ಭಾರತದಲ್ಲಿ ಬಹುಕೋಟಿ ಬ್ಯಾಂಕಿಂಗ್ ಹಗರಣದಲ್ಲಿ ಭಾಗಿಯಾಗಿ ಆಂಟಿಗುವಾ ದೇಶಕ್ಕೆ ಪರಾರಿಯಾಗಿದ್ದ ಮೆಹುಲ್ ಚೋಕ್ಸಿಯವರಿಗೆ ಸೋಮವಾರ ಡೊಮಿನಿಕನ್ ನ್ಯಾಯಾಲಯ ಜಾಮೀನು ನೀಡಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ವಂಚನೆ ಎಸಗಿ ಪರಾರಿಯಾಗಿರುವ ಉದ್ಯಮಿ ಮೆಹುಲ್ ಚೋಕ್ಸಿಗೆ ಸೋಮವಾರ ವೈದ್ಯಕೀಯ ಜಾಮೀನು ಮಂಜೂರು ಮಾಡಿದ್ದು ಚಿಕಿತ್ಸೆ ಕಾರಣಕ್ಕೆ ಆಂಟಿಗುವಾಗೆ ತೆರಳಲು ನ್ಯಾಯಾಲಯ ಅವಕಾಶ ನೀಡಿದೆ.
ಮೆಹುಲ್ ಚೋಕ್ಸಿ ಜಾಮೀನು ಪ್ರಕರಣದ ಬೆಳವಣಿಯಗೆಯನ್ನು ಖಚಿತಪಡಿಸಿರುವ ವಕೀಲ ವಿಜಯ್ ಅಗರ್ವಾಲ್, “ಡೊಮಿನಿಕಾ ನ್ಯಾಯಾಲಯಗಳು ಅಂತಿಮವಾಗಿ ಕಾನೂನು ಮತ್ತು ಆರೋಗ್ಯದ ಚಿಕಿತ್ಸೆಯ ಅಗತ್ಯತೆಗಳನ್ನು ಎತ್ತಿಹಿಡಿದಿವೆ” ಎಂದು ಹೇಳಿದ್ದಾರೆ.
ಆಂಟಿಗುವದ ಮಾಧ್ಯಮಗಳ ವರದಿ ಪ್ರಕಾರ, ಚೋಕ್ಸಿಯ ಜಾಮೀನು ಅರ್ಜಿಯ ವಿಚಾರಣೆ ಜುಲೈ 23 ರಂದು ನಡೆಯಬೇಕಿತ್ತು. ಆದರೆ ಜುಲೈ 12 ರಂದು ವೈದ್ಯಕೀಯ ಆಧಾರದ ಮೇಲೆ ವಿಚಾರಣೆ ನಡೆಸಲಾಯಿತು. ಚೋಕ್ಸಿ ನರ ವಿಜ್ಞಾನ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ, ಅವರಿಗೆ ಆಂಟಿಗುವಾದಲ್ಲಿ ನರವಿಜ್ಞಾನ ತಜ್ಞರಿಂದ ಚಿಕಿತ್ಸೆ ಅಗತ್ಯವಿದೆ ಎಂದು ಅವರ ವಕೀಲರು ನ್ಯಾಯಾಲಯವನ್ನು ಕೋರಿದ್ದರು. ಸೋಮವಾರ ಚೋಕ್ಸಿ ಜಾಮೀನು ನೀಡಿದ ಡೊಮಿನಿಕಾದ ಈಸ್ಟರ್ನ್ ಕೆರಿಬಿಯನ್ ಹೈಕೋರ್ಟ್ 10,000 ಕೆರಿಬಿಯನ್ ಡಾಲರ್ ಬಾಂಡ್ ನೀಡುವಂತೆ ಆದೇಶಿಸಿದೆ ಮತ್ತು ಚಿಕಿತ್ಸೆಯ ನಂತರ ಡೊಮಿನಿಕಾಗೆ ಮರಳಲು ಹೇಳಿದೆ.
2018ರಲ್ಲಿ ಚೋಕ್ಸಿ ಭಾರತ ತೊರೆದು ಆಂಟಿಗುವಾಗೆ ಪರಾರಿಯಾಗಿದ್ದರು. ಆಂಟಿಗುವ ದೇಶದಿಂದ ಚೋಕ್ಸಿ ಕಳೆದ ಮೇ ತಿಂಗಳಿನಲ್ಲಿ ನಿಗೂಢವಾಗಿ ಡೊಮಿನಿಕಾ ದೇಶದಲ್ಲಿ ಪತ್ತೆಯಾಗಿದ್ದರು. ಚೋಕ್ಸಿ ಅಪಹರಣವಾಗಿದೆ. ಬಾರ್ಬಾರಾ ಎಂಬ ಮಹೀಳೆ ಭಾರತದ ತನಿಖಾ ಸಂಸ್ಥೆಗಳ ಸಹಾಯದಿಂದ ಚೋಕ್ಸಿ ಅವರನ್ನು ಡೊಮಿನಿಕನ್ ರಿಪಬ್ಲಿಕ್‌ಗೆ ಅಪಹರಿಸಿ ಕರೆತಂದಿದ್ದಾರೆ ಎಂಬ ಸುದ್ದಿ ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ ಹರಿದಾಡಿತ್ತು.
ಇದನ್ನೂ ಓದಿ: 14 ಸಾವಿರ ಕೋಟಿ ವಂಚಿಸಿ ಪರಾರಿಯಾದ ಮೆಹುಲ್ ಚೋಕ್ಸಿ ಆಂಟಿಗುವಾದಲ್ಲಿ ‘ನಾಪತ್ತೆ’ !
ಭಾರತ ಮತ್ತು ಡೊಮಿನಿಕಾ ದೇಶದ ಸಂಬಂಧ ಉತ್ತಮವಾಗಿರುವುದರಿಂದ ಮೆಹುಲ್ ಚೋಕ್ಸಿ ಬಂಧಿಸಿ ಭಾರತಕ್ಕೆ ಕರೆತರುವ ಪ್ರಯತ್ನಕ್ಕೆ ದೇಶದ ತನಿಖಾ ಏಜನ್ಸಿಗಳು ಮುಂದಾಗಿದ್ದವು. ಇದಕ್ಕೆ ಪೂರಕವಾಗಿ ಈಚೆಗಷ್ಟೆ ಉದ್ಯಮಿ ಮೆಹುಲ್ ಚೋಕ್ಸಿ ಅಕ್ರಮ ವಲಸಿಗ ಎಂದು ಡೊಮಿನಿಕಾ ಘೋಷಿಸಿತ್ತು.
ಡೊಮಿನಿಕನ್ ಸರ್ಕಾರ ತನ್ನನ್ನು ಭಾರತಕ್ಕೆ ಹಸ್ತಾಂತರಿಸುವ ಭಯದಿಂದ ಚೋಕ್ಸಿ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಕಾನೂನು ಹೋರಾಟದಲ್ಲಿ ಅವರಿಗೆ ಜಾಮೀನು ದೊರೆತಿದೆ.
ಇಂದರಿಂದ ಚೋಕ್ಸಿ ಬಂಧಿಸಿ ದೇಶಕ್ಕೆ ಕರೆತರುವ ತನಿಖಾ ಸಂಸ್ಥೆಗಳ ಪ್ರಯತ್ನಕ್ಕೆ ಹಿನ್ನಡೆಯಾಗಿದ್ದು ಭಾರತ ಸರ್ಕಾರ ಮುಂದೆ ಯಾವ ಕ್ರಮ ಕೈಗೊಳ್ಳಲ್ಲಿದೆ ಎಂಬುದನ್ನು ಇನ್ನೂ ಸ್ಪಷ್ಟ ಪಡಿಸಿಲ್ಲ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿದಂತೆ ಜೂನ್ 10 ರಂದು ಕೇಂದ್ರೀಯ ತನಿಖಾ ದಳ ಮೆಹುಲ್ ಚೋಕ್ಸಿ ಮತ್ತು ಇತರೆ 21 ಜನರ ವಿರುದ್ಧ ಹೊಸ ಚಾರ್ಜ್ ಶೀಟ್ ಸಲ್ಲಿಸಿದೆ. ಭಾರತದಿಂದ ಪರಾರಿಯಾಗಿರುವ ಮೆಹುಲ್ ಚೋಕ್ಸಿ, ಸಾಕ್ಷ್ಯ ನಾಶಪಡಿಸಿರುವ ಆರೋಪವನ್ನು ಎದುರಿಸುತ್ತಿದ್ದಾರೆ.
ಇದನ್ನೂ ಓದಿ: ಹಣ ವಂಚನೆ ಆರೋಪಿ ಚೋಕ್ಸಿಯನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಗೆ ತಡೆ
2017ರಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಅಧಿಕಾರಿಗಳ ಸಹಾಯದಿಂದ ಚೋಕ್ಸಿ ಎಲ್‌ಒಯು, 58 ಎಫ್‌ಎಲ್‌ಸಿಗಳನ್ನು ಮೋಸದಿಂದ ಪಡೆದು, ಬ್ಯಾಂಕಿಗೆ 13,500 ಕೋಟಿ ರೂ ವಂಚನೆ ಎಸಗಿದ ನಂತರ ಅದನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡಿದ್ದಾಗಿ ಸಿಬಿಐ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದೆ. ಚೋಕ್ಸಿ ವಿರುದ್ಧ ಸಾಕ್ಷ್ಯನಾಶ, ವಂಚನೆ, ಪಿತೂರಿ ಹಾಗೂ ಭ್ರಷ್ಟಾಚಾರ ತಡೆ ಕಾಯ್ದೆ ಅಡಿ ಭಾರತದಲ್ಲಿ ಗಂಭೀರ ಪ್ರಕರಣಗಳು ದಾಖಲಾಗಿವೆ.
ಭಾರತದ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13,500 ಕೋಟಿ ರೂಪಾಯಿ ವಂಚನೆ ಆರೋಪ ಎದುರಿಸುತ್ತಿರುವ ಮೆಹುಲ್ ಚೋಕ್ಸಿ ಹಾಗೂ ಆತನ ಸೋದರಳಿಯ ನೀರವ್ ಮೋದಿ 2018ರ ಜನವರಿ ಮೊದಲ ವಾರದಲ್ಲಿ ದೇಶ ಬಿಟ್ಟು ಪರಾರಿಯಾಗಿದ್ದರು.
ಇದನ್ನೂ ಓದಿ: ಡೊಮಿನಿಕಾದಿಂದ ಬರಿಗೈನಲ್ಲಿ ವಾಪಸ್; ಮೆಹುಲ್ ಚೋಕ್ಸಿ ಬಂಧಿಸಿ ಕರೆತರುವ ಭಾರತದ ಪ್ರಯತ್ನಕ್ಕೆ ನಿರಾಸೆ


