ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಏಕೈಕ ಉದ್ದೇಶದಿಂದ ಜೆಡಿಎಸ್ ಜತೆ ಮೈತ್ರಿ ಮಾಡಿಕೊಳ್ಳುವಂತೆ ಹೈಕಮಾಂಡ್ ಸೂಚಿಸಿತ್ತು ಎಂದು ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ವಿಜಯಪುರದಲ್ಲಿ ಮಾಧ್ಯಗಳ ಜತೆ ಮಾತನಾಡಿದ ಅವರು ಹೈಕಮಾಂಡ್ ಆದೇಶವನ್ನು ನಾನು ಪಾಲಿಸಿದ್ದೇನೆ. ಇದರಲ್ಲಿ ನನ್ನ ಪಾತ್ರ ಇಷ್ಟೆ. ಹೈಕಮಾಂಡ್ ಜತೆ ಚರ್ಚಿಸಿದ್ದು, ಸರ್ಕಾರ ರಚಿಸಿದ್ದು ದೇವೇಗೌಡರು. ನಾನು ಯಾರ ಮುಖ್ಯಮಂತ್ರಿ ಪಟ್ಟವನ್ನು ತಪ್ಪಿಸಿಲ್ಲ ಎಂದು ಹೇಳಿದರು.
ಉಳಿದ 7 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ನಂತರ ಹೈಕಮಾಂಡ್ ಜತೆ ಚರ್ಚಿಸಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು. ನಮ್ಮ ಗುರಿ ಕನಿಷ್ಠ 12 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದು. 15 ಸ್ಥಾನ ಗೆದ್ದರೂ ಆಶ್ಚರ್ಯವಿಲ್ಲ. ನಾವಾಗಿಯೇ ಹಣ, ಅಧಿಕಾರದ ಆಮಿಷ ಒಡ್ಡಿ ಬೇರೆ ಪಕ್ಷದವರನ್ನು ನಮ್ಮ ಪಕ್ಷಕ್ಕೆ ಕರೆತಂದರೆ ಅದು ಆಪರೇಷನ್ ಆಗುತ್ತದೆ. ಆದರೆ ನಮ್ಮ ಪಕ್ಷದ ಸಿದ್ಧಾಂತವನ್ನು ಒಪ್ಪಿ ಅವರಾಗಿಯೇ ಬಂದರೆ ಅದು ಆಪರೇಷನ್ ಹೇಗಾಗುತ್ತದೆ? ಈ ಆಪರೇಷನ್, ಸರ್ಜರಿ ಇದರಲ್ಲಿ ಸಿಎಂ ಯಡಿಯೂರಪ್ಪ ಅವರು ಸ್ಪೆಷಲಿಸ್ಟ್. ನಾನು ಡಾಕ್ಟರೂ ಅಲ್ಲ, ನನಗೆ ಯಾವ ರೋಗಿಗಳು ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಉಪಚುನಾವಣೆ ನಂತರ ಕಾಂಗ್ರೆಸ್ ಮತ್ತು ಜೆಡಿಸ್ ಪಕ್ಷದಿಂದ ಇನ್ನಷ್ಟು ಜನ ನಮ್ಮ ಪಕ್ಷಕ್ಕೆ ಬರುತ್ತಾರೆಂದು ಸಚಿವ ಸಿ.ಟಿ ರವಿ ಹೇಳಿದ್ದಾರಂತೆ. ಮೊದಲು ಬಿಜೆಪಿ ಬಿಟ್ಟು ಹೋಗುತ್ತಿರುವವರನ್ನು ತಡೆಯಲಿ, ಆಮೇಲೆ ಬೇರೆ ಮಾತು. ನನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿ ಇಂತಹ ಹೇಳಿಕೆಗಳನ್ನು ಕೇಳಿ ಕೇಳಿ ಸಾಕಾಗಿದೆ. ಬಿಜೆಪಿಯವರ ಬಳಿ ಹಣವಿದೆ, ಅಧಿಕಾರ ಹಿಡಿಯಲು ಆಪರೇಷನ್ ಕಮಲವನ್ನೂ ಮಾಡ್ತಾರೆ, ಅನೈತಿಕ ರಾಜಕಾರಣವನ್ನೂ ಮಾಡ್ತಾರೆ. ಮೌಲ್ಯಾಧಾರಿತ ರಾಜಕಾರಣ ಅಂದ್ರೆ ಏನು ಅಂತಲೇ ಅವರಿಗೆ ಗೊತ್ತಿಲ್ಲ. ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಬಗ್ಗೆ ಸ್ವಲ್ಪವೂ ಗೌರವವಿಲ್ಲ. ಹಿಂಬಾಗಿಲ ರಾಜಕಾರಣಕ್ಕೆ ಬಿಜೆಪಿಯವರು ಹೆಸರುವಾಸಿ ಎಂದು ಟೀಕಿಸಿದರು.


