ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ರವನೀತ್ ಸಿಂಗ್ ಬಿಟ್ಟು ಅವರು ಹಿಂದಿಯಲ್ಲಿ ಬರೆದ ಪತ್ರಕ್ಕೆ ಡಿಎಂಕೆ ನಾಯಕ ಮತ್ತು ರಾಜ್ಯಸಭಾ ಸಂಸದ ಪುದುಕ್ಕೊಟ್ಟೈ ಎಂಎಂ ಅಬ್ದುಲ್ಲಾ ಅವರು ಶುಕ್ರವಾರ ತಮಿಳಿನಲ್ಲಿ ಉತ್ತರಿಸಿದ್ದು, “ನನಗೆ ಆ ಪತ್ರದಲ್ಲಿನ ಒಂದು ಪದವೂ ಅರ್ಥವಾಗಿಲ್ಲ” ಎಂದು ಹೇಳಿದ್ದಾರೆ.
ಸಚಿವ ಸಿಂಗ್ ಅವರು ಅಬ್ದುಲ್ಲಾ ಅವರಿಗೆ ಬರೆದ ಪತ್ರವು ಆಹಾರದ ಗುಣಮಟ್ಟ ಮತ್ತು ರೈಲುಗಳಲ್ಲಿನ ಶುಚಿತ್ವಕ್ಕೆ ಸಂಬಂಧಿಸಿದಂತೆ ಅಬ್ದುಲ್ಲಾ ಅವರು ಎತ್ತಿರುವ ಪ್ರಶ್ನೆಗಳಿಗೆ ಸಂಬಂಧಿಸಿತ್ತು.
ಎರಡೂ ಪತ್ರಗಳ ಪ್ರತಿಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ ಅಬ್ದುಲ್ಲಾ, “ಕೇಂದ್ರದ ರಾಜ್ಯ ಖಾತೆ ಸಚಿವರ ಕಚೇರಿಯ ಅಧಿಕಾರಿಗಳಿಗೆ ನಮಗೆ ಹಿಂದಿ ಬಳಸಲು ಸಾಧ್ಯವಿಲ್ಲ ಎಂದು ಹಲವಾರು ಬಾರಿ ಹೇಳಿದ್ದರೂ, ಅವರು ಇನ್ನೂ ಅದೇ ಭಾಷೆಯಲ್ಲಿ ಪತ್ರಗಳನ್ನು ಕಳುಹಿಸುತ್ತಿದ್ದಾರೆ” ಎಂದಿದ್ದಾರೆ.
“ರೈಲ್ವೆ ಖಾತೆ ರಾಜ್ಯ ಸಚಿವರ ಕಚೇರಿಯ ಪತ್ರವು ಯಾವಾಗಲೂ ಹಿಂದಿಯಲ್ಲಿರುತ್ತದೆ. ನಾನು ಅವರ ಕಚೇರಿಯಲ್ಲಿ ನಿಯೋಜಿಸಲಾದ ಅಧಿಕಾರಿಗಳಿಗೆ ಕರೆ ಮಾಡಿ ನನಗೆ ಹಿಂದಿ ಗೊತ್ತಿಲ್ಲ, ದಯವಿಟ್ಟು ಇಂಗ್ಲಿಷ್‌ನಲ್ಲಿ ಪತ್ರ ಕಳುಹಿಸಿ ಎಂದಿದ್ದಾನೆ. ಆದರೆ, ಮತ್ತೆ ಹಿಂದಿಯಲ್ಲಿ ಪತ್ರ ಕಳುಹಿಸಲಾಗಿದೆ. ಹಾಗಾಗಿ, ನಾನು ಅವರು ಅರ್ಥಮಾಡಿಕೊಳ್ಳುವ ರೀತಿಯಲ್ಲಿ ಉತ್ತರವನ್ನು ಕಳುಹಿಸಿದ್ದೇನೆ” ಎಂದು ಅಬ್ದುಲ್ಲಾ ತಿಳಿಸಿದ್ದಾರೆ.
மாண்புமிகு.ரயில்வே இணை அமைச்சர் அவர்களின் அலுவலகத்தில் இருந்து எப்போதும் இந்தியில்தான் கடிதம் வருகிறது. அவரது அலுவலக அதிகாரிகளை அழைத்து “எனக்கு இந்தி தெரியாததால் ஆங்கிலத்தில் கடிதத்தை அனுப்புங்கள்” என்று சொல்லியும் மீண்டும் மீண்டும் இந்தியிலேயே கடிதம் வருகிறது. தற்போது அவருக்கு… pic.twitter.com/1kekbfuQdD
— Pudukkottai M.M.Abdulla (@pudugaiabdulla) October 25, 2024
ಇನ್ನು ಮುಂದೆ ಇಂಗ್ಲಿಷ್‌ನಲ್ಲಿ ಪತ್ರಗಳನ್ನು ಕಳುಹಿಸಿ ಎಂದು ಅಬ್ದುಲ್ಲಾ ಅವರು ಸಚಿವರಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.
ತಮಿಳುನಾಡಿ ಡಿಎಂಕೆ ಸರ್ಕಾರವು ಕೇಂದ್ರದ ವಿರುದ್ದ ಸದಾ ಹಿಂದಿ ಹೇರಿಕೆಯ ಆರೋಪ ಮಾಡುತ್ತಿರುತ್ತದೆ. ಇತ್ತೀಚೆಗೆ ಚೆನ್ನೈ ದೂರದರ್ಶನ ಕೇಂದ್ರದಲ್ಲಿ ಹಿಂದಿ ಮಾಸಾಚರಣೆಯ ಸಮಾರೋಪ ಸಮಾರಂಭ ನಡೆಸಿದ್ದಕ್ಕೆ ಸಿಎಂ ಎಂ.ಕೆ ಸ್ಟಾಲಿನ್ ಅವರು ರಾಜ್ಯಪಾಲರ ವಿರುದ್ದ ಕಿಡಿಕಾರಿದ್ದರು.
“ಸ್ಥಳೀಯ ಭಾಷೆಗಳಿಗೆ ಬದಲಾಗಿ ಹಿಂದಿಯನ್ನು ಇಂಗ್ಲಿಷ್‌ಗೆ ಪರ್ಯಾಯವಾಗಿ ಸ್ವೀಕರಿಸಬೇಕು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗೆ ಈ ಹಿಂದೆ ಪ್ರತಿಕ್ರಿಯಿಸಿದ್ದ ಸ್ಟಾಲಿನ್ ಅವರು, “ಇದು ರಾಷ್ಟ್ರದ ಸಮಗ್ರತೆಯನ್ನು ಹಾಳು ಮಾಡುತ್ತದೆ” ಎಂದಿದ್ದರು.
ಇದನ್ನೂ ಓದಿ : ಉತ್ತರಾಖಂಡ | ಹಿಂಸಾಚಾರಕ್ಕೆ ತಿರುಗಿದ ಮಸೀದಿ ವಿರೋಧಿ ಪ್ರತಿಭಟನೆ, ಮುಸ್ಲಿಮರ ಅಂಗಡಿಗಳು ಧ್ವಂಸ


