆ. ಜನವರಿ 22ರಿಂದ ವಿಧಾನಸಭೆ ಅಧಿವೇಶನ ಪ್ರಾರಂಭವಾಗುತ್ತಿದ್ದು, ಅಧಿವೇಶನದಲ್ಲಿ ವಿರೋಧಪಕ್ಷಗಳು ಚರ್ಚೆ ನಡೆಸಲಿ ಎಂದು ಹೇಳಿದರು.
ಮಹಾರಾಷ್ಟ್ರ- ಕರ್ನಾಟಕ ರಾಜ್ಯದ ಗಡಿವಿವಾದ : ವಾದ ಮಂಡಿಸಲು ಸಿದ್ದ
ಮಹಾರಾಷ್ಟ್ರ- ಕರ್ನಾಟಕ ರಾಜ್ಯದ ಗಡಿವಿವಾದ ವಿಚಾರಣೆ ವಿಷಯ ಸುಪ್ರೀಂಕೋರ್ಟ್‌ನ ಮುಂದೆ ಬರಲಿರುವ ಬಗ್ಗೆ ಉತ್ತರಿಸಿದ ಸಿಎಂ, ಮಹಾರಾಷ್ಟ್ರ ಸರ್ಕಾರ ಗಡಿ ವಿವಾದ ಸಂಬಂಧ ಸಲ್ಲಿಸಿರುವ ಅರ್ಜಿಯ ವಿರುದ್ಧ ವಾದ ಮಂಡಿಸಲು ಕರ್ನಾಟಕ ಕಾನೂನು ತಂಡ ಸಿದ್ಧವಾಗಿದೆ. ರಾಜ್ಯದ ಗಡಿಯ ಬಗ್ಗೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲು ಮಹಾರಾಷ್ಟ್ರದ ಅಧಿಕಾರ ವ್ಯಾಪ್ತಿಗೆ ಬರುತ್ತದೆಯೇ ಎಂಬ ಬಗ್ಗೆಯೇ ನಮ್ಮ ಪ್ರಶ್ನೆಯಿದ್ದು, ಈ ವಿಚಾರ ಮೊದಲು ಇತ್ಯರ್ಥವಾಗಬೇಕು ಎಂದರು.
ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ
ಮಹಾನಗರ ಪಾಲಿಕೆ ಚುನಾವಣೆಗಳು ಬ್ಯಾಲೆಟ್ ಪೇಪರ್ ಮೂಲಕ ನಡೆಯಬೇಕು ಎಂಬ ಬೇಡಿಕೆ ಬಗ್ಗೆ ಉತ್ತರಿಸಿದ ಸಿಎಂ, ಸ್ಥಳೀಯ ಚುನಾವಣೆಗಳು ಬ್ಯಾಲೆಟ್ ಪೇಪರ್ ಮೂಲಕವೇ ನಡೆಯಬೇಕೆಂಬುದು ನಮ್ಮ ಬೇಡಿಕೆಯೂ ಆಗಿದೆ ಎಂದು ತಿಳಿಸಿದರು.
ಒಳಮೀಸಲಾತಿ ವಿಧೇಯಕ
ಒಳಮೀಸಲಾತಿ ವಿಧೇಯಕವನ್ನು ರಾಜ್ಯಪಾಲರು ಹಿಂದಿರುಗಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಈ ವಿಧೇಯಕದ ಸಂಬಂಧ ರಾಜ್ಯಪಾಲರು ಕೇಳಿರುವ ಪ್ರಶ್ನೆಗಳಿಗೆ ಸೂಕ್ತ ವಿವರಣೆಗಳನ್ನು ನೀಡಲಾಗುವುದು ಎಂದರು.
ವರಿಷ್ಠರಿಂದ ಕರೆಬಂದಾಗ ನವದೆಹಲಿಗೆ ಪ್ರಯಾಣ
ನವದೆಹಲಿಗೆ ಭೇಟಿ ನೀಡುವ ಬಗ್ಗೆ ಉತ್ತರಿಸಿ, ಪಕ್ಷದ ವರಿಷ್ಠರಿಂದ ಭೇಟಿಗೆ ಕರೆಬಂದರೆ ನವದೆಹಲಿಗೆ ತೆರಳುವುದಾಗಿ ಸಿಎಂ ಸಿದ್ದರಾಮಯ್ಯ ತಿಳಿಸಿದರು.


