ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಲಾಗಿದೆ ಎಂಬ ಪ್ರಕರಣದ ಎಸ್‌ಐಟಿ ತನಿಖೆಗೆ ನೀಡಿದ್ದ ತಡೆಯಾಜ್ಞೆಯನ್ನು ಹೈಕೋರ್ಟ್ ಬುಧವಾರ (ನ.12) ತೆರವುಗೊಳಿಸಿದೆ ಮತ್ತು ಅರ್ಜಿದಾರರಿಗೆ ಯಾವುದೇ ಕಿರುಕುಳ ನೀಡಬಾರದು ಎಂದು ನಿರ್ದೇಶಿಸಿದ ಮಧ್ಯಂತರ ಆದೇಶವನ್ನು ವಿಸ್ತರಿಸಿದೆ.
ಧರ್ಮಸ್ಥಳದಲ್ಲಿ ದೇವಾಲಯದ ಆಡಳಿತದ ಆದೇಶದ ಮೇರೆಗೆ ಅಕ್ರಮವಾಗಿ ಹಲವಾರು ಶವಗಳನ್ನು ಹೂತಿದ್ದಾರೆ ಎಂದು ಆರೋಪಿಸಿ ಚಿನ್ನಯ್ಯ ಅವರು ನೀಡಿರುವ ದೂರಿನ ಆಧಾರದ ಮೇಲೆ ಧರ್ಮಸ್ಥಳ ಪೊಲೀಸರು ದಾಖಲಿಸಿದ್ದ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಮೊಹಮ್ಮದ್ ನವಾಝ್ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿದೆ.
ವಿಚಾರಣೆಯ ಸಮಯದಲ್ಲಿ, ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಬಿ.ಎನ್. ಜಗದೀಶ ಅವರು ಅರ್ಜಿದಾರರು ಮ್ಯಾಜಿಸ್ಟ್ರೇಟ್ ಅನುಮತಿಯನ್ನು ಪಡೆದಿಲ್ಲ ಎಂಬ ಸುಳ್ಳು ಮಾಹಿತಿಯನ್ನು ನೀಡುವ ಮೂಲಕ ತಡೆಯಾಜ್ಞೆ ಪಡೆದಿದ್ದಾರೆ. ವಾಸ್ತವವಾಗಿ ಅಂತಹ ಅನುಮತಿಯನ್ನು ಪಡೆಯಲಾಗಿದ್ದು, ಹಿಂದಿನ ಆದೇಶವನ್ನು ಪೀಠವು ಪರಿಶೀಲಿಸಲು ಅನುವು ಮಾಡಿಕೊಡುತ್ತದೆ ಎಂದು ವಾದಿಸಿದ್ದಾರೆ.
ಆರೋಪಿಗಳಿಗೆ ನೋಟಿಸ್ ನೀಡುತ್ತಿದ್ದಂತೆ, ಅವರು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ನ್ಯಾಯಾಲಯದ ಮೊರೆ ಹೋಗಿದ್ದಾರೆ ಎಂದು ಬಿ.ಎನ್. ಜಗದೀಶ ಹೇಳಿದ್ದಾರೆ. ತಡೆಯನ್ನು ತೆರವುಗೊಳಿಸದಿದ್ದರೆ ತನಿಖೆಗೆ ಅಡ್ಡಿಯಾಗುತ್ತದೆ. ಹಾಗಾಗಿ, ತಡೆಯಾಜ್ಞೆಯನ್ನು ತೆಗೆದುಹಾಕುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಅರ್ಜಿದಾರರು ಸ್ವತಃ ಈ ಹಿಂದೆ ಎಸ್‌ಐಟಿ ತನಿಖೆಯನ್ನು ಶ್ಲಾಘಿಸಿದ್ದಾರೆ ಎಂದು ಅವರು ನ್ಯಾಯಾಲಯದ ಗಮನಸೆಳೆದಿದ್ದಾರೆ.
ನಂತರ ನ್ಯಾಯಾಲಯವು ತನಿಖೆಯ ಮೇಲಿನ ತಡೆಯಾಜ್ಞೆಯನ್ನು ತೆರವುಗೊಳಿಸಿದೆ. ಅರ್ಜಿದಾರರಿಗೆ ಯಾವುದೇ ಕಿರುಕುಳ ನೀಡಬಾರದು ಎಂದು ನಿರ್ದೇಶಿಸಿದ ಮಧ್ಯಂತರ ಆದೇಶವನ್ನು ವಿಸ್ತರಿಸಿದೆ.
ಅರ್ಜಿದಾರರು ‘ಜಸ್ಟೀಸ್ ಫಾರ್ ಸೌಜನ್ಯ’ ಆಂದೋಲನದ ಮುಂಚೂಣಿಯಲ್ಲಿದ್ದರು ಮತ್ತು ಚಿನ್ನಯ್ಯ ಮಾಡಿದ ಹೇಳಿಕೆಗಳನ್ನು ಬೆಂಬಲಿಸಿದ್ದರು. ಆದಾಗ್ಯೂ, ಜುಲೈ 2025ರಲ್ಲಿ ಚಿನ್ನಯ್ಯ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ ತಲೆಬುರುಡೆಯ ಕುರಿತು ಎಸ್‌ಐಟಿ ಅವರಿಗೆ ಒಂಬತ್ತು ಬಾರಿ ಸಮನ್ಸ್ ಜಾರಿ ನೀಡಿತ್ತು. ಚಿನ್ನಯ್ಯ ಸ್ವತಃ ತಲೆಬುರುಡೆಯನ್ನು ಹೊರತೆಗೆದಿಲ್ಲ ಎಂದು ಎಸ್‌ಐಟಿ ಕಂಡುಹಿಡಿದಿದ್ದು, ಅದನ್ನು ಹೇಗೆ ಮತ್ತು ಎಲ್ಲಿಂದ ಹೊರತೆಗೆದರು ಎಂದು ತಿಳಿದಿದ್ದರು ಎಂದು ನಂಬಲಾದ ನಾಲ್ವರಿಗೆ ನೋಟಿಸ್ ನೀಡಿತ್ತು ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.


