ಮಹಾರಾಷ್ಟ್ರದಲ್ಲಿ ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಅಧಿಕಾರಕ್ಕೆ ಬಂದರೆ ಧಾರಾವಿ ಪುನರಾಭಿವೃದ್ಧಿ ಯೋಜನೆಗಾಗಿ ಅದಾನಿ ಗ್ರೂಪ್‌ಗೆ ನೀಡಲಾದ ಟೆಂಡರ್ ಅನ್ನು ರದ್ದುಗೊಳಿಸಲಾಗುವುದು ಎಂದು ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ ಶನಿವಾರ ಹೇಳಿದ್ದಾರೆ ಎಂದು ವರದಿಯಾಗಿದೆ.
ಅಕ್ಟೋಬರ್‌ನಲ್ಲಿ ಮಹಾರಾಷ್ಟ್ರ ವಿಧಾನಸಭೆಗೆ ಚುನಾವಣೆ ನಡೆಯುವ ನಿರೀಕ್ಷೆ ಇದೆ.
ಮುಂಬೈನ ಧಾರಾವಿ ಕೊಳಗೇರಿ ಪ್ರದೇಶದ ಪುನರಾಭಿವೃದ್ಧಿ ಯೋಜನೆಯ ಟೆಂಡರ್ 2022ರಲ್ಲಿ ಅದಾನಿ ಗ್ರೂಪ್ ಪಾಲಾಗಿದೆ. ಈ ಯೋಜನೆಯು ಪ್ರಸ್ತುತ 2.5 ಚದರ ಕಿಲೋ ಮೀಟರ್ ಪ್ರದೇಶದಲ್ಲಿ ವಾಸಿಸುತ್ತಿರುವ 6.5 ಲಕ್ಷ ಕೊಳೆಗೇರಿ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸುವ ಉದ್ದೇಶ ಹೊಂದಿದೆ.
ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಉದ್ದವ್ ಠಾಕ್ರೆ, “ಧಾರಾವಿ ನಿವಾಸಿಗಳು ಮತ್ತು ಸ್ಥಳೀಯ ವ್ಯಾಪಾರಗಳನ್ನು ಬೇರು ಸಹಿತ ಕಿತ್ತು ಹಾಕದಂತೆ ನಮ್ಮ ಸರ್ಕಾರವು ರಕ್ಷಣೆ ನೀಡಲಿದೆ ಎಂದಿದ್ದಾರೆ.
ಉದ್ಧವ್ ಠಾಕ್ರೆ ನೇತೃತ್ವದ ಶಿವ ಸೇನೆಯು ವಿರೋಧ ಪಕ್ಷದ ಮಹಾ ವಿಕಾಸ್ ಅಘಾಡಿಯ ಭಾಗವಾಗಿದೆ. ಇದರಲ್ಲಿ ಕಾಂಗ್ರೆಸ್ ಮತ್ತು ಶರದ್ ಪವಾರ್ ನೇತೃತ್ವದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷವೂ ಸೇರಿದೆ.
ಧಾರಾವಿ ಕೊಳಗೇರಿ ನಿವಾಸಿಗಳಿಗೆ 500 ಚದರ ಅಡಿಯ ಮನೆಗಳನ್ನು ಒದಗಿಸಬೇಕು ಎಂದು ಆಗ್ರಹಿಸಿರುವ ಠಾಕ್ರೆ, ಗುತ್ತಿಗೆಯಲ್ಲಿ ನಿರ್ದಿಷ್ಟಪಡಿಸದ ಹೆಚ್ಚುವರಿ ರಿಯಾಯಿತಿಗಳನ್ನು ಯೋಜನೆಗಾಗಿ ಅದಾನಿ ಗ್ರೂಪ್‌ಗೆ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.
ನಾವು ಯಾವುದೇ ಹೆಚ್ಚುವರಿ ನೀಡುವುದಿಲ್ಲ. ಧಾರಾವಿ ನಿವಾಸಿಗಳಿಗೆ ಯಾವುದು ಒಳ್ಳೆಯದು ಎಂಬುದನ್ನು ನೋಡುತ್ತೇವೆ. ಅಗತ್ಯವಿದ್ದರೆ ಹೊಸದಾಗಿ ಟೆಂಡರ್ ನೀಡುತ್ತೇವೆ. ಮುಂಬೈಯನ್ನು ಅದಾನಿ ನಗರವನ್ನಾಗಿ ಮಾಡಲು ನಾವು ಬಿಡುವುದಿಲ್ಲ ಎಂದು ಠಾಕ್ರೆ ಹೇಳಿದ್ದಾರೆ.
ಧಾರಾವಿ ಪುನರಾಭಿವೃದ್ಧಿ ಯೋಜನೆಯನ್ನು ವಿಶೇಷವಾಗಿ ನಡೆಸಲಾಗುತ್ತಿದೆ. ಇದರಲ್ಲಿ ಅದಾನಿ ಗ್ರೂಪ್ 80% ಪಾಲನ್ನು ಹೊಂದಿದೆ ಮತ್ತು ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರವು ಉಳಿದ 20% ಪಾಲು ಹೊಂದಿದೆ.
ಯೋಜನೆಯಡಿ ಕೊಳೆಗೇರಿ ನಿವಾಸಿಗಳ ಪುನರ್ವಸತಿ ಜೊತೆಗೆ, ಕಟ್ಟಡಗಳು ಮತ್ತು ಅನೌಪಚಾರಿಕ ವಠಾರಗಳನ್ನು ಪುನರಾಭಿವೃದ್ಧಿ ಮಾಡಲಾಗುತ್ತದೆ. ಪ್ರಪಂಚದ ಅತಿದೊಡ್ಡ ಕೊಳೆಗೇರಿಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿರುವ ಧಾರಾವಿಯಲ್ಲಿ ನೀರು ಸರಬರಾಜು ಮತ್ತು ಒಳಚರಂಡಿಗಳಂತಹ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ.
ಇದನ್ನೂ ಓದಿ : ಸುಪ್ರೀಂ ಕೋರ್ಟ್ ನಿರ್ದೇಶನದಂತೆ ನೀಟ್ ಫಲಿತಾಂಶ ಪ್ರಕಟಿಸಿದ ಎನ್‌ಟಿಎ


