ಕುವೈತ್ ಕಟ್ಟಡದಲ್ಲಿ ಅಗ್ನಿದುರಂತ ಮತ್ತು 45 ಭಾರತೀಯರು ಸಾವನ್ನಪ್ಪಿದ ದುರಂತದ ಘಟನೆಯ ಪ್ರಾಥಮಿಕ ತನಿಖೆಗಳು ಕಟ್ಟಡದಲ್ಲಿ ಅಗ್ನಿ ದುರಂತಕ್ಕೆ ಕಾರಣವಾದ ಪ್ರಾಥಮಿಕ ಅಂಶಗಳನ್ನು ಪತ್ತೆ ಹಚ್ಚಿದೆ. ಏಳು ಅಂತಸ್ತಿನ ಕಟ್ಟಡದ ನೆಲ ಮಹಡಿಯಲ್ಲಿ ಸುಮಾರು ಎರಡು ಡಜನ್ ಗ್ಯಾಸ್ ಸಿಲಿಂಡರ್‌ಗಳು, ಕಾಗದದಂತಹ ದಹಿಸುವ ವಸ್ತುಗಳನ್ನು ಇಡಲಾಗಿತ್ತು. ಮೇಲ್ಛಾವಣಿಯ ಮೇಲೆ ಬಾಗಿಲುಗಳಿಗೆ ಬೀಗ ಹಾಕಿದ ಕಾರಣ ಕಾರ್ಮಿಕರಿಗೆ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ತನಿಖೆಯ ವೇಳೆ ಬಯಲಾಗಿದೆ.
ನೆಲ ಮಹಡಿಯಲ್ಲಿ ಶಾರ್ಟ್ ಸರ್ಕ್ಯೂಟ್ ಮೊದಲು ಸಂಭವಿಸಿದೆ. ಅದು ನೆಲ ಮಹಡಿಯಲ್ಲಿಟ್ಟಿದ್ದ ಗ್ಯಾಸ್ ಸಿಲಿಂಡರ್‌ಗಳಿಗೆ ತಗುಲಿದೆ. ಕೊಠಡಿಗಳು ಸಾಕಷ್ಟು ಕಾಗದದಂತಹ ದಹಿಸಬಹುದಾದ ವಸ್ತುಗಳನ್ನು ಹೊಂದಿದ್ದರಿಂದ ಬೆಂಕಿ ತ್ವರಿತವಾಗಿ ಕಟ್ಟಡದ ಮೇಲ್ಬಾಗಕ್ಕೆ ವ್ಯಾಪಿಸಿದೆ.
ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳು ಬದುಕುಳಿದವರನ್ನು ಭೇಟಿ ಮಾಡಿ ವಿಚಾರಣೆ ನಡೆಸಿದಾಗ ಈ ಮಹತ್ವದ ಅಂಶಗಳು ಬಯಲಾಗಿದೆ. ಕುವೈತ್‌ನ ತನಿಖಾಧಿಕಾರಿಗಳು ಕುವೈತ್ ನಗರದ ಸಮೀಪವಿರುವ ಅಪಾರ್ಟ್‌ಮೆಂಟ್ ಕಟ್ಟಡದಲ್ಲಿ ಬುಧವಾರ ಮುಂಜಾನೆ 49 ಜೀವಗಳನ್ನು ಬಲಿತೆಗೆದುಕೊಂಡ ಅಗ್ನಿ ದುರಂತ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಕುವೈತ್ ಅಧಿಕಾರಿಗಳ ಪ್ರಕಾರ, ಅಗ್ನಿ ದುರಂತದಲ್ಲಿ ಮೃತ 49 ಜನರಲ್ಲಿ 45 ಮಂದಿ ಭಾರತೀಯರು ಮತ್ತು ಮೂವರು ಫಿಲಿಪೈನ್ಸ್‌ನವರು ಎಂದು ಹೇಳಲಾಗಿದೆ. ಒಂದು ಮೃತದೇಹ ಇನ್ನೂ ಪತ್ತೆಯಾಗಬೇಕಿದೆ.
ಕುವೈತ್ ನಗರದ ದಕ್ಷಿಣದಲ್ಲಿರುವ ಮಂಗಾಫ್‌ನಲ್ಲಿ 196 ವಲಸೆ ಕಾರ್ಮಿಕರಿದ್ದ ಕಟ್ಟಡದಲ್ಲಿ ಅಗ್ನಿ ದುರಂತ ಸಂಭವಿಸಿತ್ತು. ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡು ಸುಮಾರು 50 ಮಂದಿ ಗಾಯಗೊಂಡಿದ್ದಾರೆ.
ಕೇಂದ್ರ ಸಚಿವ ಕೀರ್ತಿ ವರ್ಧನ್ ಸಿಂಗ್, ಕುವೈತ್‌ನ ಭಾರತೀಯ ರಾಯಭಾರಿ ಆದರ್ಶ್ ಸ್ವೈಕಾ ಅವರೊಂದಿಗೆ ಘಟನೆಯಲ್ಲಿ ಕೆಲವು ಬದುಕುಳಿದ ಸಂತ್ರಸ್ತರನ್ನು ಮತ್ತು ಕುವೈತ್ ಸರ್ಕಾರದ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿದ್ದಾರೆ.
ಸಾವನ್ನಪ್ಪಿದ 45 ಭಾರತೀಯರ ಮೃತದೇಹಗಳನ್ನು ಹೊತ್ತ ವಿಶೇಷ ವಾಯುಪಡೆಯ ವಿಮಾನವು ಕುವೈತ್‌ನಿಂದ ಟೇಕಾಫ್ ಆಗಿದೆ. ವಿಮಾನವು ಕೇರಳದ ಕೊಚ್ಚಿಯಲ್ಲಿ ಬೆಳಿಗ್ಗೆ 11 ಗಂಟೆ ಸುಮಾರಿಗೆ ಇಳಿದು ನಂತರ ದೆಹಲಿಗೆ ಹೊರಡುವ ನಿರೀಕ್ಷೆಯಿದೆ. ವಿದೇಶಾಂಗ ಸಚಿವಾಲಯದಲ್ಲಿ ಕಿರಿಯ ಸಚಿವರಾಗಿ ಅಧಿಕಾರ ವಹಿಸಿಕೊಂಡ ಕೂಡಲೇ ಕುವೈತ್‌ಗೆ ಧಾವಿಸಿದ್ದ ಸಂಸದ ಕೀರ್ತಿ ವರ್ಧನ್ ಸಿಂಗ್ ಕೂಡ ಅದೇ ವಿಮಾನದಲ್ಲಿ ವಾಪಸಾಗುತ್ತಿದ್ದಾರೆ.
ಇದನ್ನು ಓದಿ: ರಾಜ್ಯಸಭಾ ಚುನಾವಣೆ; ಅಜಿತ್ ಪವಾರ್ ಪತ್ನಿ ಸುನೇತ್ರಾ ನಾಮಪತ್ರ ಸಲ್ಲಿಕೆ


