ಲೋಕಸಭಾ ಚುನಾವಣೆಯ ಘೋಷಣೆಗೆ ಕೇವಲ ಒಂದು ವಾರದ ಮೊದಲು ಚುನಾವಣಾ ಆಯುಕ್ತ (ಇಸಿ) ಅರುಣ್ ಗೋಯೆಲ್ ಅವರ ಹಠಾತ್ ರಾಜೀನಾಮೆ ಅನೇಕರಿಗೆ ಆಶ್ಚರ್ಯವನ್ನುಂಟುಮಾಡಿದೆ, ಆದರೆ ಚುನಾವಣಾ ಆಯೋಗದ ಒಳಗಿನ ಮೂಲಗಳ ಪ್ರಕಾರ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮತ್ತು ಅರುಣ್ ಗೋಯೆಲ್ ಅವರ ನಡುವಿನ ಭಿನ್ನಾಭಿಪ್ರಾಯಗಳಿಂದ ಈ ಬೆಳವಣಿಗೆ ನಡೆದಿದೆ ಎಂದು ಹೇಳಲಾಗಿದೆ.
ಮೂಲಗಳ ಪ್ರಕಾರ, ಉತ್ತರಪ್ರದೇಶ ಮತ್ತು ಮಹಾರಾಷ್ಟ್ರದ ನಂತರ ಮೂರನೇ ಅತಿ ಹೆಚ್ಚು ಸಂಸದೀಯ ಸ್ಥಾನಗಳನ್ನು ಹೊಂದಿರುವ ಪಶ್ಚಿಮ ಬಂಗಾಳದ ಚುನಾವಣೆ ಸಿದ್ದತೆಗಳ ಬಗ್ಗೆ ಕೋಲ್ಕತ್ತಾದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಲು ಗೋಯೆಲ್ ನಿರಾಕರಿಸಿದ್ದರು. ನಂತರ ಮಾರ್ಚ್ 5ರಂದು ರಾಜೀವ್ ಕುಮಾರ್ ಏಕಾಂಗಿಯಾಗಿ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ್ದರು. ಪತ್ರಿಕಾಗೋಷ್ಠಿಯಲ್ಲಿ, ಅನಾರೋಗ್ಯದ ಹಿನ್ನೆಲೆ ಅರುಣ್ ಗೋಯೆಲ್ ದೆಹಲಿಗೆ ತೆರಳಿದ್ದಾರೆ ಎಂದು CEC ರಾಜೀವ್ ಕುಮಾರ್ ಹೇಳಿದ್ದರು. ಆದರೆ, ಗೋಯೆಲ್ ಅವರ ನಿಕಟ ಮೂಲಗಳು ಅದನ್ನು ತಳ್ಳಿಹಾಕಿವೆ ಮತ್ತು ಅವರು ಪರಿಪೂರ್ಣವಾಗಿ ಆರೋಗ್ಯವಾಗಿದ್ದಾರೆ ಎಂದು ಹೇಳಿದ್ದು, ಕೆಲವು ಗಂಭೀರ ಭಿನ್ನಾಭಿಪ್ರಾಯಗಳಿಂದಾಗಿ ಅವರು ಪಶ್ಚಿಮ ಬಂಗಾಳದ ಭೇಟಿಯನ್ನು ಮೊಟಕುಗೊಳಿಸಿ ದೆಹಲಿಗೆ ವಾಪಾಸ್ಸು ತೆರಳಿದ್ದಾರೆ ಎಂದು ಹೇಳಿದ್ದಾರೆ.
ಆದರೆ, ಮೂಲಗಳು ಇಬ್ಬರು ಅಧಿಕಾರಿಗಳ ನಡುವೆ ಏನಾಯಿತು ಮತ್ತು ಅವರ ಭಿನ್ನಾಭಿಪ್ರಾಯಗಳ ಬಗ್ಗೆ ಮತ್ತು ನಿಖರವಾಗಿ ಅವರು ಯಾವ ವಿಷಯಗಳಲ್ಲಿ ಭಿನ್ನಾಭಿಪ್ರಾಯ ಹೊಂದಿದ್ದಾರೆ ಎಂಬುದರ ಕುರಿತು ಹೆಚ್ಚಿನ ವಿವರಗಳನ್ನು ನೀಡಿಲ್ಲ. ಗೋಯೆಲ್ ಅವರು ನವೆಂಬರ್ 2027ರವರೆಗೆ ಅಧಿಕಾರಾವಧಿಯನ್ನು ಹೊಂದಿದ್ದರು ಮತ್ತು ಅವರು ಮುಂದಿನ ವರ್ಷ ಮುಖ್ಯ ಚುನಾವಣಾ ಆಯುಕ್ತರಾಗಿ ನೇಮಕಗೊಳ್ಳುವ ಸಾಧ್ಯತೆ ಇತ್ತು.
ದೆಹಲಿಯಲ್ಲಿ ಅವರು ಮಾರ್ಚ್ 7ರಂದು ಭಾರತೀಯ ಚುನಾವಣಾ ಆಯೋಗದ (ಇಸಿಐ) ಪ್ರಧಾನ ಕಚೇರಿಯಲ್ಲಿ ರಾಜೀವ್ ಕುಮಾರ್ ಅವರೊಂದಿಗೆ ಲೋಕಸಭೆ ಚುನಾವಣೆ ಸಂಬಂಧಿತ ಸಭೆಗಳಲ್ಲಿ ಭಾಗವಹಿಸಿದ್ದರು. ಆದರೆ ಮಾರ್ಚ್ 8ರಂದು, ಅವರು ಚುನಾವಣಾ ಸಿದ್ಧತೆಗಳ ಕುರಿತು ಇಸಿಐ ಮತ್ತು ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಜೊತೆಗೆ ಸಭೆಗೆ ಹಾಜರಾಗಿಲ್ಲ, ಬದಲಿಗೆ ಮುಖ್ಯ ಚುನಾವಣಾ ಆಯುಕ್ತರಿಗೆ ತಿಳಿಸದೆ ಅವರು ತಮ್ಮ ರಾಜೀನಾಮೆಯನ್ನು ಭಾರತದ ರಾಷ್ಟ್ರಪತಿಗಳಿಗೆ ಕಳುಹಿಸಿದ್ದರು.
ಗೋಯಲ್ ಅವರಿಗೆ ರಾಜೀನಾಮೆ ಹಿಂತೆಗೆದುಕೊಳ್ಳುವಂತೆ ಮನವೊಲಿಸಲು ಸರ್ಕಾರ ಪ್ರಯತ್ನಿಸಿದೆ ಆದರೆ ಅವರು ತಮ್ಮ ನಿರ್ಧಾರದಲ್ಲಿ ಅಚಲವಾಗಿದ್ದರು ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಮಾರ್ಚ್ 9ರಂದು ಗೋಯಲ್ ಅವರ ರಾಜೀನಾಮೆಯನ್ನು ರಾಷ್ಟ್ರಪತಿಗಳು ಅಂಗೀಕರಿಸಿದ್ದು, ಕಾನೂನು ಮತ್ತು ನ್ಯಾಯ ಸಚಿವಾಲಯವು ಅದೇ ದಿನದಿಂದ ಜಾರಿಗೆ ಬರುವಂತೆ ಗೋಯೆಲ್ ಅವರ ರಾಜೀನಾಮೆಯನ್ನು ಅಂಗೀಕರಿಸಿದೆ ಎಂದು ಗೆಜೆಟ್ ಅಧಿಸೂಚನೆಯನ್ನು ಹೊರಡಿಸಿತ್ತು.
ಡಿಸೆಂಬರ್ 7, 1962ರಂದು ಪಂಜಾಬ್‌ನ ಪಟಿಯಾಲದಲ್ಲಿ ಜನಿಸಿದ್ದ ಅರುಣ್ ಗೋಯೆಲ್, ಗಣಿತಶಾಸ್ತ್ರದಲ್ಲಿ M.Sc. ಪದವಿಯನ್ನು ಕುಲಪತಿಗಳ ಪದಕದೊಂದಿಗೆ ಪಡೆದಿದ್ದರು. ಅವರು ಇಂಗ್ಲೆಂಡ್‌ನ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಚರ್ಚಿಲ್ ಕಾಲೇಜಿನಿಂದ ಅಭಿವೃದ್ಧಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಅವರು ಅಮೇರಿಕದ ಹಾರ್ವರ್ಡ್ ವಿಶ್ವವಿದ್ಯಾಲಯದ ಜಾನ್ ಎಫ್ ಕೆನಡಿ ಸರ್ಕಾರಿ ಶಾಲೆಯಲ್ಲಿ ತರಬೇತಿ ಪಡೆದಿದ್ದಾರೆ. ಆ ಬಳಿಕ ಪಂಜಾಬ್ ಕೇಡರ್‌ನ 1985-ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿದ್ದರು. ಅರುಣ್ ಗೋಯೆಲ್ ಅವರು 37 ವರ್ಷಗಳ ಸೇವೆಯ ನಂತರ ಭಾರತ ಸರ್ಕಾರದ ಕೈಗಾರಿಕೆ ಸಚಿವಾಲಯದಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಅವರು ನವೆಂಬರ್ 2022ರಲ್ಲಿ ಚುನಾವಣಾ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದರು.
ಇದನ್ನು ಓದಿ: ‘ಪ್ರಧಾನಿ ಕಾರ್ಯಾಲಯಕ್ಕೆ ಮಮತಾ ಬ್ಯಾನರ್ಜಿ ಸಂದೇಶ ಕಳುಹಿಸಿದ್ದಾರೆ..’; ಟಿಎಂಸಿ ಪಟ್ಟಿ ಬಿಡುಗಡೆಗೆ ಅಧೀರ್ ಲೇವಡಿ


