ಧರ್ಮಸ್ಥಳದಲ್ಲಿ ಮತ್ತೆ ಮನುಷ್ಯರ ಅಸ್ತಿಪಂಜರದ ಅವಶೇಷಗಳು ಪತ್ತೆಯಾಗಿವೆ ಎಂಬ ಮಾಹಿತಿ ದೊರೆತಿದೆ. ಇಂದು (ಸೋಮವಾರ) ದೂರುದಾರ ತೋರಿಸಿದ ಬಂಗ್ಲಗುಡ್ಡೆಯ ಒಂದೇ ಜಾಗದಲ್ಲಿ ಹಲವಾರು ಶವಗಳ ತಲೆಬುರುಡೆ, ಮೂಳೆಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ.
ಧರ್ಮಸ್ಥಳ ಸ್ನಾನಘಟ್ಟ ಸಮೀಪದ ಬಂಗ್ಲಗುಡ್ಡೆಯಲ್ಲಿ ದೂರುದಾರ ತೋರಿಸಿದ್ದ 11ನೇ ಪಾಯಿಂಟ್‌ನಲ್ಲಿ ಇಂದು ಬೆಳಿಗ್ಗೆಯಿಂದ ಎಸ್‌ಐಟಿ ಶೋಧನೆ ನಡೆಸುತ್ತಿತ್ತು. ಈ ಸಂದರ್ಭದಲ್ಲಿ ದೂರುದಾರ ಅನಾಮಿಕ ವ್ಯಕ್ತಿ ಮತ್ತೊಂದು ಸ್ಥಳಕ್ಕೆ ಇಡೀ ತಂಡವನ್ನು ಕರೆದೊಯ್ದು ಅಗೆತ ನಡೆಸಿದಾಗ ಒಂದಕ್ಕಿಂತ ಹೆಚ್ಚು ಕಳೇಬರಹಗಳ ಅವಶೇಷಗಳು ಪತ್ತೆಯಾಗಿವೆ ಎಂಬ ಮಾಹಿತಿ ದೊರೆತಿದೆ.
ಕೂಡಲೇ ಎಸ್‌ಐಟಿ ಆ ಅವಶೇಷಗಳನ್ನು ಎಫ್‌ಎಸ್‌ಎಲ್ ತಂಡಕ್ಕೆ ವರ್ಗಾಯಿಸಿದೆ. ಅವಶೇಷ ಪತ್ತೆಯಾದ ಸ್ಥಳಕ್ಕೆ ಅಧಿಕಾರಿಗಳು ಮೂರು ಮೂಟೆ ಉಪ್ಪು ತರಿಸಿಕೊಂಡಿದ್ದಾರೆ.
ಇದುವರೆಗೆ ದೂರುದಾರ ತೋರಿಸಿರುವ ಪಾಯಿಂಟ್‌ಗಳ ಪೈಕಿ 11 ಪಾಯಿಂಟ್‌ಗಳಲ್ಲಿ ಅಗೆಯಲಾಗಿದೆ. ಈ ಪೈಕಿ 6ನೇ ಪಾಯಿಂಟ್‌ನಲ್ಲಿ ಮನುಷ್ಯರ ಅಸ್ತಿ ಪಂಜರದ ಕೆಲವು ಅವಶೇಷಗಳು ಪತ್ತೆಯಾಗಿತ್ತು. ಆ ಬಳಿಕ ಇದೀಗ 11ನೇ ಪಾಯಿಂಟ್‌ನಲ್ಲಿ ಅವಶೇಷಗಳು ದೊರೆತಿವೆ ಎಂದು ತಿಳಿದು ಬಂದಿದೆ.
ಒಳಮೀಸಲಾತಿ | ನ್ಯಾ. ನಾಗಮೋಹನ್ ದಾಸ್ ಆಯೋಗದಿಂದ ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಕೆ


