ಕೇಂದ್ರ ಸರ್ಕಾರದ ಸಿಎಎ, ಎನ್‌ಪಿಆರ್ ಮತ್ತು ಎನ್‌ಆರ್‌ಸಿ ವಿರುದ್ಧ ವಿದ್ಯಾರ್ಥಿಗಳು, ಪ್ರಗತಿಪರರು, ದಲಿತರು, ಮಹಿಳೆಯರು, ವಕೀಲರು ಪ್ರತಿಭಟನೆ ದಾಖಲಿಸಿದ್ದಾಯಿತು. ಈಗ ಅವರ ಸಾಲಿಗೆ ವೈದ್ಯರೂ ಸಹ ಸೇರಿದ್ದು ಇಂತಹ ಅಸಾಂವಿಧಾನಿಕ ಕಾಯ್ದೆ ಬೇಡ ಎಂದು ಕಲಬುರಗಿಯಲ್ಲಿ ಇಂದು ವೈಧ್ಯರ ಸಮೂಹ ಬೀದಿಗಿಳಿದಿದೆ.
ಮೆಡಿಕಲ್ ಫೆಟರ್ನಿಟಿ ಸಂಘಟನೆಯ ವತಿಯಿಂದ ಕಲಬುರಗಿಯ ತಿಮ್ಮಾಪುರ ಸರ್ಕಲ್‌ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಶಾಂತಿಯುತ ಮೆರವಣಿಗೆ ನಡೆಸಿದ 500ಕ್ಕೂ ಹೆಚ್ಚು ವೈದ್ಯರು ಈ ಕಾಯ್ದೆಗಳಿಗೆ ನಮ್ಮ ವಿರೋಧವಿದೆ ಎಂಬ ಸಂದೇಶವನ್ನು ಸಾರಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಡಾ.ಸೀಮಾ ದೇಶಪಾಂಡೆ ಮಾತನಾಡಿ ಸರ್ಕಾರದಲ್ಲಿರುವವರು ಕಷ್ಟದಲ್ಲಿರುವವರೆಇಗೆ ಸಹಾಯ ಮಾಡುವ ಬದಲು ಎನ್‌ಪಿಆರ್, ಎನ್‌ಆರ್‌ಸಿ ಕಾಯ್ದೆಗಳನ್ನು ತಂದು ತೊಂದರೆ ಕೊಡುತ್ತಿದ್ದಾರೆ. ಸಾರ್ವಜನಿಕ ಆರೋಗ್ಯ ಕ್ಷೇತ್ರ ಕುಸಿಯುತ್ತಿದ್ದು, ನಾವು ಭರವಸೆ ಕಳೆದುಕೊಂಡಿದ್ದೇವೆ. ಭಾರತದ ಆರ್ಥಿಕತೆ ಮರಣಶಯ್ಯೆಯಲ್ಲಿದೆ. ಭಾರತದ ಆರೋಗ್ಯ ಸ್ಥಿತಿಯು ಕುಸಿಯುತ್ತಿದೆ. ರೋಗಿಗಳು ಹಣವಿಲ್ಲದೇ ಉತ್ತಮ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಸರ್ಕಾರ ಜನರ ಸಮಸ್ಯೆಗಳನ್ನು ಮಾತಾಡುವುದನ್ನು, ಬಿಟ್ಟು ಜನರನ್ನು ಧರ್ಮದ ಆಧಾರದಲ್ಲಿ ವಿಭಜಿಸುವ ಸಿಎಎ, ಎನ್‌ಆರ್‌ಸಿಯಂತಹ ಕಾಯ್ದೆಗಳನ್ನು ತರುತ್ತಿರುವುದಕ್ಕೆ ಜವಾಬ್ದಾರಿಯುವ ವೈದ್ಯರಾಗಿ ನಮ್ಮ ವಿರೋಧವಿದೆ ಎಂದಿದ್ದಾರೆ.
ಎನ್‌ಪಿಆರ್ ಜನವಿರೋಧಿಗಳಾಗಿವೆ. ಇದರ ವಿರುದ್ಧ ನಾವೆಲ್ಲಾ ಒಗ್ಗಟ್ಟಾಗಿದ್ದೇವೆ. ನಾವು ಭಾರತದ ಜನರು. ಇಂತಹ ಕಾಯ್ದೆಗಳಿಗೆ ಬದಲಾಗಿ ಭಾರತದ ಶಿಕ್ಷಣ, ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯನ್ನು ಉತ್ತಮ ಪಡಿಸುವತ್ತ ಸರ್ಕಾರ ಮುಂದಾಗಬೇಕು ಎಂದು ಅವರು ಆಗ್ರಹಿಸಿದರು.
ಅಶ್ವಕುಲ್ಲಾಖಾನ್, ಭಗತ್ ಸಿಂಗ್, ರಾಮ್ ಪ್ರಸಾದ್ ಬಿಸ್ಮಿಲ್ಲಾ, ಸುಭಾಸ್ ಚಂದ್ರ ಬೋಸ್‌ರಂತಹ ವಿವಿಧ ಧರ್ಮದ ಹೋರಾಟಗಾರರು ಸ್ವಾತಂತ್ರ್ಯಕ್ಕಾಗಿ ಹೋರಾಡಿ ತಮ್ಮ ಪ್ರಾಣಕೊಟ್ಟಿದ್ದಾರೆ. ಅಂತಹ ದೇಶದಲ್ಲಿ ಧರ್ಮದ ಆಧಾರದಲ್ಲಿ ಜನರನ್ನು ಒಡೆಯುವುದು ಸರಿಯಿಲ್ಲ ಎಂದರು. ನಾವು ರೋಗಿಗಳನ್ನು ನೋಡುತ್ತೇವೆಯೇ ಹೊರತು ಅವರ ಧರ್ಮವನ್ನಲ್ಲ. ನಾವು ನೈತಿಕತೆ ಹೊಂದಿದ್ದೇವೆ. ಅದಕ್ಕಾಗಿ ನಾವು ಆಡಳಿತ ಸರ್ಕಾರದ ವಿರುದ್ಧ ಬೀದಿಗಿಳಿದಿದ್ದೇವೆ ಎಂದರು.

ಮೊಹಮ್ಮದ್ ಇರ್ಫಾನ್ ಮಾತನಾಡಿ ನಮ್ಮ ಸ್ವಾತಂತ್ಯಕ್ಕಾಗಿ ಈ ಹೋರಾಟ ಆರಂಭವಾಗಿದೆ. ಇದಕ್ಕೆ ಅಂತ್ಯವಿಲ್ಲ. ಕಾಯ್ದೆಯನ್ನು ಓದದೇ ಕೆಲವರು ಅದರ ಪರವಾಗಿ ಪ್ರತಿಭಟಿಸುತ್ತಿದ್ದಾರೆ. ಆದರೆ ನಾವು ವೈದ್ಯರು, ಸಮಾಜದ ಪರಿಸ್ಥಿತಿಯನ್ನು ಅರಿತವರು ಈ ಕಾಯ್ದೆಯನ್ನು ಸಂಪೂರ್ಣವಾಗಿ ಓದಿದ್ದೇವೆ. ಇದು ಅಸಾಂವಿಧಾನಿಕವಾದುದು, ಜನರನ್ನು ವಿಭಜಿಸುವುದಾಗಿದೆ. ಇದನ್ನು ನೋಡಿ ಸುಮ್ಮನೇ ಕೂರಲು ಸಾಧ್ಯವಿಲ್ಲ. ಅದಕ್ಕೆ ಬೀದಿಗಿಳಿದಿದ್ದೇವೆ ಎಂದರು.
ಜಾಮಿಯಾ, ಜೆಎನ್‌ಯು ವಿದ್ಯಾರ್ಥಿಗಳು ಬೀದಿಗಿಳಿದಿದ್ದಾರೆ. ಅವರಿಗೆ ಬೆಂಬಲ ನೀಡುತ್ತೇವೆ. ಅವರಿಗೆ ಶರಣು ಹೇಳುತ್ತೇವೆ. ವಿಷಯ ಸುಪ್ರೀಂ ಕೋರ್ಟಿನಲ್ಲಿದೆ. ನಮ್ಮ ನ್ಯಾಯಾಂಗ ವ್ಯವಸ್ಥೆಯ ಮೇಲೆ ಸಂಪೂರ್ಣ ನಂಬಿಕೆಯಿದೆ. ಒಂದು ವೇಳೆ ಅಲ್ಲಿಯೂ ಈ ಕಾಯ್ದೆ ಜಾರಿಯಾದರೆ ನಾವು ದೆಹಲಿ ಚಲೋ ಕರೆ ಕೊಡುತ್ತೇವೆ ಎಂದರು.
ಡಾ. ರಾಹುಲ್ ತಮನ್ ಮಾತನಾಡಿ ಈಗಾಗಲೇ ಪೌರತ್ವಕ್ಕೆ ಕೆಲವು ನಿಯಮ, ಕಾಯ್ದೆ ಇದೆ. ಅದಕ್ಕೆ ತಿದ್ದುಪಡಿ ತಂದು ಅವರು ಮುಸ್ಲಿಂ ಜನರ ವಿರುದ್ಧವಿದ್ದೇವೆ ಎಂಬುದನ್ನು ತೋರಿಸಲು ಮುಂದಾಗಿದ್ದಾರೆ. ಅವರು ಬಡವರು, ದಲಿತರು, ಒಬಿಸಿ, ಮಹಿಳೆಯರ ವಿರುದ್ಧವಿದ್ದಾರೆ. ಅಸ್ಸಾಂನಲ್ಲಿ 19 ಲಕ್ಷ ಜನರನ್ನು ಬಂಧನಕೇಂದ್ರದಲ್ಲಿಟ್ಟಿದ್ದಾರೆ. ಅದರಲ್ಲಿ 5 ಲಕ್ಷ ಜನರು ಮಾತ್ರ ಮುಸ್ಲಿಮರಾಗಿದ್ದು ಉಳಿದ 14 ಲಕ್ಷ ಬೇರೆ ಜಾತಿ ಧರ್ಮದವರೇ ಆಗಿದ್ದಾರೆ. ಹಾಗಾಗಿ ಎಲ್ಲಾ ಜನರು ಈ ಕಾಯ್ದೆಯನ್ನು ವಿರೋಧಿಸಬೇಕು ಎಂದರು.
ಪ್ರಜಾಪ್ರಭುತ್ವದ ರೀತಿಯಲ್ಲಿ ಆಯ್ಕೆಯಾದ ಕ್ರಿಮಿನಲ್‌ಗಳು ಪಾರ್ಲಿಮೆಂಟ್‌ನಲ್ಲಿದ್ದಾರೆ. ಅವರು ಪ್ರಾಮಾಣಿಕ ಜನರ ದಾಖಲೆ ಕೇಳಿ ಜೈಲಿಗಟ್ಟುವ ಹುನ್ನಾರ ನಡೆಸಿದ್ದಾರೆ. ವಸುಧೈವ ಕುಟುಂಬಕಂ ಎಂಬ ಸಂಸ್ಕೃತಿ ನಮ್ಮದು. ಈ ಭೂಮಿ ಮೇಲೆ ಇರುವ ಎಲ್ಲರೂ ನಮ್ಮ ಕುಟುಂಬದವರೇ.. ಆದರೆ ಸರ್ಕಾರ ಧರ್ಮಧ ಆಧಾರದಲ್ಲಿ ನಮ್ಮನ್ನು ಒಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಭಾರತದಲ್ಲಿ ಒಂದು ಲಕ್ಷ ಶಿಶುಗಳು ಹುಟ್ಟುವ ಮೊದಲೇ ಸಾವಿಗೀಡಾಗುತ್ತಿವೆ. ಇದರ ಬಗ್ಗೆ ಯೋಚಿಸಬೇಕು. ಹಸಿವಿನ ಸೂಚ್ಯಂಕದಲ್ಲಿ ನಮ್ಮ ದೇಶ 115ನೇ ರ್‍ಯಾಂಕ್‌ನಲ್ಲಿದೆ. ಇಂತಹ ಸಂದರ್ಭದಲ್ಲಿ ನಮ್ಮ ಆದ್ಯತೆಯೇನು ಎಂದು ಪ್ರಶ್ನಿಸಿದ್ದಾರೆ.


