ತಮಿಳುನಾಡು ಸರ್ಕಾರ ಮತ್ತು ಡಿಎಂಕೆ ಸಂಸದರನ್ನು ‘ಅನಾಗರಿಕರು’ ಎಂದು ಕರೆದಿರುವ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ವಿರುದ್ದ ಸಂಸದೆ ಕನಿಮೋಳಿ ಲೋಕಸಭೆಯಲ್ಲಿ ಮಂಗಳವಾರ (ಮಾ.11) ಹಕ್ಕುಚ್ಯುತಿ ನೋಟಿಸ್ ಸಲ್ಲಿಸಿದ್ದು, ಕ್ಷಮೆಯಾಚಿಸುವಂತೆ ಆಗ್ರಹಿಸಿದರು.
“ತಮಿಳುನಾಡು ಮತ್ತು ಅಲ್ಲಿನ ಜನರನ್ನು ‘ಅನಾಗರಿಕರು’ ಎಂದು ಕರೆದಿರುವ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಅವಹೇಳನ ಹೇಳಿಕೆಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ಸಚಿವ ಪ್ರಧಾನ್ ತಕ್ಷಣ ಕ್ಷಮೆಯಾಚಿಸಬೇಕೆಂದು ಡಿಎಂಕೆ ಮತ್ತು 8 ಕೋಟಿ ತಮಿಳರ ಪರವಾಗಿ ನಾನು ಒತ್ತಾಯಿಸುತ್ತೇನೆ” ಎಂದು ಕನಿಮೋಳಿ ಹೇಳಿದರು.
“ಪಿಎಂಶ್ರೀ ಯೋಜನೆ ಸಂಬಂಧ ಒಪ್ಪಂದಕ್ಕೆ ತಮಿಳುನಾಡು ಸರ್ಕಾರ ಆರಂಭದಲ್ಲಿ ಸಹಿ ಹಾಕಲು ಒಪ್ಪಿಕೊಂಡಿತ್ತು. ನಂತರ ನಿಲುವು ಬದಲಿಸಿದೆ ಎಂದು ಸಚಿವ ಪ್ರಧಾನ್ ಸುಳ್ಳು ಹೇಳಿದ್ದಾರೆ. ಸಚಿವರು ತಮ್ಮ ಮತ್ತು ತಮಿಳುನಾಡು ಸಂಸದರ ನಡುವಿನ ಸಭೆಯನ್ನು ತಪ್ಪಾಗಿ ನಿರೂಪಿಸಿದ್ದಾರೆ” ಎಂದು ಕನಿಮೋಳಿ ಕಿಡಿಕಾರಿದರು.
ಕನಿಮೋಳಿ ಸಲ್ಲಿಸಿರುವ ಹಕ್ಕುಚ್ಯುತಿ ನೋಟಿಸ್ ಅನ್ನು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಪರಿಶೀಲಿಸಲಿದ್ದಾರೆ.
ಸೋಮವಾರ (ಮಾ.10) ಲೋಕಸಭೆಯಲ್ಲಿ ಮಾತನಾಡಿದ ಸಚಿವ ಪ್ರಧಾನ್ “ಕೇಂದ್ರ, ರಾಜ್ಯ ಸರ್ಕಾರಗಳು ಮತ್ತು ಸ್ಥಳೀಯ ಸಂಸ್ಥೆಗಳು ನಿರ್ವಹಿಸುವ ಶಾಲೆಗಳನ್ನು ಬಲಪಡಿಸುವ ಕೇಂದ್ರ ಪ್ರಾಯೋಜಿತ ಯೋಜನೆಯಾದ ಪಿಎಂ ಸ್ಕೂಲ್ಸ್ ಫಾರ್ ರೈಸಿಂಗ್ ಇಂಡಿಯಾ (ಪಿಎಂಶ್ರೀ) ಅನುಷ್ಠಾನಗೊಳಿಸುವ ಸಂಬಂಧ ಡಿಎಂಕೆ ನೇತೃತ್ವದ ತಮಿಳುನಾಡು ಸರ್ಕಾರ ತನ್ನ ನಿಲುವನ್ನು ಬದಲಾಯಿಸಿದೆ. ಈ ಮೂಲಕ ಅಪ್ರಾಮಾಣಿಕರಾದ ಅವರು ತಮಿಳುನಾಡಿನ ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳು ಮಾಡುತ್ತಿದ್ದಾರೆ. ರಾಜಕೀಯ ಮಾಡುತ್ತಿದ್ದಾರೆ” ಎಂದು ಹೇಳಿದ್ದರು.
ಇದಕ್ಕೆ ಡಿಎಂಕೆ ಸಂಸದರು ತೀವ್ರ ವಿರೋಧ ವ್ಯಕ್ತಪಡಿಸಿ ಸದನದ ಬಾವಿಗಿಳಿದು ಪ್ರತಿಭಟಿಸಿದ ಹಿನ್ನೆಲೆ, ಸ್ಪೀಕರ್ ಸದನವನ್ನು 30 ನಿಮಿಷಗಳ ಕಾಲ ಮುಂದೂಡಿದ್ದರು.
ಡಿಎಂಕೆ ಸಂಸದರ ಪ್ರತಿಭಟನೆಯ ನಡುವೆ ಮಾತು ಮುಂದುವರಿಸಿದ್ದ ಪ್ರಧಾನ್, “ತ್ರಿಭಾಷಾ ನೀತಿ, ಎನ್‌ಇಪಿ, ಪಿಎಂಶ್ರೀ ಯೋಜನೆ ಹೀಗೆ ಎಲ್ಲದಕ್ಕೂ ಡಿಎಂಕೆ ಸಂಸದರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಮೂಲಕ ಅವರು ರಾಜಕೀಯ ಮಾಡುತ್ತಿದ್ದಾರೆ. ಅವರು ‘ಪ್ರಜಾಪ್ರಭುತ್ವದ ವಿರೋಧಿಗಳು, ಅನಾಗರಿಕರು’ ಎಂದಿದ್ದರು.
ಸಂಸದೆ ಕನಿಮೋಳಿ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ ಬಳಿಕ ಪ್ರಧಾನ್ ತಮ್ಮ ಹೇಳಿಕೆ ಹಿಂಪಡೆಯುವುದಾಗಿ ಹೇಳಿದ್ದರು.
ಸಂಸತ್ ಹೊರಗೆ ಡಿಎಂಕೆ ಸಂಸದರಿಂದ ಪ್ರತಿಭಟನೆ
ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿಕೆ ಖಂಡಿಸಿ, ಎನ್‌ಇಪಿ ಮತ್ತು ತ್ರಿಭಾಷಾ ನೀತಿ ಸೇರಿದಂತೆ ವಿವಿಧ ವಿಷಯಗಳನ್ನು ಮುಂದಿಟ್ಟುಕೊಂಡು ಡಿಎಂಕೆ ಸಂಸದರು ಇಂದು (ಮಾ.11) ಸಂಸತ್ ಭವನದ ಹೊರಗೆ ಪ್ರತಿಭಟನೆ ನಡೆಸಿದರು.
ಡಿಎಂಕೆಯ ಬಹುತೇಕ ಸಂಸದರು ಕಪ್ಪು ಬಟ್ಟೆ ಧರಿಸಿದ್ದರು, ಕೈಯಲ್ಲಿ ಭಿತ್ತಿಪತ್ರ ಹಿಡಿದು, ಕೇಂದ್ರ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.


