ಧರ್ಮಸ್ಥಳದಲ್ಲಿ ಈ ಹಿಂದೆ ನಡೆದಿದೆ ಎನ್ನಲಾದ ಅಪರಾಧ ಪ್ರಕರಣಗಳ ಶವಗಳನ್ನು ಹೂತು ಹಾಕಿರುವ 13 ಜಾಗಗಳನ್ನು ಸಾಕ್ಷಿ ದೂರುದಾರ ಸೋಮವಾರ (ಜು.28) ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ತೋರಿಸಿದ್ದಾರೆ.
ಮುಖಕ್ಕೆ ಮುಸುಕು ಹಾಕಿ, ಬಿಗಿ ಭದ್ರತೆಯಲ್ಲಿ ಸಾಕ್ಷಿ ದೂರುದಾರನ್ನು ಸೋಮವಾರ ನೇತ್ರಾವತಿ ಸ್ನಾನಘಟ್ಟದ ಬಳಿಗೆ ಎಸ್ಐಟಿ ಅಧಿಕಾರಿಗಳು ಕರೆ ತಂದಿದ್ದರು. ಸ್ನಾನಘಟ್ಟದ ಆಸುಪಾಸು ಮತ್ತು ಇತರ ಕೆಲ ಪ್ರದೇಶಗಳಲ್ಲಿ ಶವಗಳನ್ನು ಹೂತು ಹಾಕಿರುವ ಜಾಗಗಳನ್ನು ದೂರುದಾರ ತೋರಿಸಿದ್ದಾರೆ. ಆ ಜಾಗದ ಜಿಪಿಎಸ್ ಗುರುತುಗಳನ್ನು ದಾಖಲಿಸಿಕೊಂಡಿರುವ ಎಸ್‌ಐಟಿ ಅಧಿಕಾರಿಗಳು, ಅಲ್ಲಿ ಕೆಂಪು ರಿಬ್ಬನ್ ಕಟ್ಟಿದ್ದಾರೆ. ಅಲ್ಲದೆ, ದೂರುದಾರ ತೋರಿಸಿದ ಪ್ರತಿ ಜಾಗಕ್ಕೂ ನಿರ್ದಿಷ್ಟ ಸಂಖ್ಯೆಯ ಗುರುತು ಮಾಡಿದ್ದಾರೆ.
ದೂರುದಾರ ತೋರಿಸುವ 13 ಜಾಗಗಳೂ ಧರ್ಮಸ್ಥಳ ಪೊಲೀಸ್ ಠಾಣೆಯ 1 ಕಿ.ಮೀ ವ್ಯಾಪ್ತಿಯ ಕಾಡಿನಲ್ಲಿವೆ. ಮೊದಲು ತೋರಿಸಿದ ಎಂಟು ಜಾಗಗಳು ನೇತ್ರಾವದಿ ನದಿ ದಂಡೆಯಲ್ಲಿದ್ದರೆ, ಉಳಿದ ನಾಲ್ಕು ಜಾಗಗಳು ನೇತ್ರಾವತಿ ಸೇತುವೆಯಿಂದ ಸ್ನಾನಘಟ್ಟದ ಕಡೆಗೆ ಹೋಗುವ ರಾಜ್ಯ ಹೆದ್ದಾರಿ 37ರ ಪಕ್ಕದಲ್ಲಿವೆ. ಒಂದು ಜಾಗ ಮಾತ್ರ ಸ್ನಾನಘಟ್ಟ ಸಮೀಪದ ಕಿರು ಆಣೆಕಟ್ಟೆಯ ಪಕ್ಕದ ಬಯಲು ಜಾಗದಲ್ಲಿದೆ ಎಂದು ಪ್ರಜಾವಾಣಿ ವರದಿ ಮಾಡಿದೆ.
ಸಾಕ್ಷಿ ದೂರುದಾರ ವಕೀಲರ ತಂಡದ ಜೊತೆಗೆ ಬೆಳ್ತಂಗಡಿಯ ಎಸ್‌ಐಟಿ ಕಚೇರಿಗೆ ಬೆಳಿಗ್ಗೆ 10 ಗಂಟೆಯ ಸುಮಾರಿಗೆ ಹಾಜರಾಗಿದ್ದರು. ಅಲ್ಲಿಂದ 11.50ರ ಸುಮಾರಿಗೆ ಎಸ್‌ಐಟಿ ಅಧಿಕಾರಿಗಳು ಬಿಗಿ ಭದ್ರತೆಯಲ್ಲಿ ಅವರನ್ನು ಧರ್ಮಸ್ಥಳ ಸ್ನಾನಘಟ್ಟದ ಬಳಿಗೆ ಕರೆದೊಯ್ದಿದ್ದರು. ಅಲ್ಲಿ ಮಧ್ಯಾಹ್ನ 2 ಗಂಟೆಯವರೆಗೆ ದೂರುದಾರ ನೇತ್ರಾವತಿ ನದಿ ಪಕ್ಕದ ಎಂಟು ಜಾಗಗಳನ್ನು ತೋರಿಸಿದರು. ಬಳಿಕ ಧರ್ಮಸ್ಥಳ ಪೊಲೀಸ್ ಠಾಣೆಗೆ ಅವರನ್ನು ಕರೆದೊಯ್ದ ಎಸ್‌ಐಟಿ ಅಧಿಕಾರಿಗಳು, ಅಲ್ಲಿ ಅವರಿಗೆ ಊಟದ ವ್ಯವಸ್ಥೆ ಮಾಡಿದರು. ಊಟ ಮುಗಿಸಿದ ಬಳಿಕ ಮತ್ತೆ ಅವರನ್ನು ಕಾಡಿನೊಳಗೆ ಕರೆದೊಯ್ದು ಜಾಗದ ಗುರುತಿಸುವಿವೆ ನಡೆಯಿತು.
ಮಧ್ಯಾಹ್ನ ಊಟದ ಬಳಿಕ ದೂರುದಾರ ರಾಜ್ಯ ಹೆದ್ದಾರಿಯ ಪಕ್ಕದ ಕಾಡಿನಲ್ಲಿ ನಾಲ್ಕು ಜಾಗಗಳನ್ನು ತೋರಿಸಿದ್ದಾರೆ. ಬಳಿಕ ಸ್ನಾನಘಟ್ಟ ಸಮೀಪದ ಕಿರು ಅಣೆಕಟ್ಟೆಯ ಪಕ್ಕದ ಜಾಗ ತೋರಿಸಿದ್ದಾರೆ. ಒಟ್ಟು 13 ಜಾಗಗಳನ್ನು ತೋರಿಸುವಷ್ಟರಲ್ಲಿ ಸಂಜೆಯಾಗಿತ್ತು. ನೇತ್ರಾವದಿ ನದಿಯ ಆಚೆ ಬದಿಯಲ್ಲೂ ಜಾಗಗಳನ್ನು ಗುರುತಿಸಬೇಕಿತ್ತು. ಕನ್ಯಾಡಿ ಗ್ರಾಮದ ರಸ್ತೆಯ ಮೂಲಕ ಅಲ್ಲಿಗೆ ತೆರಳುವಾಗ ಸಂಜೆ 6 ಗಂಟೆ ಕಳೆದಿತ್ತು. ಜೋರಾಗಿ ಮಳೆಯೂ ಬರುತ್ತಿತ್ತು. ಹಾಗಾಗಿ, ಅಧಿಕಾರಿಗಳು ಜಾಗಗಳ ಹುಡುಕಾಟ ಸ್ಥಗಿತಗೊಳಿಸಿದರು ಎಂದು ವರದಿ ವಿವರಿಸಿದೆ.
ಇಂದು (ಬುಧವಾರ) ಕೂಡ ಜಾಗಗಳ ಗುರುತಿಸುವಿಕೆ ನಡೆಯಲಿದೆ ಎಂಬ ಮಾಹಿತಿ ದೊರೆತಿದೆ. ಇಂದು ಈಗಾಗಲೇ ಗುರುತಿಸಿರುವ ಜಾಗಗಳಲ್ಲಿ ಮಣ್ಣು ಅಗೆದು ಎಸ್‌ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ ಅಥವಾ ಅಸ್ತಿ ಪಂಜರಗಳಿದ್ದರೆ ಮೇಲೆತ್ತಲಿದ್ದಾರೆ ಎಂದು ಕೆಲ ವರದಿಗಳು ಹೇಳಿವೆ. ಈ ಬಗ್ಗೆ ಖಚಿತತೆ ಇಲ್ಲ.
ಕಳ್ಳತನ ಶಂಕೆ; ಸಂಭಾಲ್‌ನಲ್ಲಿ ದಲಿತ ಯುವಕರರನ್ನು ಕಂಬಕ್ಕೆ ಕಟ್ಟಿ ಹಲ್ಲೆ


