ಸುಮಾರು ಎರಡು ದಶಕಗಳ ಹಿಂದೆ ಗುಜರಾತ್‌ನಲ್ಲಿ ನಡೆದ ಗಲಭೆಗಳ ಕುರಿತು ಬಿಬಿಸಿಯ ಎರಡು ಭಾಗಗಳ ಸಾಕ್ಷ್ಯಚಿತ್ರ ಸಿದ್ದಗೊಳಿಸಿದೆ. ಇದು ಅಂದಿನ ನರೇಂದ್ರ ಮೋದಿ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರದ ಕ್ರಮವನ್ನು ಟೀಕಿಸಿದೆ. ಹಾಗಾಗಿ ಇದೀಗ ಕೇಂದ್ರ ಸರ್ಕಾರ ಈ ಸಾಕ್ಷ್ಯ ಚಿತ್ರವನ್ನು ನಿರ್ಭಂಧಿಸಿದೆ. ಸರ್ಕಾರದ ಈ ಕ್ರಮವನ್ನು ಖಂಡಿಸಿರುವ ವಿರೋಧ ಪಕ್ಷದ ನಾಯಕರೊಂದಿಗೆ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಸೇರಿಕೊಂಡಿದ್ದಾರೆ.
ಭಾನುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ಗಣರಾಜ್ಯೋತ್ಸವದಂದು ಬಿಡುಗಡೆಯಾಗಲಿರುವ “ಗಾಂಧಿ ಗೋಡ್ಸೆ: ಏಕ್ ಯುದ್ಧ್” ಚಲನಚಿತ್ರವನ್ನು ನಿಷೇಧಿಸುವಂತೆ ಕೋರಿದರು. ಇದೇ ವೇಳೆ, “ಕಳೆದ ವಾರ ಯೂಟ್ಯೂಬ್ ಮತ್ತು ಟ್ವಿಟ್ಟರ್ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ “ಇಂಡಿಯಾ: ದಿ ಮೋದಿ ಕ್ವೆಶ್ಶನ್” ಎನ್ನುವ ಬಿಬಿಸಿಯವರು ತಯಾರಿಸಿದ ಸಾಕ್ಷ್ಯಚಿತ್ರ ಬಗ್ಗೆ ಚರ್ಚೆಯಾಗತ್ತಿದೆ. ಸಾಕ್ಷ್ಯಚಿತ್ರದ ಮೊದಲ ಭಾಗವು ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಬೆನ್ನಲ್ಲೇ ಈ ಸಾಕ್ಷ್ಯಚಿತ್ರವನ್ನು ಕೇಂದ್ರ ಸರ್ಕಾರ ನಿರ್ಬಂಧಿಸುವ ಕ್ರಮಕ್ಕೆ ಪ್ರಯತ್ನಿಸಿದರು” ಎಂದರು.
ಇದನ್ನೂ ಓದಿ: ಆಳವಾದ ಸಂಶೋಧನೆ ನಡೆಸಿದ್ದೇವೆ: ಮೋದಿ ಕುರಿತು ಸಾಕ್ಷ್ಯಚಿತ್ರ ಸಮರ್ಥಿಸಿಕೊಂಡ ಬಿಬಿಸಿ
“ಗುಜರಾತ್ ಗಲಭೆ ನಡೆದಾಗ ಮುಖ್ಯಮಂತ್ರಿಯಾಗಿದ್ದ ಪ್ರಧಾನಿ ಮೋದಿಯವರ ಕುರಿತು ಬಿಬಿಸಿ ಸಾಕ್ಷ್ಯಚಿತ್ರದಲ್ಲಿ ಏನೇನು ಚರ್ಚೆಗಳು ನಡೆದಿವೆ ಎನ್ನುವ ಬಗ್ಗೆ ನೀವು ನೋಡುತ್ತಿದ್ದೀರಿ. ಮೋದಿ ಸರ್ಕಾರವು ವಸಾಹತುಶಾಹಿ ಕಾಲಕ್ಕೆ ಸಂಬಂಧಿಸಿದ ಕಾನೂನಿನ ಆಧಾರದ ಮೇಲೆ ಸಾಕ್ಷ್ಯಚಿತ್ರವನ್ನು ನಿರ್ಬಂಧಿಸಿದೆ” ಎಂದು ಲೋಕಸಭಾ ಸಂಸದರು ಕಾರ್ಯಕ್ರಮವೊಂದರಲ್ಲಿ ಹೇಳುತ್ತಿರುವುದು ಕೇಳಿಬರುತ್ತಿದೆ. ”ಗಲಭೆ ನಡೆದಾಗ ನೀವು ಮುಖ್ಯಮಂತ್ರಿಯಾಗಿರಲಿಲ್ಲವೇ..? ಬಿಲ್ಕಿಸ್ ಬಾನೋ ಮೇಲೆ ಸಾಮೂಹಿಕ ಅತ್ಯಾಚಾರ… ಕಾಂಗ್ರೆಸ್ ಸಂಸದರ ಹತ್ಯೆ” ಎಂದು ಎಹ್ಸಾನ್ ಜಾಫ್ರಿಯನ್ನು ಉಲ್ಲೇಖಿಸಿ ಓವೈಸಿ ಹೇಳಿದ್ದಾರೆ.
“ಇದೀಗ ಮಹಾತ್ಮ ಗಾಂಧಿಯನ್ನು ಕೊಂದ ಗೋಡ್ಸೆಯ ಮೇಲೆ ಚಲನಚಿತ್ರವನ್ನು ನಿರ್ಮಿಸಲಾಗುತ್ತಿದೆ. ಭಾರತದ ಪ್ರಧಾನಿ ಆ ಚಲನಚಿತ್ರವನ್ನು ನಿಷೇಧಿಸುತ್ತಾರೆಯೇ? ಚಿತ್ರದಲ್ಲಿ ಗಾಂಧಿಯನ್ನು ಏಕೆ ಕೊಲ್ಲಲಾಯಿತು ಎಂಬುದರ ಕುರಿತು ಮಾತನಾಡುತ್ತದೆ. ಮತ್ತೊಂದೆಡೆ ಬಿಬಿಸಿ ಪಿಎಂ ಮೋದಿ ಬಗ್ಗೆ ತೋರಿಸಿದಾಗ ಅದು ಸಮಸ್ಯೆಯಾಗಿ ಕಾಣುತ್ತದೆ. ಮೋದಿ ಸಾಕ್ಷ್ಯಚಿತ್ರ ನಿಷೇಧಿಸುವವರಿಗೆ ಗಾಂಧಿ ಗೋಡ್ಸೆ ಚಿತ್ರ ಕಾಣಿಸಲಿಲ್ಲವೇ?: ಅಸಾದುದ್ದೀನ್ ಓವೈಸಿ ಗಾಂಧಿಗಿಂತ ನರೇಂದ್ರ ಮೋದಿ ದೊಡ್ಡವನಲ್ಲ” ಎಂದು ಓವೈಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ಹೇಳಿದರು.
“ಏಕೆ ಈ ಪಕ್ಷಪಾತ? ಬಿಜೆಪಿ ಸಂಸದರು ಗಾಂಧಿಯನ್ನು ಕೊಂದ ಗೋಡ್ಸೆಯನ್ನು ಹೊಗಳಲಿಲ್ಲವೇ? ಯಾವ ರೀತಿಯ ಭಾರತವನ್ನು ರಚಿಸಲಾಗುತ್ತಿದೆ. ಜಿ-20 ಪೋಸ್ಟರ್‌ಗಳಲ್ಲಿ ಭಾರತವನ್ನು ಪ್ರಜಾಪ್ರಭುತ್ವ ಎಂದು ಅನುಮೋದಿಸಲಾಗುತ್ತಿದೆ ಆದರೆ ಯೂಟ್ಯೂಬ್‌ನಲ್ಲಿ ಚಿತ್ರಗಳನ್ನು ನಿಷೇಧಿಸುವ ಕ್ರಮ ಅನುಸರಿಸುತ್ತಿದೆ. ಇದೆಂತಹ ಪ್ರಜಾಪ್ರಭುತ್ವ” ಎಂದು ಅವರು ಮತ್ತಷ್ಟು ಒತ್ತಿ ಹೇಳಿದರು.
ಸಾಕ್ಷ್ಯಚಿತ್ರವನ್ನು ಕೇಂದ್ರ ಸರ್ಕಾರವು “ಪ್ರಚಾರದ ತುಣುಕು” ಎಂದು ತಳ್ಳಿಹಾಕಿದ್ದರೂ ಸಹ, ಈ ಹಿಂದೆ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ನಾಯಕರು ಸಾಕ್ಷ್ಯಚಿತ್ರದ ನಡೆಯನ್ನು ಪ್ರಶ್ನಿಸಿದ್ದರು. ಕಾನೂನು ಸಚಿವ ಕಿರಣ್ ರಿಜಿಜು ಭಾನುವಾರ ಇದನ್ನು “ದುರುದ್ದೇಶಪೂರಿತ” ಎಂದು ಟ್ಯಾಗ್ ಮಾಡಿದ್ದಾರೆ.


