ಹಂದಿಗೆ ಇಟ್ಟಿದ್ದ ಪಟಾಕಿ ತುಂಬಿದ ಅನನಾಸು ತಿಂದು ಮೃತಪಟ್ಟಿದ್ದ ಗರ್ಭಿಣಿ ಆನೆಯ ಘಟನೆಯನ್ನಿಟ್ಟುಕೊಂಡು ಸುಳ್ಳು ಸುದ್ದಿ ಹಬ್ಬಿದ್ದ ನ್ಯೂಸ್ ನೇಷನ್ ವಾಹಿನಿಯ ಪತ್ರಕರ್ತ ದೀಪಕ್ ಚೌರಾಸಿಯ ಇದೀಗ ತಮ್ಮಿಂದಾದ ತಪ್ಪಿಗೆ ಕ್ಷಮೆ ಕೇಳಿದ್ದಾರೆ.
ಇವರು ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ನಡೆದ ಆನೆಯ ಸಾವಿನ ಕುರಿತಂತೆ ಸುಳ್ಳು ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು, ಅದರಲ್ಲಿ ದೀಪಕ್ ಚೌರಾಸಿಯಾ ”ಕೇರಳದ ಗರ್ಭಿಣಿ ಆನೆ ಹತ್ಯೆ ಪ್ರಕರಣದಲ್ಲಿ ಅಮ್ಜದ್ ಆಲಿ ಹಾಗೂ ತಮೀಮ್ ಶೇಖ್ ಎಂಬಿಬ್ಬರನ್ನು ಬಂಧಿಸಲಾಗಿದೆ. ಈ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ” ಎಂದು ಅವರು ಟ್ವಿಟ್ಟರ್ ನಲ್ಲಿ ಬರೆದಿದ್ದರು. ಇದೀಗ ಈ ಟ್ವೀಟ್ ಅನ್ನು ಡಿಲೀಟ್ ಮಾಡಲಾಗಿದೆ.
ಆದರೆ ವಾಸ್ತವದಲ್ಲಿ ಕೇರಳ ಪೊಲೀಸರು ಈ ಪ್ರಕರಣದಲ್ಲಿ ಒಬ್ಬರನ್ನು ಬಂಧಿಸಿದ್ದರು ಹಾಗೂ ಅವರನ್ನು ‘ವಿಲ್ಸನ್’ ಎಂದು ಗುರುತಿಸಲಾಗಿತ್ತು. ಇದು ಅಲ್ಲಿನ ಮಾಧ್ಯಮಗಳಲ್ಲೂ ಪ್ರಸಾರವಾಗಿತ್ತು.
ಈಗ ದೀಪಕ್ ತಮ್ಮ ತಪ್ಪಿನ ಅರಿವಾಗಿದೆ ಎಂದು ಕ್ಷಮೆ ಯಾಚಿಸಿ ಟ್ವೀಟ್ ಮಾಡಿ ”ಕೇರಳದ ಆನೆಯ ವಿಷಯದಲ್ಲಿ ನನ್ನ ಖಾತೆಯಿಂದ ತಪ್ಪಾದ ಮಾಹಿತಿಯನ್ನು ಟ್ವೀಟ್ ಮಾಡಲಾಗಿದೆ. ಸರಿಯಾದ ಸಂಗತಿಗಳು ಬಹಿರಂಗವಾದ ತಕ್ಷಣ ನಾನು ಆ ಟ್ವೀಟ್ ಅನ್ನು ಅಳಿಸಿ ಹಾಕಿದ್ದೇನೆ. ನಾನು ಪತ್ರಕರ್ತ, ಇದರಲ್ಲಿ ವಿಶ್ವಾಸಾರ್ಹತೆಯೇ ಮುಖ್ಯವಾಗಿದೆ. ಈ ಸಮಯದಲ್ಲಿ ಯಾರಿಗಾದರು ನೋವಾಗಿದ್ದರೆ ವಿಷಾಧಿಸುತ್ತೇನೆ” ಎಂದು ಬರೆದಿದ್ದಾರೆ.
केरल में हथिनी विनायकी के मामले में मेरे अकाउंट पर एक गलत जानकारी ट्वीट कर दी गई। जैसे ही सही तथ्य सामने आया मैंने उस ट्वीट को डिलीट कर दिया। मै एक पत्रकार हूं और उसकी विश्वसनीयता ही सबकुछ होती है। अगर इस दौरान किसी को मेरी बात से कष्ट हुआ है तो मुझे खेद है।
— Deepak Chaurasia (@DChaurasia2312) June 14, 2020
ದೀಪಕ್ ಚೌರಾಸಿಯ ಅವರ ಟ್ವೀಟ್ ಮುಸ್ಲಿಮರನ್ನು ದೂಷಿಸಲು ಯತ್ನಿಸಿ ದ್ವೇಷ ಹರಡುತ್ತಿದ್ದಾರೆ ಎಂದು ಹಲವಾರು ನೆಟ್ಟಿಗರು ಕಿಡಿ ಕಾರಿದ್ದರು.
‘ಆನೆ ಸಾವು’ ಘಟನೆ ಹಾಗೂ ನಂತರದ ಬೆಳವಣಿಗೆಯ ನಂತರ, ಕೇರಳದ ಜಾಲತಾಣಿಗರು ತಮ್ಮ ರಾಜ್ಯದ ಬಗ್ಗೆ ಹರಡುತ್ತಿರುವ ಸುಳ್ಳನ್ನು ವಿರೋಧಿಸಿ #KerlaComesOnTwitter ಎಂಬ ಅಭಿಯಾನ ನಡೆಸಿ ಸುಳ್ಳಿನ ವಿರುದ್ದ ಹೋರಾಡುವ ಒಂದು ದೊಡ್ಡ ತಂಡವನ್ನು ಕಟ್ಟಿಕೊಂಡಿದ್ದಾರೆ.