Homeಮುಖಪುಟ’ಡಿಸ್‌ಮ್ಯಾಂಟ್ಲಿಂಗ್ ಗ್ಲೋಬಲ್ ಹಿಂದುತ್ವ' ಕೇಸರಿಕೂಟದಲ್ಲಿ ಕಿಚ್ಚು ಹಚ್ಚಿದ್ದು ಏಕೆ?

’ಡಿಸ್‌ಮ್ಯಾಂಟ್ಲಿಂಗ್ ಗ್ಲೋಬಲ್ ಹಿಂದುತ್ವ’ ಕೇಸರಿಕೂಟದಲ್ಲಿ ಕಿಚ್ಚು ಹಚ್ಚಿದ್ದು ಏಕೆ?

- Advertisement -
- Advertisement -

ಇದೇ ಸೆಪ್ಟೆಂಬರ್‌ನ ಎರಡನೇ ವಾರ ಅಮೆರಿಕ ನೆಲದಲ್ಲಿ ಪ್ರಮುಖ ವಿದ್ಯಮಾನವೊಂದು ನಡೆದುಹೋಯಿತು. ಅದು ವರ್ತಮಾನದ ಭಾರತದಲ್ಲಿ ಹಿಟ್ಲರ್‌ವಾದಿ ಶಕ್ತಿಗಳ ಪ್ರಜಾತಂತ್ರವಾದಿಗಳ ನಡುವೆ ನಡೆಯುತ್ತಿರುವ ಸಂಘರ್ಷದ ಮುಂದುವರಿಕೆಯಾಗಿತ್ತೆಂದರೆ ತಪ್ಪಾಗಲಾರದು. ಎಂದಿನಂತೆ ಭಾರತದ ಮಾರಿಕೊಂಡ ಮಾಧ್ಯಮಗಳು ಈ ವಿದ್ಯಮಾನದ ಬಗ್ಗೆ ಆಸ್ಥಾನ ಪ್ರಚಾರಕರಂತೆ ವರ್ತಿಸಿದ್ದು ಅಚ್ಚರಿಯೇನಲ್ಲ.

ಏನಿದು ಅಂತಹ ಪ್ರಮುಖ ವಿದ್ಯಮಾನ?

ನಿರ್ದಿಷ್ಟವಾಗಿ ದಕ್ಷಿಣ ಏಷ್ಯಾದ ರಾಜಕೀಯ ಮತ್ತು ಸಮಾಜವನ್ನು ಅಧ್ಯಯನ ಮಾಡುತ್ತಿರುವ ಅನೇಕ ಸಂಶೋಧಕರು ಹಾಗೂ ಜಾಗತಿಕ ಮಟ್ಟದಲ್ಲಿ ಖ್ಯಾತರಾದ ಅನೇಕ ವಿದ್ವಾಂಸರು ಜೊತೆಗೂಡಿ ರೂಪಿಸಿದ ವರ್‍ಚುವಲ್ ಕಾನ್ಫರೆನ್ಸ್ ಕಾರ್ಯಕ್ರಮ ’ಡಿಸ್‌ಮ್ಯಾಂಟ್ಲಿಂಗ್ ಗ್ಲೋಬಲ್ ಹಿಂದುತ್ವ – ಮಲ್ಟಿ ಡಿಸಿಪ್ಲಿನರಿ ಪರ್‍ಸ್‌ಪೆಕ್ಟೀವ್’. ಅಂದರೆ ’ಜಾಗತಿಕ ಹಿಂದುತ್ವವನ್ನು ಕಳಚಿಹಾಕುವುದು – ಬಹುಶಿಸ್ತೀಯ ದೃಷ್ಟಿಕೋನಗಳು’ ಎಂಬ ಹೆಸರಿನ ಆನ್‌ಲೈನ್ ಸಮಾವೇಶ.

ಇದೇ ಸೆಪ್ಟೆಂಬರ್ 10ರಿಂದ 12ರವರೆಗೆ ನಡೆದ ಈ ಆನ್‌ಲೈನ್ ಸಮ್ಮೇಳನದಲ್ಲಿ ಭಾರತದ ವಿಶ್ವವಿದ್ಯಾಲಯಗಳ ಸಂಶೋಧಕರು, ಚಿಂತಕರನ್ನೂ ಒಳಗೊಂಡು ಅಂತಾರಾಷ್ಟ್ರೀಯ ಮಟ್ಟದ ನೂರಾರು ವಿದ್ವಾಂಸರು ಭಾಗವಹಿಸಿದ್ದರು. ಇದಿಷ್ಟೇ ಆಗಿದ್ದರೆ ಬಹುಶಃ ಅಷ್ಟೇನೂ ಸುದ್ದಿಯಾಗುತ್ತಿರಲಿಲ್ಲವೇನೋ?! ಆದರೆ ಅಮೆರಿಕದ ಹೆಸರಾಂತ ಕೊಲಂಬಿಯಾ, ಸ್ಟಾನ್‌ಫರ್ಡ್, ಹಾರ್ವರ್ಡ್, ಪ್ರಿನ್ಸ್‌ಟನ್, ಕ್ಯಾಲಿಫೋರ್ನಿಯಾ, ಟೆಕ್ಸಾಸ್, ಬರ್ಕ್‌ಲೀ, ಶಿಕಾಗೋ, ನ್ಯೂಯಾರ್ಕ್ ಯೂನಿವರ್ಸಿಟಿಗಳನ್ನೂ ಒಳಗೊಂಡು 50ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಈ ಕಾರ್ಯಕ್ರಮದ ಸಹಪ್ರಾಯೋಜಕರಾಗಿದ್ದರು! ಯಾಕೆಂದರೆ ಇದೊಂದು ಅಕ್ಯಾಡೆಮಿಕ್ ಕಾರ್ಯಕ್ರಮವಾಗಿತ್ತು.

’ಹಿಂದುತ್ವ’ದ ಹೆಸರಿನಲ್ಲಿ ಫ್ಯಾಸಿವಾದಿ ಶಕ್ತಿಗಳು ಭಾರತದ ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರದ ಮೇಲೆ ಆಧಿಪತ್ಯ ಸಾಧಿಸುತ್ತಿರುವುದು ಹಾಗೂ ಈ ಶಕ್ತಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ, ಇನ್ನೂ ನಿರ್ದಿಷ್ಟವಾಗಿ ಅಮೆರಿಕದಲ್ಲಿ ತಮ್ಮ ಜಾಲವನ್ನು ವಿಸ್ತರಿಸಿರುವ ಬಗ್ಗೆ ವಿದ್ವತ್‌ಪೂರ್ಣ ವಿಷಯಗಳು ಈ ಸಮ್ಮೇಳನದಲ್ಲಿ ಮಂಡನೆಯಾದವು.

ಕಾರ್ಯಕ್ರಮದ ಸಂಘಟಕರು ತಮ್ಮ ಘೋಷಿತ ಉದ್ದೇಶಕ್ಕಾಗಿ https://dismantlinghindutva.com/ ಎಂಬ ವೆಬ್‌ಸೈಟೊಂದನ್ನು ಮುಂಚಿತವಾಗಿಯೇ ರೂಪಿಸಿದ್ದು ಅದರಲ್ಲಿ ತಮ್ಮ ವಿಚಾರಗಳನ್ನು ಬಹಳ ಸ್ಪಷ್ಟವಾಗಿ ಬರೆದುಕೊಂಡಿದ್ದಾರೆ. ಆಸಕ್ತ ಓದುಗರು ಈ ವೆಬ್‌ಸೈಟನ್ನು ಗಮನಿಸಬಹುದು. ಇಂದಿನ ನಾಗರಿಕ ಜಗತ್ತಿನಲ್ಲಿ ಇಂಥಾ ಅಕಾಡೆಮಿಕ್ ಸಂವಾದಗಳು ಅಥವಾ ಸಾರ್ವಜನಿಕ ಚರ್ಚೆಗಳು ಅತ್ಯಂತ ಸ್ವಾಗತಾರ್ಹ. ಯಾಕೆಂದರೆ ನಮ್ಮ ಕಾಲಘಟ್ಟದ ಬಹಳ ಮಹತ್ವದ ರಾಜಕೀಯ-ಸಾಮಾಜಿಕ ವಿದ್ಯಮಾನದ ಬಗ್ಗೆ ಈ ಸಮ್ಮೇಳನ ನೇರವಾಗಿ ಪ್ರಶ್ನೆಗಳನ್ನೆತ್ತಿತ್ತು. ಈ ಸಮ್ಮೇಳನದ ಭಾಷಣಕಾರರ ವಿಚಾರವನ್ನು ಒಪ್ಪುವ ಅಥವಾ ನಿರಾಕರಿಸುವ ಸ್ವಾತಂತ್ರ್ಯ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ಇಲ್ಲವೇ ಆ ವಿಚಾರಗಳನ್ನು ವಿಮರ್ಶಿಸುವ ಹಕ್ಕೂ ಕೂಡ ಪ್ರಜಾತಾಂತ್ರಿಕವಾದುದು. ವಿಚಾರಗಳ ವಿನಿಮಯ, ಸಂವಾದ ಅಥವಾ ಉತ್ಕರ್ಷದ ಮೂಲಕವೇ ಹೊಸ ವಿಚಾರಗಳು ಹುಟ್ಟುವುದು; ಮನುಕುಲ ಸರಿಯಾದ ದಾರಿಯನ್ನು ಆಯ್ಕೆ ಮಾಡಿಕೊಳ್ಳುವುದು.

ಇದೆಲ್ಲಾ ಪ್ರಜಾತಾಂತ್ರಿಕ ಚರ್ಚೆಗಳಲ್ಲಿ ನಂಬಿಕೆ ಇರಿಸಿಕೊಂಡವರ ಮಾತಾಯಿತು. ಪ್ರಜಾತಾಂತ್ರಿಕ ಸಂವಾದಗಳಲ್ಲಿ ಎಂದಿಗೂ ತೊಡಗಿಸಿಕೊಳ್ಳದೆ, ಯಾವುದೇ ವಿಷಯದ ಮೂಲ ವಿಶ್ಲೇಷಣೆಗೆ ಒಡ್ಡಿಕೊಳ್ಳದೇ ವಿಷಯಗಳನ್ನು ಕೇವಲ ಭಾವನಾತ್ಮಕಗೊಳಿಸಿ, ತಮ್ಮನ್ನು ವಿಮರ್ಶಿಸುವವರ ಮೇಲೆ, ತಿರುಚಿದ ವಿಕೃತ ವಿಚಾರಗಳ ಮೂಲಕ ಸದಾ ಜನಜಂಗುಳಿಯನ್ನು ಬಡಿದೆಬ್ಬಿಸುವ ತಂತ್ರವನ್ನು ಅನುಸರಿಸುತ್ತಿರುವ ಸಂಘ ಪರಿವಾರ ಬೆಂಬಲಿತ ಕೂಟದಿಂದ ಆರೋಗ್ಯಕರ ಸಂವಾದವನ್ನು ನಿರೀಕ್ಷಿಸುವುದು ಹೇಗೆ ಸಾಧ್ಯ?

ಹೀಗಿರುವಾಗ ಸಮ್ಮೇಳನದ ಶೀರ್ಷಿಕೆಯಲ್ಲಿ ’ಡಿಸ್‌ಮ್ಯಾಂಟ್ಲಿಂಗ್’ ಅರ್ಥಾತ್ ಕಳಚಿಹಾಕುವುದು/ ಕಿತ್ತೊಗೆಯುವುದು ಎಂಬ ಕ್ರಿಯಾಪದ ಅವರಿಗೆ ಅಪಥ್ಯವಾಗಿದ್ದು ಸಹಜ. ಹೀಗಾಗಿ ಸಮ್ಮೇಳನದ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಸುದ್ದಿ ಪ್ರಕಟವಾಗಿದ್ದೇ ತಡ ಈ ಹಿಂದುತ್ವವಾದಿಗಳು ಅದರ ವಿರುದ್ಧ ಕೆಂಡಕಾರಲಾರಂಭಿಸಿದ್ದರು. ಕ್ರಮೇಣ ಈ ಸಮ್ಮೇಳನದ ವಿಚಾರ ಹೆಚ್ಚೆಚ್ಚು ಜನರನ್ನು ಸೆಳೆಯಲಾರಂಭಿಸಿತು. ಅಮೆರಿಕದ 50ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳು ಸಹ-ಪ್ರಾಯೋಜಕರಾಗಿ ಜೊತೆಗೂಡತೊಡಗಿದರು. ತಮ್ಮ ಪೊಳ್ಳು ಹಿಂದುತ್ವದ ಮುಖವಾಡ ಕಳಚುವ ಈ ಸಮ್ಮೇಳನದ ದೂರಗಾಮಿ ಪರಿಣಾಮವನ್ನು ಗ್ರಹಿಸಿದ ಕೇಸರಿಪಡೆ ಈ ಸಮ್ಮೇಳನದ ವಿರುದ್ಧ ತೀವ್ರ ಸಂಘರ್ಷಕ್ಕಿಳಿಯಲು ತೀರ್ಮಾನಿಸಿ ಅಖಾಡಕ್ಕಿಳಿಯಿತು.

ಹಿಂದುತ್ವವಾದಿಗಳ ಸಂಘಟಿತ ಆಟಾಟೋಪ

ಭಾರತ ಮತ್ತು ಅಮೆರಿಕದಲ್ಲಿ ಟ್ರೋಲ್ ಪಡೆಗಳನ್ನು ರಂಗಕ್ಕಿಳಿಸಲಾಯಿತು. ಯಥಾಪ್ರಕಾರ ಸಮ್ಮೇಳನವನ್ನು “ಹಿಂದೂ ವಿರೋಧಿ” ಎಂದು ಬಿಂಬಿಸುವ ಅಸಂಖ್ಯಾತ ಬರಹಗಳು, ಪೋಸ್ಟರ್‌ಗಳು ಸೋಷಿಯಲ್ ಮೀಡಿಯಾಗಳಲ್ಲಿ ರಾರಾಜಿಸಿದವು. ಟ್ವಿಟ್ಟರ್ ಟ್ರೆಂಡಿಂಗ್ ಅಭಿಯಾನ ನಡೆಯಿತು.

ಅಮೆರಿಕದಲ್ಲಿ ಸಂಘ ಪರಿವಾರದ ವಿಸ್ತರಿತ ಬಾಹುಗಳಂತಿರುವ ’ವಿಶ್ವ ಹಿಂದೂ ಪರಿಷತ್ ಆಫ್ ಅಮೆರಿಕಾ’ (ವಿಎಚ್‌ಪಿಎ), ’ಕೋಅಲಿಷನ್ ಆಫ್ ಹಿಂದೂಸ್ ಇನ್ ನಾರ್ತ್ ಅಮೆರಿಕಾ’ (ಸಿಒಎಚ್‌ಎನ್‌ಎ) ಹಾಗೂ ’ಹಿಂದೂ ಅಮೆರಿಕನ್ ಫೌಂಡೇಷನ್’ (ಎಚ್‌ಎಎಫ್) ನಂತಹ ಸಂಘಟನೆಗಳು ಈ ಸಮ್ಮೇಳನದ ವಿರುದ್ಧ ಭಾರೀ ಪ್ರಚಾರ ಆರಂಭಿಸಿದವು. ಅಮೆರಿಕ ಮತ್ತು ಕೆನಡಾದ ಹಲವು ನಗರಗಳಲ್ಲಿ ಸಮ್ಮೇಳನದ ವಿರುದ್ಧ ಬಹಿರಂಗ ಪ್ರದರ್ಶನಗಳನ್ನೂ ನಡೆಸಲಾಯಿತು. ಈ ಸಮ್ಮೇಳನದಿಂದ ದೂರ ಉಳಿಯುವಂತೆ ಒತ್ತಾಯಿಸಿ ವಿವಿಧ ಯೂನಿವರ್ಸಿಟಿಗಳಿಗೆ 13 ಲಕ್ಷದಷ್ಟು ಇಮೇಲ್‌ಗಳು ರವಾನೆಯಾಗಿದ್ದವು. ಒಂದೆರಡು ನಿಮಿಷದಲ್ಲಿ 30 ಸಾವಿರಕ್ಕೂ ಹೆಚ್ಚು ಇಮೇಲ್‌ಗಳ ಹಠಾತ್ ಸುರಿಮಳೆಯಿಂದಾಗಿ ನ್ಯೂಜರ್ಸಿ ಯೂನಿವರ್ಸಿಟಿಯ ಸರ್ವರ್ ಜಾಮ್ ಆಗಿತ್ತೆಂದರೆ ಇವರ ಪ್ರಚಾರ ಯಂತ್ರಾಂಗದ ಸಾಮರ್ಥ್ಯವನ್ನು ಯಾರಾದರೂ ಊಹಿಸಬಹುದು.

ಅಮೆರಿಕದ ವಿರೋಧಿ ದನಿಗಳಲ್ಲಿ ಅತ್ಯಂತ ಪ್ರಮುಖವಾಗಿ ಕೇಳಿಬಂದ ಹೆಸರು ನೀರಜ್ ಆಂತಣಿ. ಈತ ಓಹಿಯೋ ರಾಜ್ಯದಲ್ಲಿ ಆಯ್ಕೆಯಾಗಿರುವ ಅತ್ಯಂತ ಕಿರಿಯ ಸೆನೆಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ರಾಜ್ಯ ಸರ್ಕಾರದ ಈ ಅಧಿಕೃತ ಸೆನೇಟರ್‌ನ ಪತ್ರಿಕಾ ಹೇಳಿಕೆಯಲ್ಲಿನ ವಾದವನ್ನು ಗಮನಿಸಿ. “ಈ ಸಮ್ಮೇಳನವನ್ನು ನಾನು ಅತ್ಯಂತ ಕಟುವಾದ ಶಬ್ದಗಳಲ್ಲಿ ಖಂಡಿಸುತ್ತೇನೆ. ಯಾಕೆಂದರೆ ಇದು ಹಿಂದುಗಳ ವಿರುದ್ಧ ಅಮೆರಿಕದ್ಯಂತ ನಡೆಯುತ್ತಿರುವ ಅಸಹ್ಯಕರ ದಾಳಿಯಾಗಿದೆ. ಇದು ಹಿಂದುಗಳ ವಿರುದ್ಧ ಜನಾಂಗೀಯವಾದ ಮತ್ತು ಮತಾಂಧತೆಯನ್ನು ಪ್ರೇರೇಪಿಸುವುದಲ್ಲದೆ ಬೇರೇನಲ್ಲ”.

ಅಮೆರಿಕದಲ್ಲೇ ಹುಟ್ಟಿ ಬೆಳೆದಿರುವ ಈ ವ್ಯಕ್ತಿ ಡೊನಾಲ್ಡ್ ಟ್ರಂಪ್‌ನ ರಿಪಬ್ಲಿಕನ್ ಪಕ್ಷವನ್ನು ಪ್ರತಿನಿಧಿಸುತ್ತಿರುವ ರಾಜಕಾರಣಿ. 2018ರಲ್ಲಿ ಈತ ಉದುರಿಸಿದ್ದ ಅಣಿಮುತ್ತೊಂದನ್ನು ಇಲ್ಲಿ ದಾಖಲಿಸಲೇಬೇಕು: ’18 ವರ್ಷ ತುಂಬಿರುವ ವಿದ್ಯಾರ್ಥಿಗಳು ತಮ್ಮ ಶಾಲೆಗಳಿಗೆ ರೈಫಲ್‌ಗಳನ್ನು ತರಲು ಅವಕಾಶ ಕೊಡಬೇಕು’ ಎಂಬ ಮಾತದು. ತೀವ್ರ ಟೀಕೆಗಳ ನಂತರ ತನ್ನ ಹೇಳಿಕೆಯಿಂದ ಹಿಂದೆ ಸರಿದಿದ್ದು ಬೇರೆ ಮಾತು. ಕಳೆದ ವರ್ಷ ಒಂದು ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ಈತನ ಹೆಸರು ಕೇಳಿಬಂದಿತ್ತು ಎಂಬುದು ಕೂಡ ಮುಖ್ಯ. ನಡೆ ನುಡಿಗಳ ನಡುವೆ ಅಜಗಜಾಂತರ ವ್ಯತ್ಯಾಸ ಇವರ ಮೂಲಭೂತ ಲಕ್ಷಣಗಳಂತಾಗಿಬಿಟ್ಟಿರುವುದು ಮತ್ತೊಂದು ವಿಪರ್ಯಾಸ.

’ಹಿಂದೂ ಜನಜಾಗೃತಿ ಸಮಿತಿ’ ಎಂಬ ಸಂಘಟನೆ ಗೃಹಮಂತ್ರಿ ಅಮಿತ್‌ಶಾಗೆ ಪತ್ರ ಬರೆದು ಈ ಸಮ್ಮೇಳನದ ಭಾಷಣಕಾರರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದೆ. ನೆನಪಿಡಿ. ಇದೇ ’ಹಿಂದೂ ಜನಜಾಗೃತಿ ಸಂಘಟನೆ’ಯ ಕೆಲವು ಸದಸ್ಯರು ಪತ್ರಕರ್ತೆ ಗೌರಿ ಲಂಕೇಶ್ ಅವರ ಕೊಲೆ ಕೇಸಿನಲ್ಲಿ ಬಂಧಿತರಾಗಿದ್ದು ಈಗ ವಿಚಾರಣೆ ಎದುರಿಸುತ್ತಿದ್ದಾರೆ. ಸಹ-ಪ್ರಾಯೋಜಕರಾಗಿರುವ ಅಮೆರಿಕ ಯೂನಿವರ್ಸಿಟಿಗಳಲ್ಲಿ ವ್ಯಾಸಂಗ ಮಾಡಲು ಹೋಗುವ ಭಾರತೀಯ ವಿದ್ಯಾರ್ಥಿಗಳಿಗೆ ಅನುದಾನ, ಸಾಲ ಕೊಡುವುದನ್ನು ನಿಷೇಧಿಸಬೇಕೆಂದೂ ಈ ಪಡೆಗಳು ಊಳಿಟ್ಟವು. ’ಹಿಂದುಗಳ ಮಾರಣ ಹೋಮ’, ’ಹಿಂದೂಫೋಬಿಯಾ ಹರಡಲಾಗುತ್ತಿದೆ’ ಹೀಗೆ ಬಗೆಬಗೆಯ ಚೀರಾಟ ನಡೆಯಿತು.

ಸಂಘ ಪರಿವಾರ ಅಪಪ್ರಚಾರಕ್ಕೆ ಮಾತ್ರ ತೃಪ್ತವಾಗುತ್ತದೆಯೆ? ಇಲ್ಲವೇ ಇಲ್ಲ. ಸಮ್ಮೇಳನದ ಭಾಷಣಕಾರರು ಭಾರತಕ್ಕೆ ಕಾಲಿಡಲು ಬಿಡುವುದಿಲ್ಲ ಎಂಬ ಬೆದರಿಕೆ ಹಾಕಿದರು. ಸಂಘಟಕರು, ಭಾಷಣಕಾರರ ವಿರುದ್ಧ ಅತ್ಯಂತ ಹೀನಾಯ ಭಾಷೆಯ ಬೈಗುಳ ಪ್ರಯೋಗಿಸಿದರು. ಈ ಬಗ್ಗೆ ಭಾಷಣಕಾರರಲ್ಲೊಬ್ಬರಾಗಿದ್ದ ಸಾಮಾಜಿಕ ಹೋರಾಟಗಾರ್ತಿ ಮತ್ತು ಲೇಖಕಿ ಮೀನಾ ಕಂದಸ್ವಾಮಿ ಅವರ ವಿಷಯವನ್ನೇ ಕೇಳಿ. ಅವರ ಮಕ್ಕಳ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿದ ಈ ಭಯೋತ್ಪಾದಕ ಪಡೆ ’ನಿಮ್ಮ ಮಗನಿಗೆ ಭೀಕರ ಸಾವು ಕಾದಿದೆ’ ಎಂದು ಬೆದರಿಕೆ ಒಡ್ಡಿತು. ಹಲವು ಜನರಿಗೆ ಜಾತಿ ಹೆಸರಿನಲ್ಲಿ ನಿಂದಿಸಿದರು. ಮಹಿಳೆಯರಿಗೆ ಅತ್ಯಾಚಾರದ ಬೆದರಿಕೆಗಳನ್ನು ಹಾಕಿದರು. ಹಲವರಿಗೆ ಕೊಲೆ ಬೆದರಿಕೆ ಕರೆಗಳೂ ಹೋದವು. ಇಂಥಾ ಪರಿಣಾಮದಿಂದ ಹಲವರು ಪೊಲೀಸ್ ದೂರು ಕೊಟ್ಟು ರಕ್ಷಣೆ ಕೋರಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು. ಭೀತಿ ಹುಟ್ಟಿಸುವ ಈ ಬೆಳವಣಿಗೆಗಳಿಂದ ಕೆಲವು ಭಾಷಣಕಾರರು ಸಮ್ಮೇಳನದಿಂದ ಹಿಂದೆ ಸರಿದಿದ್ದೂ ಉಂಟು.

ಸಂಘಟಕರಲ್ಲೊಬ್ಬರಾದ ಸಾಂತಾ ಕ್ಲಾರಾ ಯೂನಿವರ್ಸಿಟಿಯ ಸಹಾಯಕ ಪ್ರಾಧ್ಯಾಪಕ ರೋಹಿತ್ ಚೋಪ್ರಾ ಅವರ ಮಾತುಗಳನ್ನು ಕೇಳಿ. “ನಮ್ಮನ್ನು ಹಿಂದೂ ವಿರೋಧಿ ಎಂದು ಬಿಂಬಿಸಲಾಯ್ತು. ಭಯೋತ್ಪಾದಕರು ಎಂಬ ಹಣೆಪಟ್ಟಿ ಹಚ್ಚಲಾಯ್ತು. ಭಾರತ ವಿರೋಧಿಗಳು ಎಂದು ಜರೆಯಲಾಯ್ತು…. ಸಂಘಟಕರೊಬ್ಬರಿಗೆ ಬಂದ ಇಮೇಲ್ ಇನ್ನೂ ಭಯಾನಕವಾಗಿತ್ತು. ’ಈ ಕಾರ್ಯಕ್ರಮ ನಿಲ್ಲಿಸದೇ ಹೋದರೆ ನಾನು ಒಸಾಮ ಬಿನ್ ಲಾಡೆನ್ ಆಗುತ್ತೇನೆ; ನಿಮ್ಮ ಎಲ್ಲಾ ಭಾಷಣಕಾರರನ್ನು ಕೊಲ್ಲುತ್ತೇನೆ.” ಇದು ಭಯೋತ್ಪಾದನೆಯಲ್ಲದೆ ಮತ್ತೇನು?

ಮಾರಿಕೊಂಡ ಮಾಧ್ಯಮಗಳ ಚೀರಾಟ

ಇನ್ನು ಕೇಸರಿಪಡೆಯ ಮತ್ತೊಂದು ಬಾಹುವಿನಂತಾಗಿಬಿಟ್ಟಿರುವ ಭಾರತದ ಹಲವು ದೃಶ್ಯ ಮಾಧ್ಯಮಗಳ ಗೋಳಂತೂ ಹೇಳತೀರದು. ಈ ಸಮ್ಮೇಳನಕ್ಕೆ ’ಭಾರತ ವಿರೋಧಿ ಶಕ್ತಿಗಳು ಹಣ ಕೊಟ್ಟಿದ್ದಾರೆ’, ’ಸಿಐಎಯಿಂದ ಪ್ರಾಯೋಜಿತ’, ’ತಾಲಿಬಾನಿಗಳ ಬೆಂಬಲಕ್ಕಾಗಿ ಆಯೋಜಿಸಲಾಗಿದೆ’, ’ಹಿಂದೂಗಳ ವಿರುದ್ಧ ಅಂತಾರಾಷ್ಟ್ರೀಯ ಷಡ್ಯಂತ್ರ …’ ಹೀಗೆ ತರಹೇವಾರಿ ತಲೆಬರಹಗಳಲ್ಲಿ ಅಪಪ್ರಚಾರ ನಡೆಸಿದವು. ಮತ್ತೊಂದು ಚಾನಲ್ಲಂತೂ ’9/11ರ ಭಯೋತ್ಪಾದಕರ ದಾಳಿಯ 20ನೇ ವರ್ಷಾಚರಣೆಯ ಸಂದರ್ಭದಲ್ಲಿ ಈ ಸಮ್ಮೇಳನ ನಡೆಯುತ್ತಿರುವುದು 9/11 ದಾಳಿಯನ್ನು ಮರೆಮಾಚುವ ಷಡ್ಯಂತ್ರ ಎಂದು ಬೊಬ್ಬೆಯಿಟ್ಟಿತು.

ಇದೆಲ್ಲಾ ಒತ್ತಟ್ಟಿಗಿರಲಿ. ಪ್ರಿನ್ಸ್‌ಟನ್ ಯೂನಿವರ್ಸಿಟಿಯ ದಕ್ಷಿಣ ಏಷ್ಯಾ ಅಧ್ಯಯನ ವಿಭಾಗದ ಡೈರೆಕ್ಟರ್ ಆಗಿರುವ ಬೆನ್ ಬೇರ್ ಹೀಗನ್ನುತ್ತಾರೆ. ’ಸಂಘಟಕರಲ್ಲಿ ಕೆಲವರು ಭಾರತದ ವಿದ್ಯಮಾನಗಳನ್ನು ಅಧ್ಯಯನ ಮಾಡಿದ್ದೇವೆ, ಅಧ್ಯಯನದ ಭಾಗವಾಗಿ ಕೆಲವು ವರ್ಷಗಳ ಕಾಲ ಭಾರತದಲ್ಲಿ ವಾಸಿಸಿದ್ದೇವೆ. ಇವರ ಪ್ರಚಾರಗಳು ಸುಳ್ಳು ಮಾತ್ರವಲ್ಲ, ಅಪಾಯಕಾರಿ ನಯವಂಚಕತನದಿಂದ ಕೂಡಿವೆ ಎಂಬುದನ್ನು ಅರಿತುಕೊಂಡಿದ್ದೇವೆ.’

ಇಷ್ಟೆಲ್ಲಾ ವಿರೋಧದ ನಡುವೆಯೂ ಸಮ್ಮೇಳನ ಯಶಸ್ವಿಯಾಗಿ ನಡೆಯಿತು. ಸಮ್ಮೇಳನದ ಭಾಷಣಗಳು ಮತ್ತಿತರ ವಿವರಗಳು ಯೂಟ್ಯೂಬ್ ಮತ್ತಿತರ ಜಾಲತಾಣಗಳಲ್ಲೂ ಲಭ್ಯ. ಹೆಚ್ಚಿನ ವಿಷಯದ ಆಸಕ್ತಿ ಇರುವವರು ಅವುಗಳನ್ನು ಖುದ್ದಾಗಿ ಪರಿಶೀಲಿಸಿ ಸ್ವಂತ ಅಭಿಪ್ರಾಯ ರೂಪಿಸಿಕೊಳ್ಳಲು ಅಡ್ಡಿಯಿಲ್ಲ.

ಕೊನೆಯದಾಗಿ ಒಂದೆರಡು ಮಾತು. ಡಿಸ್‌ಮ್ಯಾಂಟ್ಲಿಂಗ್ ಗ್ಲೋಬಲ್ ಹಿಂದುತ್ವದ ಸಂಘಟಕರ ವಿಚಾರವೇನು ಎಂಬುದು ನಮಗಿಲ್ಲಿ ಮುಖ್ಯವಾಗುತ್ತದೆ. ಬಹಳ ಸ್ಪಷ್ಟವಾಗಿ ಅವರೇ ಘೋಷಿಸಿಕೊಂಡಿರುವಂತೆ ’ಹಿಂದೂಯಿಸಂ ಬೇರೆ ಹಿಂದುತ್ವ ಬೇರೆ. ಹಿಂದುತ್ವ ಎಂಬುದು ಹಿಂದುಗಳನ್ನು ಪ್ರತಿನಿಧಿಸುವ ಸಿದ್ಧಾಂತವಲ್ಲ. ವಾಸ್ತವದಲ್ಲಿ ಈ ಸಿದ್ಧಾಂತ ಹಿಂದುಗಳಲ್ಲಿರುವ ದಲಿತರು, ಆದಿವಾಸಿಗಳು, ಮಹಿಳೆಯರು, ಲೈಂಗಿಕ ಅಲ್ಪಸಂಖ್ಯಾತರ ವಿರೋಧಿಯಾಗಿದೆ ಎಂಬುದು ಹಲವಾರು ಅಧ್ಯಯನಗಳಿಂದ ತಿಳಿದು ಬಂದಿದೆ. ಒಂದು ಶತಮಾನದ ಇತಿಹಾಸವಿರುವ ಈ ಸಿದ್ಧಾಂತ ಹೇಗೆ ಬೇರುಬಿಟ್ಟಿದೆ ಎಂಬುದು ಬಹಳ ಸಂಕೀರ್ಣ ವಿಚಾರ. ಇದನ್ನು ಅರ್ಥಮಾಡಿಕೊಳ್ಳಬೇಕೆಂದರೆ ಲಿಂಗ, ಜಾತಿ, ಧರ್ಮ, ರಾಜಕೀಯ, ಆರ್ಥಿಕ ಕ್ಷೇತ್ರ, ಆರೋಗ್ಯ ಕ್ಷೇತ್ರ, ಶಿಕ್ಷಣ ಕ್ಷೇತ್ರ, ಮಾಧ್ಯಮ … ಹೀಗೆ ಬಹುಶಿಸ್ತೀಯ ಆಯಾಮಗಳ ಚರ್ಚೆಯ ಅಗತ್ಯವಿದೆ’ ಎನ್ನುತ್ತಾರೆ.

ಈ ಸಮ್ಮೇಳನ ವಿವಿಧ ದೇಶಗಳ ಅಂಥಹ ಬಹುಶಿಸ್ತೀಯ ವಿದ್ವಾಂಸರನ್ನು ಒಟ್ಟುಗೂಡಿಸುವ ಒಂದು ಚಾರಿತ್ರಿಕ ಮಹತ್ವದ ಪ್ರಯತ್ನವಾಗಿತ್ತು. ಹಿಟ್ಲರ್ ಮತ್ತು ಮುಸಲೋನಿಗಳಿಂದ ಪ್ರೇರಣೆ ಪಡೆದಿರುವ ಈ ಸಿದ್ಧಾಂತವನ್ನು ’ಡಿಸ್‌ಮ್ಯಾಂಟ್ಲಿಂಗ್’ ಮಾಡಬೇಕೆಂಬುದು ಸಮ್ಮೇಳನದ ಆಶಯವಾಗಿತ್ತು.

ಬೆಂಬಲದ ಮಹಾಪೂರ

ಸಂಘ ಪರಿವಾರದ ಅಪಪ್ರಚಾರದ ದಾಳಿ ಕರಾಳ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಜಗತ್ತಿನಾದ್ಯಂತ ಪ್ರಜಾತಂತ್ರ ಪ್ರೇಮಿಗಳು, ಶಿಕ್ಷಣವೇತ್ತರು, ಮಾನವ ಹಕ್ಕು ಹೋರಾಟಗಾರರು ಈ ಸಮ್ಮೇಳನದ ಬೆಂಬಲಕ್ಕೆ ನಿಂತದ್ದು ಆಶಾದಾಯಕ ಬೆಳವಣಿಗೆ.

* ವಿವಿಧ ದೇಶಗಳ ಶಿಕ್ಷಣ ಕ್ಷೇತ್ರಕ್ಕೆ ಸೇರಿದ 1100ಕ್ಕೂ ಹೆಚ್ಚು ಗಣ್ಯರು ಈ ಸಮ್ಮೇಳನವನ್ನು ಬೆಂಬಲಿಸುವುದಾಗಿ ಜಂಟಿ ಹೇಳಿಕೆ ನೀಡಿದ್ದಾರೆ.

* ಅಮೆರಿಕಾದ ಪ್ರಮುಖ ಸಾಹಿತ್ಯಿಕ ಸಂಘಟನೆಯಾದ ’ಪೆನ್ ಅಮೆರಿಕಾ’, ಅಸೋಸಿಯೇಷನ್ ಫಾರ್ ಸೌತ್ ಏಷ್ಯನ್ ಸ್ಟಡೀಸ್, ನ್ಯಾಷನಲ್ ಹ್ಯೂಮನ್ ರೈಟ್ಸ್ ಫೆಡರೇಷನ್ ಮೊದಲಾದ ಸಂಘಟನೆಗಳು ಬೆಂಬಲ ಘೋಷಿಸಿವೆ.

* ವಿಶೇಷವಾಗಿ ಗುರುತಿಸುವುದಾದರೆ, ಇತ್ತೀಚಿನ ವರ್ಷಗಳಲ್ಲಿ ಅಮೆರಿಕದಲ್ಲಿ ಪ್ರಗತಿಪರರ ದನಿಯಾಗಿ ಹುಟ್ಟಿಕೊಂಡಿರುವ ’ಹಿಂದೂಸ್ ಫಾರ್ ಹ್ಯೂಮನ್ ರೈಟ್ಸ್’ ಸಂಘಟನೆ ಈ ಸಮ್ಮೇಳನಕ್ಕೆ ಸಕ್ರಿಯ ಬೆಂಬಲ ಸೂಚಿಸಿದೆ.

* ವಿವಿಧ ದೇಶಗಳ ಪರಿಸರವಾದಿ ಸಂಘಟನೆಗಳು, ಅಂಬೇಡ್ಕರ್‌ವಾದಿ ಸಂಘಟನೆಗಳು, ಆದಿವಾಸಿಪರ ಸಂಘಟನೆಗಳು, ಸ್ತ್ರೀವಾದಿ ಸಂಘಟನೆಗಳು, ರಂಗಭೂಮಿ ಸಂಘಟನೆಗಳು, ಧಾರ್ಮಿಕ ಸಂಘಟನೆಗಳು, ಭಾಷಾ ಸಂಘಟನೆಗಳು – ಹೀಗೆ 60ಕ್ಕೂ ಹೆಚ್ಚು ಸಂಘಟನೆಗಳು ಸಮ್ಮೇಳನದ ಪರವಾಗಿ ದನಿಯೆತ್ತಿವೆ.


ಇದನ್ನೂ ಓದಿ: ಸೆ.17: ಸಾಮಾಜಿಕ ನ್ಯಾಯ ದಿನ; ಸ್ವಾಭಿಮಾನದ ಸಂಕೇತ ದ್ರಾವಿಡ ಸೂರ್ಯ ಪೆರಿಯಾರ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯ “400 ಪಾರ್” ಸಿನಿಮಾ ಮೊದಲ ದಿನವೇ ಫ್ಲಾಪ್ ಆಗಿದೆ: ತೇಜಸ್ವಿ ಯಾದವ್

0
ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನದ ಬೆನ್ನಲ್ಲಿ ಪ್ರತಿಕ್ರಿಯಿಸಿದ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ತೇಜಸ್ವಿ ಯಾದವ್, ಬಿಜೆಪಿಯ "400 ಪಾರ್" ಚಿತ್ರವು ಮೊದಲ ದಿನವೇ ಸೂಪರ್ ಫ್ಲಾಪ್ ಆಗಿದೆ ಎಂದು...