Homeಮುಖಪುಟಮೋದಿಗೆ ಯಡಿಯೂರಪ್ಪ ಯಾಕೆ ಈ ಹೊತ್ತಿನ ಆದರ್ಶವಾಗಬಲ್ಲರು ಗೊತ್ತಾ?

ಮೋದಿಗೆ ಯಡಿಯೂರಪ್ಪ ಯಾಕೆ ಈ ಹೊತ್ತಿನ ಆದರ್ಶವಾಗಬಲ್ಲರು ಗೊತ್ತಾ?

- Advertisement -
- Advertisement -

ಇಡೀ ಮನುಷ್ಯ ಕುಲವನ್ನೇ ನಿರ್ನಾಮ ಮಾಡುವತ್ತ ಮುನ್ನುಗ್ಗುತ್ತಿರುವ ಕೊರೊನ ರೋಗದ ವಿರುದ್ಧ ಹೋರಾಟ ನಡೆದಿರುವ ಈ ಸಂದರ್ಭದಲ್ಲಿ, ಒಂದು ಧರ್ಮದ ಅನುಯಾಯಿಗಳನ್ನು ಗುರಿಯಾಗಿಸಿಕೊಂಡು ವಿಕೃತ ಮನೋಸ್ಥಿತಿಯನ್ನು ಸಮಾಜದಲ್ಲಿ ಬಿತ್ತುವ ಕೆಲಸ ನಡೆದಿರುವ ಹೊತ್ತಿನಲ್ಲಿ ಈ ರಾಜ್ಯದ ಮುಖ್ಯಮಂತ್ರಿಯಾಗಿ ಬಿ.ಎಸ್ ಯಡಿಯೂರಪ್ಪನವರು ಅತ್ಯಂತ ಹೊಣೆಗಾರಿಕೆಯ ಎಚ್ಚರಿಕೆಯನ್ನು ನೀಡಿದ್ದಾರೆ.

ಅಲ್ಪಸಂಖ್ಯಾತ ಸಮುದಾಯವನ್ನು ಅನುಮಾನದಿಂದ ನೋಡುವ ಅಗತ್ಯವಿಲ್ಲ. ಅಲ್ಪಸಂಖ್ಯಾತರ ವಿರುದ್ದ ಯಾರೇ ಟೀಕೆ ಮಾಡಲಿ, ಸಾಮಾಜಿಕ ಜಾಲತಾಣಗಳಲ್ಲಿ ಏನಾದರೂ ಪೋಸ್ಟ್ ಮಾಡಲಿ ಅಂತಹವರ ವಿರುದ್ದ ಕಾನೂನು ಕ್ರಮ ಅನಿವಾರ್ಯ ಎಂಬ ಸಂದೇಶ ಸಾರಿದ ಕೆಲವೆ ನಿಮಿಷಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಯಾರಾದರೂ ಕೋಮುದ್ವೇಷ ಬಿತ್ತುವ, ಸೌಹಾರ್ದತೆ ಕದಡುವ ಅಥವಾ ಯಾವುದೇ ಧರ್ಮ, ಜಾತಿಯವರ ವಿರುದ್ದ ಅವಹೇಳನಕಾರಿ ಮಾತುಗಳನ್ನು ಆಡಿದರೆ ಅವರ ವಿರುದ್ದ ಕಾನೂನುಕ್ರಮ ಜರುಗಿಸುವ ಆದೇಶಗಳು ಹೊರಡಿಸಿದ್ದಾರೆ. ಅಂದರೆ ಮುಖ್ಯಮಂತ್ರಿಗಳ ಮಾತು ಕಾರ್ಯರೂಪಕ್ಕೆ ಬಂದಿದೆ. ಇದುವೆ ಅಧಿಕಾರದ ಇಚ್ಛಾಶಕ್ತಿ ಎಂದು ಭಾವಿಸಬಹುದು. ಇಂತಹದ್ದೊಂದು ಮುತ್ಸದ್ದಿತನ ಜನ ಹೋರಾಟದ ನೆಲೆಯಲ್ಲಿ ಬೆಳೆದು ಬಂದ ನಾಯಕನಿಗೆ ಮಾತ್ರ ದಕ್ಕಬಲ್ಲದೇನೋ. ಈಗ ಯಡಿಯೂರಪ್ಪ ಅವರು ಆಡಿದ ಮಾತಿಗೆ ಬದ್ದರಾಗಿಯೂ ನಡೆದುಕೊಳ್ಳಬೇಕಾದ ಪಾರದರ್ಶಕತೆಯನ್ನು ತೋರಬೇಕಿದೆ. ಅಲ್ಪಸಂಖ್ಯಾತ ಸಮುದಾಯದ ವಿರುದ್ದ ತಮ್ಮ ಪಕ್ಷದ ಶಾಸಕರು, ಸಂಸದರು, ಮುಂದಾಳುಗಳ ನಾಲಿಗೆಗೂ ಕಾನೂನು ಕುಣಿಕೆ ಹಾಕಿ ಹದ್ದುಬಸ್ತಿನಲ್ಲಿಡಬೇಕು.


ಇದನ್ನೂ ಓದಿ: ಯಾರೂ ಸಹ ಅಲ್ಪಸಂಖ್ಯಾತ ಮುಸ್ಲಿಂ ಬಂಧುಗಳ ಮೇಲೆ ಒಂದು ಶಬ್ಧ ಮಾತಾಡಕೂಡದು: ಯಡಿಯೂರಪ್ಪ 


ಯಡಿಯೂರಪ್ಪ ಅವರ ಹೇಳಿಕೆ ಬಿಜೆಪಿ ಮತ್ತದರ ಮಾತೃಕೋಣೆ ಪರಿವಾರದಲ್ಲಿ ಕೊರೊನ ಬಾಧಿತ ನರಳಾಟ ವಕ್ಕರಿಸಿಕೊಂಡಂತೆ ಕಾಣುತ್ತಿದೆ. ಕೆಲವು ದಿನಗಳ ಹಿಂದೆಯಷ್ಟೇ ಸಂಸದೆ ಶೋಭಾ ಕರಂದ್ಲಾಜೆ ಅವರು ಕೊರೊನಾ ಹರಡುವಿಕೆಗೆ ತಬ್ಲೀಘಿಗಳೆ ಕಾರಣ. ಕೊರೊನಾ ಹರುಡುವಿಕೆ ಇದೊಂದು ರೂಪದ ಜಿಹಾದ್ ಎಂದು ಬಹಿರಂಗವಾಗಿ ಹೇಳಿದ್ದರು. ಶಾಸಕ ರೇಣುಕಾಚಾರ್ಯ ಸೇರಿದಂತೆ ಅನೇಕ ಬಿಜೆಪಿ ಶಾಸಕ ,ಸಂಸದರುಗಳು ಅಲ್ಪಸಂಖ್ಯಾತ ಸಮುದಾಯವನ್ನೆ ಗುರಿಯಾಗಿಸಿಕೊಂಡು ನಾಲಿಗೆ ಹರಿಬಿಟ್ಟಿದ್ದರು. ಕೊರೊನಾ ಸೋಂಕಿಗೆ ಮುಸ್ಲಿಮರೇ ಕಾರಣ ಎಂಬಂತೆ ಅವರ ವಿರುದ್ದ ಸಂಪಾದ್ರಾಯಿಕ ನ್ಯೂಸ್ ಚಾನಲ್‌ಗಳು, ಸಾಮಾಜಿಕ ಜಾಲತಾಣಗಳು ಒಂದೇ ಸಮನೆ ಚೀರಿಕೊಳ್ಳತೊಡಗಿದ್ದವು. ಇವೆಲ್ಲದಕ್ಕೂ ಯಡಿಯೂರಪ್ಪ ಅವರ ಈ ಮೇಲಿನ ಮಾತು ಅಂಕುಶವಿಟ್ಟಂತಾಗಿದೆ.

ರಾಜ್ಯದಲ್ಲಿ ಈಗಾಗಲೆ ಧರ್ಮನಿಂದನೆ ಧೂರ್ತರ ವಿರುದ್ದ ಕೇಸುಗಳು ದಾಖಲಾಗತೊಡಗಿವೆ. ಇದೊಂದು ಪರಿಣಾಮಕಾರಿ ಬೆಳವಣಿಗೆ ಮತ್ತು ಅಲ್ಪಸಂಖ್ಯಾತ ಜನ ಸಮುದಾಯದಲ್ಲಿ ಭರವಸೆ ಮೂಡಿಸಿದ ಬಗೆ ಎನ್ನಬಹುದು. ಹಾಗೆ ನೋಡಿದರೆ ಯಡಿಯೂರಪ್ಪ ಎಂದಿಗೂ ಕೋಮುವಾದಿಯಲ್ಲ ಎಂಬುದನ್ನು ಅನೇಕ ಸಾರಿ ಅವರ ನಡೆ-ನುಡಿಗಳು ಸಾಬೀತು ಮಾಡುತ್ತಲೆ ಬಂದಿವೆ. ಅವರ ಸ್ವಕ್ಷೇತ್ರ ಶಿಕಾರಿಪುರದಲ್ಲಿ ಮುಸ್ಲಿಂ ಸಮುದಾಯದ ವಿಶ್ವಾಸವನ್ನು ಅತ್ಯಂತ ಸೌಹಾರ್ದಮಯವಾಗಿ ಕಾಯ್ದುಕೊಂಡು ಬರುತ್ತಿರುವುದರಿಂದಲೇ ಎಂತಹುದ್ದೇ ಸಂದರ್ಭದಲ್ಲೂ ಶೇ. ೩೦ ರಷ್ಟು ಮುಸ್ಲಿಂ ಮತಗಳು ಯಡಿಯೂರಪ್ಪ ಅವರಿಗೆ ಮೀಸಲಾಗಿರುತ್ತದೆ. ಬಿಜೆಪಿ ತೊರೆದು ಕೆಜೆಪಿ ಕಟ್ಟಿದ್ದಾಗ ಪ್ರಬಲ ಲಿಂಗಾಯಿತ ಸಮುದಾಯದ ನಂತರ ಯಡಿಯೂರಪ್ಪ ಅವರಿಗೆ ಬೆಂಬಲ ಕೊಟ್ಟ ಇನ್ನೊಂದು ಸಮುದಾಯವೆಂದರೆ ಅದು ಮುಸ್ಲಿಂ ಸಮುದಾಯ. ಅವರೆಂದೂ ಮುಸ್ಲಿಂರ ವಿರುದ್ದ ಬಹಿರಂಗವಾಗಿ ಕಾರಿಕೊಂಡ ಸನ್ನಿವೇಶವಂತೂ ಕಂಡಿದ್ದಿಲ್ಲ. ರಾಜಕೀಯ ಕಾರಣಗಳಿಗಾಗಿ ಅಂತಹ ವೇದಿಕೆಗಳನ್ನು ಹಂಚಿಕೊಂಡಿದ್ದರೂ ಯಡಿಯೂರಪ್ಪ ಆಂತರ್ಯದಲ್ಲಿ ಧರ್ಮ ದ್ವೇಷದ ಸೋಂಕು ಅಂಟಿಸಿಕೊಂಡವರಲ್ಲ ಎಂಬುದನ್ನು ಒಪ್ಪಲೇ ಬೇಕಾದ ಮಾತು. ಇಂತಹ ಕಾರಣಗಳಿಂದಲೇ ರಾಜ್ಯ ಬಿಜೆಪಿಯಲ್ಲಿ ಅಲ್ಪಸಂಖ್ಯಾತ ಸಮುದಾಯದ ವಿಶ್ವಾಸ ಉಳಿಸಿಕೊಂಡಿರುವವರಲ್ಲಿ ಯಡಿಯೂರಪ್ಪ ಅಗ್ರಮಾನ್ಯರು ಎನ್ನಬಹುದು.

ಕೊರೊನ ಸೋಂಕು ವಿರುದ್ದದ ಹೋರಾಟದ ಜೊತೆಗೆ ಮತಾಂಧರ ಧೋರಣೆಗಳನ್ನು ಹತ್ತಿಕ್ಕುವುದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಒಂದು ಸವಾಲಿನ ಕೆಲಸವೂ ಆಗಿದೆ. ಅದಕ್ಕಾಗಿ ಮಾನಸಿಕವಾಗಿ ಅವರು ಸಿದ್ದರಾದಂತೆ ಕಂಡಿದ್ದಾರೆ. ವಾಸ್ತವವಾಗಿ ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತ ಆರೆಸ್ಸೆಸ್ಸಿನ ವ್ಯಕ್ತಿಯಾಗಿ ಇಂದು ಉಳಿದಿಲ್ಲ. ಅವರೆಂದೂ ಯಾರ ಕೈಗೊಂಬೆಯಂತೆ ಕೆಲಸ ಮಾಡುವ ಜಯಮಾನದವರೇ ಅಲ್ಲ. ಹಾಗಾಗಿಯೇ ಅವರು ಬಹುತೇಕ ಸಂದರ್ಭಗಳಲ್ಲಿ ಸ್ವಪಕ್ಷೀಯರ ಅಸಮಾಧಾನಗಳಿಗೆ ತುತ್ತಾಗುತ್ತಲೆ, ಸ್ಫೋಟಗೊಳ್ಳತ್ತಲೆ ಬಂದಿದ್ದಾರೆ. ರಾಜ್ಯದಲ್ಲಿರುವುದು ಪರಿವಾರ ಪ್ರೇಣಿತ ಬಿಜೆಪಿ ಸರ್ಕಾರವಲ್ಲ. ಹೋರಾಟಗಾರ ಯಡಿಯೂರಪ್ಪ ಅವರ ಸರ್ಕಾರ. ಇದು ಪರಿವಾರಕ್ಕೆ ನುಂಗಲಾರದ ತುತ್ತಾಗಿದೆ. ಸರ್ಕಾರವನ್ನು ತಮ್ಮ ನಿರ್ಧಾರಗಳಿಗೆ ತಕ್ಕಂತೆ ನಿರ್ದೇಶಿಸುವ ಪರಿವಾರದ ತಲೆಯಾಳುಗಳ ಆಟ ಯಡಿಯೂರಪ್ಪನವರ ಮುಂದೆ ನಡೆಯದ ಕಾರಣವೇ ಅವರೆಲ್ಲಾ ಈಗ ಸರ್ಕಾರ ಮತ್ತು ಪಕ್ಷವನ್ನು ಬೇರ್ಪಡಿಸಿಕೊಂಡು ಯಡಿಯೂರಪ್ಪನವರ ಪದಚ್ಯುತಿಗಾಗಿ ಕಾಯತೊಡಗಿದ್ದಾರೆ. ಇಂತಹ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಹಿತದ ಯಡಿಯೂರಪ್ಪ ಅವರ ಮಾತುಗಳು ಪರಿವಾರದ ತಲೆಯಾಳುಗಳಿಗೆ ಬಿಜೆಪಿಯಲ್ಲಿನ ಯಡಿಯೂರಪ್ಪ ಅವರ ವಿರೋಧಿಗಳಿಗೆ ಅಸ್ತ್ರವೊಂದು ಸಿಕ್ಕಂತಾಗಿದೆ. ಆಟ ಮುಂದಿದೆ.

ಕೊನೆ ಮಾತು:

ಉತ್ತರದ ರಾಜ್ಯಗಳಲ್ಲಿ ದಲಿತರನ್ನು ಭಕ್ತಗಣ ಗುಂಪು ಹತ್ಯೆ ಮಾಡುತ್ತಿರುವಾಗ, ಹತ್ಯಾಚಾರವೆಸಗುತ್ತಿರುವಾಗ, ಐಷಾರಾಮಿ ಕಾರಿಗೆ ಕಟ್ಟಿ ನಡುರಸ್ತೆಯಲ್ಲೇ ಚರ್ಮಸುಲಿದು ಬಡಿಯುತ್ತಿರುವಾಗ ಅಂತಹ ಕೊಲೆಪಾತಕರಿಗೆ ಖಡಕ್ ಆದ ಅಧಿಕಾರಯುಕ್ತ ಎಚ್ಚರಿಕೆಯೊಂದನ್ನು ಕೊಡಬೇಕಾದ ಅಧಿಕಾರ ದಂಡ ಹಿಡಿದ ಈ ದೇಶದ ಪ್ರಧಾನಿ ನರೇಂದ್ರ ಮೋದಿ ಆಡಿದ ಹೇಡಿತನದ ಮಾತೇನು ಗೊತ್ತಾ? ಬೇಕಾದರೆ ನನ್ನ ಎದೆಗೆ ಗುಂಡಿಡಿ, ದಲಿತರನ್ನು ಮಾತ್ರ ಕೊಲ್ಲಬೇಡಿ. ಈ ಮಾತು ಒಬ್ಬ ಹೇಡಿ ಮಾತ್ರ ಆಡಬಲ್ಲ. ಅಧಿಕಾರ ದಂಡ ಕೈಯಲ್ಲಿಟ್ಟುಕೊಂಡು ಅವರನ್ನು ಕೊಲ್ಲಬೇಡಿ ನನ್ನನ್ನು ಕೊಲ್ಲಿ ಎಂದು ಹೇಳುವುದು ನ್ಯಾಯ ನಿಷ್ಠುರ, ಕಾನೂನು ಕಾಯಬೇಕಾದ ನಾಯಕನೊಬ್ಬ ಸ್ವತಃ ಕೊಲ್ಲುವ ಕ್ರಿಯೆಯನ್ನು ಮಾನ್ಯ ಮಾಡಿದಂತಲ್ಲವೇ? ಯಾವತ್ತಾದರೂ ಪ್ರಧಾನಿ ಈ ನೆಲದ ಯಾವೊಬ್ಬ ನಾಗರೀಕರನಿಗೂ ಜೀವಹಾನಿ, ಮಾನಹಾನಿ ಆಗಿದ್ದೇ ಆದರೆ ಅಂತಹವರನ್ನು ಕಾನೂನು ಕ್ರಮಗಳಿಂದ ಶಿಕ್ಷಿಸುತ್ತೇನೆ ಎಂದು ಆಡಿದ್ದೇ(ರಾಜಧರ್ಮ ಪಾಲನೆ) ಆಗಿದ್ದರೆ ಇಂದು ದೇಶದಲ್ಲಿ ಇಷ್ಟೊಂದು ಧರ್ಮದ್ವೇಷ, ಜಾತಿ ದ್ವೇಷದ ರಕ್ತಪಾತಗಳು ಆಗುತ್ತಿರಲಿಲ್ಲವೇನೊ?. ಇಂದು ಈ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅಡಿದ ಮಾತನ್ನೇ ಈ ದೇಶದ ಪ್ರಧಾನಮಂತ್ರಿ ಆಡಬೇಕು. ದೀಪ ಹಚ್ಚುವುದು, ಜಾಗಟೆ ಬಾರಿಸುವುದು, ತಪ್ಪಾಳೆ ತಟ್ಟಿ ಬೀದಿಯಲ್ಲಿ ಅರಚಲು ಕರೆ ಕೊಡುವುದನ್ನು ಬಿಟ್ಟು ಅದಕ್ಕಾಗಿ ಮೋದಿ ಈ ಹೊತ್ತಿಗೆ ಯಡಿಯೂರಪ್ಪ ಅವರನ್ನು ರಾಜಧರ್ಮದ ಆದರ್ಶವನ್ನಾಗಿ ಅನುಸರಿಸಲಿ.

ದಕ್ಷಿಣ ಆಫ್ರಿಕಾದಲ್ಲಿ ಬಿಳಿಯರ ಕ್ರೌರ್ಯದ ವಿರುದ್ದ ಹೋರಾಡುತ್ತಾ ತಮ್ಮ ಯೌವ್ವನದ ಆಯಸ್ಸಿನ ಕಾಲು ಶತಮಾನವನ್ನೆ (೨೭ವರ್ಷ) ಜೈಲಿನ ಕತ್ತಲೆ ಕೋಣೆಯಲ್ಲಿ ಕಳೆದ ನೆಲ್ಸನ್ ಮಂಡೇಲಾ ಅವರು ಶಾಂತಿಯಹೋರಾಟದ ಫಲವಾಗಿಯೇ ಆ ದೇಶದ ಅಧ್ಯಕ್ಷರಾದಾಗ ಜಗತ್ತಿನ ಇಡೀ ಬಿಳಿಯರ ಸಾಮ್ರಾಜ್ಯ ಭಯ, ಅತಂಕದಿಂದ ನೆಲ್ಸನ್ ಮಂಡೇಲ ಅವರ ಕಡೆ ನೋಡುತ್ತಿತ್ತು. ಅವರ ಮೊದಲ ಅಧ್ಯಕ್ಷೀಯ ಭಾಷಣಕ್ಕಾಗಿ ಬಿಳಿಯರ ಜಗತ್ತು ಭಯದಿಂದ ಕಾಯುತ್ತಿದ್ದರೆ. ತಮ್ಮ ಮೇಲೆ ಅಮಾನುಷ ಕ್ರೌರ್ಯ ಮೆರೆದ ಬಿಳಿಯ ವಿರುದ್ದ ಸೇಡು ತೀರಿಸಿಕೊಳ್ಳಲು ಕಾದು ಕುಂತ ಕರಿಯ ಸಮುದಾಯ ರಣೋತ್ಸಾಹದಿಂದ ತಮ್ಮ ನಾಯಕನ ಸೇಡಿನ ಆದೇಶದ ನಿರೀಕ್ಷೆಯಲ್ಲಿ ಕಾಯುತ್ತಿತ್ತು. ಆದರೆ ಮಂಡಲೇ ತಮ್ಮ ಮೊದಲ ಅಧ್ಯಕ್ಷೀಯ ಭಾಷಣದಲ್ಲಿ ಅಡಿದ ಮಾತು ಎಂದರೆ ದಕ್ಷಿಣ ಆಫ್ರಿಕಾದ ಯಾವೊಬ್ಬ ಬಿಳಿಯನ ಒಂದು ತೊಟ್ಟು ರಕ್ತ ನೆಲಕ್ಕೆ ಬಿದ್ದಿದ್ದೇ ಆದರೆ ಅದಕ್ಕೆ ಕಾರಣರಾದವರೂ ಯಾರೇ ಇರಲಿ ಅವರನ್ನು ಅತ್ಯಂತ ಕಠಿಣ ಶಿಕ್ಷೆಗೆ ಗುರಿ ಪಡಿಸಲಾಗುವುದು ಎಂಬುದಾಗಿತ್ತು. ಈ ಕಾರಣಕ್ಕಾಗಿಯೇ ಮಂಡೇಲ ಜಗತ್ತಿನ ಮಾನವತೆಯ ಮಹಾ ಸಂತನಂತೆ ಚರಿತ್ರೆಯಲ್ಲಿ ಉಳಿದು ಹೋಗಿದ್ದಾರೆ.
ಚರಿತ್ರೆಯನ್ನು ಅರಿಯದವನು ಚರಿತ್ರೆಯನ್ನು ಸೃಷ್ಟಿಸಲಾರ.
ಎಲ್ಲಿಯ ಮಂಡೇಲ.. ? ಎಲ್ಲಿಯ ಯಡಿಯೂರಪ್ಪ…? ಎಲ್ಲಿಯ ಮೋದಿ.?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...