ಕೇಂದ್ರ ಸರ್ಕಾರ ಮತ್ತು ಟ್ವಿಟರ್ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ಸಾಮಾಜಿಕ ಜಾಲತಾಣ ಪ್ಲ್ಯಾಟ್‌ಫಾರ್ಮ್‌ಗಳ ಡಬಲ್ ಸ್ಟ್ಯಾಂಡರ್ಡ್ ಅನ್ನು ಭಾರತದಲ್ಲಿ ಅನುಮತಿಸಲಾಗುವುದಿಲ್ಲ ಎಂದು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಗುರುವಾರ ಹೇಳಿದರು. “ಇದು ಟ್ವಿಟರ್, ಫೇಸ್‌ಬುಕ್, ಲಿಂಕ್ಡ್‌ಇನ್ ಅಥವಾ ವಾಟ್ಸಾಪ್ ಸೇರಿದಂತೆ ಯಾವುದೆ ಪ್ಲ್ಯಾಟ್‌ಫಾರ್ಮ್‌ಗಳು ಆಗಿರಲಿ ತಪ್ಪಿದಲ್ಲಿ ಕ್ರಮ ಕೈಗೊಳ್ಳಲಾಗುವುದು” ಎಂದು ಸಚಿವರು ಹೇಳಿದರು.
“ಭಾರತದಲ್ಲಿ ಕೆಲಸ ಮಾಡಿ. ನಿಮಗೆ ಇಲ್ಲಿ ಕೋಟಿ ಅನುಯಾಯಿಗಳಿವೆ. ಹಣ ಸಂಪಾದಿಸಿ ಆದರೆ ನೀವು ಭಾರತೀಯ ಕಾನೂನು ಮತ್ತು ಸಂವಿಧಾನವನ್ನು ಪಾಲಿಸಬೇಕಾಗುತ್ತದೆ” ಎಂದು ಸಚಿವರು ಹೇಳಿದರು.
“ನಾವು ಈಗ ಟ್ವಿಟರ್ ಜೊತೆಗಿನ ಸಮಸ್ಯೆಯನ್ನು ಎತ್ತಿದ್ದೇವೆ. ನಮ್ಮ ಇಲಾಖೆಯು ಟ್ವಿಟರ್‌ನೊಂದಿಗೆ ಮಾತುಕತೆಯಲ್ಲಿದೆ. ಅದಕ್ಕಾಗಿಯೇ ನಾನು ಈ ವಿಷಯದ ಬಗ್ಗೆ ಬಹಿರಂಗವಾಗಿ ಪ್ರತಿಕ್ರಿಯಿಸಲು ಬಯಸುವುದಿಲ್ಲ. ಅಮೆರಿಕದ ಕ್ಯಾಪಿಟಲ್ ಹಿಲ್‌ನಲ್ಲಿ ಹಿಂಸಾಚಾರ ನಡೆದಾಗ ಏನಾಗಿದೆ ಎಂಬ ಬಗ್ಗೆ ನಾವು ಪಶ್ನೆಗಳನ್ನು ಎತ್ತಿದ್ದೇವೆ. ಅಲ್ಲಿ ಸಾಮಾಜಿಕ ಜಾಲತಾಣದ ಫ್ಲ್ಯಾಟ್‌ಪಾರ್ಮ್ ಪೊಲೀಸ್ ತನಿಖೆಗೆ ನಿಲ್ಲುತ್ತವೆ ಆದರೆ ಕೆಂಪು ಕೋಟೆಯಲ್ಲಿ ನಡೆದ ಅಹಿತಕರ ಘಟನೆಯ ಬಗ್ಗೆ ಅದೇ ಫ್ಲ್ಯಾಟ್‌ಫಾರ್ಮ್ ಭಾರತ ಸರ್ಕಾರದ ವಿರುದ್ಧ ನಿಲ್ಲುತ್ತಿದೆ. ಕೆಂಪು ಕೋಟೆ ನಮ್ಮ ಹೆಮ್ಮೆಯ ಸಂಕೇತವಾಗಿದೆ. ನಾವು ಈ ಡಬಲ್ ಸ್ಟ್ಯಾಂಡರ್ಡ್ ಅನ್ನು ಅನುಮತಿಸುವುದಿಲ್ಲ” ಎಂದು ಸಚಿವರು ಹೇಳಿದರು.
ಇದನ್ನೂ ಓದಿ: ಅಭಿವ್ಯಕ್ತಿ ಸ್ವಾತಂತ್ಯ್ರ, ಪ್ರಜಾಪ್ರಭುತ್ವ ಮೌಲ್ಯಕ್ಕೆ ಸದಾ ಬದ್ಧ: ಟ್ವಿಟರ್ ಬೆಂಬಲಕ್ಕೆ ಅಮೆರಿಕ
ಗಣರಾಜ್ಯೋತ್ಸವದಂದು ರೈತರ ಟ್ರಾಕ್ಟರ್ ರ್‍ಯಾಲಿಯಲ್ಲಿ ದೆಹಲಿಯಲ್ಲಿ ನಡೆದ ಅಹಿತಕರ ಘಟನೆಯ ನಂತರ ಕೇಂದ್ರ ಸರ್ಕಾರವು ಎರಡು ಆದೇಶಗಳಲ್ಲಿ 1,300 ಖಾತೆಗಳನ್ನು ಮತ್ತು ಪೋಸ್ಟ್‌ಗಳ ಪಟ್ಟಿಯನ್ನು ಹಸ್ತಾಂತರಿಸಿ ಅದನ್ನು ತೆಹಿಡಿಯುವಂತೆ ಕೇಳಿಕೊಂಡಿದೆ. ಆದರೆ ಬುಧವಾರ, ಟ್ವಿಟರ್ ತನ್ನ ಹೇಳಿಕೆಯನ್ನು ಪ್ರಕಟಿಸಿ, ಕೆಲವು ಹ್ಯಾಂಡಲ್‌ಗಳನ್ನು ನಿರ್ಬಂಧಿಸದಿರುವ ತನ್ನ ಕ್ರಮವನ್ನು ವಿವರಿಸಿದೆ. ಅದು ತನ್ನ ಹೇಳಿಕೆಯಲ್ಲಿ, “… ನಮಗೆ ಖಾತೆಗಳನ್ನು ನಿರ್ಬಂಧಿಸಲು ಕೇಂದ್ರ ಸರ್ಕಾರ ನಿರ್ದೇಶಿಸಿದ ಕ್ರಮವು ಭಾರತೀಯ ಕಾನೂನಿಗೆ ಅನುಗುಣವಾಗಿರುತ್ತವೆ ಎಂದು ನಾವು ನಂಬುವುದಿಲ್ಲ” ಎಂದು ಹೇಳಿದೆ.
“ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸುವ ತತ್ವಗಳನ್ನು ಅನುಸರಿಸಿ ಸುದ್ದಿ ಮಾಧ್ಯಮ ಸಂಸ್ಥೆಗಳು, ಪತ್ರಕರ್ತರು, ಕಾರ್ಯಕರ್ತರು ಮತ್ತು ರಾಜಕಾರಣಿಗಳನ್ನು ಒಳಗೊಂಡಿರುವ ಖಾತೆಗಳ ಮೇಲೆ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಹಾಗೆ ಮಾಡಿದರೆ, ಭಾರತೀಯ ಕಾನೂನಿನಡಿಯಲ್ಲಿ ಅವರ ಮುಕ್ತ ಅಭಿವ್ಯಕ್ತಿ ಸ್ವಾತಂತ್ಯ್ರವನ್ನು ಉಲ್ಲಂಘಿಸಿದಂತಾಗುತ್ತದೆ” ಎಂದು ಟ್ವಿಟರ್ ಹೇಳಿತ್ತು.
ಇದನ್ನೂ ಓದಿ: ರೈತರನ್ನು ಬೆಂಬಲಿಸುವ ಖಲಿಸ್ತಾನಿ-ಪಾಕಿಸ್ತಾನಿ ಟ್ವಿಟ್ಟರ್ ಖಾತೆಗಳನ್ನು ಕಿತ್ತುಹಾಕಿ: ಟ್ವಿಟರ್‌ಗೆ ಕೇಂದ್ರ ತಾಕೀತು
ಟ್ವಿಟರ್ ಈ ಹೇಳಿಕೆಯನ್ನು ನೀಡಿದ ಕೂಡಲೇ, ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯವು ಸ್ವದೇಶಿ ಸಾಮಾಜಿಕ ಜಾಲತಾಣವಾದ ’ಕೂ’ ಆಪ್‌ನಲ್ಲಿ, ಟ್ವಿಟ್ಟರ್ ಹೇಳಿಕೆಯನ್ನು “ಅಸಾಮಾನ್ಯ” ಎಂದು ಕರೆದಿದೆ. ’ಕೂ’ ಆಪ್‌ನಲ್ಲಿ ಪ್ರತಿಕ್ರಿಯೆ ನೀಡಿದ ಕೆಲವೆ ಗಂಟೆಗಳ ನಂತರ, ಸಚಿವಾಲಯದ ಪ್ರತಿನಿಧಿಗಳು ಮತ್ತು ಟ್ವಿಟರ್‌ನ ಜಾಗತಿಕ ನೀತಿ ಮತ್ತು ಸುರಕ್ಷತಾ ತಂಡಗಳು ಸಭೆ ನಡೆಸಿದೆ.
ಸಭೆಯಲ್ಲಿ ಟ್ವಿಟರ್‌ನ ಪ್ರತಿಕ್ರಿಯೆಯ ಬಗ್ಗೆ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿ ತೀವ್ರ ನಿರಾಶೆಯನ್ನು ವ್ಯಕ್ತಪಡಿಸಿದೆ. “ಭಾರತದಲ್ಲಿ, ಅದರ ಸಂವಿಧಾನ ಮತ್ತು ಕಾನೂನುಗಳು ಸರ್ವೋಚ್ಚವಾಗಿವೆ. ಇದನ್ನು ಜವಾಬ್ದಾರಿಯುತ ಘಟಕಗಳು ದೃಡೀಕರಿಸುವುದು ಮಾತ್ರವಲ್ಲದೆ ನೆಲದ ಕಾನೂನಿಗೆ ಅನುಸಾರವಾಗಿ ಬದ್ಧವಾಗಿರುತ್ತವೆ ಎಂದು ನಿರೀಕ್ಷಿಸುತ್ತೇವೆ” ಎಂದು ಸಚಿವಾಲಯವು ಸಭೆಯ ನಂತರ ಹೇಳಿಕೆಯಲ್ಲಿ ತಿಳಿಸಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಟ್ವಿಟರ್ ತಾನು ಕಾನೂನು ಆಯ್ಕೆಯನ್ನು ನೋಡುತ್ತಿದ್ದೇನೆ ಎಂದು ಹೇಳಿದೆ. “ನಾವು ಸೇವೆ ಸಲ್ಲಿಸುವ ಜನರ ಪರವಾಗಿ ಮುಕ್ತ ಅಭಿವ್ಯಕ್ತಿ ಸ್ವಾತಂತ್ಯ್ರ ಪ್ರತಿಪಾದಿಸುವುದನ್ನು ಮುಂದುವರಿಸುತ್ತೇವೆ. ನಾವು ಭಾರತೀಯ ಕಾನೂನಿನಡಿಯಲ್ಲಿ ನಮಗೆ ಇರುವ ಆಯ್ಕೆಗಳನ್ನು ಹುಡುಕುತ್ತಿದ್ದೇವೆ” ಅದು ಹೇಳಿದೆ.
ಇದನ್ನೂ ಓದಿ: ‘ರೈತರ ನರಮೇಧ ನಡೆಸುತ್ತಿರುವ ಮೋದಿ’ – ಟ್ವಿಟರ್‌ನಲ್ಲಿ ಭುಗಿಲೆದ್ದ ಆಕ್ರೋಶ


