ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹ್ಹಾಣ್ ಅವರಿಗೆ ಸಂಬಂಧಿಸಿದ ಎಡಿಟ್ ವಿಡಿಯೋವೊಂದನ್ನು ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ ಎಂಬ ಆರೋಪದ ಸಂಬಂಧಿಸಿದಂತೆ ವಿವಿಧ ಐಪಿಸಿ ಸೆಕ್ಷನ್ ಅಡಿಯಲ್ಲಿ ಸಿಂಗ್ ವಿರುದ್ಧ ಭೂಪಾಲ್ ಅಪರಾಧ ವಿಭಾಗದ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಚೌಹಾಣ್ ಅವರ ಹೆಸರಿಗೆ ಮಸಿ ಬಳಿಯುವಂತ ವಿಡಿಯೋವನ್ನು ಸಿಂಗ್ ಅವರು ಹಂಚಿಕೊಂಡಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದು, ಮಧ್ಯ ಪ್ರದೇಶ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ವಿರುದ್ಧ ಅಪರಾಧ ವಿಭಾಗದಲ್ಲಿ ದೂರು ದಾಖಲಿಸಿದ್ದರು. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹ್ಹಾಣ್ ಅವರ ವರ್ಚಸ್ಸು ಕುಗ್ಗಿಸಲು ದಿಗ್ವಿಜಯ್ ಸಿಂಗ್ ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.
ವಿಡಿಯೋದಲ್ಲಿ ಮುಖ್ಯಮಂತ್ರಿಗಳು ಮದ್ಯ ಸೇವನೆಯನ್ನು ಉತ್ತೇಜಿಸುತ್ತಿದ್ದಾರೆ ಎಂದು ಹೇಳಲಾಗಿದ್ದು, “ಕಮಲ್ ನಾಥ್ ಸರ್ಕಾರವು ರಾಜ್ಯದಲ್ಲಿ ಮದ್ಯದಂಗಡಿಗಳನ್ನು ತೆರೆಯಲು ಅಬಕಾರಿ ನೀತಿಯನ್ನು ರೂಪಿಸಿದಾಗ ಚೌಹಾಣ್ ಅವರ ಪ್ರತಿಕ್ರಿಯೆಯ ಭಾಗವಾಗಿದೆ” ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.
ಈ ವಿಡಿಯೋವನ್ನು ಭಾನುವಾರ ಮಧ್ಯಾಹ್ನ ದಿಗ್ವಿಜಯ ಸಿಂಗ್ ಅವರ ಅಧಿಕೃತ ಟ್ವಿಟರ್ ಹ್ಯಾಂಡಲ್ ಹಂಚಿಕೊಂಡಿದ್ದು, ನಂತರ 10 ಮಂದಿ ಮರು ಟ್ವೀಟ್ ಮಾಡಿದ್ದಾರೆ. ಬಿಜೆಪಿ ಪ್ರತಿಭಟನೆ ನಡೆಸಿದ ನಂತರ, ದಿಗ್ವಿಜಯ್ ಸಿಂಗ್ ಅವರ ಟ್ವಿಟ್ಟರ್ ಹ್ಯಾಂಡಲ್‌ನಿಂದ ವೀಡಿಯೊವನ್ನು ತೆಗೆದುಹಾಕಲಾಗಿದೆ.
ಆದರೆ ಮಾಜಿ ಗೃಹ ಸಚಿವ ಉಮಾಶಂಕರ್ ಗುಪ್ತಾ ನೇತೃತ್ವದ ಬಿಜೆಪಿ, ವಿಡಿಯೋಗೆ ಸಂಬಂಧಿಸಿದ ಸ್ಕ್ರೀನ್‌ಶಾಟ್‌ಗಳು ಮತ್ತು ಇತರ ಸಾಕ್ಷ್ಯಗಳನ್ನು ಅಪರಾಧ ವಿಭಾಗಕ್ಕೆ ಎರಡು ಪುಟಗಳ ದೂರಿನೊಂದಿಗೆ ಸಲ್ಲಿಸಿದೆ.
ಮುಖ್ಯಮಂತ್ರಿಯವರ ವಿರುದ್ಧ ಅಪಪ್ರಚಾರ ಮಾಡಲು ದಿಗ್ವಿಜಯ ಸಿಂಗ್ ಉದ್ದೇಶಪೂರ್ವಕವಾಗಿ ವಿಡಿಯೋ ಹಂಚಿಕೊಂಡಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.
ವೀಡಿಯೊವನ್ನು ರಿಟ್ವೀಟ್ ಮಾಡಿದ ಮತ್ತು ಅವಹೇಳನಕಾರಿ ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿದ 11 ಜನರ ವಿರುದ್ಧ ಸೈಬರ್ ಸೆಲ್‌ನ ಸಾಮಾಜಿಕ ಮಾಧ್ಯಮ ಮೇಲ್ವಿಚಾರಣಾ ಘಟಕವು ಸಂಜೆ ಎಫ್ಐಆರ್ ಅನ್ನು ನೋಂದಾಯಿಸಿದೆ ಎಂದು ಅಪರಾಧ ಶಾಖೆಯ ಹಿರಿಯ ಅಧಿಕಾರಿ ನಿಶ್ಚಲ್ ಜಾರಿಯಾ ಹೇಳಿದ್ದಾರೆ. ಸಿಂಗ್ ವಿರುದ್ಧ ಮಾನಹಾನಿ ಮತ್ತು ಖೋಟಾ ಆರೋಪ ಹೊರಿಸಲಾಗಿದೆ.
ಬುಡಕಟ್ಟು ಜನಾಂಗದ ಪರಿಸ್ತಿತಿಯನ್ನು ಎತ್ತಿ ತೋರಿಸಿದ್ದಕ್ಕಾಗಿ ನಮ್ಮನ್ನು ಹಿಮ್ಮೆಟ್ಟಿಸುವುದು ಬಿಜೆಪಿಯ ರಾಜಕೀಯ ತಂತ್ರವಾಗಿದೆ ಮತ್ತು ವೀಡಿಯೊವನ್ನು ಯಾರು ಸಂಪಾದಿಸಿದ್ದಾರೆ ಎಂಬ ಬಗ್ಗೆ ತನಿಖೆ ನಡೆಯಬೇಕು ಎಂದು ದಿಗ್ವಿಜಯ್ ಸಿಂಗ್ ಹೇಳಿದರು.
“ಬುಡ್ನಿಯ ಬುಡಕಟ್ಟು ಜನಾಂಗದವರಿಗೆ ಶಿವರಾಜ್ ಸಿಂಗ್ ಚೌಹಾನ್ ಅವರ ಏಜೆಂಟರು 4.5 ಕೋಟಿ ರೂ. ವಂಚಿಸಿದ್ದಾರೆ. ಈ ಬಗ್ಗೆ ಯಾವುದೇ ಎಫ್ಐಆರ್ ದಾಖಲಾಗಿಲ್ಲ. ಯಾವುದೇ ಕ್ರಮ ತೆಗೆದುಕೊಳ್ಳದಿದ್ದರೆ, ನಾನು ಅವರ ನಿವಾಸದಲ್ಲಿ ಧರಣಿ ಪ್ರತಿಭಟನೆ ನಡೆಸುತ್ತೇನೆ ಎಂದು ನಾನು ಅವರಿಗೆ ಪತ್ರ ಬರೆದಿದ್ದೇನೆ. ಇದು ಬಿಜೆಪಿಯನ್ನು ಗೊಂದಲಕ್ಕೀಡು ಮಾಡಿದೆ. ಹಾಗಾಗಿ ನನ್ನ ಮೇಲೆ ದೂರು ದಾಖಲಿಸಿದ್ದಾರೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಒಂದೇ ವೆಂಟಿಲೇಟರ್ ಫೋಟೊ ಹಂಚಿಕೊಂಡ ನೂರಾರು ಬಿಜೆಪಿ ಮುಖಂಡರು: ಪಬ್ಲಿಸಿಟಿ ಗಿಮ್ಮಿಕ್ ಎಂದ ನೆಟ್ಟಿಗರು!


