ಬಾಲಕನೊಬ್ಬನ ಕುತ್ತಿಗೆ ಪಕ್ಕದಿಂದ ಎದೆಗೂಡಿನೊಳಗೆ ಹೊಕ್ಕಿದ್ದ ತೆಂಗಿನ ಗರಿಯ ದಿಂಡನ್ನು ಮಂಗಳೂರಿನ ಸರ್ಕಾರಿ ವೆನ್ಲಾಕ್ ಜಿಲ್ಲಾಸ್ಪತ್ರೆ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆದಿದ್ದಾರೆ. ಶಸ್ತ್ರಚಿಕಿತ್ಸೆ ಬಳಿಕ ಬಾಲಕ ಚೇತರಿಸಿಕೊಂಡಿದ್ದಾನೆ.
ಬಹಳ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡುವ ಮೂಲಕ ಬಾಲಕನ ಜೀವ ಉಳಿಸಿದ ಸರ್ಕಾರಿ ವೈದ್ಯರ ಕಾರ್ಯಕ್ಕೆ ಸರ್ಕಾರ ಮತ್ತು ಸಾರ್ವಜನಿಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಮಡಿಕೇರಿಯಲ್ಲಿ ವಾಸವಿರುವ ಅಸ್ಸಾಂ ಮೂಲದ ಕಾರ್ಮಿಕರ ಕುಟುಂಬದ ಕಮಲ್ ಹಸನ್ (12) ಶಸ್ತ್ರಚಿಕಿತ್ಸೆಗೆ ಒಳಗಾದ ಬಾಲಕ.
ಕಮಲ್ ಹಸನ್ ಶನಿವಾರ (ಫೆ. 8) ಸಂಜೆ 7 ಗಂಟೆಯ ಸುಮಾರಿಗೆ ಮನೆಯ ಮೆಟ್ಟಿಲ ಬಳಿ ನಿಂತಿದ್ದಾಗ ಮರದಿಂದ ಜಾರಿ ಬಿದ್ದ ತೆಂಗಿನ ಗರಿಯ ದಿಂಡು ಕುತ್ತಿಗೆ ಪಕ್ಕದಿಂದ ಎದೆಗೂಡಿನ ಒಳ ಹೊಕ್ಕಿದೆ. ಅದನ್ನು ತೆಗೆಯಲು ಮಡಿಕೇರಿ ಆಸ್ಪತ್ರೆಯ ವೈದ್ಯರು ನಿರಾಕರಿಸಿದ್ದರು. ಮಂಗಳೂರಿನ ಸರ್ಕಾರಿ ವೆನ್ಲಾಕ್ ಜಿಲ್ಲಾ ಆಸ್ಪತ್ರೆಗೆ ತಕ್ಷಣ ಕರೆದೊಯ್ಯುವಂತೆ ಸಲಹೆ ನೀಡಿದ್ದರು. ವೈದ್ಯರ ಸಲಹೆ ಮೇರೆಗೆ ಮಡಿಕೇರಿಯಿಂದ ಕಮಲ್ ಹಸನ್ ಅವರನ್ನು ಕರೆದುಕೊಂಡು ಬಂದ ಕುಟುಂಬಸ್ಥರು, ರಾತ್ರಿ 12.15ರ ಸುಮಾರಿಗೆ ಮಂಗಳೂರು ತಲುಪಿದ್ದರು. ಇಲ್ಲಿ ವೈದ್ಯರು ತಕ್ಷಣ ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ. ಪ್ರಸ್ತುತ ಬಾಲಕನ ಆರೋಗ್ಯ ಸುಧಾರಿಸಿದೆ ಎಂದು ವರದಿಯಾಗಿದೆ.
ತೆಂಗಿನ ಗರಿಯ ದಿಂಡು ಬಿದ್ದ ರಭಸಕ್ಕೆ ಬಾಲಕನ ಕುತ್ತಿಗೆಯಲ್ಲಿದ್ದ ಸ್ಟೀಲ್ ಚೈನ್ ಕೂಡ ದೇಹದ ಒಳ ಹೊಕ್ಕಿತ್ತು. ಕುತ್ತಿಗೆಯಿಂದ ಕೆಳ ಭಾಗಕ್ಕೆ ಸುಮಾರು 20 ಸೆ.ಮೀನಷ್ಟು ಹೋಗಿತ್ತು. ವೆನ್ಲಾಕ್ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ. ಸುರೇಶ್ ಪೈ ನೇತೃತ್ವದ ತಂಡವು ಇದನ್ನು ಸವಾಲಾಗಿ ಸ್ವೀಕರಿಸಿ ರಾತ್ರಿ 1:30 ರಿಂದ 3:30ರ ತನಕ ಶಸ್ತ್ರ ಚಿಕಿತ್ಸೆ ನಡೆಸಿ ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಬಾಲಕ ಇದೀಗ ಐಸಿಯುನಲ್ಲಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕರು ಮತ್ತು ಡಿಎಂಒ ಡಾ. ಶಿವಪ್ರಕಾಶ್ ಮಾಹಿತಿ ನೀಡಿದ್ದಾರೆ.
ವೆನ್ಲಾಕ್ ಆಸ್ಪತ್ರೆಯ ವೈದ್ಯರ ತಂಡ ಬಹಳ ಅಪರೂಪದ ಶಸ್ತ್ರಚಿಕಿತ್ಸೆ ನಡೆಸಿದೆ. ಒಂದು ವೇಳೆ ಖಾಸಗಿ ಆಸ್ಪತ್ರೆಯಲ್ಲಿ ಈ ಶಸ್ತ್ರ ಚಿಕಿತ್ಸೆ ನಡೆಸಿದ್ದಿದ್ದರೆ 10 ಲಕ್ಷ ರೂಪಾಯಿ ತನಕ ಖರ್ಚಾಗುತ್ತಿತ್ತು. ವೆನ್ಲಾಕ್ ಆಸ್ಪತ್ರೆಯಲ್ಲಿ ಯಾವುದೇ ಖರ್ಚಿಲ್ಲದೆ ನಡೆಸಲಾಗಿದೆ ಎಂದು ವೈದ್ಯರ ಸಾಧನೆಯನ್ನು ಡಿಎಂಒ ಡಾ.ಶಿವಪ್ರಕಾಶ್ ಶ್ಲಾಘಿಸಿದ್ದಾರೆ.
ಶೃಂಗೇರಿ | ಬಜರಂಗದಳ ಕಾರ್ಯಕರ್ತರಿಂದ ದರ್ಗಾಕ್ಕೆ ಬಂದಿದ್ದವರ ಮೇಲೆ ಹಲ್ಲೆ ಆರೋಪ


