ತಮಿಳುನಾಡಿನ ಕೊಯಮುತ್ತೂರಿನ ಜಿಲ್ಲೆಯ ಅಲಂದುರೈ ಸರ್ಕಾರಿ ಶಾಲೆಯಲ್ಲಿ ನಡೆದ ವೈದ್ಯಕೀಯ ಶಿಬಿರದಲ್ಲಿ 12 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಕೊಯಮತ್ತೂರಿನ ಪೆರೂರ್ ಮಹಿಳಾ ಠಾಣೆ (ಎಡಬ್ಲ್ಯುಪಿಎಸ್) ಪೊಲೀಸರು ಶುಕ್ರವಾರ (ಸೆ.6) ವೈದ್ಯರೊಬ್ಬರನ್ನು ಬಂಧಿಸಿದ್ದಾರೆ ಎಂದು ವರದಿಗಳು ಹೇಳಿವೆ.
ಸರ್ಕಾರದ ಮುಖ್ಯ ಕಾರ್ಯದರ್ಶಿ ಎನ್ ಮುರುಗಾನಂದಂ ಅವರ ಆದೇಶದ ಮೇರೆಗೆ ಆಯೋಜಿಸಿದ್ದ ಶಿಕ್ಷಣಾಧಿಕಾರಿಗಳು ಮತ್ತು ವಿದ್ಯಾರ್ಥಿಗಳ ನಡುವಿನ ಸಭೆಯಲ್ಲಿ ಲೈಂಗಿಕ ದೌರ್ಜನ್ಯದ ಘಟನೆ ಬೆಳಕಿಗೆ ಬಂದಿದೆ.
ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ವಾಲ್ಪಾರೈನ ಸರ್ಕಾರಿ ಕಾಲೇಜಿನ ನಾಲ್ವರು ಸಿಬ್ಬಂದಿಯನ್ನು ಇತ್ತೀಚೆಗೆ ಬಂಧಿಸಲಾಗಿತ್ತು. ಈ ಹಿನ್ನೆಲೆ ರಾಜ್ಯಾದ್ಯಂತ ಶಿಕ್ಷಣಾಧಿಕಾರಿಗಳು ಮತ್ತು ವಿದ್ಯಾರ್ಥಿಗಳ ನಡುವಿನ ಸಭೆಗಳನ್ನು ಆಯೋಜಿಸುವಂತೆ ಆದೇಶಿಸಲಾಗಿತ್ತು.
ಬಂಧಿತ ವೈದ್ಯನನ್ನು ತಿರುಪತ್ತೂರು ಜಿಲ್ಲೆಯ 33 ವರ್ಷದ ಎಸ್ ಸರವಣಮೂರ್ತಿ ಎಂದು ಗುರುತಿಸಲಾಗಿದೆ. ಇವರು ಇಶಾ ಫೌಂಡೇಶನ್ ನಿರ್ವಹಿಸುವ ಸಂಚಾರಿ ವೈದ್ಯಕೀಯ ಘಟಕಗಳ ತಂಡದ ಭಾಗವಾಗಿದ್ದರು. ಈ ಘಟಕಗಳು ತಮ್ಮ ‘ಆಕ್ಷನ್ ಫಾರ್ ರೂರಲ್ ರಿಜುವೆನೇಶನ್’ ಕಾರ್ಯಕ್ರಮದ ಅಡಿಯಲ್ಲಿ ಕೊಯಮತ್ತೂರಿನಾದ್ಯಂತ ಶಾಲಾ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಉಚಿತ ವೈದ್ಯಕೀಯ ಶಿಬಿರಗಳನ್ನು ನಡೆಸುತ್ತಿವೆ ಎಂದು ವರದಿಯಾಗಿದೆ.
ಸೆಪ್ಟೆಂಬರ್ 4, ಬುಧವಾರದಂದು ಶಿಕ್ಷಣಾಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ 6 ರಿಂದ 10ನೇ ತರಗತಿಯ ಸುಮಾರು 12 ವಿದ್ಯಾರ್ಥಿನಿಯರು ವೈದ್ಯಕೀಯ ಶಿಬಿರಗಳಲ್ಲಿ ಸರವಣಮೂರ್ತಿ ಅವರು ಹೇಗೆ ಅನುಚಿತವಾಗಿ ತಮ್ಮನ್ನು ಸ್ಪರ್ಶಿಸಿದರು ಎಂಬುವುದರ ಕುರಿತು ದೂರು ನೀಡಿದ್ದಾರೆ.
ಕೂಡಲೇ, ಶಾಲೆಯ ಆಡಳಿತ ಮಂಡಳಿ ಮಕ್ಕಳ ಕಲ್ಯಾಣ ಸಮಿತಿಗೆ (ಸಿಡಬ್ಲ್ಯುಸಿ) ಈ ಕುರಿತು ಮಾಹಿತಿ ನೀಡಿದೆ. ಸಿಡಬ್ಲ್ಯುಸಿ ವಿದ್ಯಾರ್ಥಿಗಳನ್ನು ವಿಚಾರಣೆ ನಡೆಸಿ, ಪ್ರಕರಣವನ್ನು ಪೇರೂರ್ ಮಹಿಳಾ ಪೊಲೀಸರಿಗೆ ವರ್ಗಾಯಿಸಿದೆ.
ಪೊಲೀಸ್ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಸಂತ್ರಸ್ತ್ರ ವಿದ್ಯಾರ್ಥಿನಿಯರಲ್ಲಿ ಪ್ರತಿಯೊಬ್ಬರನ್ನೂ ವೈಯಕ್ತಿಕವಾಗಿ ಮಾತನಾಡಿಸಿದ್ದಾರೆ. ವಿದ್ಯಾರ್ಥಿನಿಯರ ಹೇಳಿಕೆಗಳನ್ನು ದಾಖಲಿಸಿದ ನಂತರ, ಆರೋಪಿ ವೈದ್ಯನ ವಿರುದ್ಧ ಸೆಕ್ಷನ್ 9 (ಇ) (ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಯ ಆಡಳಿತ ಅಥವಾ ಸಿಬ್ಬಂದಿ ಆಸ್ಪತ್ರೆಯಲ್ಲಿ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗುವುದು) 10 (ಶಿಕ್ಷೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಜೊತೆಗೆ ಪೋಕ್ಸೋ ಕಾಯ್ದೆಯ (ಲೈಂಗಿಕ ದೌರ್ಜನ್ಯ) ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. ಸದ್ಯ, ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ಬೆನ್ನಲ್ಲೇ ಪ್ರಕಟಣೆ ಹೊರಡಿಸಿರುವ ಇಶಾ ಫೌಂಡೇಶನ್, “ಕೊಯಮತ್ತೂರಿನ ಗ್ರಾಮಾಂತರ ಪ್ರದೇಶಗಳಲ್ಲಿ ನಮ್ಮ ಔಟ್ರೀಚ್ ಮೊಬೈಲ್ ವೈದ್ಯಕೀಯ ಸೇವೆಯ ವೈದ್ಯನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂಬುವುದು ನಮ್ಮ ಗಮನಕ್ಕೆ ಬಂದಿದೆ. ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಯಾವುದೇ ಅಪರಾಧ ಪ್ರಕರಣಗಳಲ್ಲಿ ಆರೋಪಿಯ ಮೇಲೆ ಇಶಾ ಶೂನ್ಯ ಸಹಿಷ್ಣುತೆಯ ನೀತಿಯನ್ನು ಹೊಂದಿದೆ. ಪ್ರಸ್ತುತ ನಡೆಯುತ್ತಿರುವ ಪೊಲೀಸ್ ತನಿಖೆಗೆ ನಾವು ಸಹಕರಿಸುತ್ತಿದ್ದೇವೆ ಮತ್ತು ಕಾನೂನು ಮೂಲಕ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದೆ.
ಇದನ್ನೂ ಓದಿ : ಕುಸ್ತಿಪಟುಗಳ ಪ್ರತಿಭಟನೆ ನನ್ನ ವಿರುದ್ಧ ನಡೆಸಿದ ಪಿತೂರಿ ಎಂಬುದು ಸಾಬೀತಾಗಿದೆ: ಬ್ರಿಜ್ ಭೂಷಣ್ ಶರಣ್ ಸಿಂಗ್


