2013ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಹಗರಣದ ತನಿಖೆ ನಡೆಸಿದ್ದ ಭಾರತೀಯ ಪೊಲೀಸ್ ಸೇವಾ ಅಧಿಕಾರಿ ಜಿ.ಸಂಪತ್ ಕುಮಾರ್ ವಿರುದ್ಧ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿಯವರು ಮದ್ರಾಸ್ ಹೈಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದಾರೆ ಎಂದು ‘ಬಾರ್ ಮತ್ತು ಬೆಂಚ್’ ಶುಕ್ರವಾರ ವರದಿ ಮಾಡಿದೆ.
ಸಂಪತ್ ಅವರು ಸುಪ್ರೀಂ ಕೋರ್ಟ್ ಮತ್ತು ಮದ್ರಾಸ್ ಹೈಕೋರ್ಟ್ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಧೋನಿ ಆರೋಪಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಧೋನಿಯವರು ಬೆಟ್ಟಿಂಗ್ ಮತ್ತು ಮ್ಯಾಚ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ ಕಾರಣ, ಧೋನಿಯವರು 2014ರಲ್ಲಿ ಸಂಪತ್ ಕುಮಾರ್ ಮತ್ತು ಟೆಲಿವಿಷನ್ ಚಾನೆಲ್‌ವೊಂದರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು ಎಂದು ‘ದಿ ಹಿಂದೂ’ ವರದಿ ಮಾಡಿದೆ.
ಸಂಪತ್ ಅವರು 2021ರಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಲಿಖಿತ ಪ್ರತಿಕ್ರಿಯೆಯನ್ನು ಸಲ್ಲಿಸಿದರು.
ಗುರುವಾರ ಸಲ್ಲಿಸಿದ ಮನವಿಯಲ್ಲಿ ಧೋನಿ, “ಸಂಪತ್ ಅವರು ತಮ್ಮ ಪ್ರತಿಕ್ರಿಯೆಯಲ್ಲಿ ನ್ಯಾಯಾಂಗದ ವಿರುದ್ಧ ಹಗರಣವನ್ನು ಆರೋಪಿಸಿದ್ದಾರೆ ಮತ್ತು ಅವಮಾನಕರ ಹೇಳಿಕೆಗಳನ್ನು ನೀಡಿದ್ದಾರೆ” ಎಂದು ಪ್ರತಿಪಾದಿಸಿದ್ದಾರೆ.
“ಮ್ಯಾಚ್ ಫಿಕ್ಸಿಂಗ್ ಆರೋಪಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮುದ್ಗಲ್ ಸಮಿತಿಯು ಸಿದ್ಧಪಡಿಸಿದ ವರದಿಯ ಕೆಲವು ಭಾಗಗಳನ್ನು ಸುಪ್ರೀಂ ಕೋರ್ಟ್ ಮುಚ್ಚಿದ ಲಕೋಟೆಯಲ್ಲಿ ಇರಿಸಿದೆ. ಅದನ್ನು ವಿಶೇಷ ತನಿಖಾ ತಂಡಕ್ಕೆ ನೀಡಿಲ್ಲ ಎಂದು ಸಂಪತ್ ದೂರಿದ್ದಾರೆ ಎಂದು ಧೋನಿ ಹೇಳಿದ್ದಾರೆ” ಎಂದು ‘ಲೈವ್ ಲಾ’ ವರದಿ ತಿಳಿಸಿದೆ.
ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಇಡುವ ನಿರ್ಧಾರವು ಉದ್ದೇಶಪೂರ್ವಕವಾದದ್ದು ಎಂಬ ಪ್ರತಿಪಾದನೆಯನ್ನು ಸಂಪತ್ ಹೇಳಿಕೆ ಸೂಚಿಸುತ್ತಿದೆ ಎಂದು ಧೋನಿ ವಾದಿಸಿದ್ದಾರೆ. ಮದ್ರಾಸ್ ಹೈಕೋರ್ಟ್‌ನ ಅಡ್ವೊಕೇಟ್ ಜನರಲ್ ಮತ್ತು ನಿಯೋಜಿತ ಹಿರಿಯ ವಕೀಲರ ಕಚೇರಿಯ ವಿರುದ್ಧ ಸಂಪತ್ ಆರೋಪ ಮಾಡಿದ್ದಾರೆ ಎಂದು ಧೋನಿ ದೂರಿದ್ದಾರೆ.
ಇದನ್ನೂ ಓದಿರಿ: ವಿರಾಟ್ ಕೊಹ್ಲಿ ‘ನಕಲಿ ಫೀಲ್ಡಿಂಗ್’ ಆರೋಪ: ಬಾಂಗ್ಲಾ ಕ್ರಿಕೆಟ್ ಮಂಡಳಿ ಆಕ್ಷೇಪ
“ಅವರು [ಸಂಪತ್] ತಮ್ಮ ಹೆಚ್ಚುವರಿ ಲಿಖಿತ ಹೇಳಿಕೆಯಲ್ಲಿ ನೀಡಿರುವ ಅಭಿಪ್ರಾಯಗಳು ನ್ಯಾಯಾಲಯದ ಅಧಿಕಾರವನ್ನು ಕಡಿಮೆ ಮಾಡುತ್ತದೆ. ನ್ಯಾಯಾಂಗದ ಆಡಳಿತದಲ್ಲಿ ಮಧ್ಯಪ್ರವೇಶಿಸುವ ಮತ್ತು ಅಡ್ಡಿಪಡಿಸುವ ಪರಿಣಾಮವನ್ನು ಆ ಹೇಳಿಕೆಗಳು ಹೊಂದಿದೆ” ಎಂದು ಧೋನಿ ತಮ್ಮ ಮನವಿಯಲ್ಲಿ ತಿಳಿಸಿರುವುದಾಗಿ ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಧೋನಿಯವರ ಮನವಿಯನ್ನು ನ್ಯಾಯಮೂರ್ತಿ ಪಿ.ಎನ್.ಪ್ರಕಾಶ್ ಮತ್ತು ನ್ಯಾಯಮೂರ್ತಿ ಆರ್‌ಎಂಟಿ ಟೀಕಾ ರಾಮನ್ ಅವರ ಪೀಠದ ಮುಂದೆ ಪಟ್ಟಿ ಮಾಡಲಾಯಿತು. ಆದರೆ ವಿಚಾರಣೆ ಕೈಗೆತ್ತಿಕೊಳ್ಳಲು ಸಾಧ್ಯವಾಗಿಲ್ಲ. ಮುಂದಿನ ವಾರ ವಿಚಾರಣೆ ನಡೆಯುವ ಸಾಧ್ಯತೆ ಇದೆ.


