ಮಂಡ್ಯ: ಧರ್ಮಸ್ಥಳದಲ್ಲಿ ನಡೆದ ಬಹುಚರ್ಚಿತ ಅಪಹರಣ, ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳ ತನಿಖೆಗಾಗಿ ರಚಿಸಲಾಗಿರುವ ವಿಶೇಷ ತನಿಖಾ ತಂಡ (SIT) ದ ಮುಂದೆ ಸಾಕ್ಷ್ಯ ನುಡಿಯಲು ಮಂಡ್ಯ ಜಿಲ್ಲೆಯ 62 ವರ್ಷ ವಯಸ್ಸಿನ ವೃದ್ಧೆ ಚಿಕ್ಕಕೆಂಪಮ್ಮ ಮುಂದೆ ಬಂದಿದ್ದಾರೆ. 2012ರಲ್ಲಿ ನಡೆದ ಒಂದು ನಿರ್ದಿಷ್ಟ ಘಟನೆಯ ಕಣ್ಣಾರೆ ಕಂಡ ಸಾಕ್ಷಿಯಾಗಿ ತಾವು ನ್ಯಾಯಕ್ಕೆ ಧ್ವನಿಯಾಗಲು ಬಯಸುವುದಾಗಿ ಅವರು ತಿಳಿಸಿದ್ದು, ಈ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.
ಧರ್ಮ ಮಾರ್ಗದಲ್ಲಿ ನಡೆದ ಅನಾಚಾರ
ಚಿಕ್ಕಕೆಂಪಮ್ಮ, ಮಂಡ್ಯ ಜಿಲ್ಲೆಯವರಾಗಿದ್ದು, ಈ ಕುರಿತು ಎಸ್‌ಐಟಿ ತಂಡಕ್ಕೆ ದೂರು ನೀಡಿದ್ದಾರೆ. ಈ ದೂರಿನಲ್ಲಿ, ತಮ್ಮ ಜೀವನದುದ್ದಕ್ಕೂ ಧರ್ಮ ಮತ್ತು ಪ್ರಾಮಾಣಿಕತೆಯನ್ನು ನಂಬಿಕೊಂಡು ಬಂದವರು. ಅವರ ತಂದೆ ಶ್ರೀ ಮಂಜುನಾಥ ಸ್ವಾಮಿಯ ಅಪ್ಪಟ ಭಕ್ತರಾಗಿದ್ದರು. ತಂದೆಯ ಮರಣದ ನಂತರ ಅವರ ಪುಣ್ಯಸ್ಮರಣೆಯನ್ನು ಧರ್ಮಸ್ಥಳದಲ್ಲಿ ಹುಂಡಿಗೆ ಕಾಣಿಕೆ ಹಾಕಿ ಪಾಲಿಸಿಕೊಂಡು ಬರುತ್ತಿದ್ದರು. ಈ ಭಕ್ತಿಯ ಮಾರ್ಗದಲ್ಲಿಯೇ ಅವರು ತಾವೆದುರಿಸಿದ ಅನಾರೋಗ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು 2012ರ ಅಕ್ಟೋಬರ್ 8ರಂದು ಧರ್ಮಸ್ಥಳಕ್ಕೆ ತೆರಳಿದ್ದರು. ಅವರ ಜೊತೆ ನಿಂಗಮ್ಮ @ ಕೆಂಚಮ್ಮ ಎಂಬುವವರು ಜೊತೆಯಾಗಿದ್ದರು ಎಂದು ಹೇಳಿದ್ದಾರೆ.
‘ನನ್ನ ತಂದೆ ದೇವಸ್ಥಾನದ ಹುಂಡಿಗೆ ಕಾಣಿಕೆ ಹಾಕಬೇಕೆಂದು ಬಯಸಿದ್ದರು. ಜೊತೆಗೆ, ನನ್ನ ಚರ್ಮದ ಸಮಸ್ಯೆಗೆ ಪರಿಚಿತರು ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾಲಯಕ್ಕೆ ಹೋಗಿ ತೋರಿಸಿಕೊಳ್ಳುವಂತೆ ಸಲಹೆ ನೀಡಿದ್ದರು. ಈ ಎರಡು ಉದ್ದೇಶಗಳಿಗಾಗಿ ನಾನು ಧರ್ಮಸ್ಥಳಕ್ಕೆ ಹೋದೆ‘ ಎಂದು ಅವರು ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ.
ಆ ದಿನದ ಘಟನೆಗಳ ನಡುಕ ಹುಟ್ಟಿಸುವ ವಿವರಗಳು
ಅಕ್ಟೋಬರ್ 8, 2012ರಂದು ರಾತ್ರಿ ಮಂಡ್ಯದಿಂದ ರೈಲು ಹತ್ತಿದ ಚಿಕ್ಕಕೆಂಪಮ್ಮ ಮತ್ತು ಕೆಂಚಮ್ಮ ಮರುದಿನ ಮುಂಜಾನೆ ಕುಕ್ಕೆ ಸುಬ್ರಮಣ್ಯ ತಲುಪಿದರು. ಅಲ್ಲಿಂದ ಬಸ್ಸಿನಲ್ಲಿ ಧರ್ಮಸ್ಥಳ ತಲುಪಿ ದೇವಸ್ಥಾನದ ದರ್ಶನ ಪಡೆದರು. ಮಧ್ಯಾಹ್ನದ ನಂತರ ಚಿಕಿತ್ಸಾಲಯಕ್ಕೆ ತೆರಳಲು ಶಾಂತಿವನ ತಲುಪಿದಾಗ ಮಳೆ ಜೋರಾಗಿತ್ತು. ಸುಮಾರು 3.20ರ ಸಮಯಕ್ಕೆ, ಜನಸಂದಣಿ ಇಲ್ಲದ ಆ ನಿರ್ಜನ ಪ್ರದೇಶದಲ್ಲಿ ಬಸ್ ನಿಲ್ದಾಣವೊಂದರಲ್ಲಿ ಆಶ್ರಯ ಪಡೆದರು.
‘ಅಲ್ಲೇ ನಾವು ಯಾರಾದರೂ ಹಾದುಹೋಗುವವರನ್ನು ವಿಚಾರಿಸೋಣ ಎಂದು ಕಾಯುತ್ತಿದ್ದೆವು‘ ಎಂದು ಅವರು ಹೇಳಿದ್ದಾರೆ. ಅಷ್ಟರಲ್ಲಿ ಎರಡು ದ್ವಿಚಕ್ರ ವಾಹನಗಳಲ್ಲಿ ಬಂದ ಮೂವರು ಅಪರಿಚಿತ ವ್ಯಕ್ತಿಗಳು ಅವರನ್ನು ಮಾತನಾಡಿಸಿದರು. ಅವರಲ್ಲಿ ಒಬ್ಬ ವ್ಯಕ್ತಿ ತೊದಲುತ್ತಾ ಮಾತನಾಡುತ್ತಿದ್ದ. ಅವರು, ‘ನೀವು ಇಲ್ಲಿ ಯಾಕೆ ಬಂದಿದ್ದೀರಿ? ಇಲ್ಲಿ ಡಾಕ್ಟರ್ ಇಲ್ಲ, ಬೇರೆ ಕಡೆ ಹೋಗಿ‘ ಎಂದು ಹೇಳಿದರು. ಆ ವ್ಯಕ್ತಿ ಫೋನ್ನಲ್ಲಿ ಯಾರೊಂದಿಗೋ ಮಾತನಾಡುತ್ತಾ, ‘ನಿಟ್ಟು ನಿಷ್ಟು‘ ಎಂದು ಹೇಳುತ್ತಿದ್ದ. ಈ ಮಾತುಗಳು ಆ ದಿನ ಆಕೆಗೆ ಅಷ್ಟಾಗಿ ಅರ್ಥವಾಗಿಲ್ಲವಾದರೂ, ಘಟನೆಯ ನಂತರ ಆ ಮಾತುಗಳ ಮಹತ್ವ ತಿಳಿದಿದೆ.
ಅಪಹರಣಕಾರರು ಅವರಿಗೆ ಆಟೋದಲ್ಲಿ ಹೋಗುವಂತೆ ಹೇಳಿದರೂ ಚಿಕ್ಕಕೆಂಪಮ್ಮ ನಿರಾಕರಿಸಿದರು. ಆಗ ಆ ವ್ಯಕ್ತಿಗಳು ಅವರಿಗೆ ಬೆದರಿಕೆ ಹಾಕುವಂತೆ ಮಾತನಾಡಿದರು. ‘ನಿಮಗೆಲ್ಲ ಯಾಕೆ ಬೇಕು, ಸುಮ್ಮನೆ ಹೋಗಿ‘ ಎಂದು ಗದರಿಸಿದರು.
ಕಣ್ಣೆದುರಿಗೆ ನಡೆದ ಆತಂಕಕಾರಿ ಅಪಹರಣ
ಅದೇ ಸಮಯದಲ್ಲಿ ಸಮವಸ್ತ್ರ ಧರಿಸಿದ್ದ, ಸುಮಾರು 16 ವರ್ಷ ವಯಸ್ಸಿನ ಹುಡುಗಿಯೊಬ್ಬಳು ಛತ್ರಿ ಹಿಡಿದು ಹಾದುಹೋಗುತ್ತಿದ್ದಳು. ಆ ಹುಡುಗಿಯನ್ನು ನೋಡಿದ ಚಿಕ್ಕಕೆಂಪಮ್ಮ, ತಮ್ಮ ಸೋದರತ್ತೆಯ ಮಗಳು ‘ಜ್ಯೋತಿ‘ಯಂತೆ ಕಾಣುತ್ತಿದ್ದಾಳೆ ಎಂದು ಅಂದುಕೊಂಡರು. ಕಣ್ಣು ಮಿಟುಕಿಸುವಷ್ಟರಲ್ಲಿ ಆ ಹುಡುಗಿಯ ಬಳಿ ಹೋದ ಆ ವ್ಯಕ್ತಿಗಳು, ಆಕೆಯನ್ನು ಎಳೆದಾಡಿದರು. ಆಕೆ ‘ಹಾ.. ಅಪ್ಪ… ಆದ್ದು…’ ಎಂದು ಜೋರಾಗಿ ಕಿರುಚಾಡುತ್ತಿದ್ದಳು. ತನ್ನನ್ನು ಬಿಡಿಸಿಕೊಳ್ಳಲು ಅವಳು ಪ್ರಯತ್ನಿಸುತ್ತಿದ್ದಾಗ ಆಕೆಯ ಕೈಯನ್ನು ಹಿಡಿದು ತಿರುಗಿಸಿ, ಬಾಯಿಯನ್ನು ಒತ್ತಿದರು.
‘ನಾನು ಅಲ್ಲಿಗೆ ಓಡಿ ಹೋಗುವಷ್ಟರಲ್ಲಿ, ಅವರು ಆ ಬಾಲಕಿಯನ್ನು ಎಳೆದೊಯ್ದರು. ಆ ಹುಡುಗಿಯ ಕೈಯಿಂದ ಛತ್ರಿ ಕೆಳಗೆ ಬಿದ್ದಿತ್ತು. ಮತ್ತೊಂದು ವಸ್ತು ಕೂಡ ಕೆಳಗೆ ಬಿದ್ದಿತು. ಆದರೆ ಅದು ಏನು ಎಂದು ನನಗೆ ತಿಳಿಯಲಿಲ್ಲ‘ ಎಂದು ಚಿಕ್ಕಕೆಂಪಮ್ಮ ನೋವಿನಿಂದ ಹೇಳಿದ್ದಾರೆ. ಹುಡುಗಿಯನ್ನು ಯಾವ ವಾಹನದಲ್ಲಿ ಎತ್ತಿಕೊಂಡು ಹೋಗಿದ್ದಾರೆ ಎಂದು ನೋಡುವಷ್ಟರಲ್ಲಿ, ಆಟೋ ಮತ್ತು ಕಾರು ವೇಗವಾಗಿ ಹೊರಟು ಹೋದವು.
ಮನಸ್ಸಿಗೆ ನೋವುಂಟು ಮಾಡಿದ ವಿಷಯಗಳು
ಘಟನೆಯ ನಂತರ ಚಿಕ್ಕಕೆಂಪಮ್ಮ ಮತ್ತು ಅವರ ಜೊತೆಗಿದ್ದವರು ಅಲ್ಲಿಂದ ಹೊರಟು ಕುಕ್ಕೆ ಸುಬ್ರಮಣ್ಯಕ್ಕೆ ಬಸ್ ಮೂಲಕ ವಾಪಸ್ಸಾದರು. ಬಸ್ಸಿನಲ್ಲಿ, ‘ಪೊಲೀಸರಿಗೆ ತಿಳಿಸಬೇಕಿತ್ತೇನೋ‘ ಎಂದು ಮಾತನಾಡಿಕೊಂಡಾಗ, ಕೆಂಚಮ್ಮ ‘ಅದೆಲ್ಲ ನಮಗ್ಯಾಕೆ, ಸುಮ್ಮನಿರೋಣ‘ ಎಂದು ಹೇಳಿದ್ದರು. 2012ರಲ್ಲಿ ಸ್ಮಾರ್ಟ್ಫೋನ್ ಮತ್ತು ಟಿವಿ ಮಾಧ್ಯಮಗಳು ಹೆಚ್ಚಿನವರ ಬಳಿ ಇಲ್ಲದ ಕಾರಣ, ಈ ಘಟನೆಯ ಬಗ್ಗೆ ಸಾರ್ವಜನಿಕವಾಗಿ ಮಾಹಿತಿ ಸಿಕ್ಕಿರಲಿಲ್ಲ.
ಆದರೆ, ಇತ್ತೀಚೆಗೆ ಮಾಧ್ಯಮಗಳಲ್ಲಿ ಧರ್ಮಸ್ಥಳದ ಪ್ರಕರಣಗಳ ಬಗ್ಗೆ ವರದಿಗಳು ಪ್ರಸಾರವಾದಾಗ, ಚಿಕ್ಕಕೆಂಪಮ್ಮ ಅವರು ಆ ಅಪಹರಣದ ಘಟನೆಯನ್ನು ನೆನಪಿಸಿಕೊಂಡರು. ಅವರು ಅಂದು ಕಂಡ ವ್ಯಕ್ತಿಗಳ ಮುಖಚರ್ಯೆ ಮತ್ತು ಘಟನೆಯ ವಿವರಗಳು ಅವರಿಗೆ ಸ್ಪಷ್ಟವಾಗಿ ನೆನಪಿದ್ದವು. ಮಾಧ್ಯಮಗಳಲ್ಲಿ ಬಂದ ವರದಿಗಳನ್ನು ನೋಡಿ, ‘ಅದೇ ವ್ಯಕ್ತಿಗಳು, ಅದೇ ಘಟನೆ‘ ಎಂದು ಅವರು ಖಚಿತಪಡಿಸಿಕೊಂಡರು. ತಾನು ಅಂದು ಕಣ್ಣಾರೆ ಕಂಡ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂಬುದು ತಿಳಿದಾಗ ಅವರಿಗೆ ತೀವ್ರ ನೋವಾಯಿತು.
‘ನಾನು ಆ ದಿನ ನೋಡಿದ ಸನ್ನಿವೇಶ ನನ್ನ ಕಣ್ಣಲ್ಲಿ ಅಚ್ಚಳಿಯದೆ ಉಳಿದಿದೆ. ಇತ್ತೀಚಿಗೆ ಆಗಿರುವ ಅನ್ಯಾಯವನ್ನು ನೆನೆದು ನನಗೆ ನಿದ್ರೆ ಬರುವುದಿಲ್ಲ. ನನಗೂ ಇಬ್ಬರು ಹೆಣ್ಣು ಮಕ್ಕಳು ಹಾಗೂ ಮೊಮ್ಮಕ್ಕಳು ಇರುವುದರಿಂದ ಅತ್ಯಾಚಾರಕ್ಕೆ ಒಳಗಾದ ಆ ಹೆಣ್ಣು ಮಗಳ ನೋವು ನನ್ನನ್ನು, ನನ್ನ ನೈತಿಕತೆಯನ್ನು ಹಾಗೂ ಆತ್ಮಸಾಕ್ಷಿಯನ್ನು ಪ್ರಶ್ನೆ ಮಾಡುತ್ತಿದೆ‘ ಎಂದು ಅವರು ತಮ್ಮ ಪತ್ರದಲ್ಲಿ ಬರೆದಿದ್ದಾರೆ.
ನ್ಯಾಯಕ್ಕಾಗಿ ಪ್ರಾಮಾಣಿಕ ಹೋರಾಟ
ಚಿಕ್ಕಕೆಂಪಮ್ಮ ತಮ್ಮ ಹೇಳಿಕೆಯನ್ನು ನ್ಯಾಯಾಲಯದ ಮುಂದೆ ಹೇಳುವ ತನಕ ಮನಸ್ಸಿಗೆ ಶಾಂತಿ ಸಿಗುವುದಿಲ್ಲ ಎಂದು ದೃಢವಾಗಿ ನಂಬಿದ್ದಾರೆ. ‘ನಾನು ನ್ಯಾಯ ಮತ್ತು ಧರ್ಮಕ್ಕೆ ತಲೆಬಾಗಿ ಪ್ರಾಮಾಣಿಕವಾಗಿ ಜೀವಿಸುತ್ತಿದ್ದೇನೆ. ನನಗೆ ಯಾವುದೇ ಭಯವಿಲ್ಲ. ಈ ವಿಚಾರದಲ್ಲಿ ಯಾರ ಒತ್ತಡವಾಗಲಿ, ಕುಮ್ಮಕ್ಕಾಗಲಿ ನನ್ನ ಮೇಲೆ ಇರುವುದಿಲ್ಲ‘ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಅವರು ಯಾವುದೇ ತನಿಖೆಗೂ ಬದ್ಧರಾಗಿದ್ದು, ಅಪಹರಣದಲ್ಲಿ ಭಾಗಿಯಾದವರನ್ನು ಗುರುತಿಸಬಲ್ಲೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಕಾನೂನು ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ನೀಡಬೇಕೆಂದು ಅವರು SIT ತಂಡವನ್ನು ಕೋರಿದ್ದಾರೆ. ಚಿಕ್ಕಕೆಂಪಮ್ಮ ಅವರ ಈ ಧೈರ್ಯದ ನಿರ್ಧಾರ ಪ್ರಕರಣದ ತನಿಖೆಗೆ ಹೊಸ ದಿಕ್ಕು ನೀಡುವ ನಿರೀಕ್ಷೆ ಇದೆ.
ಉತ್ತರ ಪ್ರದೇಶ| ಬಿಜೆಪಿ ಸಚಿವರಿಂದ ದಲಿತ ಕುಟುಂಬದ ಮೇಲೆ ಹಲ್ಲೆ; ಪ್ರತಿಭಟನೆ ನಂತರ ಎಫ್‌ಐಆರ್