ಬೆಂಗಳೂರು: 2012ರ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಒಳಗೊಂಡಂತೆ ಧರ್ಮಸ್ಥಳದಲ್ಲಿ ನಡೆದ ಹಲವು ಮಹಿಳೆಯರ ನಾಪತ್ತೆ, ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳ ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿ “ನಾವೆದ್ದು ನಿಲ್ಲದಿದ್ದರೆ-ಕರ್ನಾಟಕ” ವೇದಿಕೆಯು ಇಂದು ಪತ್ರಿಕಾಗೋಷ್ಠಿ ನಡೆಸಿತು. ರಾಜ್ಯ ಸರ್ಕಾರವು ವಿಶೇಷ ತನಿಖಾ ದಳ (SIT) ರಚಿಸಿರುವುದನ್ನು ಸ್ವಾಗತಿಸಿದ ವೇದಿಕೆಯು, ಅಪರಾಧಿಗಳಿಗೆ ಕಠಿಣ ಶಿಕ್ಷೆ ಮತ್ತು ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿತು. ಮಹಿಳೆಯರು, ಲಿಂಗತ್ವ ಅಲ್ಪಸಂಖ್ಯಾತರು, ಮಹಿಳಾ ಕಾರ್ಮಿಕರು ಮತ್ತು ಅಂಚಿಗೊತ್ತಲ್ಪಟ್ಟ ಮಹಿಳೆಯರ ಹಲವು ಸಂಘಟನೆಗಳು, ಮಾನವ ಹಕ್ಕು ಸಂಘಟನೆಗಳು ಮತ್ತು ಕಾಳಜಿಯುಳ್ಳ ನಾಗರಿಕರ ಜಂಟಿ ವೇದಿಕೆಯಾದ “ನಾವೆದ್ದು ನಿಲ್ಲದಿದ್ದರೆ-ಕರ್ನಾಟಕ”ವು ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ತಡೆಯುವುದು ಮತ್ತು ಅವರ ಹಕ್ಕುಗಳನ್ನು ಸಂರಕ್ಷಿಸುವುದು ತಮ್ಮ ಪ್ರಮುಖ ಉದ್ದೇಶ ಎಂದು ತಿಳಿಸಿದೆ.
SIT ರಚನೆ ಸ್ವಾಗತ, ನಿಷ್ಪಕ್ಷ ತನಿಖೆಗೆ ಒತ್ತಾಯ
ಧರ್ಮಸ್ಥಳದಲ್ಲಿ ನಡೆದ ಘಟನೆಗಳ ಬಗ್ಗೆ ಸಾಕ್ಷ್ಯ ನೀಡಲು ಮುಂದೆ ಬಂದಿರುವ ದೇವಾಲಯದ ಮಾಜಿ ಉದ್ಯೋಗಿಯ ಧೈರ್ಯವನ್ನು ವೇದಿಕೆಯು ಶ್ಲಾಘಿಸಿತು. ರಾಜ್ಯ ಸರ್ಕಾರವು SIT ರಚನೆ ಮಾಡಿರುವುದನ್ನು ಸ್ವಾಗತಿಸಿದರೂ, ಈ ಪ್ರಕರಣದಲ್ಲಿ ಆರೋಪಿಗಳ ಬಲಾಢ್ಯ ಹಿನ್ನೆಲೆ ಮತ್ತು ಹಿಂದಿನ ಸರ್ಕಾರಗಳ ಹಿಂಜರಿಕೆಯನ್ನು ಗಮನದಲ್ಲಿಟ್ಟುಕೊಂಡು, ತನಿಖಾ ದಳವು ಯಾವುದೇ ಒತ್ತಡಕ್ಕೆ ಒಳಗಾಗದೆ ಅತ್ಯಂತ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕು ಎಂದು ಒತ್ತಾಯಿಸಿತು. ದಶಕಗಳ ಕಾಲ ನಡೆದಿದೆ ಎನ್ನಲಾದ ಈ ವ್ಯವಸ್ಥಿತ ಅಪರಾಧ ಸರಣಿಯಲ್ಲಿ, ಅಪರಾಧಿಗಳು ಯಾರೇ ಆಗಿರಲಿ, ಅವರನ್ನು ಕಾನೂನಿನ ಕಟಕಟೆಗೆ ತರಬೇಕು ಎಂದು ವೇದಿಕೆಯು ಆಗ್ರಹಿಸಿತು. ಈ ತನಿಖೆಯಿಂದ ಸತ್ಯ ಬೆಳಕಿಗೆ ಬಂದು ಸಂತ್ರಸ್ತರಿಗೆ ನ್ಯಾಯ ದೊರೆತರೆ, ಮಹಿಳೆಯರ ಮೇಲಿನ ದೌರ್ಜನ್ಯಗಳ ವಿರುದ್ಧ ಸರ್ಕಾರವು ಸಮಾಜಕ್ಕೆ ಬಲವಾದ ಸಂದೇಶ ನೀಡಿದಂತಾಗುತ್ತದೆ ಎಂದು ವೇದಿಕೆಯು ಅಭಿಪ್ರಾಯಪಟ್ಟಿತು.
ಸಾಕ್ಷಿಗಳಿಗೆ ಮತ್ತು ಸಂತ್ರಸ್ತರ ಕುಟುಂಬಗಳಿಗೆ ಸಂಪೂರ್ಣ ರಕ್ಷಣೆ
ಪ್ರಕರಣದ ಸಾಕ್ಷಿಗಳಿಗೆ ಮತ್ತು ಸಂತ್ರಸ್ತರ ಕುಟುಂಬಗಳಿಗೆ ಸಂಪೂರ್ಣ ರಕ್ಷಣೆ ನೀಡುವಂತೆ ವೇದಿಕೆಯು ಆಗ್ರಹಿಸಿತು. ವಿಶೇಷವಾಗಿ 1995ರಿಂದ 2014ರವರೆಗೆ ನಡೆದ ಭೀಕರ ಅಪರಾಧಗಳಿಗೆ ಸಾಕ್ಷಿಯಾಗಿರುವ ದೇವಾಲಯದ ಮಾಜಿ ಉದ್ಯೋಗಿ ಮತ್ತು ಅವರ ಕುಟುಂಬಕ್ಕೆ 2018ರ ಸಾಕ್ಷಿಗಳ ರಕ್ಷಣಾ ಯೋಜನೆಯಡಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿತು. ಅಲ್ಲದೆ, ಅನನ್ಯಾ ಭಟ್ (2003ರಲ್ಲಿ ಕಾಣೆಯಾದ ವೈದ್ಯಕೀಯ ವಿದ್ಯಾರ್ಥಿನಿ) ಮತ್ತು ಸೌಜನ್ಯಾ (2012ರಲ್ಲಿ ಅತ್ಯಾಚಾರ ಮತ್ತು ಕೊಲೆಯಾದ ಬಾಲಕಿ) ರಂತಹ ಸಂತ್ರಸ್ತರ ಕುಟುಂಬಗಳಿಗೆ ಸಂಪೂರ್ಣ ಬೆಂಬಲ ನೀಡಬೇಕೆಂದು ಕೋರಿತು.
ಯಾವುದೇ ಕುಟುಂಬ ದೌರ್ಜನ್ಯಕ್ಕೆ ಒಳಗಾಗಿದ್ದು, ದೂರು ದಾಖಲಿಸಲು ಬಯಸಿದರೆ, ಅವರ ಮಾಹಿತಿ ಗೋಪ್ಯವಾಗಿಟ್ಟು, ಸಂಪೂರ್ಣ ರಕ್ಷಣೆ ಒದಗಿಸುವ ಕುರಿತು ವಿಶ್ವಾಸ ಮೂಡಿಸುವಂತೆ SIT ಸಾರ್ವಜನಿಕ ಪ್ರಕಟಣೆ ಹೊರಡಿಸಬೇಕು ಎಂದು ವೇದಿಕೆಯು ತಿಳಿಸಿತು.

ಸರ್ಕಾರದ ಐತಿಹಾಸಿಕ ತಪ್ಪು ಮತ್ತು ಜವಾಬ್ದಾರಿಯ ಕೊರತೆ
ಕಳೆದ ಕೆಲವು ದಶಕಗಳಿಂದ ಧರ್ಮಸ್ಥಳದಲ್ಲಿ ಇಂತಹ ಆರೋಪಗಳು ಹೊರಬಂದಾಗಲೂ ಹಿಂದಿನ ಸರ್ಕಾರಗಳು ಸಮರ್ಪಕ ಕ್ರಮ ಕೈಗೊಳ್ಳದಿರುವುದು ದೊಡ್ಡ ಸಂಖ್ಯೆಯ ಅಮಾಯಕ ಹೆಣ್ಣುಮಕ್ಕಳ ದುರಂತ ಸಾವಿಗೆ ಕಾರಣವಾಗಿದೆ ಎಂದು ವೇದಿಕೆಯು ಖಂಡಿಸಿತು. ಈ ತಪ್ಪಿನ ಸಂಪೂರ್ಣ ಹೊಣೆಯನ್ನು ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಹೊರಬೇಕು ಎಂದು ಅಭಿಪ್ರಾಯಪಟ್ಟಿತು. ಪ್ರಸ್ತುತ ಸರ್ಕಾರ ಈ ತಪ್ಪಿಗೆ ಪ್ರಾಯಶ್ಚಿತ್ತವೆಂದು ಭಾವಿಸಿ, ಸತ್ಯವನ್ನು ಬೆಳಕಿಗೆ ತರುವ ಪ್ರಾಮಾಣಿಕ ಕೆಲಸ ಮಾಡಬೇಕು ಎಂದು ಆಗ್ರಹಿಸಿತು. ಸೌಜನ್ಯಾ ಪ್ರಕರಣದ ತನಿಖೆಯನ್ನು ದಿಕ್ಕುತಪ್ಪಿಸಿದ ಪೊಲೀಸ್ ತನಿಖಾಧಿಕಾರಿಗಳ ಮೇಲೆ ಕ್ರಮ ಕೈಗೊಂಡು, ಪ್ರಕರಣದ ಮರುತನಿಖೆಗೆ ಆದೇಶಿಸಬೇಕು ಎಂದು ಸಿಬಿಐ ನ್ಯಾಯಾಲಯ ಸೂಚಿಸಿದ್ದರೂ, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವೇದಿಕೆಯು ಗಮನ ಸೆಳೆಯಿತು.
ಧಾರ್ಮಿಕ ಸಂಸ್ಥೆಗಳ ದುರ್ಬಳಕೆ ತಡೆಗಟ್ಟಲು ಕ್ರಮಕ್ಕೆ ಆಗ್ರಹ
ಧರ್ಮಸ್ಥಳದಂತಹ ಧಾರ್ಮಿಕ ಸಂಸ್ಥಾನಗಳನ್ನು ದುರ್ಬಳಕೆ ಮಾಡಿಕೊಂಡು, ಜನರ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡು ಅನಾಚಾರ ಮತ್ತು ಅತ್ಯಾಚಾರಗಳನ್ನು ನಡೆಸುವ ಬಲಾಢ್ಯ ದುರುಳರನ್ನು ನಿಯಂತ್ರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ವೇದಿಕೆಯು ಒತ್ತಾಯಿಸಿತು. ಇಂತಹ ದೂರುಗಳು ಬಂದಾಗ ಪ್ರಾಮಾಣಿಕ ತನಿಖೆ ನಡೆಸಿ, ಆರೋಪಿಗಳನ್ನು ಕಾನೂನಿನ ಪ್ರಕಾರ ಶಿಕ್ಷಿಸಬೇಕು ಎಂದು ತಿಳಿಸಿತು. ಧಾರ್ಮಿಕ ಕ್ಷೇತ್ರಗಳು ಶಾಂತಿ ಮತ್ತು ನಂಬಿಕೆಯ ಕೇಂದ್ರಗಳಾಗಿರಬೇಕೇ ಹೊರತು, ಅಪರಾಧಗಳ ತಾಣವಾಗಿರಬಾರದು ಎಂದು ವೇದಿಕೆಯು ಪ್ರತಿಪಾದಿಸಿತು. ಲಿಂಗಾಧಾರಿತ ಅಪರಾಧಗಳನ್ನು ತಡೆಯಲು ಧಾರ್ಮಿಕ ಕ್ಷೇತ್ರಗಳಲ್ಲಿನ ಮಹಿಳೆಯರ ಮತ್ತು ಲಿಂಗತ್ವದ ಬಗ್ಗೆ ಇರುವ ಪ್ರತಿಗಾಮಿ ಮತ್ತು ಪಿತೃಪ್ರಧಾನ ಮನೋಭಾವವನ್ನು ಬದಲಿಸಬೇಕು ಎಂದು ವೇದಿಕೆಯು ಹೇಳಿದೆ.
‘ಶಿಕ್ಷೆಗೆ ಅತೀತ’ರೆಂಬ ವಿಶೇಷ ಸವಲತ್ತು ನಿಲ್ಲಿಸಬೇಕು
ಧಾರ್ಮಿಕ ವ್ಯಕ್ತಿಗಳ ಮೇಲೆ ಮಹಿಳೆಯರ ಮೇಲಿನ ದೌರ್ಜನ್ಯಗಳ ಆರೋಪಗಳು ಬಂದಾಗಲೂ ನಮ್ಮ ವ್ಯವಸ್ಥೆಯು ಅವರನ್ನು ಶಿಕ್ಷೆಗೆ ಅತೀತರನ್ನಾಗಿಸಿ ಕಾಪಾಡುತ್ತಿರುವುದು (Impunity) ಇಂತಹ ಕೃತ್ಯಗಳು ಮುಂದುವರಿಯಲು ಕಾರಣವಾಗಿದೆ ಎಂದು ವೇದಿಕೆಯು ಆತಂಕ ವ್ಯಕ್ತಪಡಿಸಿತು. ಇನ್ನು ಮುಂದೆ ಇಂತಹ ಪ್ರವೃತ್ತಿ ನಿಲ್ಲಬೇಕು, ಅಪರಾಧಿಗಳು ಯಾರೇ ಆದರೂ ಶಿಕ್ಷೆಗೆ ಅತೀತರಾಗಬಾರದು ಎಂದು ಸ್ಪಷ್ಟಪಡಿಸಿತು. ಸೌಜನ್ಯಾ ಪ್ರಕರಣದ ಪ್ರಾಥಮಿಕ ಹಂತದ ತನಿಖೆಯಲ್ಲಿ ತನಿಖಾಧಿಕಾರಿಗಳು ಮಾಡಿದ ತಪ್ಪುಗಳು ಮತ್ತು ನಿರ್ಲಕ್ಷ್ಯಗಳಿಂದ ಆದ ಸಾಕ್ಷಿನಾಶಗಳನ್ನು ಗಮನಿಸಿದ ಸಿಬಿಐ, ಆ ತನಿಖಾಧಿಕಾರಿಗಳ ಮೇಲೆ ಕ್ರಮಕೈಗೊಳ್ಳಲು ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಆದರೆ ಯಾವುದೇ ಕ್ರಮಕೈಗೊಂಡಿಲ್ಲ. SIT ಈ ಅಂಶಗಳನ್ನು ಗಣನೆಗೆ ತೆಗೆದುಕೊಂಡು, ಸೌಜನ್ಯಾ ಪ್ರಕರಣದ ತನಿಖಾಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ವೇದಿಕೆಯು ಆಗ್ರಹಿಸಿತು.
ಮಾಧ್ಯಮಗಳ ಮೇಲಿನ ನಿರ್ಬಂಧಕಾಜ್ಞೆಗಳ ಪರಿಶೀಲನೆಗೆ ಆಗ್ರಹ
ಇಂತಹ ಪ್ರಕರಣಗಳಲ್ಲಿ ಸತ್ಯಾಂಶಗಳನ್ನು ವರದಿ ಮಾಡುವ ಮಾಧ್ಯಮ ಸಂಸ್ಥೆಗಳ ಮೇಲೆ ನ್ಯಾಯಾಲಯಗಳಿಂದ ನಿರ್ಬಂಧಕಾಜ್ಞೆಗಳನ್ನು ತರುವ ಕ್ರಮವನ್ನೂ ನ್ಯಾಯಾಂಗವು ಪರಿಶೀಲಿಸಬೇಕು ಎಂದು ವೇದಿಕೆಯು ಕೋರಿತು. ಧರ್ಮಸ್ಥಳದ ವಿಚಾರಕ್ಕೆ ಸಂಬಂಧಿಸಿ ನೀಡಿದ ಅಸಂಖ್ಯಾತ ನಿರ್ಬಂಧಕಾಜ್ಞೆಗಳಿಂದ ಸತ್ಯ ಹೂತು ಹೋಗುವ ಅಪಾಯವಿತ್ತು ಎಂಬುದನ್ನು ನ್ಯಾಯಾಲಯಗಳು ಮನವರಿಕೆ ಮಾಡಿಕೊಳ್ಳುವ ತುರ್ತು ಅಗತ್ಯವಿದೆ ಎಂದು ವೇದಿಕೆಯು ಹೇಳಿತು.
ಮಹಿಳೆಯರು ಕೇವಲ ಫಲಾನುಭವಿಗಳಲ್ಲ ಅಥವಾ ಮತದ ಬ್ಯಾಂಕುಗಳಲ್ಲ!
ಧರ್ಮಸ್ಥಳದಂತಹ ಪ್ರಕರಣಗಳು ಮಾತ್ರವಲ್ಲದೆ, ರಾಜ್ಯದಾದ್ಯಂತ ಮಹಿಳೆಯರು ಹಲವು ಬಗೆಯ ದೌರ್ಜನ್ಯಗಳಿಗೆ ಸಿಲುಕಿ ನಲುಗಿ ಹೋಗಿದ್ದಾರೆ ಎಂದು ವೇದಿಕೆಯು ಕಳವಳ ವ್ಯಕ್ತಪಡಿಸಿತು. ಮಹಿಳೆಯರಿಗಾಗಿ ಜಾರಿಗೊಳಿಸಿರುವ ಶಕ್ತಿ ಯೋಜನೆ, ಗೃಹಲಕ್ಷ್ಮಿ ಯೋಜನೆಯಂತಹವುಗಳನ್ನು ಶ್ಲಾಘಿಸಿದ ವೇದಿಕೆಯು, ಅದರಾಚೆಗೆ ಮಹಿಳೆಯರಿಗೆ ಭದ್ರತೆ ಮತ್ತು ಘನತೆ ನೀಡುವುದು ಸರ್ಕಾರದ ಕರ್ತವ್ಯ ಎಂದು ಹೇಳಿತು. ಹೀಗಾಗಿ, ಮಹಿಳೆಯರನ್ನು ಕೇವಲ ಫಲಾನುಭವಿಗಳಂತೆ ಅಥವಾ ಮತದಾರರಂತೆ ಪರಿಗಣಿಸುವ ಮನಸ್ಥಿತಿಯನ್ನು ರಾಜಕೀಯ ಪಕ್ಷಗಳು ಬದಲಿಸಿಕೊಳ್ಳಬೇಕು ಎಂದು ಕರೆ ನೀಡಿತು. ಮಹಿಳೆಯರ ಮೇಲೆ – ಅದರಲ್ಲೂ ಮುಖ್ಯವಾಗಿ ದಲಿತರು, ಅಲೆಮಾರಿ ಸಮುದಾಯಗಳು, ಅಲ್ಪಸಂಖ್ಯಾತರು ಮತ್ತು ದುರ್ಬಲ ವರ್ಗಗಳಿಗೆ ಸೇರಿದ ಹೆಣ್ಣುಮಕ್ಕಳ ಮೇಲೆ – ನಡೆಯುತ್ತಿರುವ ಬರ್ಬರ ಕೊಲೆಗಳು, ಭೀಕರವಾದ ಅತ್ಯಾಚಾರಗಳು, ಆಸಿಡ್ ದಾಳಿಗಳು ಸೇರಿದಂತೆ ಹಲವು ಬಗೆಯ ದೌರ್ಜನ್ಯಗಳನ್ನು ತಡೆಗಟ್ಟುವ ದಿಕ್ಕಿನಲ್ಲಿ ತುರ್ತಾಗಿ ಕೆಲಸ ಆಗಬೇಕಿದೆ. ಇದಕ್ಕಾಗಿ, ಮಹಿಳಾ ಸಂಘಟನೆಗಳು, ತಜ್ಞರು, ಕಾಳಜಿಯುಳ್ಳ ಗಣ್ಯ ನಾಗರಿಕರನ್ನೊಳಗೊಂಡಂತೆ ಸರ್ಕಾರದ ಸಭೆ ನಡೆಸಿ, ಪರಿಣಾಮಕಾರಿ ಹೆಜ್ಜೆಗಳನ್ನು ಮುಂದಿಡಬೇಕು ಎಂದು ವೇದಿಕೆಯು ಆಗ್ರಹಿಸಿತು.
ಧರ್ಮಸ್ಥಳ ದೇವಾಲಯವನ್ನು ಮುಜರಾಯಿ ಇಲಾಖೆಯ ವ್ಯಾಪ್ತಿಗೆ ತರಬೇಕು
ತಮ್ಮ ಮನೆತನದ ಖಾಸಗಿ ಪೂಜಾ ಸ್ಥಳವೆಂದು ನ್ಯಾಯಾಲಯವನ್ನೂ ಒಪ್ಪಿಸಿ ಧರ್ಮಸ್ಥಳ ಕುಟುಂಬ ತಮ್ಮ ವ್ಯಾಪ್ತಿಯಲ್ಲಿಟ್ಟುಕೊಂಡಿದ್ದ ದೇವಾಲಯವನ್ನು ಸರ್ಕಾರ ವಶಕ್ಕೆ ಪಡೆದು ಮುಜರಾಯಿ ಇಲಾಖೆಯ ವ್ಯಾಪ್ತಿಗೆ ತರಬೇಕು ಎಂದು ವೇದಿಕೆಯು ನಿರ್ಣಾಯಕವಾಗಿ ಆಗ್ರಹಿಸಿತು. ಇದರಿಂದ ಮುಂದಿನ ದಿನಗಳಲ್ಲಿ ಖಾಸಗಿ ದುಷ್ಟಕೂಟಗಳು ಅಮಾಯಕ ಜೀವಗಳನ್ನು ಬಲಿಕೊಡುವಂತಹ ಕೃತ್ಯಗಳನ್ನು ಎಸಗುವುದನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿತು.
“ನಾವೆದ್ದು ನಿಲ್ಲದಿದ್ದರೆ-ಕರ್ನಾಟಕ”ದ ಕರೆ
“ನಾವೆದ್ದು ನಿಲ್ಲದಿದ್ದರೆ-ಕರ್ನಾಟಕ”ವು ಧರ್ಮಸ್ಥಳದ ಈ ಭೀಕರ ಪ್ರಕರಣದಲ್ಲಿ ಸತ್ಯವನ್ನು ಬೆಳಕಿಗೆ ತರಲು ಮತ್ತು ಸಂತ್ರಸ್ತರಿಗೆ ನ್ಯಾಯ ಒದಗಿಸಲು ಸರ್ಕಾರದೊಂದಿಗೆ ಒಗ್ಗಟ್ಟಿನಿಂದ ಕೆಲಸ ಮಾಡಲು ಸಿದ್ಧವಾಗಿದೆ. ಈ SIT ತನಿಖೆಯು ಒಂದು ಐತಿಹಾಸಿಕ ಪ್ರಕ್ರಿಯೆಯಾಗಬೇಕು, ಇದರಿಂದ ಭವಿಷ್ಯದಲ್ಲಿ ಇಂತಹ ಅಪರಾಧಗಳು ಮರುಕಳಿಸದಂತೆ ತಡೆಯಬಹುದು ಎಂದು ವೇದಿಕೆಯು ಆಶಿಸಿತು. ಕರ್ನಾಟಕವನ್ನು ಮಹಿಳೆಯರಿಗೆ ಸುರಕ್ಷಿತವಾದ ನಾಡನ್ನಾಗಿಸಲು ಎಲ್ಲ ಜನರನ್ನು ಒಗ್ಗೂಡಿಸಿ, ಇನ್ನೂ ಹೆಚ್ಚಿನ ಮಟ್ಟದಲ್ಲಿ ಪ್ರಯತ್ನಶೀಲರಾಗುತ್ತೇವೆ ಎಂದು ವೇದಿಕೆಯು ಭರವಸೆ ನೀಡಿತು. ಈ ಪ್ರಯತ್ನದಲ್ಲಿ ಎಲ್ಲ ಪ್ರಜ್ಞಾವಂತರೂ ಭಾಗಿಯಾಗಲು ವೇದಿಕೆಯು ಕರೆ ನೀಡಿತು. “ನ್ಯಾಯಕ್ಕಾಗಿ ಒಗ್ಗಟ್ಟಾಗೋಣ, ಸತ್ಯಕ್ಕಾಗಿ ಹೋರಾಡೋಣ!” ಎಂದು ಕರೆ ನೀಡಿತು.
ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ಮುನ್ನಡೆಯ ಗೌರಿ, ಗಮನ ಮಹಿಳಾ ಸಮೂಹದ ಮಮತಾ ಯಜಮಾನ್, ಜನವಾದಿ ಮಹಿಳಾ ಸಂಘಟನೆಯ ವಿಮಲಾ ಕೆ.ಎಸ್., ಒಂದೆಡೆ ಸಂಸ್ಥೆಯ ಅಕ್ಕೈ ಪದ್ಮಶಾಲಿ, ವಕೀಲರಾದ ಮೈತ್ರೇಯಿ ಕೃಷ್ಣನ್, ಕರ್ನಾಟಕ ಜನಶಕ್ತಿಯ ಮಲ್ಲಿಗೆ ಸಿರಿಮನೆ ಉಪಸ್ಥಿತರಿದ್ದರು.
ಧರ್ಮಸ್ಥಳದಲ್ಲಿ ಸಾಮೂಹಿಕ ಹತ್ಯೆ ಆರೋಪ: ‘ಸೌಜನ್ಯಾ ನ್ಯಾಯಕ್ಕಾಗಿ ಹೋರಾಟ ಸಮಿತಿ’ಯಿಂದ ತುರ್ತು ಕರೆ!


