ಧರ್ಮಸ್ಥಳ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೂಳಲಾಗಿದೆ ಎನ್ನಲಾದ ಶವಗಳನ್ನು (ಅಸ್ತಿ ಪಂಜರ) ಹೊರ ತೆಗೆಯುವ ಕೆಲಸ ಮಂಗಳವಾರ(ಜು.29) ಆರಂಭಗೊಂಡಿದೆ. ಪುತ್ತೂರು ಉಪ ವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್, ಎಸ್‌ಐಟಿಯ ತನಿಖಾಧಿಕಾರಿ ಜಿತೇಂದ್ರ ದಯಾಮ್ ಮತ್ತಿತರ ಅಧಿಕಾರಿಗಳು ಹಾಜರಿದ್ದಾರೆ.
ಶವಗಳನ್ನು ಹೊರತೆಗೆಯಲು ಎಸ್‌ಐಟಿ ಸಂಪೂರ್ಣ ಸಿದ್ದತೆ ಮಾಡಿಕೊಂಡಿದೆ. ಧರ್ಮಸ್ಥಳ ಗ್ರಾಮ ಪಂಚಾಯತಿಯ 12 ಮಂದಿ ಕಾರ್ಮಿಕರನ್ನು ನಿಯೋಜಿಸಿದೆ. ಅವರು ಹಾರೆ, ಪಿಕಾಸಿ, ಗುದ್ದಲಿ ಜೊತೆ ಆಗಮಿಸಿದ್ದಾರೆ. ಎಲ್ಲರೂ ನೇತ್ರಾವತಿ ಸ್ನಾನಘಟ್ಟದಲ್ಲಿ ಬೀಡು ಬಿಟ್ಟಿದ್ದಾರೆ. ದೂರು ನೀಡಿದ ಅನಾಮಧೇಯ ವ್ಯಕ್ತಿ ಈವರೆಗೆ ಶವಗಳನ್ನು ಹೂತಿರುವ 13 ಸ್ಥಳಗಳನ್ನು ತೋರಿಸಿದ್ದಾರೆ. ಆ ಜಾಗಗಳಲ್ಲಿ ಅಸ್ಥಿಪಂಜರಗಳು ಸಿಗಲಿದೆಯೇ ಎಂದು ಕಾದುನೋಡಬೇಕಿದೆ.
ನೇತ್ರಾವತಿ ಸ್ನಾನ ಘಟ್ಟದ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಪೊಲೀಸರು ಕಳೇಬರ ಅಥವಾ ಅಸ್ಥಿಪಂಜರಗಳ ಸಂಗ್ರಹಕ್ಕೆ ಬಟ್ಟೆ, ಪ್ಲಾಸ್ಟಿಕ್ ಕವರ್ ಗಳನ್ನು ತಂದಿದ್ದಾರೆ.
ಈ ಮಧ್ಯೆ ಪ್ರತಿಕ್ರಿಯೆ ನೀಡಿರುವ ಗೃಹಸಚಿವ ಡಾ. ಜಿ ಪರಮೇಶ್ವರ್, “ಧರ್ಮಸ್ಥಳದಲ್ಲಿ ಎಸ್‌ಐಟಿ ಅಧಿಕಾರಿಗಳಿಂದ ತನಿಖೆ ನಡೆಯುತ್ತಿದ್ದು, ಆ ವಿಷಯದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಹೇಳಿದ್ದಾರೆ.
ದೂರುದಾರರ ವ್ಯಕ್ತಿ ಶನಿವಾರ ಮತ್ತು ಭಾನುವಾರ ಎಸ್‌ಐಟಿ ಅಧಿಕಾರಿಗಳ ಮುಂದೆ ಹಾಜರಾಗಿ ಹೇಳಿಕೆ ದಾಖಲಿಸಿದ್ದರು. ಜುಲೈ 4 ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಒಂದು ವಾರದ ನಂತರ ಬೆಳ್ತಂಗಡಿ ನ್ಯಾಯಾಲಯದ ಮುಂದೆ ಹಾಜರಾಗಿ, ತಮ್ಮ ಹೇಳಿಕೆಯನ್ನು ದಾಖಲಿಸಿದ್ದರು.
ಧರ್ಮಸ್ಥಳ| ಶವಗಳನ್ನು ಹೂತಿಟ್ಟ 13 ಜಾಗ ತೋರಿಸಿದ ದೂರುದಾರ; ಇಂದು ಮಹಜರು ಮುಂದುವರಿಯುವ ಸಾಧ್ಯತೆ


