Homeಸಿನಿಮಾಕ್ರೀಡೆಡಿಯಾಗೋ ಮರಡೋನಾ: ಫುಟ್‌ಬಾಲ್ ಲೋಕವನ್ನು ಪ್ರಜ್ವಲಿಸಿದ ಅದ್ಭುತ ಮಾಂತ್ರಿಕ

ಡಿಯಾಗೋ ಮರಡೋನಾ: ಫುಟ್‌ಬಾಲ್ ಲೋಕವನ್ನು ಪ್ರಜ್ವಲಿಸಿದ ಅದ್ಭುತ ಮಾಂತ್ರಿಕ

ಮರಡೋನಾ ಭಾರತದಲ್ಲಿನ ಫುಟ್‌ಬಾಲ್ ಪ್ರೀತಿಗೂ ಕೂಡ ಬಹಳ ದೊಡ್ಡ ಕಾರಣವಾಗಿದ್ದರು. ಗೋವಾ, ಕೊಲ್ಕತ್ತಾ ಹಾಗೂ ಕೇರಳದಲ್ಲಿ ಫುಟ್‌ಬಾಲ್ ಹೆಚ್ಚು ಪ್ರಸಿದ್ಧವಾಗುವುದಕ್ಕೆ ಸ್ಫೂರ್ತಿಯಾಗಿದ್ದಾರೆ.

- Advertisement -
- Advertisement -

ಕ್ರಿಕೆಟಿನಲ್ಲಿ ಕ್ರೀಡಾಭಿಮಾನಿಗಳಿಗೆ ಡೊನಾಲ್ಡ್ ಬ್ರಾಡ್ಮನ್ ಮತ್ತು ಸಚಿನ್ ತೆಂಡೂಲ್ಕರ್ ಹೇಗೆ “ದೇವರೋ”, ಹಾಗೆಯೇ ಫುಟ್‌ಬಾಲ್‌ನಲ್ಲಿ ಪೀಲೆ ಮತ್ತು ಡಿಯಾಗೋ ಮರಡೋನಾ ಇದ್ದಾರೆ. ತಮ್ಮ ಅತ್ಯುತ್ತಮ ಶಾಟ್‌ಗಳು, ಡ್ರಿಬ್ಲಿಂಗ್ (ಫುಟ್‌ಬಾಲ್‌ಅನ್ನು ಎದುರು ತಂಡದ ಆಟಗಾರರು ಎಗರಿಸದಂತೆ, ಚಾಕಚಕ್ಯತೆಯಿಂದ ಚಲಿಸುತ್ತ ಹತ್ತಾರು ಮೀಟರುಗಳತ್ತ ತೆಗೆದುಕೊಂಡು ಸಾಗುವುದು) ಹಾಗೂ ಸ್ಕಿಲ್(ಕೌಶಲ್ಯ)ಗಳ ಮೂಲಕ ಈ ಇಬ್ಬರು ಆಟಗಾರರು ಜಗತ್ತಿನ ಫುಟ್‌ಬಾಲ್ ಪ್ರಿಯರಿಗೆ ಚಿರಪರಿಚಿತ. ಇಂತಹ ದೈತ್ಯ ಫುಟ್‌ಬಾಲ್ ಪ್ರತಿಭೆ ಮರಡೋನಾ 25ರ ನವೆಂಬರ್ ನಿಧನರಾದರು.

ತಾಂತ್ರಿಕತೆಗೆ ಜಗತ್ತು ನಿಧಾನವಾಗಿ ತೆರೆದುಕೊಳ್ಳುತ್ತಿದ್ದ ಕಾಲವದು. ಪೀಲೆ ಅವರ ಹೆಸರು ವಿಶ್ವದೆಲ್ಲೆಡೆ ಪ್ರಸಿದ್ಧವಾಗಿದ್ದರೂ ಕೂಡ ಅವರ ಆಟವನ್ನು ಯಾರಿಗೂ ಅಷ್ಟಾಗಿ ನೋಡಲು ಆಗಿರಲಿಲ್ಲ. ಫುಟ್‌ಬಾಲ್‌ನ ವೈಭವವನ್ನು ಇಡೀ ಜಗತ್ತಿಗೆ ತಲುಪಿಸುವ ಸಲುವಾಗಿಯೇ ಮರಡೋನಾರವರು ಬಂದರೇನೋ ಎನ್ನಬಹುದು. ತಮ್ಮ ಆಟದಿಂದ ಎಲ್ಲರನ್ನು ನಿಬ್ಬೆರಗಾಗಿಸಿದವರು ಮರಡೋನಾ. ದೊಡ್ಡ ಹೆಸರು ಮಾಡಿದ್ದ ಡಿಫೆಂಡರ್‌ಗಳನ್ನು ಅವರು ದಾಟಿಕೊಂಡು ಬಾಲನ್ನು ಗೋಲ್‌ಪೋಸ್ಟ್‌ನೆಡೆಗೆ ಹೊಡೆಯುತ್ತಿದ್ದ ರೀತಿ ವರ್ಣನಾತೀತ.

ಮರಡೋನಾ ಆಟದ ಶೈಲಿ ಬಹಳ ವಿಭಿನ್ನವಾಗಿತ್ತು. ಒಬ್ಬ ಸಾಧಾರಣ ಫುಟ್‌ಬಾಲ್ ಆಟಗಾರನಿಗಿಂತ ಕಡಿಮೆ ಎತ್ತರೆ. 5 ಅಡಿ 5 ಇಂಚಿನ ಅವರ ದೇಹ ಫುಟ್‌ಬಾಲ್ ಅಂಗಣದಲ್ಲಿ ಮಾಡುತ್ತಿದ್ದ ಕಮಾಲ್ ಮಾತ್ರ ಎತ್ತರದ್ದು.

ನಾನು ಅವರ ಆಟವನ್ನು ಮೊದಲು ನೋಡಿದ್ದು ಯುಟ್ಯೂಬ್‌ನಲ್ಲಿ. ಹೀಗೆಯೇ ಒಮ್ಮೆ ಪತ್ರಿಕೆಯಲ್ಲಿ ಮರಡೋನಾರವರು ಫುಟ್‌ಬಾಲ್ ಅಂಕಣದ ಮಧ್ಯಗೆರೆಯಿಂದ ಡಿಬಾಕ್ಸ್‌ವರೆಗೂ ಒಬ್ಬರೇ ಡ್ರಿಬಲ್ ಮಾಡಿಕೊಂಡು ಗೋಲ್ ಹೊಡೆದಿದ್ದರ ಬಗ್ಗೆ ಅದರಲ್ಲಿ ಪ್ರಸ್ತಾಪವಿತ್ತು. ಆ ವಿಡಿಯೋ ನೋಡಿ ನನಗೆ ಒಂದು ರೀತಿಯ ರೋಮಾಂಚನವಾಯಿತು. ಅಲ್ಲಿಯವರೆಗೂ ನಾನು ಇಂಡಿಯನ್ ಸೂಪರ್ ಲೀಗ್ ಒಂದನ್ನು ಬಹಳ ಆಸಕ್ತಿಯಿಂದ ಹಾಗೂ ಟಿವಿಯಲ್ಲಿ ಆಗಾಗ ಯುರೋಪಿಯನ್ ಲೀಗ್‌ಗಳ ಹೈಲೈಟ್ಸ್‌ಅನ್ನು ನೋಡುತ್ತಿದ್ದೆ. ಆದರೆ ಮರಡೋನಾ ಆಡುವ ತರಹದ ಆಟವನ್ನು ನಾನು ಎಂದೂ ನೋಡಿರಲಿಲ್ಲ. ಐದು ಜನ ಎದುರಾಳಿ ಆಟಗಾರರನ್ನು ದಾಟಿಕೊಂಡು ಬಾಲನ್ನು ಗೋಲ್‌ಕೀಪರ್ ತಪ್ಪಿಸಿ ಹೊಡೆದ ಗೋಲು ಅದು. ಇಷ್ಟಲ್ಲದೇ ಅದು ವಿಶ್ವಕಪ್ ಕ್ವಾರ್ಟರ್‌ಫೈನಲ್ ಕೂಡ ಆಗಿತ್ತು! 1986ರ ವಿಶ್ವಕಪ್ ಆ ನಾಕೌಟ್ ಪಂದ್ಯದಲ್ಲಿ ಮರಡೋನಾ ಮುಂದಾಳತ್ವದ ಅರ್ಜೆಂಟಿನಾ ತಂಡ ಇಂಗ್ಲೆಂಡ್ ತಂಡವನ್ನು ಎದುರಿಸಿತ್ತು. ಆ ಪಂದ್ಯವನ್ನು ಅರ್ಜೆಂಟಿನಾ 2-1ರ ಅಂತರದಿಂದ ಗೆದ್ದಿತು. ಅರ್ಜೆಂಟಿನಾ ಪರ ಎರಡೂ ಗೋಲು ಹೊಡೆದಿದ್ದು ಮರಡೋನಾರವರು ಹಾಗೂ ಆ ಎರಡೂ ಗೋಲುಗಳು ಕೂಡ ಇತಿಹಾಸದಲ್ಲಿ ಬೇರೆ ಬೇರೆ ಕಾರಣಗಳಿಂದ ಅತ್ಯಂತ ಮಹತ್ವವನ್ನು ಪಡೆದುಕೊಂಡಿದೆ.

PC : Britannica

ಈಗ ನಾನು ಪ್ರಸ್ತಾಪ ಮಾಡಿದ್ದು ಮರಡೋನಾರವರು ಹೊಡೆದ ಎರಡನೇ ಗೋಲು. ಅವರು ಹೊಡೆದ ಮೊದಲನೇ ಗೋಲು ವಿಶ್ವಪ್ರಸಿದ್ಧವಾದ “ಹ್ಯಾಂಡ್ ಆಫ್ ಗಾಡ್ ಗೋಲು. ವಿಶ್ವದಲ್ಲಿ ಅತ್ಯಂತ ಹೆಚ್ಚು ಪರ-ವಿರೋಧ ಚರ್ಚೆಗೊಳಗಾದ ಗೋಲು ಎಂದರೆ ಅದೇ ಇರಬೇಕು. ತನ್ನ ಟೀಮ್‌ಮೇಟ್ ಚಿಪ್ ಮಾಡಿದ ಬಾಲನ್ನು ಮರಡೋನಾರವರು ಗೋಲಿನತ್ತ ಕಳಿಸಲು ಹಾರಿದರು. ಅದೇ ಸಮಯಕ್ಕೆ ಇಂಗ್ಲೆಂಡ್‌ನ ಗೋಲ್‌ಕೀಪರ್ ಶಿಲ್ಟನ್‌ರವರು ಕೂಡ ಹಾರಿದರು. ಮರಡೋನಾರವರು ಶಿಲ್ಟನ್‌ರವರಿಗಿಂತ ಕಡಿಮೆ ಎತ್ತರದವರಾಗಿದ್ದರಿಂದ ಅವರಿಗೆ ಬಾಲನ್ನು ಶಿಲ್ಟನ್ ಹಿಡಿಯುವ ಮುಂಚೆಯೇ ಹೆಡ್ ಮಾಡಲು ಅವಕಾಶವಿರಲಿಲ್ಲ. ಆದ್ದರಿಂದ ತಮ್ಮ ಎಡಗೈಯನ್ನು ಮುಷ್ಟಿ ಮಾಡಿ ಬಾಲ್‌ಗೆ ಹೊಡೆದರು. (ಇದನ್ನು ಸುಮಾರು 19 ವರ್ಷಗಳ ನಂತರ ಅವರು ಒಪ್ಪಿಕೊಂಡರು ಕೂಡ.) ಬಾಲ್ ಗೋಲ್‌ಪೋಸ್ಟ್ ಒಳಗೆ ತಲುಪಿತು. ಸರಿಯಾಗಿ ಕಾಣದ ಕಾರಣ ಅಂದಿನ ರೆಫರೀ ಹಾಗೂ ಲೈನ್‌ಮ್ಯಾನ್ ಇಬ್ಬರೂ ಕೂಡ ಅದು ಗೋಲು ಎಂಬ ತೀರ್ಪನ್ನೇ ಕೊಟ್ಟರು (ಅವರದ್ದು ತಪ್ಪು ಎಂದು ಹೇಳಲಾಗುವುದಿಲ್ಲ, ಯಾಕೆಂದರೆ ನಾವು ಯೂಟ್ಯೂಬ್‌ನಲ್ಲಿರುವ ಈ ಗೋಲ್‌ನ ವೀಡಿಯೋದಲ್ಲಿಯೂ ಸರಿಯಾಗಿ ತಿಳಿಯುವುದಿಲ್ಲ.) ಅಂದಿನ ಕಾಲದಲ್ಲಿ ವೀಡಿಯೋ ರೆಫರಿ ಇಲ್ಲದ ಕಾರಣ ಹ್ಯಾಂಡ್‌ಬಾಲ್ ಎಂದು ಕೂಗಿದ ಇಂಗ್ಲೆಂಡ್ ಆಟಗಾರರ ಪ್ರಯತ್ನ ವ್ಯರ್ಥವಾಯಿತು. ಆ ವರ್ಷ ಮರಡೋನಾ ನೇತೃತ್ವದಲ್ಲಿ ಅರ್ಜೆಂಟಿನಾ ತಂಡ ತನ್ನ ಮೊದಲ ವಿಶ್ವಕಪ್ ಮುಡಿಗೇರಿಸಿಕೊಂಡಿತು.

ಮರಡೋನಾ ಭಾರತದಲ್ಲಿನ ಫುಟ್‌ಬಾಲ್ ಪ್ರೀತಿಗೂ ಕೂಡ ಬಹಳ ದೊಡ್ಡ ಕಾರಣವಾಗಿದ್ದರು. ಗೋವಾ, ಕೊಲ್ಕತ್ತಾ ಹಾಗೂ ಕೇರಳದಂತಹ ಹಲವಾರು ಪ್ರದೇಶಗಳಲ್ಲಿ ಕ್ರಿಕೆಟ್‌ಗಿಂತ ಫುಟ್‌ಬಾಲ್ ಹೆಚ್ಚು ಪ್ರಸಿದ್ಧವಾಗುವುದಕ್ಕೆ ಸ್ಫೂರ್ತಿಯಾದವರಲ್ಲಿ ಮರಡೋನಾರವರದ್ದು ದೊಡ್ಡ ಕೊಡುಗೆ ಇದೆ.

ಮರಡೋನಾ ಅವರು ವೈಯಕ್ತಿಕ ಜೀವನದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸಿದರು. ಡ್ರಗ್ ಅಡಿಕ್ಷನ್ ಸಮಸ್ಯೆ ಅವರನ್ನು ಬಾದಿಸಿತು. ಫಿಟ್‌ನೆಸ್ ಅವರಿಗೆ ಹಲವು ಬಾರಿ ಕೈಕೊಡುತ್ತಿತ್ತು. ಒಬ್ಬ ಪರಿಪೂರ್ಣ ವ್ಯಕ್ತಿಯಾಗಿ ಮರಡೋನಾರವರು ರೋಲ್ ಮಾಡೆಲ್ ಅಲ್ಲವೆನಿಸಿದರೂ ಫುಟ್‌ಬಾಲ್ ಮಾಂತ್ರಿಕ ಆಟಗಾರನಾಗಿ ಅವರ ಸ್ಕಿಲ್‌ಗಳಿಗೆ ಇಂದಿಗೂ ’ಆರಾಧ್ಯ ದೇವರೇ’!

ಈಗಿನ ಜಗತ್ತಿನ ಪ್ರತಿಯೊಬ್ಬ ಆಟಗಾರನಿಗೂ ಕೂಡ ಟೆಕ್ನಾಲಜಿ (ತಂತ್ರಜ್ಞಾನ) ಬಹಳ ದೊಡ್ಡ ರೀತಿಯಲ್ಲಿ ಸಹಾಯ ಮಾಡುತ್ತದೆ. ಎದುರಾಳಿಯ ಆಟದ ಶೈಲಿಯ ಬಗ್ಗೆ, ಆತನ ಕ್ರೀಡಾ ದೌರ್ಬಲ್ಯಗಳ ಬಗ್ಗೆ, ಅವರನ್ನು ಹೇಗೆ ಸಮರ್ಥವಾಗಿ ಎದುರಿಸಬಹುದು ಎಂಬುದರ ಬಗ್ಗೆ ಸಂಪೂರ್ಣ ಅಧ್ಯಯನ ಸುಲಭ ಸಾಧ್ಯ. ಆದರೆ ಮರಡೋನಾರವರು ಆಡುತ್ತಿದ್ದುದು ತಂತ್ರಜ್ಞಾನಕ್ಕೆ ಇನ್ನೂ ಕೂಡ ಜಗತ್ತು ಒಗ್ಗಿಕೊಳ್ಳಲು ಹಾಗೂ ಅದನ್ನು ಬಳಸಲು ಕಲಿಯುತ್ತಿದ್ದ ಕಾಲದಲ್ಲಿ. ಇತ್ತೀಚೆಗಷ್ಟೇ ಭಾರತದ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾದ ರಾಹುಲ್ ದ್ರಾವಿಡ್ ಅವರು ಇದೇ ರೀತಿಯ ಹೇಳಿದ್ದರು – ತಂತ್ರಜ್ಞಾನದಿಂದ ಕೂಡಿದ ಈ ಜಗತ್ತಿನಲ್ಲಿ ನಾವು ಇದ್ದಿದ್ದರೆ ನಮ್ಮ ಪ್ರದರ್ಶನ ಕೂಡ ಹೆಚ್ಚು ಬೆಳೆಯುತ್ತಿತ್ತೇನೋ – ಎಂದು. ಈ ದೃಷ್ಟಿಯಲ್ಲಿ ನಾವು ಮರಡೋನಾರವರನ್ನು ನೋಡಿದರೆ ಅವರ ಪ್ರದರ್ಶನದ ಬಗ್ಗೆ ನಮಗೆ ಸಹಜವಾಗಿಯೇ ಹೆಚ್ಚು ಗೌರವ ಮೂಡುತ್ತದೆ. ತಂತ್ರಜ್ಞಾನವಿಲ್ಲದ ಹೊತ್ತಿನಲ್ಲಿಯೇ ಎದುರಾಳಿ ಡಿಫೆಂಡರ್‌ಗಳಿಗೆ ನಿದ್ದೆಗೆಡಿಸಿದವರು ಅವರು.

ಅರ್ಜೆಂಟಿನಾ ತಂಡವನ್ನು 1990ರ ವಿಶ್ವಕಪ್‌ನಲ್ಲಿಯೂ ಕೂಡ ಫೈನಲ್‌ಗೆ ಕರೆದೊಯ್ದರು ಮರಡೋನಾರವರು. ಆದರೆ ಆ ವರ್ಷ ತಮ್ಮ ಮುಂಗಾಲಿಗೆ ಗಾಯವಾಗಿದ್ದ ಕಾರಣ ಹಿಂದಿನ ವಿಶ್ವಕಪ್‌ನ ಸಾಮರ್ಥ್ಯ ಅವರಿಗೆ ಮರುಕಳಿಸಲಿಲ್ಲ. ಫೈನಲ್‌ನಲ್ಲಿ 0-1 ಅಂತರದಲ್ಲಿ ವಿಶ್ವಕಪ್‌ ಅನ್ನು ಪಶ್ಚಿಮ ಜರ್ಮನಿಗೆ ಬಿಟ್ಟುಕೊಟ್ಟಿತ್ತು.

ಮರಡೋನಾ ಅವರು ಕ್ಲಬ್‌ಗಳ ಪರವಾಗಿ ಕೂಡ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಬಾರ್ಸೆಲೋನಾ ಹಾಗೂ ನೆಪೋಲಿ ಕ್ಲಬ್‌ಗಳು ಅವರನ್ನು ಕ್ರಮವಾಗಿ 50 ಲಕ್ಷ ಯುರೋ ಹಾಗೂ 63 ಲಕ್ಷ ಯುರೋಗಳಿಗೆ ಪಡೆದುಕೊಂಡಿದ್ದವು. ಆಗಿನ ಕಾಲದಲ್ಲಿ ಅದು ವಿಶ್ವದಾಖಲೆಯಾಗಿತ್ತು! ಅರ್ಜೆಂಟಿನಾ ರಾಷ್ಟ್ರೀಯ ತಂಡದಲ್ಲಿ ಹಾಗೂ ಬಾರ್ಸೆಲೋನಾ ಕ್ಲಬ್‌ನಲ್ಲಿ ಅವರ ನಂ.10 ಜೆರ್ಸಿಗೆ ಲಿಯೋನೆಲ್ ಮೆಸ್ಸಿಯವರ ರೂಪದಲ್ಲಿ ಅತ್ಯಂತ ಸಮರ್ಥ ಉತ್ತರಾಧಿಕಾರಿ ಸಿಕ್ಕಿದ್ದು ಅವರಿಗೆ ವೈಯಕ್ತಿಕವಾಗಿ ಹಾಗೂ ಇಡೀ ಫುಟ್‌ಬಾಲ್ ಜಗತ್ತಿಗೆ ಅತ್ಯಂತ ಖುಷಿಯ ವಿಷಯವಾಗಿತ್ತು. 2014 ವಿಶ್ವಕಪ್‌ನಲ್ಲಿ ಮೆಸ್ಸಿ ಫೈನಲ್‌ವರೆಗೆ ಅರ್ಜೆಂಟಿನಾವನ್ನು ಕರೆತಂದಾಗ ಮರಡೋನಾರವರ 1986ರ ಯಶಸ್ಸನ್ನು ಮರುಕಳಿಸುತ್ತಾರೆಂದು ಎಲ್ಲರಿಗೂ ವಿಶ್ವಾಸವಿತ್ತು. ಆದರೆ 1986ರ ಬದಲಿಗೆ 1990 ವಿಶ್ವಕಪ್ ಚಿತ್ರಣ ಮತ್ತೊಮ್ಮೆ ಮರುಕಳಿಸಿತು. ಜರ್ಮನಿ ಎದುರು 0-1ರ ಅಂತರದಲ್ಲಿಯೇ ಮತ್ತೊಮ್ಮೆ ಅರ್ಜೆಂಟಿನಾ ಫೈನಲ್‌ನಲ್ಲಿ ಸೋತಿತು. ಆಗ ಮರಡೋನಾರವರು ಬಹಳ ದುಃಖ ಪಟ್ಟರು.

PC : Book Depository

ಫುಟ್‌ಬಾಲ್ ಮಾಂತ್ರಿಕ ಮರಡೋನಾರವರಿಗೆ ಸಂದ ಗೌರವಗಳಿಗೆ ಲೆಕ್ಕವಿಲ್ಲ. ಅವೆಲ್ಲದರಲ್ಲಿಯೂ ಅಗ್ರಮಾನ್ಯವಾಗಿ ನಿಲ್ಲುವುದೆಂದರೆ ಜನರ ವೋಟಿನ ಮುಖಾಂತರ ಅವರು 20ನೇ ಶತಮಾನದ ಅತೀ ಶ್ರೇಷ್ಠ ಫುಟ್‌ಬಾಲಿಗರಾಗಿ ಆಯ್ಕೆಯಾದದ್ದು. ಅವರ ಜೀವನವನ್ನು ಹಾಗೂ ಕಾಲ್ಚೆಳಕಗಳನ್ನು ತೋರಿಸುವ ಸಿನೆಮಾಗಳು ಕೂಡ ಬಂದವು. ಹಲವು ಪುಸ್ತಕಗಳು ಕೂಡ ಪ್ರಕಟವಾದವು. “ಎಲ್ ಡಿಯೆಗೋ” ಎಂಬ ಆತ್ಮಚರಿತ್ರೆಯನ್ನು ಮರಡೋನಾರವರು ಬರೆದಿದ್ದಾರೆ. ಅವರು ಬೆಳೆಯುತ್ತ ಪಟ್ಟ ಕಷ್ಟಗಳನ್ನು ಹಾಗೂ ಅವರ ಫುಟ್ಬಾಲ್ ದಿನಗಳ ಬಗೆಗಿನ ರಸವತ್ತಾದ ಕಥೆಗಳನ್ನು ತಿಳಿಯಲು ಈ ಪುಸ್ತಕ ಒಳ್ಳೆಯ ಮೂಲವಾಗಿದೆ.

ಪೀಲೆ, ಮರಡೋನಾ, ರೊನಾಲ್ಡೋ, ಇಬ್ರಾಹಿಮೋವಿಚ್, ಕ್ರಿಶ್ಚಿಯಾನೋ ಹಾಗೂ ಮೆಸ್ಸಿಯವರ ಅತ್ಯಂತ ಶ್ರೇಷ್ಠ ಅಟ್ಯಾಕಿಂಗ್ ಆಟಗಾರರು ಎಂದೇ ಜನಜನಿತ. ಈಗ ಮರಡೋನಾರವರು ನಮ್ಮನ್ನಗಲಿದ್ದಾರೆ. ಅವರ ನೆನಪುಗಳು ಹಾಗೂ ಅವರ ಆಟ ಇನ್ನೂ ಹಲವಾರು ಪೀಳಿಗೆಗಳಿಗೆ ಸ್ಫೂರ್ತಿಯಾಗಲಿದೆ. ಅವರ ಆಟದ ವಿಡಿಯೋಗಳನ್ನು ನೋಡಿಕೊಂಡು ಅವರಂತೆಯೇ ಆಟ ಆಡಲು ಕನಸು ಕಟ್ಟಿಕೊಂಡಿರುವವರು, ಕಟ್ಟುಕೊಳ್ಳುತ್ತಿರುವವರು ಬಹಳ ಜನ ಇದ್ದಾರೆ. ಎಂದಿಗೂ ಕೂಡ ಫುಟ್‌ಬಾಲ್ ಜಗತ್ತಿಗೆ ಅವರು ’ದೇವರಂತೆಯೇ’.

  • ಅಂತಃಕರಣ

ಶಿವಮೊಗ್ಗದ ಡಿ.ವಿ.ಎಸ್ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿ.ಯು.ಸಿ ವಿದ್ಯಾರ್ಥಿಯಾಗಿರುವ ಅಂತಃಕರಣ ಇದುವರೆಗೆ ಕಥೆ, ಕವಿತೆ, ಕಾದಂಬರಿ, ನಾಟಕ ಸೇರಿದಂತೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ 33 ಕೃತಿಗಳನ್ನು ರಚಿಸಿದ್ದಾರೆ. ಇವುಗಳಿಗೆ ಕನ್ನಡ ಸಾಹಿತ್ಯ ಪರಿಷತ್ತು, ಬೇಂದ್ರೆ ರಾಷ್ಟ್ರೀಯ ಟ್ರಸ್ಟ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಹಲವು ಪ್ರಶಸ್ತಿಗಳು ದೊರಕಿರುತ್ತವೆ. ಕ್ರೀಡಾ ಬರವಣಿಗೆ ಅವರ ನೆಚ್ಚಿನ ಆಸಕ್ತಿಯಾಗಿದೆ.


ಇದನ್ನೂ ಓದಿ: Diego Maradona | ಫುಟ್ಬಾಲ್ ದಂತಕತೆ ಡಿಯಾಗೋ ಮರಡೋನ (60) ನಿಧನ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...