Homeನ್ಯಾಯ ಪಥಎಚ್ ಎಸ್ ದೊರೆಸ್ವಾಮಿ ಶ್ರದ್ಧಾಂಜಲಿ; "ಪೌರವೀರ" ದೊರೆಸ್ವಾಮಿಯವರು

ಎಚ್ ಎಸ್ ದೊರೆಸ್ವಾಮಿ ಶ್ರದ್ಧಾಂಜಲಿ; “ಪೌರವೀರ” ದೊರೆಸ್ವಾಮಿಯವರು

- Advertisement -
- Advertisement -

ದೊರೆಸ್ವಾಮಿ ತಾತನ ಎಂಟು ದಶಕಗಳಿಗೂ ಮೀರಿದ ಸುದೀರ್ಘ ಸಾರ್ವಜನಿಕ ಜೀವನವನ್ನು ಇಂದು ಅವಲೋಕಿಸಿದಾಗ, ಅದರ ಮೂಲಸೆಲೆ ಅವರು ಪೌರತ್ವ ಮತ್ತು ಸ್ವಾತಂತ್ರ್ಯಗಳನ್ನು ಸತತವಾಗಿ ಮರುವ್ಯಾಖ್ಯಾನಿಸುತ್ತಲೇ ಸಾಗಿದ್ದು ಅನಿಸುತ್ತೆ. ಸರ್ಕಾರವನ್ನು ಪ್ರಶ್ನೆ ಕೇಳುವುದೇ ದೇಶದ್ರೋಹವೆಂದು ಬಗೆಯಲಾಗುತ್ತಿರುವ ಇಂದಿನ ದಿನಮಾನದಲ್ಲಿ ತಾತನ ಬದುಕು ಆದರ್ಶ ಪೌರತ್ವದ ಆಚರಣೆ ಎನಿಸುತ್ತದೆ. ‘It is not the Government’s job to keep its Citizens in check, but the other way around. The Citizens need to keep the Governments in check’ ಎಂಬ ಮಾತಿದೆ. ದೊರೆಸ್ವಾಮಿಯವರು ತಮ್ಮ ಜೀವನದುದ್ದಕ್ಕೂ ಪ್ರಯತ್ನ ಮಾಡಿದ್ದು ಅದನ್ನೇ.

ಬಹುತೇಕ ಸ್ವಾತಂತ್ರ್ಯ ಹೋರಾಟಗಾರರು 1947ರ ನಂತರ ಇಲ್ಲ ಅಧಿಕಾರ ರಾಜಕಾರಣದೆಡೆ ನಡೆದುಬಿಟ್ಟರು, ಇಲ್ಲ ತಮ್ಮ ಕೆಲಸ ಮುಗಿಯಿತೆಂದು ನಿವೃತ್ತರಾಗಿಬಿಟ್ಟರು. ದೊರೆಸ್ವಾಮಿಯವರ ವಿಶೇಷತೆಯೆಂದರೆ, ಅವರು ಎರಡೂ ಮಾಡಲಿಲ್ಲ. ಅವರು ಸ್ವಾತಂತ್ರ್ಯಾನಂತರ ಕಾಂಗ್ರೆಸ್ಸಿನಿಂದಲೂ ಹೊರಬಂದುಬಿಟ್ಟರು. ಅಷ್ಟೇ ಅಲ್ಲ ಅವರು ಜೀವನದುದ್ದಕ್ಕೂ ಯಾವುದೇ ಸಂಘಟನೆಯನ್ನು ಕಟ್ಟಲಿಲ್ಲ, ಯಾವುದೇ ಸಂಘಟನೆಯ ಜೊತೆ ಸಂಪೂರ್ಣವಾಗಿ ಗುರುತಿಸಿಕೊಳ್ಳಲಿಲ್ಲ. ಎಲ್ಲ ಸಾಮಾಜಿಕ ಹೋರಾಟಗಳು, ಸಂಘಟನೆಗಳಲ್ಲಿ ದೊರೆಸ್ವಾಮಿಯವರು ಇದ್ದರು, ಆದರೆ ತಾವರೆ ಎಲೆಯ ಮೇಲಿನ ನೀರಿನ ಗುಳ್ಳೆಯಂತೆಯೇ ಇದ್ದರು. ಸ್ವಾತಂತ್ರ್ಯಾ ನಂತರ ದೊರೆಸ್ವಾಮಿಯವರು ತಮ್ಮ ಇಡೀ ಜೀವನದಲ್ಲಿ ಎಂದೂ ಚುನಾವಣೆಗೆ ನಿಲ್ಲಲಿಲ್ಲ, ಯಾವುದೇ ಸಾರ್ವಜನಿಕ ಹುದ್ದೆಯನ್ನು ಅಲಂಕರಿಸಲಿಲ್ಲ. ಕಡೆಗೆ ದೊರೆಸ್ವಾಮಿಯವರು ಒಬ್ಬ ಪ್ರಜ್ಞಾವಂತ ಪೌರನಾಗಿ ತನ್ನ ಕರ್ತವ್ಯ ನಿರ್ವಹಿಸಿದರಷ್ಟೆ, ಪೌರತ್ವದ ಶ್ರೇಷ್ಠ ಮಾದರಿಯನ್ನು ಜೀವಿಸಿ ನಮಗೆ ತೋರಿಸಿಕೊಟ್ಟು ಹೋಗಿದ್ದಾರೆ. ಯಾವುದೇ ಅನ್ಯಾಯ, ಸರ್ಕಾರಗಳ ಜನವಿರೋಧಿ ನಿಲುವುಗಳು ಕಂಡರೆ ಬೀದಿಗಿಳಿದು ಪ್ರತಿಭಟಿಸುವುದು, ಅವುಗಳ ಕುರಿತು ಜನಾಭಿಪ್ರಾಯ ರೂಪಿಸುವುದಕ್ಕಾಗಿ ಪತ್ರಕರ್ತರಾದ ದೊರೆಸ್ವಾಮಿಯವರು ಬರೆದರು. ನೀವೇ ಮತ ಚಲಾಯಿಸಿದ ಪಕ್ಷದ ಸರ್ಕಾರವಾದರೂ, ಆಳುವ ಸರ್ಕಾರಗಳನ್ನು ಪ್ರಶ್ನಿಸುವುದು, ಅವು ಎಲ್ಲೆ ಮೀರದಂತೆ ಕಾಯುವುದೇ ದೊರೆಸ್ವಾಮಿಯವರು ತೋರಿಸಿಕೊಟ್ಟ ಪೌರತ್ವದ ಶ್ರೇಷ್ಠ ಮಾದರಿ. ಸರ್ಕಾರ ಜನಪರ ಕೆಲಸ ಮಾಡಿದಾಗ ಅದನ್ನು ಬೆಂಬಲಿಸಲೂ ಬೇಕು, ಆದರೆ ಅದು ಈಗ ಪ್ರಚಲಿತದಲ್ಲಿರುವಂತೆ ಅಂಧ ಭಕ್ತಿಯಾಗಬಾರದು ಎಂದು ನಂಬಿದ್ದವರು ಅವರು. ಸ್ವತಃ ತನ್ನ ಮಾತೃ ಪಕ್ಷವಾದ ಕಾಂಗ್ರೆಸ್ಸಿನ ವಿರುದ್ಧ ದೊರೆಸ್ವಾಮಿಯವರು ಅನೇಕ ಹೋರಾಟಗಳನ್ನು ರೂಪಿಸಿರುವುದೇ ಅದಕ್ಕೆ ಸಾಕ್ಷಿ.

ಗಾಂಧಿವಾದಿಗಳಾದ ದೊರೆಸ್ವಾಮಿಯವರು ಬಹುಶಃ ಸ್ವತಂತ್ರ ಭಾರತದಲ್ಲಿ ಗಾಂಧೀಜಿ ಇನ್ನೂ ಹೆಚ್ಚು ಕಾಲ ಬದುಕಿದ್ದರೆ ಹೇಗೆ ಬದುಕುತ್ತಿದ್ದರೋ, ಹಾಗೆ ಬದುಕಿದವರು ಎಂದು ನನಗನ್ನಿಸುತ್ತೆ. ಸ್ವಾತಂತ್ರ್ಯ ಬಂದು ನೆಹರೂ ದೆಹಲಿಯಲ್ಲಿ ತಿರಂಗಾ ಝಂಡಾ ಹಾರಿಸುತ್ತಿದ್ದರೆ, ಇಡೀ ಸ್ವಾತಂತ್ರ್ಯ ಚಳುವಳಿಯ ರೂವಾರಿ ಗಾಂಧೀಜಿ ಕೊಲ್ಕತ್ತೆಯಲ್ಲಿ ಹತ್ತಿಕೊಂಡು ಉರಿಯುತ್ತಿದ್ದ ಹಿಂದೂ-ಮುಸ್ಲಿಂ ಕೋಮು ದಳ್ಳುರಿಯನ್ನು ತಹಬಂದಿಗೆ ತರಲು ಪ್ರಯತ್ನಿಸುತ್ತಿದ್ದರು. ಅಂದು ಅವರು ಉಪವಾಸ ಕೂತಿದ್ದರು, ಪ್ರಾರ್ಥನೆಯಲ್ಲಿ ಇಡೀ ದಿನವನ್ನು ಕಳೆದಿದ್ದರು. ಗಾಂಧೀಜಿ ಸ್ವಾತಂತ್ರ್ಯಾನಂತರ ಕಾಂಗ್ರೆಸ್ಸನ್ನು ಒಂದು ರಾಜಕೀಯ ಪಕ್ಷವಾಗಿ ವಿಸರ್ಜಿಸಬೇಕು ಎಂದು ಬಯಸಿದ್ದರು. “ಸ್ವಾತಂತ್ರ್ಯ ಪಡೆಯಲು ಬಲಿದಾನ ಮಾಡಿದ ಸಂಸ್ಥೆ, ದೇಶದಿಂದ ಇಂಗ್ಲಿಷರನ್ನು ಓಡಿಸಿ ಗುಲಾಮಗಿರಿಯಿಂದ ದೇಶವನ್ನು ಪಾರು ಮಾಡಿದ ಕಾಂಗ್ರೆಸ್ ಸಂಸ್ಥೆಯು ಮುಂಚೂಣಿಯಲ್ಲಿರುವವರೆಗೆ ಸತತವಾಗಿ ಅಧಿಕಾರದಲ್ಲಿರಬೇಕು, ಅಧಿಕಾರ ಅನುಭವಿಸಬೇಕು ಎಂಬ ಹಂಬಲ ಸಹಜವಾಗಿಯೇ ಇರುತ್ತದೆ. ಆದರೆ ಕಾಂಗ್ರೆಸ್ ಅಧಿಕಾರ ದಾಹ ಬಿಟ್ಟು ರಾಜಕೀಯದಿಂದ ನಿವೃತ್ತಿ ಆಗಿ ಲೋಕಸೇವಾಸಂಘವಾಗಿ ಪರಿವರ್ತನೆಯಾಗಬೇಕು, ದುರಾಡಳಿತ ನಡೆಸುವ ಸರ್ಕಾರ ಮತ್ತು ಪಕ್ಷದ ವಿರುದ್ಧ ಸಂಘರ್ಷ ನಡೆಸಬೇಕು (ಬ್ರಿಟಿಷರ ವಿರುದ್ಧ ಹೋರಾಡಿದ ರೀತಿಯಲ್ಲೇ) ಎಂಬುದು ಗಾಂಧೀಜಿಯ ಆಶಯವಾಗಿತ್ತು.. ಆದರೆ ಅಂದಿನ ಕಾಂಗ್ರೆಸ್ ಧುರೀಣರು ಗಾಂಧೀಜಿಯವರ ಈ ಮಾತನ್ನಾಗಲೀ, ಅದರ ಹಿಂದಿನ ಉದ್ದೇಶವನ್ನಾಗಲೀ ಕೇಳಲಿಲ್ಲ ಎಂದು ಇದೇ ಪತ್ರಿಕೆಯ ’ನೂರರ ನೋಟ’ ಅಂಕಣದಲ್ಲಿ ಏಪ್ರಿಲ್ 2018ರಲ್ಲಿ ದೊರೆಸ್ವಾಮಿಯವರು ಬರೆಯುತ್ತಾರೆ.

ಕಾಂಗ್ರೆಸ್ಸಿಗರು ಕೇಳಲಿಲ್ಲ ನಿಜ. ಆದರೆ ದೊರೆಸ್ವಾಮಿಯವರು ಆ ಕರೆಗೆ ಓಗೊಟ್ಟರು ಮತ್ತು ಜೀವನಪರ್ಯಂತ ಹಾಗೇ ಬದುಕಿದರು ಕೂಡ – ‘ಪೌರವಾಣಿ’ಯಾಗಿ, ಆಳ್ವಿಕೆಗೆ ಬಂದ ಎಲ್ಲ ಸರ್ಕಾರಗಳಿಗೆ ಶಾಶ್ವತ ವಿರೋಧ ಪಕ್ಷವಾಗಿ. ಸ್ವಾತಂತ್ರ್ಯ ಬಂದು ನಮ್ಮವರದೇ ಸರ್ಕಾರ ಬಂದಕೂಡಲೇ ಎಲ್ಲವೂ ಸರಿಹೋಗುತ್ತೆ ಎಂಬ ಯಾವ ಉಟೋಪಿಯಾ ಅವರಿಗೆ ಇದ್ದಂತಿರಲಿಲ್ಲ. ಜನಸಾಮಾನ್ಯರ ನಡುವೆಯೇ ಬದುಕುತ್ತಿದ್ದ ದೊರೆಸ್ವಾಮಿಯವರಿಗೆ ಉತ್ತಮ ಪ್ರಭುತ್ವ ಲೊಳಲೊಟ್ಟೆ ಎಂಬುದರ ಅರಿವು ಚೆನ್ನಾಗಿತ್ತು ಅನ್ನಿಸುತ್ತೆ. ಪ್ರಜಾಪ್ರಭುತ್ವದಲ್ಲಿ ಆಳುವ ಸರ್ಕಾರವನ್ನು ಪ್ರಶ್ನಿಸುವುದರ ಪ್ರಾಮುಖ್ಯತೆಯನ್ನು ಬಲ್ಲವರಾಗಿದ್ದರು ಅವರು. ಅದಕ್ಕೆ ಅವರ ಚಳುವಳಿಯ ಹಿನ್ನೆಲೆ, ಗಾಂಧೀಜಿಯ ಅನಾರ್ಕಿಯ ಸೆಲೆಗಳು ಮತ್ತು ಒಬ್ಬ ಪತ್ರಕರ್ತನಾಗಿ ವ್ಯವಸ್ಥೆಯನ್ನು ಪ್ರಶ್ನಿಸುವ ಸಹಜ ಪ್ರವೃತ್ತಿ ಅವರ ಪ್ರಜ್ಞೆಯನ್ನು ಸದಾ ಜಾಗೃತವಾಗಿಟ್ಟಿತ್ತು.

ಅವರು ಮನಸ್ಸು ಮಾಡಿದ್ದರೆ ಎಂದೋ ಮಂತ್ರಿಯಾಗಬಹುದಿತ್ತು, ಅಧಿಕಾರ ರಾಜಕಾರಣಕ್ಕೆ ಹೋಗಿದ್ದರೆ ಮುಖ್ಯಮಂತ್ರಿಯೂ ಆಗುತ್ತಿದ್ದರೋ ಏನೋ ಬಲ್ಲವರಿಲ್ಲ, ಆದರೆ ಅವರಿಗೆ ಅದರಲ್ಲಿ ಎಳ್ಳಷ್ಟೂ ಆಸಕ್ತಿ ಇರಲಿಲ್ಲ. ಕೆಂಗಲ್ ಹನುಮಂತಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಅವರು ದೊರೆಸ್ವಾಮಿಯವರನ್ನು ಕರೆದು ಮಂತ್ರಿ ಮಾಡುತ್ತೇನೆ ಅಂದರಂತೆ. ಅದಕ್ಕೆ ದೊರೆಸ್ವಾಮಿಯವರು ತಾನು ಸರ್ಕಾರದ ತಪ್ಪುಗಳ ಬಗ್ಗೆ ಮಾತಾಡುವುದು ನಿಲ್ಲ್ಲಿಸುವುದಿಲ್ಲ ಎಂದದ್ದಕ್ಕೆ, ಕೆಂಗಲ್ ಅವರು ಹಾಗೆ ಮಾಡುವಂತಿಲ್ಲ ಎಂದರಂತೆ. ದೊರೆಸ್ವಾಮಿಯವರು ಕೈಮುಗಿದು ಎದ್ದು ಬಂದುಬಿಟ್ಟರು. ಇತ್ತೀಚೆಗೆ ಸಿದ್ಧರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಅವರಿಗೆ ದೊರೆಸ್ವಾಮಿಯವರ ಬಳಿ ಕೊಂಚ ಸಲುಗೆಯಿತ್ತು. ತಾತ ಇನ್ನೂ ಬಾಡಿಗೆ ಮನೆಯಲ್ಲೇ ಇರುವುದು ತಿಳಿದು ಸರ್ಕಾರದಿಂದ ಸ್ವಂತ ಮನೆ ಮಂಜೂರು ಮಾಡುವ ಪ್ರಸ್ತಾಪ ಇಟ್ಟಾಗ ಅದನ್ನೂ ತಿರಸ್ಕರಿಸಿದರು. ಬಹುಶಃ ಸ್ವತಂತ್ರ್ಯ ಯೋಧರ ಪಿಂಚಣಿ ಒಂದನ್ನು ಬಿಟ್ಟು ಸರ್ಕಾರದಿಂದ ಅವರು ಯಾವ ಸವಲತ್ತನ್ನೂ ಪಡೆದವರೇ ಅಲ್ಲ. ಸಿದ್ಧರಾಮಯ್ಯನವರಿಗೆ ದೊರೆಸ್ವಾಮಿಯವರಲ್ಲಿ ಇದ್ದ ಸಲುಗೆ ಅವರು ಬರೆದ ಲೇಖನದಲ್ಲಿ ಕಂಡುಬರುತ್ತದೆ. ಹೇಗೆ ದೊರೆಸ್ವಾಮಿಯವರು ಒಮ್ಮೆಯೂ ವೈಯಕ್ತಿಕವಾದ ಯಾವುದೇ ವಿಷಯಕ್ಕೆ ತಮ್ಮನ್ನು ಭೇಟಿಯಾಗಲಿಲ್ಲವೆಂದು ಹೇಳುತ್ತಾ, “ಸ್ವಾರ್ಥದ ಲವಲೇಶವೂ ಇಲ್ಲದ ಅವರ ಕಠೋರ ನೈತಿಕತೆ ಎದುರು ರಾಜಕಾರಣದಲ್ಲಿರುವ ನಾವೆಲ್ಲರೂ ತಲೆ ತಗ್ಗಿಸಲೇಬೇಕಾಗುತ್ತಿತ್ತು” ಎಂದು ಬರೆಯುತ್ತಾರೆ. ಹಾಗೆಯೇ ಅವರು “ಕೊಡಗಿನಲ್ಲಿ ಭೂಮಾಲೀಕರು ಬಡ ಆದಿವಾಸಿಗಳನ್ನು ಒಕ್ಕಲೆಬ್ಬಿಸಿದಾಗ ಕೆಂಡಾಮಂಡಲವಾಗಿದ್ದ ದೊರೆಸ್ವಾಮಿಗಳು ನನ್ನ ಜೊತೆ ಜಗಳಕ್ಕೆ ನಿಂತಿದ್ದನ್ನು ನಾನು ಮರೆಯಲಾರೆ” ಎಂದೂ ಬರೆಯುತ್ತಾರೆ. ಮುಂದುವರೆದು ಹೀಗೆ ಧಾಖಲಿಸುತ್ತಾರೆ: “ವೈಯಕ್ತಿಕವಾಗಿ ನನ್ನ ಬಗ್ಗೆ ಅವರಿಗೆ ಅಪಾರವಾದ ಪ್ರೀತಿ ಇತ್ತು. ನನಗೆ ಅವರ ಬಗ್ಗೆ ಅಷ್ಟೇ ಗೌರವ ಇತ್ತು. ದೊರೆಸ್ವಾಮಿಯವರು ಭೇಟಿಯಾಗಲು ಬರುತ್ತಾರೆಂದ ಕೂಡಲೆ ನಾನು ಸ್ವಲ್ಪ ವಿಚಲಿತನಾಗುತ್ತಿದ್ದೆ. ರಾಜಕೀಯದ ಚಕ್ರವ್ಯೂಹದೊಳಗಿದ್ದು ನಮ್ಮದೇ ಇತಿಮಿತಿಯೊಳಗೆ ಕೆಲಸಮಾಡಬೇಕಾದ ನನ್ನಂತಹವರಿಗೆ ದೊರೆಸ್ವಾಮಿಯವರಂತಹ ಪ್ರಾಮಾಣಿಕ ಹೋರಾಟಗಾರರ ಎಲ್ಲ ಬೇಡಿಕೆಗಳನ್ನು ಈಡೇರಿಸುವುದು ಕಷ್ಟವಾಗುತ್ತಿತ್ತು”. ಅದೇ ದೊರೆಸ್ವಾಮಿಯವರ ಶಕ್ತಿಯಾಗಿತ್ತು, ಆಳುವ ಮುಖ್ಯಮಂತ್ರಿಯಲ್ಲಿ ಇಂಥದೊಂದು ಅಳುಕು, ಭಯವನ್ನು ಒಬ್ಬ ಪ್ರಜ್ಞಾವಂತ ಪೌರನಾಗಿಯಷ್ಟೆ ದೊರೆಸ್ವಾಮಿಯವರು ಮೂಡಿಸುತ್ತಿದ್ದರು.

ಇನ್ನು ಇತರೆ ಅನೇಕ ಹೋರಾಟಗಾರರಂತೆ ದೊರೆಸ್ವಾಮಿಯವರು ಒಂದು ವಿಷಯಕ್ಕೆ ಅಂಟಿಕೊಂಡವರಲ್ಲ. ಅವರು ಸ್ವಾತಂತ್ರ್ಯ ಭಾರತದ ಪ್ರಜ್ಞಾಪ್ರವಾಹದೊಂದಿಗೆ ನಡೆಯುತ್ತಾ ತಮ್ಮ ಸುತ್ತಲಿನ ಸಮಾಜ ಬಗ್ಗೆ ಒಂದು ಆಳದ ಸಮಷ್ಠಿ ಪ್ರಜ್ಞೆ, ಜನಪರತೆ ಮತ್ತು ನೈತಿಕತೆಯೊಂದಿಗೆ ಪ್ರತಿಕ್ರಿಯಿಸುತ್ತಾ ಹೋದರಷ್ಟೆ. ಹಾಗೆ ಮಾಡುತ್ತಾ ಅವರು ಸ್ವಾತಂತ್ರ್ಯವನ್ನು ಮರಳಿ ಮರಳಿ ಮರು ವ್ಯಾಖ್ಯಾನಿಸುತ್ತಾ ಹೋದರು. ಭೂಮಿ ಹಕ್ಕು, ತುರ್ತು ಪರಿಸ್ಥಿತಿಯಲ್ಲಿ ವೈಯಕ್ತಿಕ ಸಾಮಾಜಿಕ ಹಕ್ಕುಗಳು, ಮಾನವ ಹಕ್ಕುಗಳು, ಪರಿಸರ ನ್ಯಾಯ, ಗ್ರಾಹಕ ಹಕ್ಕುಗಳು, ವಾಕ್ ಸ್ವಾತಂತ್ರ್ಯ, ನವ ಆರ್ಥಿಕತೆಯ ಅಭಿವೃದ್ಧಿಯ ಮಾದರಿ, ಭ್ರಷ್ಟಾಚಾರ ಮತ್ತು ಕೋಮುವಾದದ ವಿರುದ್ಧ ಹೋರಾಟ ಹೀಗೆ.

ನಮ್ಮ ಸುತ್ತಲಿನ ಪರಿಸರ, ಸಮಾಜದ ಬಗ್ಗೆ ಒಂದು ನೈತಿಕ ಮತ್ತು ಸಮಷ್ಟಿ ಪ್ರಜ್ಞೆಯೊಂದಿಗೆ ಪ್ರತಿಕಿಯಿಸುತ್ತಾ, ಪಕ್ಷಾತೀತವಾಗಿ ಎಲ್ಲ ಸರ್ಕಾರಗಳನ್ನೂ ಪ್ರಶ್ನೆ ಮಾಡುತ್ತಾ ಅವುಗಳು ಎಲ್ಲೆ ಮೀರದಂತೆ, ಜನಪರ ಕೆಲಸ ಮಾಡುವಂತೆ ಒತ್ತಡ ಹಾಕಿ ಕೆಲಸ ಮಾಡುವುದೇ ಪ್ರಜಾಪ್ರಭುತ್ವದಲ್ಲಿ ಪೌರರೆಲ್ಲರ ಪವಿತ್ರ ಕರ್ತವ್ಯ. ಅದನ್ನು ನಾವೆಲ್ಲರೂ ನಿರ್ವಹಿಸುವುದೇ ತಾತನಿಗೆ ನಾವು ಸಲ್ಲಿಸುವ ನಿಜವಾದ ಗೌರವ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಹೈದರಾಬಾದ್‌ನಿಂದ ಪಶ್ಚಿಮ ಬಂಗಾಳಕ್ಕೆ ಹೋಗುತ್ತಿದ್ದ ರೈಲನ್ನು ಜಿಹಾದಿಗಳು ಮುಸ್ಲಿಂ ಎಕ್ಸ್‌ಪ್ರೆಸ್...

0
"ಹೈದರಾಬಾದ್‌ನಿಂದ ಪಶ್ಚಿಮ ಬಂಗಾಳಕ್ಕೆ ಹೋಗುತ್ತಿದ್ದ ರೈಲನ್ನು ಜಿಹಾದಿಗಳು ಮುಸ್ಲಿಂ ಎಕ್ಸ್‌ಪ್ರೆಸ್ ಆಗಿ ಪರಿವರ್ತಿಸಿದ್ದಾರೆ. ಕಾವಲುಗಾರ ವಾಹನ ಹೀಗೆ ಹೋಗುವುದಿಲ್ಲ ಎಂದು ಹೇಳುತ್ತಿದ್ದರೂ ಜಿಹಾದಿಗಳು ವಾಹನವನ್ನು ಹೀಗೆ ಕಳುಹಿಸಲು ಹಠ ಹಿಡಿದಿದ್ದಾರೆ. ಇದು ಯಾವ...