ಧರ್ಮಸ್ಥಳ ಪ್ರಕರಣದ ತನಿಖೆ ನಡೆಸಲು ರಾಜ್ಯ ಸರ್ಕಾರ ನೇಮಿಸಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಶುಕ್ರವಾರದಿಂದ (ಜು.25) ಅಧಿಕೃತವಾಗಿ ತನ್ನ ಕೆಲಸವನ್ನು ಪ್ರಾರಂಭಿಸಿದೆ.
ವರದಿಗಳ ಪ್ರಕಾರ, ಎಸ್‌ಐಟಿಯ ಭಾಗವಾಗಿರುವ ಐಪಿಎಸ್ ಅಧಿಕಾರಿ ಎಂ.ಎನ್ ಅನುಚೇತ್ ಅವರು, ಶುಕ್ರವಾರ ಸಂಜೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ. ಆ ಬಳಿಕ ಎಸ್‌ಐಟಿಯಲ್ಲಿರುವ ಮತ್ತೊಬ್ಬರು ಅಧಿಕಾರಿ ಜಿತೇಂದ್ರ ಕುಮಾರ್ ದಯಾಮ ಅವರು ಧರ್ಮಸ್ಥಳ ಪೊಲೀಸ್ ಠಾಣೆಗೆ ತೆರಳಿ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪಡೆದಿದ್ದಾರೆ.
ಈ ನಡುವೆ ಪ್ರಕರಣದ ಸಾಕ್ಷಿ ದೂರುದಾರನಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. ಅದರಂತೆ, ಶನಿವಾರ (ಜು.26) ಮಂಗಳೂರಿನ ಕದ್ರಿಯಲ್ಲಿರುವ ಐಬಿಗೆ ದೂರುದಾರ ಹಾಜರಾಗಿದ್ದಾರೆ. ಅವರನ್ನು ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ.
ಜುಲೈ 3, 2025ರಂದು ಸಾಕ್ಷಿ ದೂರುದಾರ ದಕ್ಷಿಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ತೆರಳಿ ದೂರು ನೀಡಿದ್ದರು. ಇದನ್ನು ಆಧರಿಸಿ ಜುಲೈ 4ರಂದು ಭಾರತೀಯ ನಾಗರಿಕ ಸುರಕ್ಷತಾ ಸಂಹಿತೆಯ (ಬಿಎನ್‌ಎಸ್ಎಸ್ ) ಸೆಕ್ಷನ್ 211(a)ಎಫ್‌ಐಆರ್ ದಾಖಲಾಗಿತ್ತು.
ಜುಲೈ 10, 2025 ರಂದು ದೂರುದಾರನಿಗೆ ಸಾಕ್ಷಿ ರಕ್ಷಣಾ ಯೋಜನೆಯಡಿಯಲ್ಲಿ ರಕ್ಷಣೆ ನೀಡಲಾಗಿತ್ತು. ಜುಲೈ 11ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗಿದ್ದ ಅವರು, ತಲೆಬುರುಡೆ ಮತ್ತು ಫೋಟೋಗಳನ್ನು ಸಲ್ಲಿಸಿ, ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದ್ದರು.
ಜುಲೈ 15ರಂದು, 2003ರಲ್ಲಿ ನಾಪತ್ತೆಯಾದ ಮೆಡಿಕಲ್ ವಿದ್ಯಾರ್ಥಿನಿ ಅನನ್ಯಾ ಭಟ್ ಅವರ ತಾಯಿ ವಕೀಲರೊಂದಿಗೆ ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿಯಾಗಿದ್ದರು. ಎಸ್ಪಿ ನೀಡಿದ ಸಲಹೆಯಂತೆ ಅಂದೇ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅವರು ದೂರು ದಾಖಲಿಸಿದ್ದಾರೆ.
ಜುಲೈ 19ರಂದು ರಾಜ್ಯ ಸರ್ಕಾರ ಸಾಕ್ಷಿ ದೂರುದಾರನ ಪ್ರಕರಣ ಮತ್ತು ಅದಕ್ಕೆ ಸಂಬಂಧಿಸಿದ ಇತರ ಎಲ್ಲಾ ಪ್ರಕರಣಗಳ ತನಿಖೆಗೆ ಎಸ್‌ಐಟಿ ರಚಿಸಿದೆ.
ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಅತ್ಯಾಚಾರ, ಹತ್ಯೆ ಪ್ರಕರಣಗಳು ನಡೆದಿವೆ. ಅವುಗಳ ಮೃತದೇಹಗಳನ್ನು ಮೇಲಿನವರ ಸೂಚನೆಯಂತೆ ನಾನೇ ಹೂತು ಹಾಕಿದ್ದೇನೆ. ಈಗ ಅದರ ಬಗ್ಗೆ ಪಶ್ಚಾತಾಪ ಕಾಡುತ್ತಿದೆ. ಆದ್ದರಿಂದ ಮೃತದೇಹಗಳನ್ನು ಹೂತು ಹಾಕಿರುವ ಜಾಗಗಳನ್ನು ತೋರಿಸಲು ನಾನು ಸಿದ್ದನ್ನಿದ್ದೇನೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಸಾಕ್ಷಿ ದೂರುದಾರ ದೂರು ದಾಖಲಿಸಿದ್ದಾರೆ. ಈ ವಿಚಾರ ಸಂಚಲನ ಸೃಷ್ಟಿಸಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದೆ.
ರೌಡಿ ಬಿಕ್ಲು ಶಿವ ಹತ್ಯೆ: ಶಾಸಕ ಬೈರತಿ ಬಸವರಾಜ್ ವಿಚಾರಣೆ; ಪ್ರಕರಣ ಸಿಐಡಿ ತನಿಖೆಗೆ ಆದೇಶ


