ದೆಹಲಿ ವಿಮಾನ ನಿಲ್ದಾಣದಲ್ಲಿ ಇಬ್ಬರು ಮುಸ್ಲಿಂ ವ್ಯಕ್ತಿಗಳು ತನ್ನ ಆ್ಯಪಲ್ ವಾಚ್ ಕಳವು ಮಾಡಿದ್ದಾರೆ ಎಂದು ವೈದ್ಯರೊಬ್ಬರು ಸುಳ್ಳು ಆರೋಪ ಮಾಡಿ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ. ವೈದ್ಯನ ಆರೋಪದ ಬಗ್ಗೆ ಪರಿಶೀಲನೆ ನಡೆಸಿರುವ ಭದ್ರತಾ ತಂಡ ಸಿಐಎಸ್‌ಎಫ್, ಅವರ ಆರೋಪ ಸುಳ್ಳು ಎಂದಿದೆ.
ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ 3ರಲ್ಲಿ ತನ್ನ ಆಪಲ್ ವಾಚ್ ಕಳ್ಳತನವಾಗಿದೆ ಎಂದು ಡಾ.ತುಷಾರ್ ಮೆಹ್ತಾ ಎಂಬವರು ಜನವರಿ 25ರಂದು ಎಕ್ಸ್ ನಲ್ಲಿ ಬರೆದುಕೊಂಡಿದ್ದರು. ಸುಹೈಬ್ ಮತ್ತು ಎಂ.ಡಿ ಸಾಕಿಬ್ ಎಂದು ಗುರುತಿಸಲಾದ ಇಬ್ಬರು ವ್ಯಕ್ತಿಗಳು ಆಪಾದಿತ ಕಳ್ಳತನದಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಿದ್ದರು. ಈ ಕುರಿತು ವಾಸ್ತವಾಂಶ ಪರಿಶೀಲನೆ ನಡೆಸದೆ ಮಾಧ್ಯಮಗಳು ಧಾವಂತದಲ್ಲಿ ಸುದ್ದಿ ಪ್ರಕಟಿಸಿತ್ತು.
ಸಾಮಾಜಿಕ ಮಾಧ್ಯಮಗಳಲ್ಲಿ ತುಷಾರ್ ಮೆಹ್ತಾ ಅವರ ಪೋಸ್ಟ್ ಚರ್ಚೆಗೆ ಒಳಗಾಗುತ್ತಿದ್ದಂತೆ ಪರಿಶೀಲನೆ ನಡೆಸಿದ ಸಿಐಎಸ್‌ಎಫ್, ಯಾವುದೇ ಕಳ್ಳತನದ ಘಟನೆಗಳು ನಡೆದಿಲ್ಲ ಎಂದಿದೆ.
ಡಾ.ತುಷಾರ್ ಮೆಹ್ತಾ ಪೋಸ್ಟ್‌ನಲ್ಲಿ ಏನಿತ್ತು?
“ಇಂದು ವಿಚಿತ್ರ ಮತ್ತು ಆಘಾತಕಾರಿ ಘಟನೆಯೊಂದು ನಡೆಯಿತು. ನಾನು ದೆಹಲಿ ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆಗಾಗಿ ನನ್ನ ಆ್ಯಪಲ್ ವಾಚ್‌ನ್ನು ಟ್ರೇನಲ್ಲಿ ಇರಿಸಿದ್ದೆ. ಸ್ಕ್ಯಾನರ್ ದಾಟಿ ಮುಂದೆ ಬಂದಾಗ ನಾನು ವಸ್ತುಗಳನ್ನು ಮತ್ತೆ ನನ್ನ ಲ್ಯಾಪ್‌ಟಾಪ್ ಬ್ಯಾಗ್‌ಗೆ ತುಂಬಲು ಪ್ರಾರಂಭಿಸಿದೆ. ಈ ವೇಳೆ ಏನೋ ಕಾಣೆಯಾಗಿದೆ ಎಂದು ನನಗೆ ಅನಿಸಿತು. ಆಗ ನನ್ನ ವಾಚ್ ಕಾಣಿಸುತ್ತಿಲ್ಲ ಎಂಬುವುದು ನನ್ನ ಗಮನಕ್ಕೆ ಬಂತು. ನಾನು ಅಲ್ಲಿ ನಿಂತಿದ್ದ ಸಿಐಎಸ್‌ಎಫ್ ಸಿಬ್ಬಂದಿಗೆ ಈ ಬಗ್ಗೆ ಕೇಳಿದೆ. ಅವರು ನನ್ನ ಬ್ಯಾಗ್, ಪಾಕೆಟ್ ಇತ್ಯಾದಿಗಳನ್ನು ಮತ್ತೆ ನೋಡುವಂತೆ ಹೇಳಿದರು. ಅದನ್ನು ನಾನು ಮೊದಲೇ ಪರಿಶೀಲಿಸಿದ್ದೆ, ನಾನು ಕುತೂಹಲದಿಂದ ತಿರುಗಿ ನಡೆದುಕೊಂಡು ಹೋಗುವಾಗ ಯಾರೋ ನನ್ನತ್ತ ಹಿಂತಿರುಗಿ ನೋಡುತ್ತಿರುವುದನ್ನು ನೋಡಿದೆ. ನಾನು ಆ ವ್ಯಕ್ತಿಯನ್ನು ಹಿಂಬಾಲಿಸಿದೆ. ಕೆಲವು ಹೆಜ್ಜೆ ಮುಂದೆ ನಡೆದಾಗ, ನಾನು ಆ ವ್ಯಕ್ತಿ ವಾಚ್ ಅಂಗಡಿಯೊಂದರಲ್ಲಿ ನಿಂತಿರುವುದನ್ನು ಗಮನಿಸಿದೆ. ನಾನು ತಕ್ಷಣ ಅವನ ಬಳಿಗೆ ಹೋಗಿ ಅವನ ಪ್ಯಾಂಟ್ ಜೇಬಿನಲ್ಲಿದ್ದ ವಾಚ್ ತೆಗೆದುಕೊಂಡೆ. ಈ ವೇಳೆ ಸಂಬಂಧವಿಲ್ಲದಿದ್ದರೂ ವಾಚ್ ಅಂಗಡಿಯವ ನನ್ನ ಜೊತೆ ಕೆಟ್ಟದಾಗಿ ವರ್ತಿಸಿದ. ಇದರಿಂದಾಗಿ ಅವರಿಬ್ಬರು ಮೊದಲೇ ಪರಿಚಯಸ್ಥರು ಎಂದು ನನಗೆ ಮನವರಿಕೆಯಾಯಿತು. ಬಳಿಕ ನಮ್ಮ ನಡುವೆ ವಾಗ್ವಾದ ನಡೆಯಿತು. ಅಷ್ಟರಲ್ಲಿ ಇನ್ನೋರ್ವ ಅಲ್ಲಿಂದ ಪರಾರಿಯಾಗಿದ್ದಾನೆ. ವಿಮಾನಕ್ಕೆ ತಡವಾಗಿದ್ದರಿಂದ ನಾನು ಅಲ್ಲಿಂದ ಹೊರಟು ಬಂದೆ. ಈ ವೇಳೆ ಸಿಐಎಸ್‌ಎಫ್ ಸಿಬ್ಬಂದಿ ಅಂಗಡಿಯವನ ಜೊತೆ ಬಂದು ನಾನು ಕೆಟ್ಟ ವರ್ತನೆ ಮಾಡಿದ್ದೇನೆ ಎಂದು ಕ್ಷಮೆ ಕೇಳುವಂತೆ ಸೂಚಿಸಿದ್ದಾರೆ. ಈ ವೇಳೆ ನಾನು ಸಿಐಎಸ್‌ಎಫ್‌ನ ಹಿರಿಯ ಅಧಿಕಾರಿಗೆ ಕರೆ ಮಾಡಿ ಮಾತನಾಡಿದೆ. ಆ ಬಳಿಕ ಸಿಐಎಸ್‌ಎಫ್ ಸಿಬ್ಬಂದಿ ನನಗೆ ತೆರಳಲು ಅನುವು ಮಾಡಿಕೊಟ್ಟರು. ವಾಚ್ ಅಂಗಡಿಯವನ ಹೆಸರು ಸುಹೈಬ್ ಮತ್ತು ಕಳ್ಳತನ ಮಾಡಿದ ವ್ಯಕ್ತಿಯ ಹೆಸರು ಎಂ.ಡಿ ಸಾಕಿಬ್. ಭದ್ರತಾ ತಪಾಸಣೆ ವೇಳೆ ನಿಮ್ಮ ವಸ್ತುಗಳ ಬಗ್ಗೆ ದಯವಿಟ್ಟು ಗಮನ ಇಟ್ಟುಕೊಳ್ಳಿ” ಎಂದು ಡಾ.ತುಷಾರ್ ಮೆಹ್ತಾ ಎಕ್ಸ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದರು.

ವಾಸ್ತವವೇನು?
ಡಾ.ತುಷಾರ್ ಮೆಹ್ತಾ ಅವರ ಆರೋಪವನ್ನು ಗಂಭೀರವಾಗಿ ಪರಿಗಣಿಸಿದ್ದ ಸಿಐಎಸ್‌ಎಫ್ ಸಿಬ್ಬಂದಿ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಿ ಈ ಬಗ್ಗೆ ತನಿಖೆ ನಡೆಸಿದೆ. ಈ ವೇಳೆ ಡಾ. ಮೆಹ್ತಾ ಅವರೇ ಟ್ರೇಯಿಂದ ತಮ್ಮ ವಾಚ್‌ನ್ನು ತೆಗೆದುಕೊಂಡು ಬೋರ್ಡಿಂಗ್ ಗೇಟ್‌ಗೆ ಹೋಗುವ ಮೊದಲು ಅದನ್ನು ಧರಿಸಿದ್ದರು ಎನ್ನುವುದು ದೃಶ್ಯಾವಳಿಯಲ್ಲಿ ಸೆರೆಯಾಗಿದೆ. ಮೆಹ್ತಾ ಹೇಳಿರುವಂತೆ ಯಾವುದೇ ಸಿಐಎಸ್‌ಎಫ್ ಸಿಬ್ಬಂದಿಯೊಂದಿಗೆ ಅವರು ಮಾತುಕತೆ ನಡೆಸಿರುವ ಬಗ್ಗೆ ಅಥವಾ ಇತರ ವ್ಯಕ್ತಿಗಳ ಅನುಮಾನಾಸ್ಪದ ನಡವಳಿಕೆಯ ಬಗ್ಗೆ ಪುರಾವೆಗಳಿಲ್ಲ ಎಂದು ಅಧಿಕೃತ ಹೇಳಿಕೆಯಲ್ಲಿ ಸಿಐಎಸ್‌ಎಫ್ ಸ್ಪಷ್ಟಪಡಿಸಿದೆ.

ದೆಹಲಿ ವಿಮಾನ ನಿಲ್ದಾಣದ ಅಧಿಕಾರಿಗಳು ಕೂಡ ಸಿಐಎಸ್‌ಎಫ್ ಪರಿಶೀಲನೆ ನಡೆಸಿ ವಾಸ್ತವಾಂಶವನ್ನು ಪತ್ತೆ ಹಚ್ಚಿರುವುದನ್ನು ಒಪ್ಪಿಕೊಂಡಿದೆ.

ಸಿಐಎಸ್‌ಎಫ್ ವಾಸ್ತವಾಂಶ ಪತ್ತೆ ಹಚ್ಚಿದ ಬಳಿಕ ಡಾ. ಮೆಹ್ತಾ ತಮ್ಮ ಪೋಸ್ಟ್ ಅನ್ನು ಡಿಲಿಟ್ ಮಾಡಿದ್ದಾರೆ.
ಡಾ.ತುಷಾರ್ ಮೆಹ್ತಾ ಅವರ ಸುಳ್ಳು ಆರೋಪ ಮತ್ತು ಆ ಬಳಿಕ ಸಿಐಎಸ್‌ಎಫ್, ದೆಹಲಿ ವಿಮಾನ ನಿಲ್ದಾಣದ ಅಧಿಕಾರಿಗಳು ನೀಡಿರುವ ಸ್ಪಷ್ಟೀಕರಣದ ಪೋಸ್ಟ್‌ಗಳ ಸ್ಕ್ರೀನ್ ಶಾಟ್‌ಗಳನ್ನು ಖ್ಯಾತ ಫ್ಯಾಕ್ಟ್‌ಚೆಕ್ಕರ್ ಮೊಹಮ್ಮದ್ ಝುಬೈರ್ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.
An X post by Dr. Tushar Mehta claiming his Apple watch was nearly stolen at Delhi airport went viral. Several News channels wrote articles based on his tweet. Soon after a clarification by @CISFAirport and @DelhiAirport, Dr. Tushar deleted his tweet. pic.twitter.com/ShwsHMDbHC
— Mohammed Zubair (@zoo_bear) January 26, 2025
ಬಲಪಂಥೀಯ ಸುದ್ದಿ ವೆಬ್‌ಸೈಟ್ OpIndia (ಓಪ್ ಇಂಡಿಯಾ) “ದೆಹಲಿ ವಿಮಾನ ನಿಲ್ದಾಣದಲ್ಲಿ ಸುಹೈಬ್ ಮತ್ತು ಸಾಕಿಬ್ ತನ್ನ ವಾಚ್ ಕದ್ದಿರುವುದಾಗಿ ವೈದ್ಯ ಡಾ. ತುಷಾರ್ ಮೆಹ್ತಾ ಆರೋಪಿಸಿದ್ದಾರೆ” ಎಂದು ಜನವರಿ 27ರಂದು ಸುದ್ದಿ ಪ್ರಕಟಿಸಿದೆ. ಆದರೆ, ಜನವರಿ 25ರಂದೇ ಆ ರೀತಿಯ ಘಟನೆ ನಡೆದಿಲ್ಲ ಎಂದು ಸಿಐಎಸ್‌ಎಫ್ ಸ್ಪಷ್ಟನೆ ಕೊಟ್ಟಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಮೊಹಮ್ಮದ್ ಝುಬೈರ್ “ಸಿಐಎಸ್‌ಎಫ್ ಸ್ಪಷ್ಟೀಕರಣದ ಬಳಿಕವೂ ಓಪ್ ಇಂಡಿಯಾ ಈ ರೀತಿ ಸುದ್ದಿ ಪ್ರಕಟಿಸಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.
Despite clarification by CISF, Propaganda website @OpIndia_com reshares the article without including their statement. https://t.co/xeZiwJ47hQ pic.twitter.com/RYF1luU05n
— Mohammed Zubair (@zoo_bear) January 27, 2025
ಒಟ್ಟಿನಲ್ಲಿ, ಉನ್ನತ ಮಟ್ಟದ ಅಕ್ಷರಸ್ಥ ವೈದ್ಯ ಎನ್ನಲಾದ ವ್ಯಕ್ತಿ ಇಬ್ಬರು ಮುಸ್ಲಿಂ ವ್ಯಕ್ತಿಗಳ ಹೆಸರುಗಳನ್ನು ಉಲ್ಲೇಖಿಸಿ ಸುಳ್ಳಾರೋಪ ಮಾಡಿರುವುದು ವಿಪರ್ಯಾಸ. ಅವರು ಯಾವ ಕಾರಣಕ್ಕೆ ಕೋಮು ಬಣ್ಣದ ಸುಳ್ಳು ಕಥೆ ಕಟ್ಟಿದರು ಎಂದು ಗೊತ್ತಾಗಿಲ್ಲ.
ಸುಳ್ಳು ಸುದ್ದಿ ಹಬ್ಬಿದ ಡಾ. ಮೆಹ್ತಾ ವಿರುದ್ಧ ಪೊಲೀಸ್ ದೂರು ದಾಖಲಿಸಲು ಸಿಐಎಸ್‌ಎಫ್ ಮತ್ತು ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ ಚಿಂತನೆ ನಡೆಸುತ್ತಿವೆ ಎಂದು ವರದಿಯಾಗಿದೆ.
Fact Check | ಈ ಯುವತಿಯನ್ನು ಕೊಂದಿದ್ದು ಅವರ ಪ್ರೇಮಿ ಯುವರಾಜ್ ಸಿಂಗ್, ಮೊಹಮ್ಮದ್ ಹಮೀದ್ ಅಲ್ಲ


