Homeಕರ್ನಾಟಕನಿಜಕ್ಕೂ ಎಷ್ಟು ದಲಿತರಿಗೆ ಮೀಸಲಾತಿ ದಕ್ಕುತ್ತಿದೆ ಗೊತ್ತೆ? ಇಲ್ಲಿದೆ ಅಂಕಿ ಅಂಶಗಳು

ನಿಜಕ್ಕೂ ಎಷ್ಟು ದಲಿತರಿಗೆ ಮೀಸಲಾತಿ ದಕ್ಕುತ್ತಿದೆ ಗೊತ್ತೆ? ಇಲ್ಲಿದೆ ಅಂಕಿ ಅಂಶಗಳು

ಖಾಸಗಿ ಮತ್ತು ತಾತ್ಕಾಲಿಕ ಉದ್ಯೋಗಗಳಿಗೆ ಮೀಸಲಾತಿ ಅನ್ವಯಿಸುವುದಿಲ್ಲವಾದ ಕಾರಣ 154 ಲಕ್ಷ ಉದ್ಯೋಗಗಳು ಮಾತ್ರ ಮೀಸಲಾತಿ ವ್ಯಾಪ್ತಿಗೆ ಒಳಪಡುತ್ತವೆ.

- Advertisement -
- Advertisement -

ಸ್ವತಂತ್ರ ಪೂರ್ವದಿಂದ ಹಿಡಿದು ಸ್ವಾತಂತ್ರೋತ್ತರ ಭಾರತದ ಇಂದಿನವರೆಗೂ ಮೀಸಲಾತಿಯ ವಿರುದ್ಧವಾಗಿ ಎದ್ದ ದನಿಗಳಿಗೇನು ಕಡಿಮೆ ಇಲ್ಲ. ಎಂ. ವಿಶ್ವೇಶ್ವರಯ್ಯನವರಿಂದ ಆರಂಭಗೊಂಡು ಮಂಡಲ್ ವರದಿಯ ವಿರುದ್ಧ ಕಮಂಡಲ ಯಾತ್ರೆಯವರೆಗೂ, ಅದಾದ ನಂತರದಲ್ಲಿಯೂ ಸಹ ಜಾತಿ ಮತ್ತು ಆರ್ಥಿಕ ಹಿನ್ನೆಲೆಯಾಧಾರಿತ ಮೀಸಲಾತಿಯನ್ನು ಕಂಠಮಟ್ಟ ವಿರೋಧಿಸುವ ಗುಂಪುಗಳೇನು ಕಡಿಮೆಯಾಗಿಲ್ಲ.

ದಲಿತರ ಮೀಸಲಾತಿಯನ್ನು ವಿರೋಧಿಸುತ್ತಿದ್ದ ಶೂದ್ರ ಜನಾಂಗಗಳಿಗೆ ವಿ.ಪಿ.ಸಿಂಗ್ ಮತ್ತು ಮಂಡಲ್ ವರದಿಯ ನಂತರ ತಮಗೂ ಮೀಸಲಾತಿ ದಕ್ಕಿದ್ದರಿಂದ ಮೀಸಲಾತಿ ಇಷ್ಟವಾಯಿತು. ದಲಿತರ ಮತ್ತು ಹಿಂದುಳಿದ ಜಾತಿಗಳಿಗೆ ಮೀಸಲಾತಿಯನ್ನು ಬೀದಿ ಬೀದಿಯಲ್ಲಿ ಆಡಿಕೊಳ್ಳುತ್ತಿದ್ದ ಮೇಲ್ಜಾತಿಗಳಿಗೆ ಕಣ್ಮಿಟುಕಿಸುವಷ್ಟರಲ್ಲಿ ಕೇವಲ ಆರ್ಥಿಕ ಹಿಂದುಳಿದಿರುವಿಕೆಯ ಆಧಾರದಲ್ಲಿ ದೊರೆತ 10% ಮೀಸಲಾತಿಯಿಂದಾಗಿ ಅವರಲ್ಲಿಯೂ ಹಲವರಿಗೆ ಮೀಸಲಾತಿ ಇಷ್ಟವಾಗಿ ಹೋಯಿತು. ಆಶ್ಚರ್ಯವೆಂದರೆ ಈ ಮೀಸಲಾತಿಯಿಂದಾಗಿ 5 ಎಕರೆ ಜಮೀನು, 8 ಲಕ್ಷ ವಾರ್ಷಿಕ ಆದಾಯ ಹೊಂದಿರುವ ಮೇಲ್ಜಾತಿಗಳು ರಾತ್ರೋರಾತ್ರಿ ಬಡವರಾಗಿಬಿಟ್ಟರು!

ದಲಿತರಿಗೆ ಮೀಸಲಾತಿ ದೊರಕಿಸಿಕೊಡಲು ಡಾ. ಬಿ.ಆರ್.ಅಂಬೇಡ್ಕರ್‍ರವರ ಅವಿರತ ಹೋರಾಟ, ಪರಿಶ್ರಮ ಕಾರಣವಾಗಿತ್ತು. ಹಲವು ಎಡರು ತೊಡರುಗಳ ನಂತರ ಐತಿಹಾಸಿಕ ಹೋರಾಟದ ಫಲವಾಗಿ ದಲಿತರಿಗೆ ರಾಜಕೀಯ ಮತ್ತು ಔದ್ಯೋಗಿಕ-ಶೈಕ್ಷಣಿಕ ಮೀಸಲಾತಿ ದೊರಕಿತು. ಆದರೆ 1950 ರಲ್ಲಿ ಜಾರಿಯಾದ ಭಾರತದ ಸಂವಿಧಾನದಲ್ಲಿ ದಲಿತರಿಗೆ ನೀಡಲಾದ ಮೀಸಲಾತಿಯನ್ನು ಒಂದೇ ವರ್ಷದಲ್ಲಿ ಅಂದರೆ 1951 ರಲ್ಲಿ ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸಲಾಯಿತು. ಆದಾಗ್ಯೂ ಸಂವಿಧಾನಕ್ಕೆ ತರಲಾದ ಮೊಟ್ಟ ಮೊದಲನೇ ತಿದ್ದುಪಡಿಯಿಂದ ಅದನ್ನು ಉಳಿಸಿಕೊಳ್ಳಲಾಯಿತು. ನಂತರ ಮಂಡಲ್ ವರದಿ ಜಾರಿಯಿಂದ ಹಿಂದುಳಿದ ಜಾತಿಗಳಿಗೆ ಮೀಸಲಾತಿ ದೊರಕಿದಾಗಲೂ ಇದೇ ರೀತಿಯಲ್ಲಿ ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸಿದ್ದಕ್ಕಾಗಿ ಕೆಲವೇ ದಿನಗಳಲ್ಲಿ ಮೀಸಲಾತಿ ಪ್ರಮಾಣ ಶೇ. 50 ಮೀರದಂತೆ ತೀರ್ಪು ನೀಡಲಾಯಿತು. ಅದೇ ತೀರ್ಪಿನಲ್ಲಿ ಆರ್ಥಿಕ ಮಾನದಂಡದೊಂದಿಗೆ ಸಾಮಾಜಿಕ ಮಾನದಂಡವೂ ಮೀಸಲಾತಿ ನೀಡುವಲ್ಲಿ ಬಹುಮುಖ್ಯವೆಂದೂ ಹೇಳಲಾಗಿತ್ತು.

ಇನ್ನು ಮಹಿಳೆಯರಿಗೆ ನೀಡಬೇಕಾದ ರಾಜಕೀಯ ಮೀಸಲಾತಿಯ ಬಗ್ಗೆ ಈಗ ಮಾತನಾಡಲು ಯಾರೂ ಬಯಸುತ್ತಿಲ್ಲ ಬಿಡಿ. ಹೀಗೆ ಶೋಷಿತ ಜನಾಂಗಗಳಿಗೆ ಸೌಲಭ್ಯಗಳು ಅಷ್ಟು ಸುಲಭವಾಗಿ ದೊರಕಲಾರವು ಎಂಬುದನ್ನು ನಮ್ಮ ದೇಶದ ಇತಿಹಾಸ ಕೂಗಿ ಕೂಗಿ ಹೇಳುತ್ತಿದೆ. ಆದರೆ ಮತ್ತೊಂದು ಕಡೆ ಮೇಲ್ಜಾತಿಗಳಿಗೆ ಶೇ. 10 ಮೀಸಲಾತಿ ಹತ್ತೇ ದಿನಗಳಲ್ಲಿ ದಕ್ಕಿಬಿಡುತ್ತದೆ. ಶೋಷಿತರ ಮೀಸಲಾತಿ ಶೇ. 50 ಮೀರಬಾರದೆಂದು ಹೇಳಿದ್ದ ಸುಪ್ರೀಂ ಕೋರ್ಟ್ ಮೇಲ್ಜಾತಿಗಳ ವಿಷಯದಲ್ಲಿ ಶೇ. 50 ಮೀರಿದರೂ ಸಹ ಸದ್ಯಕ್ಕೆ ಆ ಆದೇಶಕ್ಕೆ ತಡೆ ನೀಡಲಾಗದು ಎಂದು ಬಿಡುತ್ತದೆ. ಜಾತಿ ಆಧಾರಿತ ಮೀಸಲಾತಿ ಬೇಡವೆಂದು ಬೊಬ್ಬೆಯಿಡುತ್ತಿದ್ದ ಮಂದಿ ‘ಮೇಲ್ಜಾತಿ ಮೀಸಲಾತಿ’ ಯನ್ನು ಅಪ್ಪಿಕೊಂಡು ಹಲ್ಕಿರಿದು ಬಿಡುತ್ತಾರೆ.

ಹೀಗೆ ಶೋಷಿತರಿಗೆ ಮೀಸಲಾತಿಯೆಂಬುದು ಸತತ ದಶಕಗಳ ಹೋರಾಟದಿಂದ, ಹಲವಾರು ಸಮೀಕ್ಷೆಗಳು-ಆಯೋಗಗಳ ಶಿಫಾರಸ್ಸಿನಿಂದ, ನೂರಾರು ಅಂಕಿಅಂಶಗಳ ಪರಿಶೀಲನೆಯಿಂದ, ಪದೇ ಪದೇ ಸಂವಿಧಾನ ತಿದ್ದುಪಡಿಯಿಂದ ದಕ್ಕಿದರೆ, ಸದಾ ಶೋಷಿತರಿಗೆ ನೀಡಿದ ಮೀಸಲಾತಿಯನ್ನು ವಿರೋಧಿಸುತ್ತಲೇ ಬದುಕಿದ ಮೇಲ್ಜಾತಿಗಳಿಗೆ ಇದಾವ ಷರತ್ತುಗಳೂ ಇಲ್ಲದೆ ದಿನ ಬೆಳಗಾಗುವುದರೊಳಗಾಗಿ ಮೀಸಲಾತಿ ಘೋಷಣೆಯಾಗಿ ಬಿಡುತ್ತದೆ. ಅದೂ ಶೇ. 3.5 ರಷ್ಟು ಜನಸಂಖ್ಯೆ ಇರುವವರಿಗೆ ಶೇ. 10 ರಷ್ಟು ಮೀಸಲಾತಿ. ಇದು ಏಕಾಏಕಿ ‘ಋಣಾತ್ಮಕ ತಾರತಮ್ಯ’ ಅಲ್ಲದೆ ಮತ್ತೇನು?

ಹೀಗೆ ಭಾರತದಲ್ಲಿ ಮೀಸಲಾತಿ ಎಂಬುದು ಎಲ್ಲರಿಗೂ ಇಷ್ಟವಾಗಿರುವ ಈ ಸಂದರ್ಭದಲ್ಲಿಯೇ ಕರ್ನಾಟಕದಲ್ಲಿ ವಾಲ್ಮೀಕಿ-ನಾಯಕ ಜನಾಂಗದ ಹೋರಾಟವು ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣವನ್ನು ಶೇ. 3 ರಿಂದ ಶೇ. 7.5 ಕ್ಕೆ ಏರಿಸಲು ಸರ್ಕಾರದ ಮೇಲೆ ಒತ್ತಡ ಹೇರಿದೆ. ವಾಲ್ಮೀಕಿ-ನಾಯಕ ಸಮುದಾಯದ ಈ ಬೇಡಿಕೆ ನಿಜಕ್ಕೂ ಸ್ವಾಗತಾರ್ಹ. ಭಾರತದಲ್ಲಿ ಶೋಷಿತ ಸಮುದಾಯಗಳಿಗೆ ಜನಸಂಖ್ಯಾವಾರು ಮೀಸಲಾತಿಯನ್ನು ನಿಗದಿಪಡಿಸುವುದು ಸಾಂವಿಧಾನಿಕ ಆಶಯಗಳಲ್ಲಿ ಒಂದಾಗಿದೆ. ಹಲವು ದೇಶಗಳು ಅಲ್ಲಿನ ಹಿಂದುಳಿದ ಜನಾಂಗಗಳಿಗೆ ‘ಧನಾತ್ಮಕ ತಾರತಮ್ಯ ಪದ್ಧತಿ’ ನೀತಿಯನ್ನು ಅನುಸರಿಸಿ ಶೋಷಿತ ಜನಾಂಗಗಳ ಜನಸಂಖ್ಯೆಗಿಂತಲೂ ಹೆಚ್ಚು ಮೀಸಲಾತಿಯನ್ನು ಕಲ್ಪಿಸುತ್ತಿರುವ ಸಂದರ್ಭದಲ್ಲಿ ಮೀಸಲಾತಿಯ ಜನಕ ದೇಶವಾದ ಭಾರತದಲ್ಲಿ ಇನ್ನೂ ಜನಸಂಖ್ಯಾವಾರು ಮೀಸಲಾತಿ ದೊರಕದಿರುವುದು ವಿಪರ್ಯಾಸವೇ ಆಗಿದೆ. ಈ ನಿಟ್ಟಿನಲ್ಲಿ ವಾಲ್ಮೀಕಿ-ನಾಯಕ ಜನಾಂಗದ ಮೀಸಲಾತಿ ಹೋರಾಟ ಸ್ವಾಗತಾರ್ಹವಾದರೂ ಹಲವು ಗೊಂದಲ ಮತ್ತು ಅಸ್ಪಷ್ಟತೆಯನ್ನು ಸೃಷ್ಟಿಸಿದೆ. ಇದು ಇಡೀ ಮೀಸಲಾತಿಯ ಮೂಲ ಆಶಯವನ್ನು ಎಷ್ಟರ ಮಟ್ಟಿಗೆ ಎತ್ತಿ ಹಿಡಿಯುತ್ತದೆ ಹಾಗೂ ಮೀಸಲಾತಿ ಪಡೆಯುತ್ತಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ಜಾತಿಗಳ ಹಿತವನ್ನೂ ತನ್ನೊಳಗೆ ಹೇಗೆ ಒಳಗೊಂಡಿದೆ ಎಂಬ ಪ್ರಶ್ನೆಗಳು ಕಾಡುತ್ತಿವೆ.

ನಾನಾಗಲೇ ಹೇಳಿದಂತೆ ವಾಲ್ಮೀಕಿ-ನಾಯಕ ಜನಾಂಗ ಶೋಷಿತ ಜನಾಂಗವಾಗಿದೆ. ಅದು ಕೇಳುತ್ತಿರುವ ಮೀಸಲಾತಿ ಪ್ರಮಾಣ ದಿನಬೆಳಗಾಗುವುದರೊಳಗಾಗಿ ಸಿಕ್ಕಿಬಿಡಲು ಸಾಧ್ಯವೇ ಇಲ್ಲ. ಏಕೆಂದರೆ ಅದು ‘ಮೇಲ್ಜಾತಿ’ ಅಲ್ಲ. ಹೀಗಿರುವಾಗ ವಾಲ್ಮೀಕಿ-ನಾಯಕ ಜನಾಂಗದ ಎದುರು ಹಲವು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಅದರಲ್ಲಿ ಮೊದಲನೆಯದ್ದು, ಶೇ. 3 ರಿಂದ ಶೇ. 7.5 ಕ್ಕೆ ಮೀಸಲಾತಿ ಪ್ರಮಾಣ ಏರಿಕೆಯಾಗಬೇಕೆಂದಿರುವುದು ಇಡೀ ಪರಿಶಿಷ್ಟ ಪಂಗಡಗಳ 49 ಜಾತಿಗಳಿಗಾಗಿರುವಾಗ ಕೇವಲ ವಾಲ್ಮೀಕಿ-ನಾಯಕ ಸಮುದಾಯದ ಹೆಸರೇ ಕೇಳಿ ಬರುತ್ತಿರುವುದೇಕೆ? ಪರಿಶಿಷ್ಟ ಪಂಗಡದ ಒಳಗೆ ಕೊರಗ, ಮಲೆಕುಡಿಯ, ಸೋಲಿಗರಂತಹ ಸೂರು ಕಾಣದ ಜನರಿರುವಾಗ ಅವರನ್ನು ಈ ಹೋರಾಟದ ಮುಂಚೂಣಿಯಾಗಿ ಏಕೆ ಬಿಂಬಿಸಲಾಗಲಿಲ್ಲ? ಈ ಪ್ರಶ್ನೆ ಏಕೆಂದರೆ, ‘ಶೋಷಿತರ ಮೀಸಲಾತಿ’ಯನ್ನು ವಿರೋಧಿಸುವ ‘ಶೋಷಕ ಮೀಸಲಾತಿ ವರ್ಗ’ವೊಂದು ಹುಟ್ಟಿಕೊಂಡಿರುವ ಈ ಸಂದರ್ಭದಲ್ಲಿ ನಮ್ಮ ಶಕ್ತಿಯನ್ನು ಇಮ್ಮಡಿಗೊಳಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಈ ಅನಿವಾರ್ಯತೆಯೇ ಶೋಷಿತರನ್ನು ಒಂದಾಗಿಸಿ ಮುನ್ನಡೆಸಬೇಕಾಗಿರುವ ಈ ಕಾಲಘಟ್ಟದಲ್ಲಿ ನಾವು ಒಂದು ದ್ವೀಪವಾಗಿಬಿಡುವುದು ಅಪಾಯ.

ಎರಡನೆಯ ಪ್ರಶ್ನೆ, ವಾಲ್ಮೀಕಿ-ನಾಯಕ ಮೀಸಲಾತಿ ಹೋರಾಟವು ಬೇಡಿಕೆ ಇಟ್ಟಿರುವ ಹೆಚ್ಚಳ ಮೀಸಲಾತಿಯನ್ನು ಸರ್ಕಾರ ಎಲ್ಲಿಂದ ನೀಡಬೇಕೆಂಬುದು. ಒಂದೋ ಈಗಾಗಲೇ ಹಿಂದುಳಿದ ಜಾತಿಗಳಿಗೆ ನೀಡಿರುವ ಮೀಸಲಾತಿಯಿಂದಲೇ ಪರಿಶಿಷ್ಟ ಪಂಗಡಕ್ಕೆ ಮೀಸಲಾತಿಯನ್ನು ರವಾನಿಸಬೇಕಿದೆ. ಇಲ್ಲವೆ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧವಾಗಿ ಮೀಸಲಾತಿ ಪ್ರಮಾಣವನ್ನು ಶೇ. 50 ಕ್ಕಿಂತಲೂ ಹೆಚ್ಚಿಗೆ ಮಾಡಬೇಕು. ಮೊದಲ ಹಾದಿ ಸುಲಭದ್ದಲ್ಲ, ಅದು ಎರಡು ಶ್ರೇಣೀಕೃತ ಶೋಷಿತ ವರ್ಗಗಳನ್ನು ಪರಸ್ಪರ ವಿರುದ್ಧ ನಿಲ್ಲಿಸುತ್ತದೆ. ಇದರ ಮೂಲಕ ‘ಶೋಷಕ ಮೀಸಲಾತಿ ವರ್ಗ’ ದ ಐತಿಹಾಸಿಕ ದುರಾಸೆಯನ್ನು ನಾವೇ ಸಾಕಾರಗೊಳಿ ಸಿದಂತಾಗುತ್ತದೆ. ಎರಡನೇ ಹಾದಿಯೂ ಸಹ ಸುಲಭವಲ್ಲ, ಆದರೆ ಅಸಾಧ್ಯವೂ ಅಲ್ಲ. ಆದರೆ ಇದಾಗಬೇಕೆಂದರೆ ವಾಲ್ಮೀಕಿ-ನಾಯಕ ಜನಾಂಗದ ಬಲದಿಂದ ಮಾತ್ರ ಸಾಧ್ಯವಾಗುವುದಿಲ್ಲ. ಬದಲಾಗಿ ಇಡೀ ‘ಶೋಷಿತ ಮೀಸಲಾತಿ ವರ್ಗ’ ದ ಬಲ ಬೇಕಿದೆ.

ಮೂರನೆಯ ಪ್ರಶ್ನೆ, ಸಾರ್ವಜನಿಕ ಕ್ಷೇತ್ರದಲ್ಲಿನ ಮೀಸಲಾತಿಯೆಂಬುದಕ್ಕೆ ಈಗ ನಿಜಕ್ಕೂ ಬೆಲೆ ಇದೆಯೇ? ಈ ಪ್ರಶ್ನೆಗೆ ಉತ್ತರ ಹೌದು ಎಂದಾದರೂ ಅದರ ಪ್ರಮಾಣ ನೋಡಿದಾಗ ದಿಗ್ಬ್ರಮೆ ಹುಟ್ಟುತ್ತದೆ. ಚಿಂತಕ ಸುಖದೇವ್ ತೋರಟ್‍ರವರು ಉದಾಹರಿಸುವಂತೆ ನ್ಯಾಷನಲ್ ಸ್ಯಾಂಪಲ್ ಸರ್ವೆ ಪ್ರಕಾರ 2012 ರಲ್ಲಿ ಭಾರತದಲ್ಲಿ ಒಟ್ಟು ಸರ್ಕಾರಿ ಮತ್ತು ಖಾಸಗಿ ಕ್ಷೇತ್ರಗಳೂ ಸೇರಿದಂತೆ 856 ಲಕ್ಷ ಉದ್ಯೋಗಗಳಿದ್ದವು. ಅವುಗಳಲ್ಲಿ ಶೇ. 70 ರಷ್ಟು ಅಂದರೆ ಸುಮಾರು 600 ಲಕ್ಷ ಉದ್ಯೋಗಗಳು ಖಾಸಗಿ ಕ್ಷೇತ್ರದಲ್ಲಿದ್ದವು. ಇನ್ನುಳಿದಂತೆ ಕೇವಲ ಶೇ. 30 ಅಂದರೆ 256 ಲಕ್ಷ ಉದ್ಯೋಗಗಳು ಮಾತ್ರ ಸಾರ್ವಜನಿಕ ಕ್ಷೇತ್ರದವಾಗಿದ್ದವು. ಈ 256 ಲಕ್ಷ ಸರ್ಕಾರಿ ಹುದ್ದೆಗಳಲ್ಲಿ ಶೇ. 40 ರಷ್ಟು ಉದ್ಯೋಗಗಳು ತಾತ್ಕಾಲಿಕವಾದವು. ಉಳಿದ ಶೇ. 60 ಅಂದರೆ ಕೇವಲ 154 ಲಕ್ಷ ಉದ್ಯೋಗಗಳು ಸರ್ಕಾರಿ ಖಾಯಂ ಉದ್ಯೋಗಗಳಾಗಿವೆ. ನಮ್ಮ ದೇಶದ ಮೀಸಲಾತಿ ನೀತಿಯು ಖಾಸಗಿ ಮತ್ತು ತಾತ್ಕಾಲಿಕ ಉದ್ಯೋಗಗಳಿಗೆ ಅನ್ವಯಿಸುವುದಿಲ್ಲವಾದ ಕಾರಣ ಈ 154 ಲಕ್ಷ ಉದ್ಯೋಗಗಳು ಮಾತ್ರ ಮೀಸಲಾತಿ ವ್ಯಾಪ್ತಿಗೆ ಒಳಪಡುತ್ತವೆ. ಹಾಗಾಗಿ ಒಟ್ಟಾರೆ ಭಾರತದ ಉದ್ಯೋಗಗಳಲ್ಲಿ ಕೇವಲ ಶೇ. 18 ರಷ್ಟು ಉದ್ಯೋಗಗಳು ಮಾತ್ರ ಮೀಸಲಾತಿ ವ್ಯಾಪ್ತಿಗೆ ಒಳಪಡುತ್ತವೆ. ಇನ್ನುಳಿದ ಶೇ. 82 ರಷ್ಟು ಉದ್ಯೋಗಗಳಿಗೆ ಮೀಸಲಾತಿ ನೀತಿ ಅನ್ವಯಿಸುವುದಿಲ್ಲ. ಈ ಮೂಲಕ ಮೀಸಲಾತಿ ನೀತಿಯನ್ನೇ ‘ಉದಾರೀಕರಣ ಮತ್ತು ನೂತನ ಆರ್ಥಿಕ ನೀತಿ’ ನುಂಗಿ ನೀರು ಕುಡಿದಿರುವಾಗ ವಾಲ್ಮೀಕಿ-ನಾಯಕ ಹೋರಾಟಕ್ಕೆ ಇದರ ಬಗ್ಗೆ ಯಾವ ಅಭಿಪ್ರಾಯವಿದೆ? ಅದು ಯಾವ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲು ಬಯಸುತ್ತದೆ? ಕಳೆದ ಎರಡು ದಶಕದಿಂದಲೂ ದೇಶಾದ್ಯಂತ ‘ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ’ ಹೋರಾಟ ಸಾಗಿಬರುತ್ತಿರುವಾಗ ಅದರೊಂದಿಗೆ ಗುರುತಿಸಿಕೊಂಡು ಬಲವನ್ನು ಹೆಚ್ಚು ಮಾಡಿಕೊಳ್ಳುವುದರ ಜೊತೆಗೆ ತನ್ನ ಬಲವನ್ನೂ ದಾರೆ ಎರೆಯಬಹುದಲ್ಲವೆ?

ನಾಲ್ಕನೆಯ ಪ್ರಶ್ನೆ, ಸರ್ಕಾರದ ಎಲ್ಲಾ ವಿಭಾಗಗಳಲ್ಲೂ ಮೀಸಲಾತಿ ಇದೆಯೇ? ಉತ್ತರ ಇಲ್ಲ. ಉನ್ನತ ಸೆಕ್ರೆಟೇರಿಯಟ್ ದರ್ಜೆಯ ಹುದ್ದೆಗಳಿಗೆ ಮೀಸಲಾತಿ ಅನ್ವಯಿಸುವ ಪದ್ಧತಿ ನಮ್ಮ ದೇಶದಲ್ಲಿಲ್ಲ. ಮಾರ್ಚ್ 2011 ರಲ್ಲಿ ಪ್ರಧಾನಮಂತ್ರಿ ಕಛೇರಿಯ ರಾಜ್ಯ ಸಚಿವರಾಗಿದ್ದ ವಿ. ನಾರಾಯಣಸ್ವಾಮಿಯವರಿಗೆ ಕೇಂದ್ರ ಸರ್ಕಾರದ ಕಛೇರಿ ಮತ್ತು ಇಲಾಖೆಗಳಲ್ಲಿ ಪಜಾ ಮತ್ತು ಪಪಂ ನೌಕರರ ಪ್ರಮಾಣದ ಬಗ್ಗೆ ಪ್ರಶ್ನೆ ಕೇಳಿದಾಗ ಅವರು ನೀಡಿದ ವರದಿ ಪ್ರಕಾರ 149 ಸೆಕ್ರಟೇರಿಯಟ್ ದರ್ಜೆ ಅಧಿಕಾರಿಗಳಲ್ಲಿ ಒಬ್ಬರೂ ಪರಿಶಿಷ್ಟ ಜಾತಿಯವರಿಲ್ಲ. ಕೇವಲ 4 ಜನ ಮಾತ್ರ ಪರಿಶಿಷ್ಟ ಪಂಗಡದವರಿದ್ದಾರೆ. 108 ಹೆಚ್ಚುವರಿ ಸೆಕ್ರೆಟರಿ ಹುದ್ದೆಗಳಲ್ಲಿ ಪ.ಜಾ ಮತ್ತು ಪ.ಪಂ ದವರು ತಲಾ ಇಬ್ಬರಿದ್ದಾರೆ. 477 ಜಂಟಿ ಸೆಕ್ರೆಟೇರಿಯಟ್ ಹುದ್ದೆಗಳಲ್ಲಿ 31 ಪ.ಜಾ ಮತ್ತು 15 ಜನ ಪ.ಪಂದವರಿದ್ದಾರೆ. 590 ನಿರ್ದೇಶಕರುಗಳ ಹುದ್ದೆಯಲ್ಲಿ 17 ಪ.ಜಾಗಳು ಮತ್ತು 7 ಪ.ಪಂದವರಿದ್ದಾರೆ. ಇನ್ನು 73 ಇಲಾಖೆಗಳಲ್ಲಿ 25,037 ಪ.ಜಾಗಳ ಬ್ಯಾಕ್‍ಲಾಗ್ ಹುದ್ದೆಗಳು ಖಾಲಿಯಿದ್ದವು. ಪ್ರೊಮೋಷನ್ ಹುದ್ದೆಗಳಲ್ಲಿ 4,518 ಖಾಲಿ ಉಳಿದಿವೆ. ಅದೇ ರೀತಿ ಪ.ಪಂಗಳ 28,173 ಬ್ಯಾಕ್‍ಲಾಗ್ ಹುದ್ದೆಗಳು ಖಾಲಿ ಉಳಿದಿದ್ದು 7,416 ಬಡ್ತಿ ಹುದ್ದೆಗಳು ನೆನೆಗುದಿಗೆ ಬಿದ್ದಿವೆ. ಆಶ್ಚರ್ಯಕರವೆಂದರೆ 2011 ರಲ್ಲಿಯೂ ಸಹ ಸಫಾಯಿ ಕರ್ಮಚಾರಿಗಳ ಪ್ರಮಾಣದಲ್ಲಿ ಪ.ಜಾಗಳ ಸಂಖ್ಯೆ 40% ಇದೆ. ಈ ಪ್ರಮಾಣ ಬಹುತೇಕ ಈಗಲೂ ಅಷ್ಟೇ ಇರುತ್ತದೆ. ಬಹುಶಃ ಕಡಿಮೆಯಾಗಿದ್ದರೂ ಹೆಚ್ಚಂತು ಆಗಿರಲಿಕ್ಕೆ ಸಾಧ್ಯವೇ ಇಲ್ಲ. ಇಲ್ಲಿ ಗಮನಿಸಬೇಕಾದ ಬಹುಮುಖ್ಯ ವಿಚಾರವೆಂದರೆ ಉತ್ತರ ಭಾರತದ ಸಫಾಯಿ ಕರ್ಮಚಾರಿಗಳು ಬಹುತೇಕ ವಾಲ್ಮೀಕಿ ಸಮುದಾಯದವರೇ ಆಗಿದ್ದಾರೆ. ಹೀಗಿರುವಾಗ ಉನ್ನತ ಹುದ್ದೆಗಳಲ್ಲಿಯೂ ಮೀಸಲಾತಿ ಬೇಡಿಕೆಯನ್ನು ಮುಂದಿಟ್ಟುಕೊಂಡು ವಾಲ್ಮೀಕಿ-ನಾಯಕ ಸಮುದಾಯ ಹೋರಾಟ ರೂಪಿಸಬೇಕೇ ಬೇಡವೆ? ರೂಪಿಸಿದರೆ ಆ ಹೋರಾಟದಲ್ಲಿ ದಲಿತರು, ಇತರೆ ಆದಿವಾಸಿಗಳು, ಅಲ್ಪಸಂಖ್ಯಾತರು, ಹಿಂದುಳಿದ ಜಾತಿಯವರೂ ಇರಬೇಕಲ್ಲವೆ?

ಈ ನಾಲ್ಕು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳದೆ ವಾಲ್ಮೀಕಿ-ನಾಯಕ ಮೀಸಲಾತಿ ಹೋರಾಟ ಯಶಸ್ವಿ ಹೆಜ್ಜೆ ಇಡುವುದಕ್ಕೆ ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿದೆ. ತನ್ನ ವರ್ಗದ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿಕೊಳ್ಳಬೇಕೆಂದರೆ ಅದು ತನ್ನಿತರ 48 ಜಾತಿಗಳ ಜೊತೆಗೆ ದಲಿತರನ್ನು, ಹಿಂದುಳಿದ ಜಾತಿಗಳನ್ನು ಒಟ್ಟುಗೂಡಿಸಿಕೊಂಡು ಜನಸಂಖ್ಯಾವಾರು ಮೀಸಲಾತಿಗೆ ಅಡ್ಡಗಾಲಾಗಿರುವ ಶೇ. 50 ಎಂಬ ‘ಮನುಗೋಡೆ’ ಯನ್ನು ಹೊಡೆದುರುಳಿಸಬೇಕಿದೆ. ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿಯನ್ನು ಪಡೆದೇ ತೀರಬೇಕಿದೆ. ಇತರರ ಹಿತದಲ್ಲಿ ಮಾತ್ರ ತನ್ನ ಹಿತವಿದೆ ಎಂಬ ಸತ್ಯವನ್ನು ಸಾಬೀತು ಮಾಡಬೇಕಿದೆ.

ಇಷ್ಟರ ಮೇಲೂ ಕಾಡುವ ಮತ್ತಷ್ಟು ಪ್ರಶ್ನೆಗಳಿವೆ. ಕೇಂದ್ರ ಸರ್ಕಾರದ ನೀತಿಯಿಂದಾಗಿ ಸುಪ್ರೀಂಕೋರ್ಟ್ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿರುದ್ಧ ದೌರ್ಜನ್ಯ ತಡೆ ಕಾಯ್ದೆಯನ್ನು ದುರ್ಬಲಗೊಳಿಸಿದಾಗ ಆ ಕ್ರಮದ ವಿರುದ್ಧ ವಾಲ್ಮೀಕಿ-ನಾಯಕ ಜನಾಂಗದ ಪಾತ್ರವೇನಿತ್ತು? ಒಡ್ಡಲೇಬೇಕಾದಷ್ಟು ಪ್ರತಿರೋಧವನ್ನು ಒಡ್ಡಿತೆ? ಉತ್ತರ ಕರ್ನಾಟಕ ಮತ್ತು ಮಧ್ಯ ಕರ್ನಾಟಕದ ಹಲವು ಕಡೆ ಸವರ್ಣೀಯರಂತೆಯೇ ದಲಿತರ ಮೇಲೆ ದೌರ್ಜನ್ಯವೆಸಗುವುದರಲ್ಲಿ ಮುಂದಿರುವ ವಾಲ್ಮೀಕಿ-ನಾಯಕ ಜನಾಂಗದ ಸೋದರರ ಬಗ್ಗೆ ಒಮ್ಮೆಯೂ ದನಿ ಎತ್ತಿಲ್ಲವೇಕೆ? ದಲಿತರೊಂದಿಗೆ ಅಟ್ರಾಸಿಟಿ ಕಾಯ್ದೆಯಲ್ಲಿ ಪಾಲು ಹಂಚಿಕೊಳ್ಳುವ ವಾಲ್ಮೀಕಿ-ನಾಯಕ ಬಾಂಧವರು ಅದೇ ರೀತಿಯ ಅಟ್ರಾಸಿಟಿಯನ್ನು ದಲಿತರ ಮೇಲೆ ತಮ್ಮದೇ ಜನಾಂಗದವರು ನಡೆಸುತ್ತಿರುವುದನ್ನು ನೋಡುತ್ತ ಶೋಷಕರ ಪರ ನಿಲ್ಲುವುದೇಕೆ? ಇಂತಹ ಪ್ರಶ್ನೆಗಳಿಗೆ ಆದಷ್ಟು ಬೇಗ ಪರಿಹಾರ ಕಂಡುಕೊಂಡರೆ ದಲಿತರೊಟ್ಟಿಗೆ ವಿಮೋಚನೆಯ ಹಾದಿಯನ್ನು ಹಿಡಿಯಲು ಪರಸ್ಪರ ಸಹಕಾರಿಯಾಗುತ್ತದೆ. ಏಕಕಾಲದಲ್ಲಿ ದಲಿತರ ಮೇಲಿನ ದೌರ್ಜನ್ಯದ ವಿಚಾರದಲ್ಲಿ ಶೋಷಕರಾಗಿಯೂ, ಮೀಸಲಾತಿಯಂತಹ ಸೌಲಭ್ಯಗಳ ವಿಚಾರದಲ್ಲಿ ಶೋಷಿತರಾಗಿಯೂ ವರ್ತಿಸುವುದು ವಿಶ್ವಾಸಾರ್ಹತೆಯ ಮೇಲೆ ಪೆಟ್ಟು ನೀಡುತ್ತದೆ. ಮುಂಚೂಣಿ ನಾಯಕರು ಇದನ್ನು ಬಹಳ ಗಂಭೀರವಾಗಿ ತೆಗೆದುಕೊಳ್ಳಬೇಕಿದೆ.

ಕೊನೆಯದಾಗಿ ಹೇಳಲೇಬೇಕಾದ ವಿಷಯವೊಂದಿದೆ. ಯಾವುದೇ ಶೋಷಿತ ಜನಾಂಗದ ಯಾವುದೇ ಹೋರಾಟದ ಯಶಸ್ವಿ ಅದು ಇತರೆ ಶೋಷಿತ ಜನಾಂಗದೊಡನೆ ಹೊಂದಿರುವ ಸಂಬಂಧದ ಮೇಲೆ ಅವಲಂಭಿತವಾಗಿದೆ. ಈ ನಿಬಂಧನೆ ದಲಿತರು, ಮುಸ್ಲಿಮರು, ಇತರೆ ಅಲ್ಪ ಸಂಖ್ಯಾತರು, ಮಹಿಳೆಯರು, ಹಿಂದುಳಿದ ಜಾತಿಗಳು ಸೇರಿದಂತೆ ವಾಲ್ಮೀಕಿ-ನಾಯಕ ಜನಾಂಗಗಳಿಗೂ ಒಳಪಡುತ್ತದೆ. ಶೋಷಿತ ಜನಾಂಗವನ್ನು ಸಾಮುದಾಯಿಕವಾಗಿ ವಿಮೋಚನೆಗೊಳಿಸುವ ಶೋಷಕ ಜನಾಂಗ ಇದುವರೆಗೂ ಹುಟ್ಟಿಲ್ಲವೆಂಬುದೂ ಸಹ ಸತ್ಯವಾಗಿದೆ. ಇವೆರಡು ಸತ್ಯವನ್ನು ತಿಳಿಯದೇ ನಾವು ಮುಂದಿಡುವ ಪ್ರತಿ ಹೆಜ್ಜೆಯೂ ನಮಗೆ ಮುಳುವಾಗುತ್ತದೆ. ನಾವು ಎಸಗುವ ಸಣ್ಣ ಸಣ್ಣ ತಪ್ಪುಗಳಿಂದ ನಮ್ಮ ಜನಾಂಗದ ಪೀಳಿಗೆ ಶೋಷಕರ ದಾಳಗಳಾಗಿ ನಮಗಿಂತಲೂ ಹೀನಾಯವಾದ ಪರಿಸ್ಥಿತಿಯಲ್ಲಿ
ಬಾಳಬೇಕಾಗುತ್ತದೆ.


ಇದನ್ನೂ ಓದಿ: ಮೀಸಲಾತಿ ಕುರಿತ ಮೂರು ತಪ್ಪು ಕಲ್ಪನೆಗಳಿಗೆ ಸರಳ ಉತ್ತರಗಳು..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...