ವಿದ್ಯುತ್ ಬಿಲ್ ಏರಿಕೆಯ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿದ್ದು ಕಾಂಗ್ರೆಸ್ ಸರ್ಕಾರ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿಕೆಗೆ ತಿರುಗೇಟು ನೀಡಿರುವ ಕಾಂಗ್ರೆಸ್ ”ಸುಳ್ಳು ಹೇಳುವುದು ಮೋದಿಯವರಿಂದ ಕಲಿತಿರಾ?” ಎಂದು ಪ್ರಶ್ನೆ ಮಾಡಿದೆ.
ಈ ವಿಚಾರವಾಗಿ ಟ್ವಿಟ್ ಮಾಡಿರುವ ರಾಜ್ಯ ಕಾಂಗ್ರೆಸ್ ಘಟಕ, ”ವಿದ್ಯುತ್ ದರ ಏರಿಕೆಯ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿದ್ದು ನಾವಲ್ಲ ಕಾಂಗ್ರೆಸ್ ಸರ್ಕಾರ” ಎಂದಿರುವ ಬಸವರಾಜ ಬೊಮ್ಮಾಯಿ ಅವರೇ, ದರ ಏರಿಕೆ ಜಾರಿಯಾಗಿದ್ದು ಮೇ 12ನೇ ತಾರೀಖು, ಆಗ ನಮ್ಮ ಸರ್ಕಾರ ರಚನೆಯಾಗಿತ್ತಾ? ಹಿಂದಿನ ಸರ್ಕಾರದ ಅನುಮತಿ ಇಲ್ಲದೆ KERC ದರ ಏರಿಸಲು ಹೇಗೆ ಸಾಧ್ಯ? ಇಷ್ಟೊಂದು ಸುಳ್ಳು ಹೇಳುವುದನ್ನು ಮೋದಿಯವರಿಂದ ಕಲಿತಿರಾ? ಎಂದು ಛೇಡಿಸಿದೆ.
"ವಿದ್ಯುತ್ ದರ ಏರಿಕೆಯ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿದ್ದು ನಾವಲ್ಲ ಕಾಂಗ್ರೆಸ್ ಸರ್ಕಾರ" ಎಂದಿರುವ @BSBommai ಅವರೇ,
ದರ ಏರಿಕೆ ಜಾರಿಯಾಗಿದ್ದು ಮೇ 12ನೇ ತಾರೀಖು, ಆಗ ನಮ್ಮ ಸರ್ಕಾರ ರಚನೆಯಾಗಿತ್ತಾ? ಹಿಂದಿನ ಸರ್ಕಾರದ ಅನುಮತಿ ಇಲ್ಲದೆ KERC ದರ ಏರಿಸಲು ಹೇಗೆ ಸಾಧ್ಯ?
ಇಷ್ಟೊಂದು ಸುಳ್ಳು ಹೇಳುವುದನ್ನು ಮೋದಿಯವರಿಂದ ಕಲಿತಿರಾ?
— Karnataka Congress (@INCKarnataka) June 14, 2023
ಬೊಮ್ಮಾಯಿ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಸಿಎಂ ಡಿಕೆ ಶಿವಕುಮಾರ್ ಅವರು, ”ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ದುಖಃದಲ್ಲಿ ಮಾತನಾಡಿದ್ದಾರೆ, ಅದಕ್ಕೆ ನಾನ್ಯಾಕೆ ಬೇಸರ ಮಾಡಿಕೊಳ್ಳಲಿ” ಎಂದು ಹೇಳಿದ್ದಾರೆ.
”ವಿದ್ಯುತ್ ರೇಟು, ದಾಖಲೆಗಳು ಎಲ್ಲವೂ ನಮ್ಮ ಬಳಿ ಇದೆ. ನಾವು ಎಲ್ಲ ದಾಖಲೆಗಳನ್ನು ಕೊಡುತ್ತೇವೆ” ಎಂದು ಬೊಮ್ಮಾಯಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.
ಬೊಮ್ಮಾಯಿ ಹೇಳಿದ್ದೇನು?
ಮಂಗಳವಾರ ಹಾವೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ”ಕೆ.ಇ.ಆರ್.ಸಿ ಅದೊಂದು ಸ್ಟೆಚುಟರಿ ಬಾಡಿಯವರು ಮಾರ್ಚ್ ನಲ್ಲಿ ಹೆಚ್ಚಳದ ಪ್ರಸ್ತಾವನೆ ಕೊಟ್ಟರೂ, ನಾವು ಒಪ್ಪಿಗೆ ಕೊಟ್ಟಿರಲಿಲ್ಲ. ನಾವು ವಿದ್ಯುತ್ ದರ ಹೆಚ್ಚಳದ ಯಾವುದೇ ಆದೇಶ ಮಾಡಿಲ್ಲ. ಕಾಂಗ್ರೆಸ್ ನವರು ಬಂದ ಮೇಲೆಯೇ ವಿದ್ಯುತ್ ದರ ಹೆಚ್ಚಳ ಮಾಡಿದ್ದಾರೆ. ಅವರ ಆಜ್ಞೆಯಿಂದಲೇ ವಿದ್ಯುತ್ ದರ ಹೆಚ್ಚಳ ಆಗಿದೆ” ಎಂದು ಹೇಳಿದ್ದಾರೆ.
”ಏಪ್ರೀಲ್ ನಿಂದ ವಿದ್ಯುತ್ ದರ ಹೆಚ್ಚಳ ಮಾಡಿದ್ದಾರೆ. ಇದು ಬಹಳ ದೊಡ್ಡ ಭಾರ ಇದೆ. ಬರುವ ದಿನಗಳಲ್ಲಿ ಎಲೆಕ್ಟ್ರಿಸಿಟಿ ಕ್ಷೇತ್ರ ಬಹಳ ಸಂಕಷ್ಟಕ್ಕೆ ಈಡಾಗಲಿದೆ. ಸಾರಿಗೆ ಹಾಗೂ ವಿದ್ಯುತ್ ಕ್ಷೇತ್ರಗಳಗೆ ಹಣ ಕೊಡಬೇಕು. ಒಂದು ವರ್ಷ ಬಿಟ್ಟು ಸಬ್ಸಿಡಿ ಕೊಟ್ಟರೆ ಆಗಲ್ಲ. ಮುಂಗಡವಾಗಿ ಸಬ್ಸಿಡಿ ಕೊಡಬೇಕು” ಎಂದರು.


