Homeಮುಖಪುಟಡೊಮಿನಿಕಾದಿಂದ ಬರಿಗೈನಲ್ಲಿ ವಾಪಸ್; ಮೆಹುಲ್‌ ಚೋಕ್ಸಿ ಬಂಧಿಸಿ ಕರೆತರುವ ಭಾರತದ ಪ್ರಯತ್ನಕ್ಕೆ ನಿರಾಸೆ

ಡೊಮಿನಿಕಾದಿಂದ ಬರಿಗೈನಲ್ಲಿ ವಾಪಸ್; ಮೆಹುಲ್‌ ಚೋಕ್ಸಿ ಬಂಧಿಸಿ ಕರೆತರುವ ಭಾರತದ ಪ್ರಯತ್ನಕ್ಕೆ ನಿರಾಸೆ

- Advertisement -
- Advertisement -

ಭಾರತದಿಂದ ಪರಾರಿಯಾಗಿರುವ ಬಹುಕೋಟಿ ಬ್ಯಾಂಕಿಂಗ್‌ ವಂಚನೆಯ ಆರೋಪಿ ಮೆಹುಲ್‌ ಚೋಕ್ಸಿ ಸದ್ದದ ಮಟ್ಟಿಗೆ ಡೊಮಿನಿಕ್‌ ದೇಶದಲ್ಲಿ ಸುರಕ್ಷಿತರಾಗಿದ್ದಾರೆ. ಜುಲೈ 1 ರ ವರೆಗೆ ಚೋಕ್ಸಿ ಬಂಧನ ಸಾಧ್ಯವಿಲ್ಲ. ಚೋಕ್ಸಿಯನ್ನು ಭಾರತಕ್ಕೆ ಹಸ್ತಾಂತರಿಸುವುದೇ ಅಥವಾ ಆಂಟಿಗುವಾ ಬಾರ್ಬುಡಾ ದೇಶಕ್ಕೆ ಹಸ್ತಾಂತರಿಸುವುದೇ ಎಂದು ವಿಚಾರಣೆಯಲ್ಲಿ ಡೊಮಿನಿಕನ್‌ ನ್ಯಾಯಾಲಯ ತೊಡಗಿದೆ. ಡೊಮಿನಿಕಾ ಕೋರ್ಟ್‌ ತೀರ್ಪು ಬರುವ ತನಕ ಭಾರತಕ್ಕೆ ಮೆಹುಲ್‌ ಚೋಕ್ಸಿಯನ್ನು ಕರೆತರುವ ದೇಶದ ತನಿಖಾ ಸಂಸ್ಥೆಗಳ ಪ್ರಯತ್ನಕ್ಕೆ ಅಡ್ಡಿ ಎದುರಾಗಿದೆ.

ಆಂಟಿಗುವ ಮತ್ತು ಬಾರ್ಬುಡ ದೇಶದ ಪೌರತ್ವ ಪಡೆದು ಭಾರತದಿಂದ ಪರಾರಿಯಾಗಿದ್ದ ಚೋಕ್ಸಿ ಬಂಧನಕ್ಕೆ ಡೊಮಿನಿಕಾಗೆ ತೆರಳಿದ್ದ ಭಾರತದ ಅಧಿಕಾರಿಗಳು ಈಗ ಬರಿಗೈಯಲ್ಲಿ ಮರಳಿದ್ದಾರೆ. ಖಾಸಗಿ ವಿಮಾನವೊಂದನ್ನು ಡೊಮಿನಿಕಾ ದೇಶದ ವಿಮಾನ ನಿಲ್ಧಾಣದಲ್ಲಿ ನಿಲ್ಲಿಸಿಕೊಂಡು ಚೋಕ್ಸಿ ಬಂಧಿಸಿ ಕರೆತರಲು ಕಾಯುತ್ತಿದ್ದ ಅಧಿಕಾರಿಗಳು ಬೇರೆ ದಾರಿಯಿಲ್ಲದೇ ಬಂದ ದಾರಿಗೆ ವಾಪಸಾಗಿ ವಿಮಾನದಲ್ಲಿ ಭಾರತಕ್ಕೆ ಹೊರಟಿದ್ದಾರೆ.

ಮೇ 29 ರಂದು ಕೆರಿಬಿಯನ್‌ ದೇಶಕ್ಕೆ ಭಾರತದ ಅಧಿಕಾರಿಗಳು ಖಾಸಗಿ ವಿಮಾನದಲ್ಲಿ ಯಾಕೆ ತೆರಳಿದರೆಂದು ಇದುವರೆಗೆ ಭಾರತ ಸರ್ಕಾರ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ. ಆದರೆ ಈ ನಡುವೆ ಚೋಕ್ಸಿ ಬಂಧನಕ್ಕಾಗಿ ಭಾರತದ ಅಧಿಕಾರಿಗಳು ಡೊಮಿನಿಕಾದಲ್ಲಿ ಕಾಯುತ್ತಿರುವ ಸುದ್ದಿ ಎಲ್ಲೆಡೆಯಲ್ಲೂ ಹರಿದಾಡುತ್ತಿತ್ತು. ಮೇ 23 ರಂದು ಚೋಕ್ಸಿ ಆಂಟಿಗುವ ದೇಶದಿಂದ ನಾಪತ್ತೆಯಾದ ಘಟನೆ ಭಾರತೀಯ ಅಧಿಕಾರಿಗಳಲ್ಲಿ ಮೆಹುಲ್‌ ಚೋಕ್ಸಿ ಅವರನ್ನು ಭಾರತಕ್ಕೆ ಕರೆತರುವ ಚಿಕ್ಕ ಅವಕಾಶದ ಬಾಗಿಲನ್ನು ತೆರೆದಿತ್ತು. ಸದ್ಯದ ಮಟ್ಟಿಗೆ ಭಾರತದ ಪಾಲಿಗೆ ಆ ಅವಕಾಶದ ಬಾಗಿಲು ಮುಚ್ಚಿದಂತೆ ಆಗಿದೆ.

ಭಾರತೀಯ ಮುಖ ಲಕ್ಷಣ ವಿರುವ ವ್ಯಕ್ತಿಯೊಬ್ಬರು ಮೆಹುಲ್‌ ಚೋಕ್ಸಿ ಅವರನ್ನು ಆಂಟಿಗುವಾದಿಂದ ಅಪಹರಿಸಿ ಡೊಮಿನಿಕ ದೇಶಕ್ಕೆ ಕೊಂಡೊಯ್ದಿದ್ದಾರೆ. ಇದು ಭಾರತಕ್ಕೆ ಚೋಕ್ಸಿಯನ್ನು ಕರೆದೊಯ್ಯಲು ಭಾರತ ನಡೆಸಿದ ಆಪರೇಶನ್‌ ಎಂದು ಮೆಹುಲ್‌ ಚೋಕ್ಸಿ ಪರ ವಕೀಲ ವೇಯ್ನೆ ಮಾರ್ಷ್‌ ಹೇಳಿಕೆ ನೀಡಿದ್ದಾರೆ.

ಸದ್ಯದ ಮಟ್ಟಿಗೆ ಪ್ರಕರಣ ಏನೇ ಇರಬಹುದು ಆದರೆ ಮೆಹುಲ್‌ ಚೋಕ್ಸಿಯವರನ್ನು ಭಾರತಕ್ಕೆ ಕರೆತರುವ ಅಧಿಕಾರಿಗಳ ಪ್ರಯತ್ನಕ್ಕೆ ಹಿನ್ನಡೆಯಾಗಿರುವುದಂತೂ ಸತ್ಯ. ಆದರೆ ಇದು ಕೇವಲ ಅಧಿಕಾರಿಗಳ ವೈಫಲ್ಯವಲ್ಲ. ಬದಲಾಗಿ ಚೋಕ್ಸಿ ಡೊಮಿನಿಕ್ ದೇಶದ ಕಾನೂನಿನ ಮೂಲಕ ತನ್ನನ್ನು ಬಂಧನದಿಂದ ರಕ್ಷಿಸಿಕೊಳ್ಳುತ್ತಿರುವ ಅಧಿಕಾರ ಪಡೆದುಕೊಂಡಿದ್ದಾರೆ. ಹೀಗಾಗಿ ಮೆಹುಲ್‌ ಚೋಕ್ಸಿ ಬಂಧನ ಸಾಧ್ಯವಾಗುತ್ತಿಲ್ಲ ಎಂದು ತನಿಖಾ ಸಂಸ್ಥೆಯ ಮೂಲಗಳು ತಿಳಿಸಿವೆ.

ಚೋಕ್ಸಿ ಪರ ವಕೀಲರ ತಂಡ ಮೆಹುಲ್‌ ಚೋಕ್ಸಿಯವರನ್ನು ಭಾರತಕ್ಕೆ ಹಸ್ತಾಂತರಿಸುವುದು ಡೊಮಿನಿಕನ್‌ ಸಂವಿಧಾನದ ವಿರೋಧಿ ನಡೆ ಎಂದು ನ್ಯಾಯಾಲಯದಲ್ಲಿ ವಾದಿಸುತ್ತಿದೆ. ಮೆಹುಲ್‌ ಚೋಕ್ಸಿ ಆಂಟಿಗುವ ದೇಶದ ಪ್ರಜೆ. ಅವರನ್ನು ಹಸ್ತಾಂತರಿಸುವುದಾದರೆ ಆಂಟಿಗುವ ದೇಶಕ್ಕೆ ಹಸ್ತಾಂತರಿಸಬೇಕೆಂದು ಡೊಮಿನಿಕನ್‌ ನ್ಯಾಯಾಲಯದ ಮುಂದೆ ವಾದಿಸುತ್ತಿದ್ದಾರೆ. ಇದರ ಪರಿಣಾಮ ಡೊಮಿನಿಕನ್‌ ನ್ಯಾಯಾಲಯ ಮೆಹುಲ್‌ ಚೋಕ್ಸಿ ಅವರನ್ನು ಭಾರತಕ್ಕೆ ಹಸ್ತಾಂತರಿಸುವುದೇ ಅಥವಾ ಆಂಟಿಗುವಾ ಬಾರ್ಬುಡಾಕ್ಕೆ ಹಸ್ತಾಂತರಿಸುವುದೇ ಎಂಬ ಗೊಂದಲದಲ್ಲಿದ್ದು ಆದೇಶದಲ್ಲಿರುವ ಕಾನೂನಿನ ಅವಕಾಶಗಳನ್ನು ಪರಿಶೀಲನೆ ನಡೆಸುತ್ತಿದೆ.

ಭಾರತದ ತನಿಖಾ ಸಂಸ್ಥೆಗಳು ಜುಲೈ 1 ರ ನಂತರ ಮೆಹುಲ್‌ ಚೋಕ್ಸಿಯನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಡೊಮಿನಿಕನ್‌ ನ್ಯಾಯಾಲಯ ಆದೇಶ ಹೊರಡಿಸಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಈ ಸಂಬಂಧ ಭಾರತದ ನ್ಯಾಯವಾದಿಗಳು ಡೊಮಿನಿಕನ್‌ ನ್ಯಾಯಾಲಯದಲ್ಲಿ ಪ್ರಬಲ ವಾದವನ್ನು ಮಂಡಿಸಲಿದ್ದಾರೆ ಎಂದು ಭಾರತದ ತನಿಖಾ ಸಂಸ್ಥೆಗಳು ತಿಳಿಸಿವೆ. ಮೆಹುಲ್‌ ಚೋಕ್ಸಿ ಭಾರತದ ಪೌರತ್ವ ಹೊಂದಿರುವುದರಿಂದ ಭಾರತಕ್ಕೆ ಅವರನ್ನು ಕರೆತರುವ ಸಾಧ್ಯತೆಗಳಿವೆ.

ಯಾವಗಲೂ ಪಕ್ಕಾ ಯೋಜನೆಗಳನ್ನು ಹಾಕಿಕೊಂಡಿರುವ ಮೆಹುಲ್‌ ಚೋಕ್ಸಿ

ಗೀತಾಂಜಲಿ ಜೆಮ್ಸ್‌ ನ ಮ್ಯಾನೆಜಿಂಗ್‌ ಡೈರೆಕ್ಟರ್‌ ಆಗಿರುವ ಮೆಹುಲ್‌ ಚೋಕ್ಸಿ ತಮ್ಮ ತಂದೆ ಚಿನುಬಾಯಿ ಚೋಕ್ಸಿಯವರಿಂದ 1985 ರಲ್ಲಿ ವಜ್ರ ವ್ಯಾಪಾರದ ವಹಿವಾಟಿನ ವ್ಯವಹಾರದ ಜವಾಬ್ಧಾರಿಯನ್ನು ಪಡೆದುಕೊಂಡ ನಂತರ ಮತ್ತೆ ಹಿಂತಿರುಗಿ ನೋಡಲಿಲ್ಲ. ʼನಕ್ಷತ್ರ,ʼ ʼಡಿ ದಮಸ್‌ʼ ಅಸ್ಮಿ, ದಿಯಾ, ಮಾಯಾ, ಸಂಗಿನಿ ಹೀಗೆ ಬೇರೆ ಹೆಸರಿನ ಸೆಲೆಬ್ರಿಟ್‌ ವಜ್ರಾಭರಣಗಳ ಬ್ರ್ಯಾಂಡ್‌ಗಳನ್ನು ಪರಿಚಯಿಸುತ್ತಲೇ ಹೋದರು. ಮುಂಬೈನ ಸೆಲೆಬ್ರಿಟಿ ವಲಯದಲ್ಲಿ ಅತ್ಯಂತ ಪ್ರಸಿದ್ಧ ವಜ್ರಾಭರಣ ವ್ಯಾಪಾರಿಯಾಗಿ ಬೆಳೆದ ಚೋಕ್ಸಿ ಇಂದಿಗೂ ಪ್ಲಾನ್‌ ಗಳನ್ನು ಹೊಂದಿರುವ ವ್ಯಕ್ತಿ ಎಂದೇ ಚಿರಪರಿಚಿತರಾಗಿದ್ದಾರೆ. ಅವರ ಪ್ಲಾನ್‌ ಗಳ ಚತುರತೆ ಕಾರಣದಿಂದಲೇ ಇಂದು ಭಾರತದ ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ಹಣವನ್ನು ವಂಚಿಸಿ ಭಾರತದಿಂದ ಪರಾರಿಯಾಗಿ ವಿದೇಶಗಳಲ್ಲಿ ಸುರಕ್ಷಿತವಾಗಿರಲು ಸಾಧ್ಯವಾಗಿದೆ ಎಂದು ಅವರನ್ನು ಹತ್ತಿರದಿಂದ ಬಲ್ಲ ವ್ಯಕ್ತಿಗಳು ಹೇಳುತ್ತಾರೆ.

ಸಿಬಿಐ ಅಧಿಕಾರಿಗಳು ಹೇಳುವಂತೆ ಚೋಕ್ಸಿ ವಜ್ರ ವ್ಯಾಪಾರಗಳಿಂದ ದೊಡ್ಡ ಮಟ್ಟದ ಲಾಭಗಳಿಸುತ್ತಿದ್ದ. ಹಾಗಾಗೇ ಕೆಲವೇ ವರ್ಷಗಳಲ್ಲಿ ದೇಶದ ಪ್ರತಿಷ್ಠಿತ ಉದ್ಯಮಿಯಾಗಿ ಬೆಳೆಯಲು ಸಾಧ್ಯವಾಯಿತು. ನಕಲಿ ದಾಖಲೆಗಳ ಮೂಲಕ ಬ್ಯಾಂಕ್‌ಗಳಿಂದ ಸಾವಿರಾರು ಕೋಟಿ ಸಾಲ ಪಡೆದು ಅದನ್ನು ವಿದೇಶಗಳಲ್ಲಿ ಹೂಡಿಕೆ ಮಾಡಿದ್ದಾರೆ. ವಿದೇಶಿ ಕಂಪನಿಗಳ 223 ನಕಲಿ ಗ್ಯಾರಂಟಿ ಪ್ರಮಾಣ ಪತ್ರವನ್ನು ನೀಡಿ ಪಂಜಾಬ್‌ ನ್ಯಾಶನಲ್‌ ಬ್ಯಾಂಕ್‌ ಒಂದರಿಂದಲೇ ಸುಮಾರು 5000 ಕೋಟಿ ರೂಪಾಯಿ ಹಣವನ್ನು ಪಡೆದಿದ್ದಾರೆ. ಅದನ್ನು  ಮತ್ತೆ ಮರುಪಾವತಿಸಿಲ್ಲ. ಮೆಹುಲ್‌ ಚೋಕ್ಸಿ ತನ್ನ ಸಂಬಂಧಿ ನೀರವ್‌ ಮೋದಿಗಿಂತ ದೊಡ್ಡ ಪ್ರಮಾಣದ ಬ್ಯಾಂಕಿಂಗ್‌ ಹಗರಣದಲ್ಲಿ ಭಾಗಿಯಾಗಿದ್ದಾರೆ.

ಡೊಮಿನಿಕನ್‌ ವಿರೋಧಪಕ್ಷದ ಸಹಾಯದಿಂದ ತನ್ನನ್ನು ರಕ್ಷಿಸಿಕೊಳ್ಳುತ್ತಿರುವ ಮೆಹುಲ್‌ ಚೋಕ್ಸಿ

ಮೆಹುಲ್‌ ಚೋಕ್ಸಿ ಡೊಮಿನಿಕನ್‌ ದೇಶದ ಅಧಿಕಾರಿಗಳು ದೇಶಕ್ಕೆ ಅತಿಕ್ರಮ ಪ್ರವೇಶ ಮಾಡಿದ ಆರೋಪದಲ್ಲಿ ತನ್ನನ್ನು ಬಂಧಿಸಬಹುದು ಎಂಬ ಭಯದಲ್ಲಿ ಅಲ್ಲಿನ ವಿರೋಧ ಪಕ್ಷಗಳ ಮೊರೆ ಹೋಗಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಆಂಟಿಗುವಾ ದೇಶದ ಪ್ರಧಾನಿ ಗ್ಯಾಸ್ಟೋನ್‌ ಬ್ರೌನ್‌ ಮೆಹುಲ್‌ ಚೋಕ್ಸಿ ಅವರನ್ನು ನೇರವಾಗಿ ಭಾರತಕ್ಕೆ ಹಸ್ತಾಂತರಿಸುವಂತೆ ಡೊಮಿನಿಕನ್‌ ಅಧಿಕಾರಿಗಳಿಗೆ ತಿಳಿಸಿದರು. ಭಾರತ ಮತ್ತು ಡೊಮಿನಿಕನ್‌ ದೇಶಗಳ ಸಂಬಂಧವನ್ನು ಅರಿತಿದ್ದ ಮೆಹುಲ್‌ ಚೋಕ್ಸಿ ತನಗೆ ಆಪತ್ತು ಎದುರಾಗಿದೆಯೆಂದು ತಿಳಿದು ಡೊಮಿನಿಕನ್‌ ವಿರೋಧ ಪಕ್ಷಗಳನ್ನು ತನ್ನ ಪರವಾಗಿ ಬಳಸಿಕೊಳ್ಳತೊಡಗಿದರು. ಮೆಹುಲ್‌ ಚೋಕ್ಸಿ ಡೊಮಿನಿಕನ್‌ ವಿರೋಧಪಕ್ಷಗಳಿಗೆ ಹಣಕಾಸಿನ ಆಮಿಶವನ್ನು ಕೂಡ ಒಡ್ಡಿದ್ದಾರೆ ಎಂದು ಭಾರತದ ತನಿಖಾ ಸಂಸ್ಥೆಗಳು ಆರೋಪ ಮಾಡಿವೆ.

ಮೆಹುಲ್‌ ಚೋಕ್ಸಿ ಅವರ ಅಣ್ಣ ಚೇತನ್‌ ಚಿನುಬಾಯಿ ಚೋಕ್ಸಿ ಮೇ 29 ರಂದು ಡೊಮಿನಿಕಾ ದೇಶಕ್ಕೆ ತೆರಳಿ ಅಲ್ಲಿನ ವಿರೋಧ ಪಕ್ಷದ ನಾಯಕ ಲೆನೊಕ್ಸ್‌ ಲಿಂಟನ್‌ ಅವರೊಂದಿಗೆ ರಹಸ್ಯ ಮಾತುಕತೆ ನಡೆಸಿದ್ದಾರೆ. ಡೊಮಿನಿಕ್ ಸಂಸತ್ತಿನಲ್ಲಿ ಮೆಹುಲ್‌ ಚೋಕ್ಸಿ ಭಾರತ ಹಸ್ತಾಂತರವನ್ನು ವಿರೋಧಿಸುವಂತೆ ಒಪ್ಪಂದ ಮಾಡಿಕೊಂಡಿದ್ದಾರೆ. ಇದಕ್ಕೆ ಪ್ರತಿಯಾಗಿ ಚೇತನ್‌ ಚೋಕ್ಸಿ ವಿರೋಧ ಪಕ್ಷಗಳಿಗೆ ಚುನಾವಣಾ ದೇಣಿಗೆಯನ್ನು ಸಹ ನೀಡಲು ಒಪ್ಪಿಕೊಂಡಿದ್ದಾರೆ  ಎಂದು ಡೊಮಿನಿಕನ್‌ ಸುದ್ದಿ ಮೂಲಗಳು ಹೇಳುತ್ತಿವೆ.

ಮೆಹುಲ್‌ ಚೋಕ್ಸಿ ಪರ ವಕೀಲ ವಿಜಯ್‌ ಅಗರವಾಲ್‌ ಈ ಆರೋಪಗಳನ್ನು ಅಲ್ಲಗಳೆದಿದ್ದಾರೆ. ಚೋಕ್ಸಿಯವರ ಸಹೋದರ ಮೆಹುಲ್‌ ಚೋಕ್ಸಿ ಆರೋಗ್ಯವನ್ನು ವಿಚಾರಿಸಲಷ್ಟೆ ಡೊಮಿನಿಕ ದೇಶಕ್ಕೆ ಬಂದಿದ್ದಾರೆ ಎಂದು ತಿಳಿಸಿದ್ದಾರೆ.

ಭಾರತದ ಮುಂದಿನ ನಡೆ ಏನು?

ಮೆಹುಲ್‌ ಚೋಕ್ಸಿ ವಿರುದ್ಧ ಡೊಮಿನಿಕ್ ದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿರುವ ಆರೋಪದ ಮೇಲೆ ರಾಜಧಾನಿ ರೊಸಿಯು ನಗರದ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ನಲ್ಲಿ ವಿಚಾರಣೆ ನಡೆಯುತ್ತಿದೆ. ನಡುವೆ ಡೊಮಿನಿಕನ್‌ ಸರ್ಕಾರ ಚೋಕ್ಸಿ ಅಕ್ರಮವಾಗಿ ದೇಶದೊಳಗೆ ಪ್ರವೇಶಿಸಿದ್ದಾರೆ ಅವರನ್ನು ಭಾರತಕ್ಕೆ ಹಸ್ತಾಂತರಿಸಬೇಕೆಂದು ನ್ಯಾಯಾಲಯದಲ್ಲಿ ವಾದಿಸುತ್ತಿದೆ.

ಮತ್ತೊಂದೆಡೆ ಮೆಹುಲ್‌ ಚೋಕ್ಸಿ ಪರ ವಕೀಲರು ಈಸ್ಟರ್ನ್‌ ಕೆರಿಬಿಯನ್‌ ಸುಪ್ರೀಂ ಕೋರ್ಟ್‌ ನಲ್ಲಿ ಮೆಹುಲ್‌ ಚೋಕ್ಸಿಯವರನ್ನು ಆಂಟಿಗುವಾದಿಂದ ಅಪಹರಿಸಲಾಗಿದೆ. ಅವರನ್ನು ಆಂಟಿಗುವ ದೇಶಕ್ಕೆ ಹಸ್ತಾಂತರಿಸಬೇಕೆಂದು ಸುಪ್ರೀಂ ಕೋರ್ಟ್‌ ಮೊರೆಹೋಗಿದ್ದಾರೆ.

ಭಾರತದ ತನಿಖಾ ಅಧಿಕಾರಿಗಳು ಪಂಜಾಬ್‌ ನ್ಯಾಶನಲ್‌ ಬ್ಯಾಂಕ್‌ ಹಗರಣದಲ್ಲಿ ಮೆಹುಲ್‌ ಚೋಕ್ಸಿ ಭಾಗಿಯಾಗಿರುವ ಕುರಿತು ಸಾಕ್ಷ್ಯಗಳನ್ನು ಮತ್ತು ದಾಖಲೆಗಳನ್ನು ಡೊಮಿನಿಕನ್‌ ನ್ಯಾಯಾಲಯಕ್ಕೆ ನೀಡಿದ್ದು ಚೋಕ್ಸಿಯನ್ನು ಭಾರತಕ್ಕೆ ಹಸ್ತಾಂತರಿಸಬೇಕೆಂದು ಮನವಿ ಮಾಡಿದ್ದಾರೆ.

ಭಾರತದ ತನಿಖಾಧಿಕಾರಿಗಳು ಮೆಹುಲ್‌ ಚೋಕ್ಸಿ ಭಾರತದ ಪ್ರಜೆ. ಅವರು ಭಾರತದ ಪೌರತ್ವವನ್ನು ತ್ಯಜಿಸಿರುವುದಾಗಿ ಘೋಷಣೆ ಮಾಡಿಲ್ಲ. ಹಾಗಾಗಿ ಚೋಕ್ಸಿಯನ್ನು ಭಾರತಕ್ಕೆ ಕರೆ ತರುತ್ತೇವೆ ಎಂದು ಹೇಳುತ್ತಿದ್ದಾರೆ. ಇನ್ನು ಭಾರತದ ಪೌರತ್ವ ಕಾಯ್ದೆ ಪ್ರಕಾರ ದೇಶದ ಯಾವುದೇ ನಾಗರಿಕ ವಿದೇಶದ ಪೌರತ್ವ ಪಡೆದ ತಕ್ಷಣ ಇಲ್ಲಿನ ಅವರ ಪೌರತ್ವ ರದ್ದಾಗುತ್ತದೆ. ಹಾಗಾಗಿ ಮೆಹುಲ್‌ ಚೋಕ್ಸಿಯನ್ನು ಭಾರತಕ್ಕೆ ಹಸ್ತಾಂತರಿಸಲು ಸಾಧ್ಯವಿಲ್ಲವೆಂಬ ವಾದವೂ ಕೇಳಿಬಂದಿದೆ.

ಇದೆಲ್ಲದರ ನಡುವೆ ಜುಲೈ 1 ರ ವರೆಗಂತೂ ಮೆಹುಲ್‌ ಚೋಕ್ಸಿ ಡೊಮಿನಿಕ್ ದೇಶದಲ್ಲಿ ಸುರಕ್ಷಿತವಾಗಿರಲಿದ್ದಾರೆ. ಜುಲೈ 1 ರ ವರೆಗೆ ಭಾರತದ ಅಧಿಕಾರಿಗಳಿಗೆ ಮೆಹುಲ್‌ ಚೋಕ್ಸಿಯವರನ್ನು ಭಾರತಕ್ಕೆ ಕರೆತರಲು ಯಾವ ಅವಕಾಶವೂ ಇಲ್ಲ. ಡೊಮಿನಿಕನ್‌ ನ್ಯಾಯಲಯ ಮಾತ್ರ ಈ ಸಂದರ್ಭದಲ್ಲಿ ಮೆಹುಲ್‌ ಚೋಕ್ಸಿಯನ್ನು ಭಾರತಕ್ಕೆ ಹಸ್ತಾಂತರಿಸುವ ಅಧಿಕಾರವನ್ನು ಹೊಂದಿದೆ. ಆದರೆ ಅಷ್ಟರ ನಡುವೆ ಭಾರತದ ತನಿಖಾಧಿಕಾರಿಗಳಿಗೆ ಚಳ್ಳೆಹಣ್ಣು ತಿನ್ನಿಸಲು ಮೆಹುಲ್‌ ಚೋಕ್ಸಿ ಇನ್ನೊಂದು ಯೋಜನೆಯನ್ನೂ ಸಿದ್ಧಗೊಳಿಸಿಕೊಳ್ಳುವ ಸಾಧ್ಯತೆ ಕೂಡ ಇದೆ ಎಂದು ತನಿಖಾ ಸಂಸ್ಥೆಯ ಮೂಲಗಳು ಕಳವಳಗೊಂಡಿವೆ.


ಇದನ್ನೂ ಓದಿ: 14 ಸಾವಿರ ಕೋಟಿ ವಂಚಿಸಿ ಪರಾರಿಯಾದ ಮೆಹುಲ್ ಚೋಕ್ಸಿ ಆಂಟಿಗುವಾದಲ್ಲಿ ‘ನಾಪತ್ತೆ’ !

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ‘ರೋಹಿತ್ ವೇಮುಲಾ ಕಾಯ್ದೆ’ ಜಾರಿ: ಕೆ.ಸಿ ವೇಣುಗೋಪಾಲ್

0
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಶಿಕ್ಷಣ ಸಂಸ್ಥೆಗಳಲ್ಲಿನ ಜಾತಿ ಮತ್ತು ಕೋಮು ದೌರ್ಜನ್ಯ ತಡೆಯಲು 'ರೋಹಿತ್ ವೇಮುಲಾ ಕಾಯ್ದೆ ಜಾರಿಗೊಳಿಸಲಾಗುವುದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಭರವಸೆ ನೀಡಿದ್ದಾರೆ. ಸಾಮಾಜಿಕ ಮತ್ತು...