Homeಕ್ರೀಡೆಕ್ರಿಕೆಟ್ವಿರಾಟ್ ಕೊಹ್ಲಿ 'ನಕಲಿ ಫೀಲ್ಡಿಂಗ್' ಆರೋಪ: ಬಾಂಗ್ಲಾ ಕ್ರಿಕೆಟ್ ಮಂಡಳಿ ಆಕ್ಷೇಪ

ವಿರಾಟ್ ಕೊಹ್ಲಿ ‘ನಕಲಿ ಫೀಲ್ಡಿಂಗ್’ ಆರೋಪ: ಬಾಂಗ್ಲಾ ಕ್ರಿಕೆಟ್ ಮಂಡಳಿ ಆಕ್ಷೇಪ

- Advertisement -
- Advertisement -

ಐಸಿಸಿ ಟಿ20 ವಿಶ್ವಕಪ್ ಸೆಮಿಫೈನಲ್‌ ಮೇಲೆ ಕಣ್ಣಿಟ್ಟಿರುವ ಭಾರತ ತಂಡ ಮಹತ್ವದ ಪಂದ್ಯದಲ್ಲಿ ಬಾಂಗ್ಲಾದೇಶ ತಂಡದ ವಿರುದ್ದ 5 ರನ್‌ಗಳ ರೋಚಕ ಜಯ ಗಳಿಸಿದೆ. ಪಂದ್ಯದ ಕೊನೆಯ ಬಾಲ್‌ವರೆಗೂ ಕೂತೂಹಲ ಮೂಡಿಸಿದ್ದ ಪಂದ್ಯದಲ್ಲಿ ಭಾರತ ಜಯ ತನ್ನದಾಗಿಸಿಕೊಂಡಿತು. ಆದರೆ ಆ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನಕಲಿ ಫೀಲ್ಡಿಂಗ್ ಮಾಡಿದ್ದಾರೆ, ಆದರೆ ಫೀಲ್ಡ್ ಅಂಪೈರ್‌ಗಳು ಗಮನಿಸದ ಕಾರಣ ಬಾಂಗ್ಲಾದೇಶಕ್ಕೆ 5 ಅಮೂಲ್ಯ ರನ್‌ಗಳು ದೊರಕಿಲ್ಲ ಎಂದು ಬಾಂಗ್ಲಾ ಆಟಗಾರ ನೂರುಲ್ ಹಸನ್ ಆರೋಪಿಸಿದ್ದಾರೆ. ಬಾಂಗ್ಲಾ ಕ್ರಿಕೆಟ್ ಮಂಡಳಿ ಸಹ ಈ ಬಗ್ಗೆ ಗಂಭೀರ ಆಕ್ಷೇಪ ವ್ಯಕ್ತಪಡಿಸಿದೆ.

ಪಂದ್ಯದ ನಂತರ ಅಂಪೈರ್‌ಗಳ ತೀರ್ಮಾನವನ್ನು ಟೀಕಿಸಿರುವ ನೂರುಲ್, “ಪಂದ್ಯದಲ್ಲಿ ಬಾಂಗ್ಲಾ ತಂಡ ಬ್ಯಾಟಿಂಗ್ ಮಾಡುತ್ತಿದ್ದಾಗ 7ನೇ ಓವರ್‌ನಲ್ಲಿ ಈ ಘಟನೆ ಜರುಗಿದೆ. ಅಕ್ಸರ್ ಪಟೇಲ್ ಎಸೆದ ಎಸೆತವನ್ನು ಲಿಟನ್ ದಾಸ್ ದೀಪ್ ಕಡೆ ತಿರುಗಿಸಿದರು. ಅರ್ಶದೀಪ್ ಸಿಂಗ್ ಚೆಂಡನ್ನು ತಡೆದು ಕೀಪರ್ ಕಡೆ ಎಸೆದಾಗ ವಿರಾಟ್ ಕೊಹ್ಲಿ ಆ ಬಾಲ್ ಅನ್ನು ಹಿಡಿದು ನಾನ್ ಸ್ಟ್ರೈಕರ್ ಎಂಡ್‌ನ ವಿಕೆಟ್‌ಗಳಿಗೆ ಎಸೆಯುವಂತೆ ನಟನೆ ಮಾಡಿ ನಕಲಿ ಫೀಲ್ಡಿಂಗ್ ಮಾಡಿದ್ದಾರೆ” ಎಂದು ಆರೋಪಿಸಿದ್ದಾರೆ. ಆ ಕ್ಷಣವನ್ನು ಈ ಟ್ವಿಟರ್ ಪೋಸ್ಟ್‌ನಲ್ಲಿ ನೋಡಬಹುದು.

ICC ಆಟದ ನಿಯಮಗಳ 41.5ರ ಪ್ರಕಾರ ಇದು ಅನ್ಯಾಯದ ಆಟಕ್ಕೆ ಸಂಬಂಧಿಸಿದೆ. ಈ ನಿಯಮದ ಪ್ರಕಾರ ಬ್ಯಾಟರ್‌ಗಳಿಗೆ ಉದ್ದೇಶಪೂರ್ವಕವಾಗಿ ಅಡಚಣೆ, ವಂಚನೆ, ದಿಕ್ಕು ತಪ್ಪುಸುವ ಕೆಲಸವನ್ನು ಫೀಲ್ಡರ್‌ಗಳು ಮಾಡಬಾರದು. ಒಂದು ವೇಳೆ ಯಾರಾದರೂ ಈ ನಿಯಮವನ್ನು ಉಲ್ಲಂಘಿಸಿರುವುದನ್ನು ಅಂಪೈರ್ ಗಮನಿಸಿದರೆ, ಅವರು ಅದನ್ನು ಡೆಡ್ ಬಾಲ್ ಎಂದು ಕರೆಯಬಹುದು ಮತ್ತು ಎದುರಾಳಿ ತಂಡಕ್ಕೆ ಐದು ಪೆನಾಲ್ಟಿ ರನ್‌ಗಳನ್ನು ನೀಡಬಹುದಾಗಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಮುಂದಿನ ವಾರ ಮೆಲ್ಬೋರ್ನ್‌ನಲ್ಲಿ ಮಂಡಳಿಯ ಸಭೆಯನ್ನು ನಡೆಸಲಿದ್ದು, ಅಲ್ಲಿ ಅವಕಾಶ ಸಿಕ್ಕರೆ ಈ ವಿಷಯವನ್ನು ಪ್ರಸ್ತಾಪಿಸಲಾಗುತ್ತದೆ ಎಂದು BCB ಕ್ರಿಕೆಟ್ ಕಾರ್ಯಾಚರಣೆಗಳ ಮುಖ್ಯಸ್ಥ ಜಲಾಲ್ ಯೂನಸ್ AFP ಗೆ ತಿಳಿಸಿದ್ದಾರೆ.

ಭಾರತದ ನಿರಾಕರಣೆ:

ವಿರಾಟ್ ಕೊಹ್ಲಿ ಬಾಲ್ ಅನ್ನು ಥ್ರೋ ಮಾಡುವಂತೆ ನಟನೆ ಮಾಡುವ ಮೂಲಕ ನಕಲಿ ಫೀಲ್ಡಿಂಗ್ ಮಾಡಿದ್ದಾರೆ ಎಂಬುದನ್ನು ಭಾರತ ನಿರಾಕರಿಸಿದೆ. ವಿರಾಟ್ ಕೊಹ್ಲಿ ಹಾಗೆ ಮಾಡುವುದನ್ನು ಇಬ್ಬರೂ ಬ್ಯಾಟ್ಸ್‌ಮನ್‌ಗಳು ಸಹ ಗಮನಿಸಿಲ್ಲ. ಹಾಗೆಂದ ಮೇಲೆ ಅವರಿಗೆ ಅದರಿಂದ ಯಾವುದೇ ಅಡಚಣೆ ಆಗಿಲ್ಲದಿರುವಾಗ ನಿಯಮಗಳ ಉಲ್ಲಂಘನೆ ಆಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

“ಬ್ಯಾಟಿಂಗ್ ಮಾಡುತ್ತಿದ್ದ ಲಿಟನ್ ದಾಸ್ ಮತ್ತು ಶಾಂಟೋ ಕೊಹ್ಲಿಯನ್ನು ಗಮನಿಸಿಲ್ಲ. ಹಾಗಾಗಿ ಅವರಿಗೆ ಯಾವುದೇ ಅಡಚಣೆ ಉಂಟಾಗಿಲ್ಲ. ಅಲ್ಲದೆ ಅಂಪೈರ್‌ಗಳ ಸಹ ಗಮನಿಸಿಲ್ಲ. ಕ್ರಿಕೆಟ್ ವೀಕ್ಷಣೆ ವಿವರಣೆಗಾರರು ಕೂಡ ಗಮನಿಸಿಲ್ಲ, ಈಗ ನೀವು ಏನು ಮಾಡುತ್ತೀರಿ” ಎಂದು ಹಿರಿಯ ಕ್ರಿಕೆಟ್ ತಜ್ಞ ಹರ್ಷ ಬೋಗ್ಲೆ ಟ್ವೀಟ್ ಮಾಡಿದ್ದಾರೆ.

ಜಿಂಬಾಬ್ವೆ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಸೂಪರ್ 12 ಪಂದ್ಯದಲ್ಲಿ ಈ ರೀತಿಯಾಗಿ ಅಂಪೈರ್ ಜಿಂಬಾಬ್ವೆ ತಂಡಕ್ಕೆ 5 ಪೆನಾಲ್ಟಿ ರನ್ ನೀಡಿದ್ದರು. ಏಕೆಂದರೆ ಆಫ್ರಿಕಾ ತಂಡದ ನೊಕಿಯೊ ಎಸೆತವನ್ನು ಮಿಲ್ಟಾನ್ ಸ್ಕೂಪ್ ಮಾಡಿದರು. ಆದರೆ ಆಫ್ರಿಕಾ ತಂಡದ ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್ ತಮ್ಮ ಒಂದು ಗ್ಲೌಸ್ ಎಸೆದಿದ್ದರು. ಥರ್ಡ್ ಮ್ಯಾನ್ ಫೀಲ್ಡರ್ ಲುಂಗಿ ಎಂಗಿಡಿ ಚೆಂಡನ್ನು ಹಿಡಿದು ಲಾಂಗ್ ಥ್ರೋ ಮಾಡಿದರು. ಆದರೆ ಆ ಚೆಂಡು ವಿಕೆಟ್ ಕೀಪರ್ ಕೈ ಸೇರುವುದು ಬಿಟ್ಟು ಗ್ಲೌಸ್ ಮೇಲೆ ಬಿದ್ದಿತು. ಇದನ್ನು ಗಮನಿಸಿದ ಅಂಪೈರ್ ಬೈಸ್ ರೂಪದಲ್ಲಿ ಜಿಂಬಾಬ್ವೆ ತಂಡಕ್ಕೆ 5 ಪೆನಾಲ್ಟಿ ರನ್ ನೀಡಿದ್ದರು. ಅದನ್ನು ಕೆಳಗಿನ ಟ್ವಿಟರ್ ಪೋಸ್ಟ್‌ನಲ್ಲಿ ಗಮನಿಸಬಹುದು.

ಅದೇ ರೀತಿಯಾಗಿ ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ 5 ಪೆನಾಲ್ಟಿ ರನ್‌ಗಳನ್ನು ಪಡೆದಿತ್ತು. ಏಕೆಂದರೆ ಬಾಂಗ್ಲಾ ತಂಡದ ನಾಯಕ ಶಕೀಬ್ ಬೌಲ್ ಮಾಡಲು ಆರಂಭಿಸಿದಾಗ ವಿಕೆಟ್ ಕೀಪರ್ ನೂರುಲ್ ಹಸನ್ ತಮ್ಮ ಎಡಗಾಲನ್ನು ಎತ್ತಿ ಇಟ್ಟಿದ್ದರು. ಬೌಲರ್ ಬಾಲ್ ಮಾಡಲು ಓಡಲು ಶುರು ಮಾಡಿದ ನಂತರ ವಿಕೆಟ್ ಕೀಪರ್ ಯಾವುದೇ ಚಲನೆ ಮಾಡುವಂತಿಲ್ಲ ಎಂಬ ನಿಯಮವನ್ನು ಮೀರಿದ್ದರು. ಹಾಗಾಗಿ ಬಾಂಗ್ಲಾ ತಂಡಕ್ಕೆ ಪೆನಾಲ್ಟಿ ಹಾಕಿ ದಕ್ಷಿಣ ಆಫ್ರಿಕಾ ತಂಡಕ್ಕೆ 5 ರನ್ ನೀಡಲಾಗಿತ್ತು.

ಗೆಲ್ಲಲೇಬೇಕಾದ ಒತ್ತಡ, ಮಳೆಯ ಕಣ್ಣಾಮುಚ್ಚಾಲೆಗಳ ನಡುವಿನ ಮಹತ್ವದ ಪಂದ್ಯದಲ್ಲಿ ಭಾರತ ತಂಡ ಬಾಂಗ್ಲಾದೇಶ ತಂಡದ ವಿರುದ್ಧ 5 ರನ್ ಗಳ ಗೆಲುವು ದಾಖಲಿಸಿ ಸೆಮಿಫೈನಲ್ ಕಡೆ ಮುಖ ಮಾಡಿದೆ. ಟಾಸ್ ಸೋತ ಕಾರಣ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಕೆ.ಎಲ್ ರಾಹುಲ್ (32 ಎಸೆತಗಳಲ್ಲಿ 50 ರನ್) ವಿರಾಟ್ ಕೊಹ್ಲಿ (44 ಎಸೆತಗಳಲ್ಲಿ 64 ರನ್) ಮತ್ತು ಸೂರ್ಯಕುಮಾರ್ ಯಾದವ್ 16 ಎಸೆತಗಳಲ್ಲಿ 30 ರನ್) ನೆರವಿನಿಂದ 184 ರನ್‌ಗಳ ಸವಾಲಿನ ಮೊತ್ತ ಪೇರಿಸಿತು.

185 ರನ್ ಗುರಿ ಪಡೆದು ಬ್ಯಾಟಿಂಗ್ ಆರಂಭಿಸಿದ ಬಾಂಗ್ಲಾದೇಶ ಅತ್ಯುತ್ತಮ ಆರಂಭ ಕಂಡಿತು. ಬಾಂಗ್ಲಾ ಬ್ಯಾಟರ್‌‌ ಲಿಟನ್ ದಾಸ್ ಭಾರತದ ಬೌಲರ್‌‌ಗಳ ಬೆವರಿಳಿಸಿದರು. 21 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಅವರು ಮಳೆ ಬಂದು ಸ್ವಲ್ಪ ಹೊತ್ತು ಪಂದ್ಯ ನಿಲ್ಲುವ ಹೊತ್ತಿಗೆ ತಂಡದ ಮೊತ್ತವನ್ನು 7 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 66 ರನ್‌‌ಗಳಿಗೆ ಏರಿಸಿದ್ದರು. ಮಳೆ ನಿಂತ ನಂತರ ಡಕ್ವರ್ತ್ ಲೂಯಿಸ್ ನಿಯಮದಂತೆ 16 ಓವರ್‌‌ಗಳಲ್ಲಿ 151 ರನ್ ಗಳಿಸುವ ಹೊಸ ಗುರಿ ನೀಡಲಾಯಿತು. ಆದರೆ ಆನಂತರ ಬಾಂಗ್ಲಾದೇಶದ ಬ್ಯಾಟ್ಸ್‌ಮನ್‌‌ಗಳು ಒಬ್ಬರ ನಂತರ ಒಬ್ಬರು ಪೆವಿಲಿಯನ್ ಸೇರಿದರು. ಪಂದ್ಯ ಕೊನೆಯವರೆಗೂ ಸಾಗಿ ಕೊನೆಯ ಎಸೆತದಲ್ಲಿ ಬಾಂಗ್ಲಾ 05 ರನ್‌ಗಳ ಸೋಲೊಪ್ಪಿಕೊಂಡಿತು.

ಆ ಮೂಲಕ ಭಾರತದ ಸೆಮಿಫೈನಲ್ ಹಾದಿ ಸುಲಭವಾಗಿದೆ. 04 ಪಂದ್ಯಗಳಲ್ಲಿ 03 ಗೆಲುವು ಮತ್ತು ಒಂದು ಸೋಲಿನೊಂದಿಗೆ 06 ಅಂಕ ಪಡೆದಿದೆ. ಕೊನೆಯ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಗೆದ್ದಲ್ಲಿ ಸುಲಭವಾಗಿ ಸೆಮಿಫೈನಲ್ ತಲುಪಲಿದೆ.

ಇದನ್ನೂ ಓದಿ; ಐಸಿಸಿ ಟಿ20 ವಿಶ್ವಕಪ್: ಮಹತ್ವದ ಪಂದ್ಯದಲ್ಲಿ ಬಾಂಗ್ಲಾ ವಿರುದ್ದ ಗೆಲುವು: ಸೆಮಿಫೈನಲ್ ನತ್ತ ಭಾರತ ತಂಡ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದಲಿತ ಸಮುದಾಯದ ಆಕ್ರೋಶಕ್ಕೆ ಮಣಿದ ರಾಜ್ಯ ಸರ್ಕಾರ; ‘ಪ್ರಬುದ್ಧ’ ಯೋಜನೆ ಪುನರಾರಂಭ

0
ಎಸ್‌ಸಿ-ಎಸ್‌ಟಿ ಮತ್ತು ಇತರ ದುರ್ಬಲ ಸಮುದಾಯಗಳ ವಿದ್ಯಾರ್ಥಿಗಳು ತಮ್ಮ ಸ್ನಾತಕೋತ್ತರ ಮತ್ತು ಪಿಎಚ್‌ಡಿ ಕೋರ್ಸ್‌ಗಳನ್ನು ವಿದೇಶದ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ನಡೆಸಲು ಸಮಾಜ ಕಲ್ಯಾಣ ಇಲಾಖೆಯಿಂದ ನೀಡುವ ಆರ್ಥಿಕ ಯೋಜನೆಯಾದ 'ಪ್ರಬುದ್ಧ' ಕಾರ್ಯಕ್ರಮವನ್ನು ನಿಲ್ಲಿಸಿದ್ದ...