ಮುಸ್ಲಿಮೇತರ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಒತ್ತಾಯಿಸಲಾಗಿದೆ ಎಂಬ ಆರೋಪ ಬಂದಿದ್ದು, ವಿವಾದದ ಕೇಂದ್ರಬಿಂದುವಾಗಿರುವ ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯ ಶಾಲೆಯೊಂದರ ಪ್ರಾಂಶುಪಾಲರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ಗೆ ತಿಳಿಸಿದ್ದಾರೆ.
ಬೋರ್ಡ್ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಗಂಗಾ ಜಮುನಾ ಹೈಯರ್ ಸೆಕೆಂಡರಿ ಶಾಲೆಯ 18 ವಿದ್ಯಾರ್ಥಿಗಳನ್ನು ಅಭಿನಂದಿಸುವ ಪೋಸ್ಟರ್ ವೈರಲ್ ಆದ ನಂತರ ವಿವಾದ ಭುಗಿಲೆದ್ದಿತು. ಆ ಚಿತ್ರದಲ್ಲಿನ ಹೆಣ್ಣು ಮಕ್ಕಳು ಧರ್ಮಾತೀತವಾಗಿ ತಲೆಯ ಮೇಲೆ ದುಪ್ಪಟ್ಟವನ್ನು ಧರಿಸಿದ್ದರು. ಮೇ ತಿಂಗಳ ಅಂತ್ಯದಲ್ಲಿ ಈ ವಿವಾದ ಶುರುವಾಯಿತು.
ಇದು ಮತಾಂತರದ ಪ್ರಕ್ರಿಯೆಯಾಗಿದೆ ಎಂದು ಹಿಂದುತ್ವ ಗುಂಪುಗಳು ಆರೋಪಿಸಿದ್ದವು. ಶಾಲೆಯ ನೋಂದಣಿಯನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆಗಳನ್ನು ನಡೆಸಿದ್ದವು. ಸ್ಪಷ್ಟನೆ ನೀಡಿದ್ದ ಶಾಲಾ ಆಡಳಿತ ಮಂಡಲಿ, “ತಲೆಯ ಮೇಲಿನ ದುಪ್ಪಟ್ಟವು ಸಮವಸ್ತ್ರದ ಭಾಗವಾಗಿದೆ. ವಿದ್ಯಾರ್ಥಿಗಳು ಅದನ್ನು ಧರಿಸಲೇಬೇಕೆಂದು ಒತ್ತಾಯಿಸಲಿಲ್ಲ” ಎಂದು ತಿಳಿಸಿರುವುದಾಗಿ ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.
ಶಾಲೆಯ ಪ್ರಾಂಶುಪಾಲರಾದ ಅಫ್ಶಾ ಶೇಖ್ ಅವರಲ್ಲದೆ, ಗಣಿತ ಶಿಕ್ಷಕ ಅನಾಸ್ ಅತಾಹರ್ ಮತ್ತು ಭದ್ರತಾ ಸಿಬ್ಬಂದಿ ರುಸ್ತಮ್ ಅಲಿ ಅವರನ್ನೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದ್ದಾರೆ.
“ಮುಖ್ಯವಾಗಿ ಶಾಲಾ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬ ಸದಸ್ಯರನ್ನು ಒಳಗೊಂಡ ಆರು-ಏಳು ಮಂದಿ ಸಾಕ್ಷಿಗಳ ಹೇಳಿಕೆಗಳನ್ನು ಆಧರಿಸಿ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ” ಎಂದು ದಾಮೋಹ್ ಪೊಲೀಸ್ ವರಿಷ್ಠಾಧಿಕಾರಿ ರಾಕೇಶ್ ಸಿಂಗ್ ತಿಳಿಸಿದ್ದಾರೆ.
ಮೂವರನ್ನು ಭಾನುವಾರ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇದನ್ನೂ ಓದಿರಿ: ಇ.ಡಿ. ವಶಕ್ಕೆ ತಮಿಳುನಾಡು ಸಚಿವ ಬಾಲಾಜಿ; ದುರುದ್ದೇಶಪೂರಿತ ಎಂದ ಡಿಎಂಕೆ, ಕಾಂಗ್ರೆಸ್
ಜೂನ್ 7 ರಂದು ಪ್ರಕರಣ ದಾಖಲಿಸಲಾಗಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 295 (ಯಾವುದೇ ವರ್ಗದ ವ್ಯಕ್ತಿಗಳು ಪವಿತ್ರವೆಂದು ಪರಿಗಣಿಸುವ ಯಾವುದೇ ವಸ್ತುವನ್ನು ಹಾನಿಗೊಳಿಸುವುದು ಅಥವಾ ಅಪವಿತ್ರಗೊಳಿಸುವುದು), 506 (ಅಪರಾಧ ಬೆದರಿಕೆ), ಜುವೆನೈಲ್ ಜಸ್ಟೀಸ್ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆ, ಮಧ್ಯಪ್ರದೇಶದ ಧಾರ್ಮಿಕ ಸ್ವಾತಂತ್ರ್ಯ ಕಾಯಿದೆ 2021ರ ನಿಬಂಧನೆಗಳ ಅಡಿಯಲ್ಲಿ ಶಾಲಾ ಆಡಳಿತ ಸಮಿತಿಯ 11 ಸದಸ್ಯರ ವಿರುದ್ಧ ಆರೋಪಗಳನ್ನು ಹೊರಿಸಲಾಗಿದೆ.
ಜೂನ್ 2 ರಂದು ರಾಜ್ಯ ಶಿಕ್ಷಣ ಇಲಾಖೆಯು ಶಾಲೆಯ ಮಾನ್ಯತೆಯನ್ನು ರದ್ದುಗೊಳಿಸಿತು, ವಿದ್ಯಾರ್ಥಿಗಳಿಗೆ ಮೀಸಲಾದ ಹಲವಾರು ಸೌಲಭ್ಯಗಳು ಅಸಮರ್ಪಕವಾಗಿವೆ ಅಥವಾ ಲಭ್ಯವಿಲ್ಲ ಎಂದು ಆರೋಪಿಸಲಾಯಿತು. ಸ್ಥಳೀಯ ಪುರಸಭೆಯ ಪ್ರಾಧಿಕಾರವು ಪ್ರತಿಕ್ರಿಯಿಸಿ, “ಶಾಲೆಯಲ್ಲಿನ ಅನಧಿಕೃತ ಎಂದು ಪರಿಗಣಿಸುವ ಭಾಗಗಳನ್ನು ಉರುಳಿಸಲಾಗುವುದು” ಎಂದು ಬೆದರಿಕೆ ಹಾಕಿದೆ.
ರಾಜ್ಯ ರಾಜಧಾನಿ ಭೋಪಾಲ್‌ನಿಂದ ಸುಮಾರು 250 ಕಿಲೋಮೀಟರ್ ದೂರದಲ್ಲಿರುವ ಈ ಶಾಲೆಯನ್ನು 2010 ರಲ್ಲಿ ಗಂಗಾ ಜಮುನಾ ವೆಲ್ಫೇರ್ ಸೊಸೈಟಿ ಸ್ಥಾಪಿಸಿದೆ. ಸುಮಾರು 1,200 ವಿದ್ಯಾರ್ಥಿಗಳು ಓದುತ್ತಾರೆ. ಇವರಲ್ಲಿ ಹೆಚ್ಚಿನವರು ಕಾರ್ಮಿಕ ವರ್ಗದ ಕುಟುಂಬಗಳಿಂದ ಬಂದವರಾಗಿದ್ದಾರೆ. ಇಲ್ಲಿನ ಮಕ್ಕಳ ಪೋಷಕರು ಕಾರ್ಮಿಕರಾಗಿ, ರೈತರಾಗಿ ಮತ್ತು ಬೀಡಿ ತಯಾರಕರಾಗಿ ಕೆಲಸ ಮಾಡುತ್ತಾರೆ ಎಂದು ‘ಇಂಡಿಯನ್ ಎಕ್ಸ್ ಪ್ರೆಸ್ ವರದಿ’ ಮಾಡಿದೆ.