ಅಸಮ್ಮತಿಯು ತನ್ನ ಅತ್ಯಂತ ಪ್ರಬಲ ಅವತಾರದಲ್ಲಿ, ಕೊಲೆ ಬೆದರಿಕೆಯನ್ನೂ ಎದುರಿಸಿ ಸಲ್ಮಾನ್ ರಶ್ದಿಯವರು ದೇಶ ಬಿಟ್ಟುಹೋಗುವ ಥರದಲ್ಲಿ ಅಥವಾ ಬಾಯಿಮುಚ್ಚಿಕೊಂಡಿರುವುದನ್ನು ಒಪ್ಪುವುದರ ಬದಲಿಗೆ ಭಾನುಪ್ರತಾಪ್ ಮೆಹ್ತಾ ರಾಜೀನಾಮೆ ನೀಡುವ ರೀತಿಯಲ್ಲಿ ಅಥವಾ ಆಲ್‌ಫ್ರೆಡ್ ಝೇಯ್‌ಲಸ್‌ನನ್ನು ಸಮರ್ಥಿಸುವುದಕ್ಕಾಗಿ ತನ್ನ ಪ್ರಾಣಕ್ಕಿರುವ ಅಪಾಯವನ್ನೂ ಲೆಕ್ಕಿಸದೆ ಬರೆದ ಲೇಖಕ ಎಮಿಲ್ ಝೋಲಾನ ರೂಪದಲ್ಲಿ ಕಾಣಿಸಿಕೊಂಡಿರಬಹುದು. ಆದರೆ, ಅಸಮ್ಮತಿಯ ಹಲವು ರೂಪಗಳು ಈ ಮೇಲೆ ಪ್ರದರ್ಶಿಸಿದ ಪಟ್ಟಿಗಷ್ಟೇ ಸೀಮಿತವಾಗುವುದಿಲ್ಲ.
ಗುಜರಾತ್‌ನ ಎಡಿಜಿಪಿ (ಇಂಟಲಿಜೆನ್ಸ್) ಆಗಿದ್ದ ಆರ್.ಬಿ.ಶ್ರೀಕುಮಾರ್, 2002ರ ಹತ್ಯಾಕಾಂಡದ ನಂತರ ಆಗಿನ ಮುಖ್ಯ ಕಾರ್ಯದರ್ಶಿ ಮತ್ತು ಆಗಿನ ಮುಖ್ಯಮಂತ್ರಿ ನೀಡಿದ ಆದೇಶಗಳನ್ನು ಕಾನೂನುಬಾಹಿರ ಎಂದು ಪರಿಗಣಿಸಿ ಅದನ್ನು ಪಾಲಿಸಲು ನಿರಾಕರಿಸಿದ ಕಥೆಯನ್ನು ಹೇಳುತ್ತಾ ಅಸಮ್ಮತಿ ಸೂಚಿಸಿದ ಈ ಅಧಿಕಾರಿಯ ಬಗ್ಗೆ ಶಿವ ವಿಶ್ವನಾಥನ್ ಅವರು ಬರೆಯುತ್ತಾರೆ. ಶಿವ ವಿಶ್ವನಾಥನ್ ಅವರ ದೃಷ್ಟಿಯಲ್ಲಿ ’ಅಧಿಕೃತ ಹೇಳಿಕೆ’ ಅಥವಾ ’ಅಫಿಡವಿಟ್’ ರೂಪದಲ್ಲಿ ಕಾಣಿಸಿಕೊಂಡ ಅಧಿಕಾರಿಯೊಬ್ಬರ ಅಸಮ್ಮತಿಯು, ಒಂದು ’ಕೂಗು’ ಅಥವಾ ’ಸವಾಲು’ ಅಥವಾ ’ಮಾನವ ಹಕ್ಕಿನ ಹೋರಾಟ’ವಲ್ಲ; ಬದಲಿಗೆ ಬಹಳ ಸಹಜವಾದ ಕೆಲಸ, ಒಬ್ಬ ಪೊಲೀಸ್ ಪೇದೆ ತನ್ನ ಕೆಲಸ ನಿರ್ವಹಿಸಿದ ಹಾಗೆ. ಅಧಿಕಾರಿಗಳ ಅಸಮ್ಮತಿಯು ’ಹಕ್ಕುಗಳ ಕಾವ್ಯವಾಗಿಯಲ್ಲ ಬದಲಿಗೆ ’ಪ್ರತಿದಿನದ ಕರ್ತವ್ಯಗಳ ಗದ್ಯವಾಗಿ ಅಭಿವ್ಯಕ್ತಿಸಲ್ಪಡುತ್ತದೆ.

ಆರ್.ಬಿ.ಶ್ರೀಕುಮಾರ್ ಅವರು ರಾಹುಲ್ ಶರ್ಮಾ, ಸಂಜೀವ್ ಭಟ್, ರಜನೀಶ್ ರೈ ಅವರಂತೆ, ಪ್ರಭುತ್ವದ ಕಾನೂನುವಿರೋಧಿ ಒತ್ತಾಯಗಳನ್ನು ಮೀರಿ ಸಂವಿಧಾನದ ಮೇಲೆ ತಾವು ಸ್ವೀಕರಿಸಿದ ಪ್ರತಿಜ್ಞೆಗೆ ಬದ್ಧರಾಗಿ ನಡೆದುಕೊಂಡ ಅಧಿಕಾರಿಗಳ ಆ ಒಂದು ಪಂಗಡಕ್ಕೆ ಸೇರಿದವರು. ತಮ್ಮ ಅಸಮ್ಮತಿಯನ್ನು ಸೂಚಿಸಿದ್ದಕ್ಕಾಗಿ ಅವರು ಪ್ರಭುತ್ವದಿಂದ ಕಿರುಕುಳ ಮತ್ತು ಕಾನೂನು ಕ್ರಮದಂತಹ ದುಬಾರಿ ಬೆಲೆ ತೆರಬೇಕಾಯಿತು.
ಆಗಿನ ಗುಜರಾತ್ ಮುಖ್ಯಮಂತ್ರಿ ಈ ಹತ್ಯಾಕಾಂಡದಲ್ಲಿ ಶಾಮೀಲಾಗಿದ್ದರೆಂಬುದನ್ನು ದಾಖಲಿಸಿದ್ದಕ್ಕೆ ಸಂಜೀವ್ ಭಟ್‌ರವರು ಎಲ್ಲಕ್ಕಿಂತ ಹೆಚ್ಚಿನ ಬೆಲೆ ತೆರುತ್ತಿದ್ದಾರೆ. ಹಳೆಯ ಮತ್ತು ಸುಳ್ಳು ಕಸ್ಟಡಿ ಸಾವಿನ ಪ್ರಕರಣವೊಂದನ್ನು ದುರುದ್ದೇಶಪೂರ್ವಕವಾಗಿ ಮತ್ತೆ ತೆರೆದು ಅದನ್ನು ನಿರಂತರವಾಗಿ ನಡೆಸಿ ಜೂನ್ 2019ರಲ್ಲಿ ಸಂಜೀವ್ ಭಟ್ ಅವರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಲಾಯಿತು. ಆಗಿನಿಂದಲೂ ಅವರು ಬಂದೀಖಾನೆಯಲ್ಲೇ ಇದ್ದಾರೆ. ಅವರ ಹುಟ್ಟಿದ ದಿನದಂದು, 21 ಡಿಸೆಂಬರ್ 2020ನಲ್ಲಿ ಅವರ ಮಕ್ಕಳಾದ ಆಕಾಶಿ ಮತ್ತು ಶಾಂತನು ಭಟ್ ಅವರುಗಳು ಬಹಳ ಕಟುವಾಗಿ ಹೇಳಿದಂತೆ “ನಮ್ಮ ತಂದೆ ಮಿ.ಸಂಜೀವ್ ಭಟ್ ಅವರು ಈ ಸರ್ವಾಧಿಕಾರಿ ಪ್ರಭುತ್ವದ ವಿರುದ್ಧ ನಿಂತಿದ್ದರಿಂದ ವ್ಯಕ್ತಿಗತವಾಗಿ ಹಾಗೂ ವೃತ್ತಿಯಿಂದ ದೊಡ್ಡ ಬೆಲೆ ತೆತ್ತಿದ್ದಾರೆ; ಈಗಲೂ ಪ್ರಾಮಾಣಿಕರಾಗಿದ್ದಕ್ಕೆ, ದಿಟ್ಟ ನಿಲುವಿನವರಾಗಿದ್ದಕ್ಕೆ, ಧೈರ್ಯವಂತರಾಗಿದ್ದಕ್ಕೆ ಬೆಲೆ ತೆರುತ್ತಿದ್ದಾರೆ. ನಾವು ನಿಮ್ಮಲ್ಲಿ ಬೇಡಿಕೊಳ್ಳುತ್ತೇವೆ, ಅಸ್ತಿತ್ವದಲ್ಲಿ ಇದೆಯೆಂದು ನಮ್ಮ ತಂದೆ ನಂಬಿದ್ದಂತಹ ದೇಶದ ನಾಗರೀಕರಾಗಬೇಕೆಂದು”.
2002ರ ನಂತರ ಗುಜರಾತ್‌ನಲ್ಲಿ ಅಧಿಕಾರಿಗಳ ಅಸಮ್ಮತಿಯ ಪ್ರಕ್ರಿಯೆಗೆ ಪ್ರಭುತ್ವ ಒಂದು ಬಿಗಿಮುಚ್ಚಳ ಹಾಕಿದ್ದರೂ, ಅಸಮ್ಮತಿ ಸೂಚಿಸುವುದನ್ನು ತನ್ನ ಪಾಲಿನ ಕರ್ತವ್ಯ ನಿರ್ವಹಣೆಯೆಂದು ಭಾವಿಸುವ ಆಲೋಚನೆಯನ್ನು ಕೊನೆಗೊಳಿಸುವುದು ಸಾಧ್ಯವಿಲ್ಲ. ಅಧಿಕಾರಿಗಳಲ್ಲಿಯೂ ತಮ್ಮ ವೃತ್ತಿ ತಮಗೆ ನೀಡುವ ಆದೇಶವೇ ಕರ್ತವ್ಯದ ಪಾಲನೆಯೆಂಬ ಸರಳವಾದ ಅಂಶದಿಂದ ಪ್ರಭಾವಿತರಾದ ಭಿನ್ನಮತೀಯರು ಸದಾಕಾಲ ಇದ್ದೇ ಇರುತ್ತಾರೆ.
ನ್ಯಾಯಾಂಗದಲ್ಲೂ ತಮ್ಮ ಕರ್ತವ್ಯವನ್ನು ಯಾವುದೇ ಭೀತಿ ಅಥವಾ ಪಕ್ಷಪಾತವಿಲ್ಲದೆ ಕೆಟ್ಟಕಾಲದಲ್ಲೂ ನಿರ್ವಹಿಸಿರುವ ನ್ಯಾಯಾಧೀಶರಿದ್ದರು. ಅವರಲ್ಲೆಲ್ಲ ಕಷ್ಟಕಾಲದಲ್ಲೂ ಅಪ್ರತಿಮ ನೈತಿಕ ಧೈರ್ಯ ತೋರಿದವರಾಗಿ ಎದ್ದು ಕಾಣುವವರು, ಎಡಿಎಂ ಜಬಲ್‌ಪುರದಲ್ಲಿ ಐದು ಮಂದಿ ನ್ಯಾಯಾಧೀಶರಲ್ಲಿ ಏಕೈಕ ಭಿನ್ನಮತೀಯರಾಗಿ, ತುರ್ತು ಸ್ಥಿತಿಯ ಸಂದರ್ಭದಲ್ಲೂ ಮೂಲಭೂತ ಹಕ್ಕುಗಳು ಅಸ್ತಿತ್ವದಲ್ಲಿರುತ್ತವೆಂಬುದನ್ನು ಎತ್ತಿಹಿಡಿದ ಅಸಾಧಾರಣ ವ್ಯಕ್ತಿ ಜಸ್ಟೀಸ್ ಖನ್ನಾ. ಸಂವಿಧಾನಬದ್ಧವಾದ ತಮ್ಮ ಕರ್ತವ್ಯವನ್ನು ನಿರ್ವಹಿಸುವುದರಲ್ಲಿ ಇರುವ ಧೈರ್ಯವುಳ್ಳವರು ನ್ಯಾಯಾಂಗದ ಬೇರೆ ಬೇರೆ ಹಂತಗಳಲ್ಲೂ ಇದ್ದಾರೆ. ಅಂತಹ ಹೆಚ್ಚೇನೂ ಗುರುತಿಸಲ್ಪಡದ ಮತ್ತು ಮರೆಯಲ್ಪಟ್ಟಿರುವ ವ್ಯಕ್ತಿ, 2002ರ ಗುಜರಾತ್ ಗಲಭೆಯ ನಂತರ ನರೋದಾ ಪಾಟಿಯಾದಲ್ಲಿ ಹತ್ಯೆಗಳು ಮತ್ತು ಲೂಟಿ ನಡೆಸಿದ ಆರೋಪಿಗಳಿಗೆ ಶಿಕ್ಷೆ ವಿಧಿಸಿದ ನ್ಯಾಯಾಧೀಶೆ ಜ್ಯೋತ್ಸ್ನಾ ಯಾಜ್ಞಿಕ್.

ನರೋದಾ ಪಾಟಿಯಾ ಪ್ರಕರಣದ ವಿಚಾರಣೆಯ ಪೀಠದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅವಧಿಯಲ್ಲಿ ತನಗೆ ಸುಮಾರು 22 ಬೆದರಿಕೆ ಪತ್ರಗಳು ಮತ್ತು ಅನೇಕ ಬ್ಲಾಂಕ್ ಕರೆಗಳು ಬಂದಿದ್ದಾಗಿ ಜಸ್ಟೀಸ್ ಜ್ಯೋತ್ಸ್ನಾ ಯಾಜ್ನಿಕ್ ವಿಶೇಷ ತನಿಖಾ ತಂಡಕ್ಕೆ ಪತ್ರವನ್ನೂ ಕೂಡಾ ಬರೆದಿದ್ದರು. ಕೆಲವು ಬೆದರಿಕೆಗಳಲ್ಲಿ ’ಈಕೆಯನ್ನು ಮುಗಿಸಿಬಿಡಬೇಕು’ ಎಂದು ಬಲಪಂಥೀಯ ದುಷ್ಕರ್ಮಿಗಳು ಕರೆ ಕೊಟ್ಟಿದ್ದರೆ ಇನ್ನೂ ಕೆಲವದರಲ್ಲಿ ಚಾರಿತ್ರ್ಯವಧೆ ಮಾಡುವ ಪ್ರಯತ್ನವೂ ನಡೆದಿತ್ತೆಂದು ಅವರು ಬರೆದಿದ್ದರು. ’ಸಾಕಷ್ಟು ಮಂದಿ ಗುಜರಾತ್ ಗಲಭೆಯ ಸಂತ್ರಸ್ತರಿಗೆ ದ್ರೋಹ ಎಸಗಿದ್ದಾಗಲೂ ನಿಮ್ಮನ್ನು ಮುನ್ನಡೆಸಿದ್ದೇನು?’ ಎಂಬ ಪ್ರಶ್ನೆಗೆ ’ನನ್ನ ಆತ್ಮಸಾಕ್ಷಿಯೆದುರು ತಲೆ ಎತ್ತಿ ನಿಲ್ಲುವುದು ಸಾಧ್ಯವಾಗುವುದಕ್ಕಾಗಿ’, ’ನ್ಯಾಯಾಧೀಶೆಯಾದಾಗ ಸಂವಿಧಾನವನ್ನು ಎತ್ತಿಹಿಡಿಯುವುದಾಗಿ ತೆಗೆದುಕೊಂಡಿದ್ದ ಪ್ರತಿಜ್ಞೆಯನ್ನು ಕಾಪಾಡಬೇಕೆಂಬ ಪ್ರಜ್ಞೆಯೇ ನನ್ನನ್ನು ಮುನ್ನಡೆಸಿದ್ದು’ ಎಂದವರು ಉತ್ತರಿಸಿದ್ದರು.
ಹಿಂದೆಂದೂ ನಡೆಯದಿದ್ದಂತಹ ಒಂದು ಘಟನೆ 07.12.2020ರಲ್ಲಿ ಶ್ರೀನಗರದ ಸೆಶನ್ಸ್ ನ್ಯಾಯಾಲಯದಲ್ಲಿ ನಡೆದಿದ್ದು. ಆರೋಪಿಯೊಬ್ಬರ ಜಾಮೀನು ಅರ್ಜಿಯ ವಿಚಾರಣೆಯಿಂದ ಒಬ್ಬರು ಸೆಶನ್ಸ್ ಜಡ್ಜ್ ತಾವಾಗಿಯೇ ದೂರವುಳಿದರು. ಆ ಒಂದು ನಿರ್ದಿಷ್ಟ ಪ್ರಕರಣದಲ್ಲಿ ಜಾಮೀನು ನೀಡದಂತೆ, ಫೋನ್ ಮೂಲಕ ಜಮ್ಮು-ಕಾಶ್ಮೀರದ ಹೈಕೋರ್ಟ್ ಮುಖ್ಯ ನ್ಯಾಯಾಧೀಶರ ಕಾರ್ಯದರ್ಶಿಯವರಿಂದ ಸೂಚನೆ ಬಂದಿದ್ದ ಹಿನ್ನೆಲೆಯಲ್ಲಿ ಅವರು ಹೀಗೆ ಮಾಡಿದ್ದರು. ವಿಚಾರಣೆಯ ದಿನ ಆ ನ್ಯಾಯಾಧೀಶರು ಆ ಅರ್ಜಿಯ ವಿಚಾರಣೆಯನ್ನು ನಡೆಸಲು ಸಾಧ್ಯವಾಗದ ತನ್ನ ಅಸಾಮರ್ಥ್ಯವನ್ನು ಮುಂದಿಟ್ಟರು ಮತ್ತು ಈ ವಿಚಾರ ವ್ಯಕ್ತಿಯೊಬ್ಬರ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ್ದರಿಂದ ಹೈಕೋರ್ಟ್ ರಿಜಿಸ್ಟ್ರಾರ್‌ರವರಿಗೆ ಮೇಲ್ಮನವಿ ಸಲ್ಲಿಸುವಂತೆ ಆದೇಶಿಸಿದರು. ಹೀಗೆ ಆ ಪ್ರಕರಣ ಹೈಕೋರ್ಟ್ ಮುಖ್ಯ ನ್ಯಾಯಾಧೀಶರ ಮುಂದೆ ಆ ಪ್ರಕರಣ ಜಾಮೀನು ಅರ್ಜಿ ವಿಚಾರಣೆಗೆ ಬಂದು, ಅವರು ಮತ್ತೆ ಅದನ್ನು ಸೆಶನ್ಸ್ ನ್ಯಾಯಾಲಯಕ್ಕೇ ವಾಪಾಸ್ ಕಳಿಸಿದರು. ಆ ನಂತರದಲ್ಲಿ ಅದರಲ್ಲಿ ಜಾಮೀನು ಮಂಜೂರಾಯಿತೆಂಬುದು ವರದಿಯಾಗಿದೆ.
ಅಧಿಕಾರಿಗಳು ಅಸಮ್ಮತಿ ಸೂಚಿಸುವುದು ಅಷ್ಟು ಸರಳವಾದ ಕೆಲಸವಾಗಿರುವುದಿಲ್ಲ. ಏಕೆಂದರೆ, ಇಂತಹ ಅನೇಕ ಸಂದರ್ಭಗಳಲ್ಲಿ ಭಿನ್ನಮತೀಯರು ಬಹಳ ವಿರೋಧ ತುಂಬಿದ ವಾತಾವರಣದಲ್ಲಿ ತಮ್ಮ ಅಸಮ್ಮತಿಯೊಂದಿಗೆ ಏಕಾಂಗಿಯಾಗಿರುತ್ತಾರೆ ಮತ್ತು ವ್ಯವಸ್ಥೆಯು ಇಂತಹ ಭಿನ್ನಮತೀಯರ ಬಗ್ಗೆ ಕರುಣೆಯಿಂದ ನಡೆದುಕೊಳ್ಳುವುದಿಲ್ಲ. ಅದೇನೇ ಇದ್ದರೂ, ಅಧಿಕಾರವಲಯದ ಭಿನ್ನಮತೀಯರಿಂದ ಆಗಿರುವ ಅಗಾಧವಾದ ಸಾಧನೆಗಳನ್ನು ಗಮನಿಸಿದಾಗ ಅಂತಹ ಅಸಮ್ಮತಿಯು ಭಾರೀ ಪರಿಣಾಮಕಾರಿಯೆಂಬುದು ತಿಳಿಯುತ್ತದೆ. ಅಮೇರಿಕದ ನ್ಯಾಷನಲ್ ಸೆಕ್ಯುರಿಟಿ ಏಜೆನ್ಸಿ (ಎನ್‌ಎಸ್‌ಎ) ರೂಪಿಸಿದ್ದ ನಿಗರಾಣೆ ಕಾರ್ಯಕ್ರಮದ ವಿಷಯವನ್ನು ಬೆಳಕಿಗೆ ತರುವುದಾಗಿ ತೀರ್ಮಾನಿಸಿದ್ದರಿಂದ ಆಗ ಎನ್‌ಎಸ್‌ಎಯೊಳಗಡೆಯೇ ಗುತ್ತಿಗೆದಾರನಾಗಿದ್ದ ಎಡ್ವರ್ಡ್ ಸ್ನೋಡೆನ್ ಪ್ರಭುತ್ವದ ನಿಗರಾಣೆಯ ವಿಚಾರ ಮತ್ತು ವೈಯಕ್ತಿಕ ಖಾಸಗೀತನದ ಹಕ್ಕುಗಳ ವಿಚಾರದಲ್ಲಿ ಜಾಗತಿಕವಾಗಿ ಭಾರೀ ಪರಿಣಾಮ ಬೀರಬಹುದಾಗಿದ್ದ ಸಂಗತಿಗಳನ್ನು ಹೊರಗೆಹಿಡಿದ.
ಈ ಹಿಂದೆ 19ನೇ ಶತಮಾನದ ಫ್ರಾನ್ಸ್‌ನಲ್ಲಿ ಆಲ್‌ಫ್ರೆಡ್ ಝೇಯ್‌ಲಸ್‌ನು ಕೇವಲ ಯಹೂದಿಯಾಗಿದ್ದ ಕಾರಣಕ್ಕಾಗಿ ಬೇಹುಗಾರಿಕೆಯ ಸುಳ್ಳು ಆರೋಪದಡಿಯಲ್ಲಿ ಅನ್ಯಾಯವನ್ನು ಅನುಭವಿಸಬೇಕಾಗಿ ಬಂದದ್ದನ್ನು ನಾವು ತಿಳಿದಿದ್ದೇವೆ. ಝೇಯ್‌ಲಸ್‌ನನ್ನು ತಪ್ಪಾಗಿ ಅಪರಾಧಕ್ಕೆ ಸಿಲುಕಿಸಿ ಶಿಕ್ಷೆ ನೀಡಲಾಗಿತ್ತೆಂಬುದು ಬೆಳಕಿಗೆ ಬಂದಿದ್ದು ಪಿಕಾರ್ಟ್ ಎಂಬ ಗುಪ್ತಚರ ಅಧಿಕಾರಿ, ಈ ತಪ್ಪು ಶಿಕ್ಷೆಯ ಕುರಿತ ಮಾಹಿತಿ ಸಂಗ್ರಹಿಸಿದ್ದರಿಂದ ಮತ್ತು ತನ್ನ ಮೇಲೆ ಮಿಲಿಟರಿಯ ಒಳಗಿನಿಂದಲೇ ಅಪಾರ ಒತ್ತಡ ಬಂದಾಗಲೂ ಹಿಮ್ಮೆಟ್ಟದೆ ತನ್ನ ವರದಿಯನ್ನು ಹಿಂಪಡೆಯದೆ ಗಟ್ಟಿಯಾಗುಳಿದದ್ದರಿಂದ.

ಪಿಕಾರ್ಟ್‌ನ ಅಸಮ್ಮತಿ ಅತ್ಯಂತ ಮಹತ್ವಪೂರ್ಣವಾದುದಾಗಿತ್ತು, ಏಕೆಂದರೆ ಝೇಯ್‌ಲಸ್ ನಿರಪರಾಧಿಯೆಂಬ ಆತನ ವರದಿಯಿಂದಲೇ ಜಾಗತಿಕವಾಗಿ ಝೇಯ್‌ಲಸ್ ಪರವಾಗಿ ಆಂದೋಲನ ಆರಂಭವಾದದ್ದು, ಎಮಿಲ್ ಝೋಲಾನಂತಹ ಖ್ಯಾತಿವೆತ್ತ ಬರಹಗಾರರು ದನಿಯೆತ್ತಿದ್ದು ಮತ್ತು ಕೊನೆಗೆ ಝೇಯ್‌ಲಸ್‌ನ ಕ್ಷಮಾದಾನ ಸಾಧ್ಯವಾದದ್ದು. ಇಂತಹ ಬೆಳವಣಿಗೆ ಪಿಕಾರ್ಟ್‌ನ ಅತ್ಯಗತ್ಯ ಅಧಿಕಾರವಲಯದ ಭಿನ್ನಮತೀಯ ಮಧ್ಯಪ್ರವೇಶವಿಲ್ಲದೆ ಸಾಧ್ಯವೇ ಆಗುತ್ತಿರಲಿಲ್ಲ. ಹನ್ನಾ ಆರೆಂಟ್ ಗುರುತಿಸುವಂತೆ ’ಪಿಕಾರ್ಟ್ ಹೀರೋ ಅಲ್ಲ, ಹುತಾತ್ಮನಂತೂ ಅಲ್ಲವೇ ಅಲ್ಲ. ಆತನೊಬ್ಬ ಸಾರ್ವಜನಿಕ ವಿಷಯಗಳಲ್ಲಿ ಸಾಧಾರಣ ಆಸಕ್ತಿಯನ್ನಷ್ಟೇ ಹೊಂದಿದ್ದ ಸಾಮಾನ್ಯ ನಾಗರಿಕ; ಆದರೆ ಅಪಾಯದ ಸನ್ನಿವೇಶದಲ್ಲಿ (ಅದಕ್ಕಿಂತ ಒಂದೇ ಒಂದು ನಿಮಿಷ ಮೊದಲು ಕೂಡಾ ಅಲ್ಲ) ತಾನು ತನ್ನ ಪ್ರತಿದಿನದ ಕೆಲಸಗಳನ್ನು ಪ್ರಶ್ನಾತೀತವಾಗಿ ನಿಭಾಯಿಸುವಷ್ಟೇ ಸರಳವಾಗಿ ತನ್ನ ದೇಶದ ಸಮರ್ಥನೆಗಾಗಿ ಎದ್ದುನಿಲ್ಲುತ್ತಾನೆ.
ಇದಕ್ಕಾಗಿ ಆತ ಜೈಲುಶಿಕ್ಷೆಯನ್ನು ಅನುಭವಿಸಬೇಕಾಯಿತು ಮತ್ತು ಇದು ನಮಗೆ ಇಲ್ಲಿನ ಮರೆಯಲಸಾಧ್ಯರಾದ ಸಂಜೀವ್ ಭಟ್‌ರಂತಹ ಪಿಕಾರ್ಟ್‌ಗಳನ್ನು ನೆನಪಿಸುತ್ತದೆ. ಭಟ್ ಅವರು ಇನ್ನೂ ಜೈಲಿನಲ್ಲಿದ್ದಾರೆಂಬುದು ನಿಜವಾದರೂ ಅವರ ಅಸಮ್ಮತಿಯ ಪ್ರಕ್ರಿಯೆ ಅಮೂಲ್ಯವಾದುದು. ಈ ಅಧಿಕಾರಿ ’ದಾಖಲೆಗಳ ಜಾಡು’ ನಿರ್ಮಿಸಿದ ಪರಿಣಾಮವಾಗಿ ಒಳ್ಳೆಯದು ಕೆಟ್ಟದ್ದೆಲ್ಲವೂ ಇರಲಿಲ್ಲವೇನೋ ಎಂಬಂತೆ ಕಾಣೆಯಾಗುವ ’ಮರೆವಿನ ಕುಳಿ’ಗಳು ಅಸ್ತಿತ್ವದಲ್ಲಿರುವಂತೆ ಮಾಡುವುದು ಸಾಧ್ಯವಾಯಿತು. ಹನ್ನಾ ಆರೆಂಟ್ ಅವರ ಮಟ್ಟಿಗೆ ಅಸಮ್ಮತಿಯ ಪಾಠ ಸರಳವಾದದ್ದು. ಅದೇನೆಂದರೆ, ’ಭಯೋತ್ಪಾದನೆಯ ಪರಿಸ್ಥಿತಿಯ ಅಡಿಯಲ್ಲಿ’ ಬಹಳಷ್ಟು ಮಂದಿ ಮಣಿಯುತ್ತಾರೆ, ಆದರೆ ಕೆಲವರು ಮಣಿಯುವುದಿಲ್ಲ. ಮಾನವ ಮಾತ್ರರಾಗಿ ಹೇಳುವುದಾದರೆ, ಭೂಮಿಯು ಮನುಷ್ಯರು ವಾಸಿಸಲು ಯೋಗ್ಯವಾದ ಸ್ಥಳವಾಗಿ ಉಳಿದುಕೊಳ್ಳುವುದಕ್ಕೆ ಇಷ್ಟೇ ಸಾಕು; ಇನ್ನೇನೂ ಬೇಕಾಗಿಲ್ಲ, ಇನ್ನೇನನ್ನೂ ನಿರೀಕ್ಷಿಸುವುದೂ ಸಾಧ್ಯವಿಲ್ಲ.
ಧೈರ್ಯವಂತ ಪೊಲೀಸ್ ಅಧಿಕಾರಿಗಳಾದ ಆರ್.ಬಿ.ಶ್ರೀಕುಮಾರ್, ಸಂಜೀವ್ ಭಟ್ ಮತ್ತು ನ್ಯಾಯಾಧೀಶರಾದ ಜ್ಯೋತ್ಸ್ನಾ ಯಾಜ್ಞಿಕ್, ಅಬ್ದುಲ್ ರಶೀದ್ ಮಲಿಕ್ ಅವರಂತಹವರು ವೃತ್ತಿ ನಿಷ್ಟೆಯೆಂಬ ಪರಿಕಲ್ಪನೆಯನ್ನು, ಸಂವಿಧಾನಕ್ಕೆ ನಿಷ್ಟೆಯೆಂಬ ನಂಬಿಕೆಯನ್ನು ಜೀವಂತವಾಗಿರಿಸುತ್ತಾರೆ; ಹಾಗೆಯೇ ಘನತೆ ಮತ್ತು ಮಾನವೀಯತೆಗಳು ಮರೆತು ಹೋಗದಂತೆ ಕಾಪಿಡುತ್ತಾರೆ. ಇಂತಹವರು, ಪ್ರಭುತ್ವಗಳ ಕಾನೂನುವಿರುದ್ಧವಾದ ಒತ್ತಡಗಳು ಏನೇ ಇದ್ದರೂ, ಅಧಿಕಾರಶಾಹಿಯ ಮತ್ತು ನ್ಯಾಯಾಂಗದ ಭಾಗವಾಗಿಯೇ ಇದ್ದರೂ ತಾವು ಹೇಗೆ ನಡೆದುಕೊಳ್ಳಬಹುದು ಎಂಬುದಕ್ಕೆ ಒಂದು ಮಾದರಿಯನ್ನು ನಿರ್ಮಿಸಿದ್ದಾರೆ ಮತ್ತು ಮುಂದಕ್ಕೂ ಈ ವಲಯಗಳೊಳಗಿನವರನ್ನು ಸಂವಿಧಾನಕ್ಕೆ ಬದ್ಧರಾಗಿ ನಡೆದುಕೊಳ್ಳಲು ಪ್ರೇರೇಪಿಸುತ್ತಾರೆಂಬುದು ಆಶಯ.
(ಕನ್ನಡಕ್ಕೆ): ಮಲ್ಲಿಗೆ

ಅರವಿಂದ್ ನಾರಾಯಣ್
ಸಂವಿಧಾನ ತಜ್ಞರು, ಪರ್ಯಾಯ ಕಾನೂನುವೇದಿಕೆ (ಎಎಲ್‌ಎಫ್‌ನ) ಸ್ಥಾಪಕ ಸದಸ್ಯರು
ಇದನ್ನೂ ಓದಿ: ಆರ್ ಎನ್ ರವಿ ವರ್ಗಾವಣೆಯೊಂದಿಗೆ ನಾಗ ಶಾಂತಿ ಪ್ರಕ್ರಿಯೆಯಲ್ಲಿನ ಪ್ರತಿರೋಧ ದೂರವಾಗುವುದೇ?


