ವಿಚ್ಛೇದನ ಪ್ರಕರಣದಲ್ಲಿ ಜೀವನಾಂಶದ ಮೊತ್ತವನ್ನು ನಿರ್ಧರಿಸುವ ಅಂಶಗಳನ್ನು ಸುಪ್ರೀಂ ಕೋರ್ಟ್ ಬುಧವಾರ ಪಟ್ಟಿ ಮಾಡಿದೆ. ಪ್ರವೀಣ್ ಕುಮಾರ್ ಜೈನ್ ಮತ್ತು ಅಂಜು ಜೈನ್ ಅವರ ವಿಚ್ಛೇದನ ಪ್ರಕ್ರಿಯೆಯಲ್ಲಿ ಒಂದಷ್ಟು ಹೊಸ ಮಾರ್ಗಸೂಚಿಗಳನ್ನು ನೀಡಿದೆ.
ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ನ್ಯಾಯಮೂರ್ತಿ ಪ್ರಸನ್ನ ವಿ ವರಾಳೆ ಅವರ ಪೀಠವು ಪ್ರಕರಣದ ಅಧ್ಯಕ್ಷತೆ ವಹಿಸಿ, ಪ್ರವೀಣ್ ಕುಮಾರ್ ಜೈನ್ ಅವರಿಗೆ ₹5 ಕೋಟಿ ಜೀವನಾಂಶ ನೀಡುವಂತೆ ಆದೇಶಿಸಿದೆ. ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ವಿಚ್ಛೇದನದ ನಂತರ ಮಹಿಳೆಗೆ ಜೀವನಾಂಶವಾಗಿ ಮೊತ್ತವನ್ನು ನಿರ್ಧರಿಸಲು ಪೀಠವು ಎಂಟು ಅಂಶಗಳ ಸೂತ್ರವನ್ನು ಹಾಕಿತು.
- ಗಂಡ ಮತ್ತು ಹೆಂಡತಿಯ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿ
- ಭವಿಷ್ಯದಲ್ಲಿ ಹೆಂಡತಿ ಮತ್ತು ಮಕ್ಕಳ ಮೂಲಭೂತ ಅಗತ್ಯಗಳು
- ಎರಡೂ ಪಕ್ಷಗಳ ಅರ್ಹತೆ ಮತ್ತು ಉದ್ಯೋಗ
- ಆದಾಯ ಮತ್ತು ಆಸ್ತಿಗಳ ಮೂಲಗಳು
- ಅತ್ತೆಯ ಮನೆಯಲ್ಲಿ ವಾಸಿಸುತ್ತಿರುವಾಗ ಹೆಂಡತಿಯ ಜೀವನ ಮಟ್ಟ
- ಹೆಂಡತಿಯ ಉದ್ಯೋಗದ ಸ್ಥಿತಿ
- ಕೆಲಸ ಮಾಡದ ಹೆಂಡತಿಗೆ ಕಾನೂನು ಹೋರಾಟಕ್ಕೆ ಸಮಂಜಸವಾದ ಮೊತ್ತ
- ನಿರ್ವಹಣೆ ಭತ್ಯೆಯೊಂದಿಗೆ ಗಂಡನ ಆರ್ಥಿಕ ಸ್ಥಿತಿ, ಅವನ ಗಳಿಕೆ ಮತ್ತು ಇತರ ಜವಾಬ್ದಾರಿಗಳು ಹೇಗಿರುತ್ತವೆ
ಅತುಲ್ ಸುಭಾಷ್ ಎಂಬ ಬೆಂಗಳೂರಿನ ಟೆಕ್ಕಿಯ ಆತ್ಮಹತ್ಯೆಯ ನಂತರ ಜೀವನಾಂಶದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿರುವ ನಡುವೆ ಈ ಹೊಸ ಮಾರ್ಗಸೂಚಿಗಳು ಬಂದಿದೆ. ಅವರು ವೈವಾಹಿಕ ಸಮಸ್ಯೆಗಳಿಂದ ಹಲವು ವರ್ಷಗಳ ಕಾಲ ಭಾವನಾತ್ಮಕ ಯಾತನೆ ಅನುಭವಿಸಿರುವ ಬಗ್ಗೆ ಆರೋಪಿಸಿದರು.
ಸುಪ್ರೀಂ ‘ಮಾರ್ಗಸೂಚಿ’ಗಳ ಬಗ್ಗೆ ವಕೀಲರು ಹೇಳೋದೇನು?
ವಿಚ್ಛೇದನ ಪ್ರಕರಣಗಳಲ್ಲಿ ಜೀವನಾಂಶ ಹಾಗೂ ಬೆಂಗಳೂರಿನ ಟೆಕ್ಕಿ ಆತ್ಮಹತ್ಯೆ ಪ್ರಕರಣದ ಬಗ್ಗೆ ಹೈಕೋರ್ಟ್ ವಕೀಲರಾದ ರಾಜಲಕ್ಷ್ಮಿ ಅಂಕಲಗಿ ‘ನಾನುಗೌರಿ.ಕಾಂ’ ಜೊತೆಗೆ ಮಾತನಾಡಿದರು.
ಹಿಂದೆ ಬಹಳಷ್ಟು ಹೆಣ್ಣುಮಕ್ಕಳು ಗೃಹಿಣಿಯರಾಗಿ ಇರುತ್ತಿದ್ದರು, ಕೆಲವರು ಮದುವೆ-ಮಕ್ಕಳಾದ ಬಳಿಕ ತಮ್ಮ ಕೆಲಸ ಬಿಡುತ್ತಿದ್ದರು. ಇಂತ ಪ್ರಕರಣಗಳಲ್ಲಿ ಹೆಂಡತಿ-ಮಕ್ಕಳಿಗೆ ಜೀವನಾಂಶ ಕೊಡಬೇಕು ಅಥವಾ ಒನ್‌ಟೈಂ ಸೆಟಲ್‌ಮೆಂಟ್ ಕೊಡಬೇಕು ಎಂದು ಕಾನೂನು ಹೇಳುತ್ತದೆ. ಆದರೆ, ಕೆಲವೊಂದು ಪ್ರಕರಣಗಳಲ್ಲಿ ಈ ಅಂಶ ದುರ್ಬಳಕೆಯೂ ಆಗಿದೆ. ಕೆಲವೊಬ್ಬರು ವರದಕ್ಷಿಣೆ ದೂರು ದಾಖಲಿಸಿ, ಬ್ಲಾಕ್‌ಮೇಲ್ ಮಾಡುವ ಪ್ರಕರಣಗಳು ನಡೆದವು. ಆದರೆ, ಯಾರೋ ಕೆಲವೊಬ್ಬರು ಮಾಡಿದರು ಎನ್ನುವ ಕಾರಣಕ್ಕೆ, ಎಲ್ಲರೂ ಮಾಡಿದರು ಎಂದು ಸಾಮಾನ್ಯೀಕರಿಸುವುದಕ್ಕೆ ಸಾಧ್ಯವಿಲ್ಲ. ಕಾನೂನಿನ ದುರ್ಬಳಕೆ ಆಗಿದೆ ಎಂಬುದನ್ನು ಕೋರ್ಟ್ ಕೂಡ ಹೇಳುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ದುರ್ಬಳಕೆಯೂ ಆಗಿದೆ.
ವಿಚ್ಛೇದನ ಪ್ರಕರಣಗಳಲ್ಲಿ ಜೀವನಾಂಶಕ್ಕಾಗಿ ಅವೈಜ್ಞಾನಿಕವಾಗಿ ಬೇಡಿಕೆ ಇಡಲಾಗುತ್ತಿತ್ತು. ಕೆಲವೊಮ್ಮೆ ಪತಿಯ ಸಂಬಳ ಕಡಿಮೆ ಇದ್ದರೂ, ಪತ್ನಿಯ ಅಗತ್ಯವಿರುವಷ್ಟು ಹಣ ಕೊಡಬೇಕು ಎಂದು ಕೇಳುವುದಕ್ಕೆ ಶುರು ಮಾಡಿದ್ದರು. ವ್ಯಕ್ತಿಯೊಬ್ಬರಿಗೆ ಎಷ್ಟು ಅವಷ್ಯಕತೆ ಇದೆ, ಆ ಆಧಾರದಲ್ಲಿ ಜೀವನಾಂಶ ಕೊಡಬೇಕಾ..? ಅಥವಾ ಯಾವ ಆಧಾರದ ಮೇಲೆ ಪರಿಹಾರ ಕೊಡಬೇಕು ಎಂಬ ಪ್ರಶ್ನೆ ಬಂದಾಗ, ತನ್ನ ಹಿಂದಿನ ತೀರ್ಪುಗಳಲ್ಲಿ ಸುಪ್ರೀಂ ಕೋರ್ಟ್ ಕೆಲವು ಮಾರ್ಗಸೂಚಿಗಳನ್ನು ನೀಡಿದೆ.
ಗಂಡ-ಹೆಂಡತಿ ಜೊತೆಯಲ್ಲಿದ್ದಾಗ ಅವರು ಯಾವ ರೀತಿ ಖರ್ಚು ಮಾಡುತ್ತಿದ್ದರು? ಅವರ ಜೀವನ ಮಟ್ಟ ಹೇಗಿತ್ತೋ, ಅವರು ದೂರವಾದ ಬಳಿಕವೂ ಹೆಂಡತಿ ಮತ್ತು ಮಕ್ಕಳು ಅದೇ ರೀತಿಯ ಜೀವನ ನಡೆಸುವಷ್ಟು ಜೀವನಾಂಶ ಕೊಡಬೇಕು ಎಂದು ಕೋರ್ಟ್ ಹೇಳುತ್ತದೆ. ಅಂದರೆ, ಆಕೆ ಗಂಡನ ಮನೆಯಲ್ಲಿ ಹೇಗೆ ಜೀವನ ಮಾಡುತ್ತಿರೋ, ಅಲ್ಲಿಂದ ಹೊರಗೆ ಬಂದಾಗಲು ಕೂಡಾ ಅದೇ ರೀತಿಯ ಜೀವನಮಟ್ಟ ನಡೆಸಲು ಅನುವು ಮಾಡಿಕೊಡುತ್ತದೆ. ಇದ್ದಕ್ಕಿಂದ್ದಂತೆಯೇ ಶ್ರೀಮಂತಿಕೆಯಿಂದ ಬಡತನಕ್ಕೆ ಇಳಿದರೆ, ಮಕ್ಕಳ ಮೇಲೆ ಮಾನಸಿಕ ಪರಿಣಾಮ ಬೀರುತ್ತದೆ ಎಂಬುದನ್ನು ಕೋರ್ಟ್ ಗಮನಿಸಿದೆ. ಇದೆಲ್ಲಾ ಆಗಬಾರದು ಎಂಬುದು ಕೋರ್ಟ್ ಉದ್ದೇಶವಾಗಿದೆ.
ಆ ಬಳಿಕವೂ, ಈ ವಿಚಾರದಲ್ಲಿ ಬಹಳಷ್ಟು ವಿಷಯಗಳು ಚರ್ಚೆಗೆ ಬಂದಿವೆ. ಅಲ್ಲಿ ಕುಟುಂಬ ಸಾಲ ಮಾಡಿ ಜೀವನ ನಡೆಸುತ್ತಿತ್ತಾ..? ಅಥವಾ ನಿಜವಾಗಲೂ ಅಷ್ಟೊಂದು ಗಳಿಸುತ್ತಿದ್ದರಾ ಎಂಬ ಚರ್ಚೆಯೂ ನಡೆದಿದೆ. ಕೆಲವು ಪ್ರಕರಣಗಳಲ್ಲಿ ಇಬ್ಬರೂ ತಮ್ಮ ತಮ್ಮ ನೈಜ ಆದಾಯವನ್ನು ಮುಚ್ಚಿಡುವುದಕ್ಕೆ ಆರಂಭಿಸಿದರು. ಒಂದು ಲಕ್ಷ ರೂಪಾಯಿ ಸಂಬಳ ಬರುತ್ತಿದ್ದರೆ, ಐವತ್ತು ಸಾವಿರ ಎಂದು ಹೇಳುವುದು; ನಲವತ್ತು ಬರುತ್ತದೆ ಎಂದು ಹೇಳುವುದಕ್ಕೆ ಆರಂಭಿಸಿದರು. ನೈಜ ಮಾಹಿತಿ ಸಂಗ್ರಹಿಸಲು ವರ್ಷಗಟ್ಟಲೆ ಹಿಡಿಯುತ್ತಿತ್ತು. ಇದನ್ನೆಲ್ಲಾ ತಪ್ಪಿಸುವ ಸಲುವಾಗಿ, 2020ರಲ್ಲಿ ರಜನೀಶ್-ನೇಹಾ ಪ್ರಕರಣದಲ್ಲಿ ಕೋರ್ಟ್ ಹೊಸ ತೀರ್ಪು ನೀಡಿದೆ. ಯಾವ ಆಧಾರದಲ್ಲಿ ಜೀವಾನಾಂಶ ನಿರ್ಧರಿಸಬೇಕು ಎಂದು ಹೇಳಿದೆ.
ಜೀವನಾಂಶ ಅಥವಾ ಸೆಟಲ್‌ಮೆಂಟ್ ಕೇಳುವವರು ಇಬ್ಬರೂ ವ್ಯಕ್ತಿಗಳು ಕೋರ್ಟ್ ಎದುರಿಗೆ ತಮ್ಮ ಸಂಪೂರ್ಣ ಆದಾಯ ಹಾಗೂ ಆಸ್ತಿ ವಿವರದ ಅಫಿಡವಿಟ್ ನೀಡಬೇಕು. ಇಬ್ಬರೂ ತಮ್ಮತಮ್ಮ ವಿದ್ಯಾರ್ಹತೆ ಪ್ರಮಾಣಪತ್ರ, ಸ್ಯಾಲರಿ ಸ್ಲಿಪ್ ಹಾಗೂ ಮೂರು ವರ್ಷಗಳ ಬ್ಯಾಂಕ್ ಸ್ಟೇಟ್‌ಮೆಂಟ್ ಕೊಡಬೇಕು. ಇಬ್ಬರಿಗೂ ಯಾವುದಾದರೂ ರೋಗರುಜಿನ ಇದ್ದರೆ, ಅದರ ಮಾಹಿಯನ್ನೂ ಕೊಡಬೇಕು. ಇಬ್ಬರ ಮೇಲೆ ಎಷ್ಟು ಜನ ಅವಲಂಬಿತರಾಗಿದ್ದಾರೆ ಎಂಬ ಸಂಪೂರ್ಣ ಮಾಹಿತಿ ನೀಡಬೇಕು. ಅವಲಂಬಿತರಿಗೆ ಯಾವುದಾದರೂ ಆದಾಯವಿದ್ದರೆ, ಅದರ ಮಾಹಿತಿಯನ್ನೂ ಕೋರ್ಟ್‌ಗೆ ನೀಡಬೇಕು. ಒಟ್ಟಾರೆ, ವ್ಯಕ್ತಿಯ ಒಟ್ಟು ಆದಾಯವನ್ನು ಅಂದಾಜು ಮಾಡಲು ಬೇಕಾಗಿರುವ ಎಲ್ಲ ಮಾಹಿತಿಯನ್ನೂ ಕೋರ್ಟ್‌ಗೆ ಕೊಡಬೇಕಾಗುತ್ತದೆ.
ಕೋರ್ಟ್ ಇಬ್ಬರ ಮಾಹಿತಿಯನ್ನೂ ಪರಿಶೀಲಿಸಿ, ಎಷ್ಟು ಜೀವನಾಂಶ ಕೊಡಬೇಕು ಎಂದು ನಿರ್ಧರಿಸುತ್ತದೆ. ವ್ಯಕ್ತಿಯ ಸಂಬಳದಲ್ಲಿ ಶೇ.30ರಿಂದ 40ರಷ್ಟು ಹಣವನ್ನು ಜೀವನಾಂಶವಾಗಿ ಕೊಡಬೇಕಾಗುತ್ತದೆ ಎಂದು ನಿಯಮ ಮಾಡಿದೆ. ಹೀಗೆ ಕೊಡುವಾಗ, ಹೆಂಡತಿಯ ವಿದ್ಯಾರ್ಹತೆ ಹಾಗೂ ಆದಾಯವನ್ನೂ ಪರಿಶೀಲಿಸುತ್ತದೆ. ಗಂಡನಷ್ಟೇ ಹೆಂಡತಿಯೂ ಆದಾಯ ಪಡೆಯುತ್ತಿದ್ದರೆ, ಪರಿಹಾರ ಕೊಡುವ ಅಗತ್ಯವಿಲ್ಲ. ಆದರೆ, ಮಕ್ಕಳಿಗೆ ಜೀವನಾಂಶ ಕೊಡಬೇಕು. ಮಕ್ಕಳ ಪೋಷಣೆ ಸಹಜವಾಗಿ ತಂದೆಯ ಜವಾಬ್ದಾರಿ ಎಂದು ಕೋರ್ಟ್ ಈ ಪ್ರಕರಣದಲ್ಲಿ ಹೇಳಿತ್ತು. ಹೆಂಡತಿಗೆ ಉತ್ತಮ ಆದಾಯವಿದ್ದರೆ, ಆಕೆಯೂ ಕೂಡ ಮಕ್ಕಳ ವಿದ್ಯಾಭ್ಯಾಸಕ್ಕೆ ಪಾಲು ನೀಡಬೇಕು ಎಂದು ಹೇಳಿತ್ತು.
ಖಾಸಗಿಯಾಗಿ ಹಾಗೂ ಆನ್‌ಲೈನ್ ಜಾಬ್ ಮಾಡುವ ಬಹಳಷ್ಟು ಜನರಿಗೆ ಸ್ಯಾಲರಿ ಸ್ಲಿಪ್ ಇರುವುದಿಲ್ಲ. ಅದನ್ನೆಲ್ಲಾ ಕೆಲವರು ಮುಚ್ಚಿಡುತ್ತಾರೆ; ಇದು ಸಾಮಾನ್ಯವಾಗಿದೆ. ಇದನ್ನೆಲ್ಲಾ ಪರಿಶೀಲಿಸಿ ತೀರ್ಪು ನೀಡಲು ಕೋರ್ಟ್‌ಗೆ ಸಾಕಷ್ಟು ಸಮಯ ಹಿಡಿಯುತ್ತದೆ. ಈ ಅವಧಿಯಲ್ಲಿ ಕಕ್ಷಿದಾರರು ಸಾಕಷ್ಟು ನೋವು ಅನುಭವಿಸುತ್ತಾರೆ. ಈಗ ನಾವು ಒಬ್ಬೇಒಬ್ಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದರ ಬಗ್ಗೆ ನಾವು ಚರ್ಚೆ ಮಾಡುತ್ತಿದ್ದೇವೆ. ಆ ರೀತಿ ಬಹಳಷ್ಟು ಹೆಣ್ಣುಮಕ್ಕಳಿಗೆ ಹಿಂಸೆ ನೀಡುವ ಸಾವಿರಾರು ಪುರುಷರಿದ್ದಾರೆ.
ಕೇಸ್ ನಡೆಯುವಾಗ ಸಾಕಷ್ಟು ಹೆಣ್ಣುಮಕ್ಕಳು ಪಾತ್ರೆ ತಿಕ್ಕುವ ಕೆಲಸವನ್ನೂ ಮಾಡುತ್ತಾರೆ. ಅವರ ಸ್ಥಿತಿ ಯಾರಿಗೂ ತಿಳಿಯುವುದಿಲ್ಲ. ಎರಡೂ ಕಡೆಯಿಂದಲೂ ದೌರ್ಜನ್ಯ ಇರುತ್ತದೆ. ಸಹಜವಾಗಿಯೇ ಹೆಣ್ಣು ಮಕ್ಕಳಿಗೆ ಎಲ್ಲವನ್ನೂ ಸಹಿಸಿಕೊಳ್ಳುತ್ತಾರೆ. ‘ಕಾನೂನೆಲ್ಲಾ ಹೆಂಗಸರ ಪರವಾಗಿವೆ, ನಮಗೆ ಏನೂ ಇಲ್ಲ ಎಂದು ಗಂಡಸರ ತಲೆಯೊಳಗೆ ಕುಳಿತಿರುವುದರಿಂದ ಅವರು ಬೇಗ ದುರ್ಬಲರಾಗುತ್ತಾ. ಸಮಾಜದಲ್ಲಿ ಜನ ಅವರ ಬಗ್ಗೆ ಮಾತನಾಡುವುದನ್ನೂ ಕೂಡ ತಡೆದುಕೊಳ್ಳುವುದಕ್ಕೆ ಸಾಧ್ಯವಿಲ್ಲ. ಆದ್ದರಿಂದ, ಅವರು ಆತ್ಮಹತ್ಯೆ ಬೇಗನೆ ಮಾಡಿಕೊಳ್ಳುತ್ತಾರೆ. ಎನ್‌ಸಿಆರ್‌ಬಿ ಪ್ರಕಾರ, ಕೌಟುಂಬಿಕ ಕಲಹದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡವರೆ ಹೆಚ್ಚು. ಈ ಎಲ್ಲವನ್ನೂ ಗಮನಿಸಿದ ಸುಪ್ರೀಂಕೋರ್ಟ್, ನಿನ್ನೆ ಒಂದಷ್ಟು ಮಾರ್ಗಸೂಚಿಗಳನ್ನು ನೀಡಿದೆ. ಇವೆಲ್ಲಾ ಹೊಸತಲ್ಲ, ಈ ಹಿಂದೆಯೂ ಸಾಕಷ್ಟು ಮಾರ್ಗಸೂಚಿಗಳನ್ನು ನೀಡಿದೆ. ಇದು ರಜನೀಶ್-ನೇಹಾ ಪ್ರಕರಣದ ಮುಂದುವರಿದ ಭಾಗವಷ್ಟೆ.
ಇದನ್ನೂ ಓದಿ; ‘ಒಂದು ರಾಷ್ಟ್ರ, ಒಂದು ಚುನಾವಣೆ’ ಮಸೂದೆಗೆ ಅನುಮೋದನೆ ನೀಡಿದ ಕೇಂದ್ರ ಸಚಿವ ಸಂಪುಟ – ವರದಿ


