ರಾಜ್ಯದ ಸಮ್ಮಿಶ್ರ ಸರ್ಕಾರ ಬೀಳತ್ತೋ? ಕೊಡವಿಕೊಂಡು ಏಳತ್ತೋ?

| ಪಿ.ಕೆ. ಮಲ್ಲನಗೌಡರ್ |

ಪುಟ್ಟಾಪೂರಾ ಬಹುಮತವಿರುವ ಮಮತಾ ಬ್ಯಾನರ್ಜಿಯವರ ಟಿಎಂಸಿ ಸರ್ಕಾರವನ್ನೇ ಉರುಳಿಸಲು ‘ಸ್ಕೆಚ್ಚು’ ರೆಡಿಯಾಗಿದೆ ಎಂದು ಚಿಲ್ಲರೆ ಮಾತಾಡುವ ಪ್ರಧಾನಿ ಇರುವಾಗ, 10-12 ಸಲ ರಾಜ್ಯದ ಸರ್ಕಾರ ಉರುಳಿಸಲು ಯತ್ನಿಸುತ್ತಲೇ ಬಂದ ಅವರ ಭಯಂಕರ ಶಿಷ್ಯರು ಮತ್ತೆ ಈಗ ಸರ್ಕಾರ ತಂತಾನೇ ಬೀಳುತ್ತೆ ಎನ್ನುತ್ತಲೇ ಕಾಂಗ್ರೆಸ್‍ನ ಶಾಸಕರ ಹಿಂದಿಂದೆ ಅಲೆಯುತ್ತಿದ್ದಾರೆ. ಇತ್ತ ತಮ್ಮ ಶಾಸಕರಿಗೆ ಬಿಗಿ ಮಾಡಲಾಗದ ಮಿತ್ರಪಕ್ಷಗಳು ಪ್ರತಿತಂತ್ರದ ಹೆಸರಲ್ಲಿ ಬಿಜೆಪಿಯ ಹಾದಿಯನ್ನೇ ಹಿಡಿದು ಕೊಡವಿ‘ಕೊಂಡು’ ಏಳಲು ಹೊರಟಂತಿದೆ…

ಈ ಸಲ ಹಿಂದಿಗಿಂತ ಬರ ತೀವ್ರವಾಗಿದ್ದರೂ, ಕಳೆದ ವರ್ಷ ಕುಡಿಯುವ ನೀರಿಗೆಂದು ಖರ್ಚು ಮಾಡಲಾಗಿದ್ದ ( ಎಷ್ಟು ಖರ್ಚಾಗಿತ್ತು, ಅದು ಬೇರೆ ಮಾತು) ಹಣದ ಪ್ರಮಾಣದಷ್ಟೇ ಹಣವನ್ನೂ ಈ ವರ್ಷವೂ ಖರ್ಚು ಮಾಡಲಾಗುತ್ತದೆ ಅಂತೆ! ಇದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗಳು ಮಾಡಿದ ತೀರ್ಮಾನ! ಏಪ್ರಿಲ್ 23ರ ಮತದಾನದ ನಂತರ ಏಪ್ರಿಲ್ 27ರಂದು ಈ ತೀರ್ಮಾನವನ್ನು ಹೊರಡಿಸುತ್ತಾರೆ!

ಮೂರೂ ಪಕ್ಷಗಳ ಜನಪ್ರತಿನಿಧಿಗಳು, ನಾಯಕರು ಬರೀ ಅಧಿಕಾರ, ಗದ್ದುಗೆಯ ಚಿಂತೆಯಲ್ಲಿದ್ದ ಪರಿಣಾಮವಿದು. ನೀತಿ ಸಂಹಿತೆ ಮಣ್ಣುಮಸಿ ಹಾಳಾಗಲಿ, ಕುಡಿಯುವ ನೀರಿಗೆ ಅದ್ಯಾವುದೂ ಅನ್ವಯ ಆಗಲ್ಲ, ಆಗಬಾರದು ಅಲ್ಲವೇ? ಆದರೆ ನಮ್ಮ ಮೂರೂ ಪಕ್ಷಗಳಿಗೆ ಅಧಿಕಾರದ್ದೇ ಚಿಂತೆ ಆದ್ದರಿಂದ ಇಲ್ಲಿ ಅಧಿಕಾರಿಗಳೇ ಪರಮ ಅಧಿಕಾರ ಚಲಾಯಿಸುತ್ತಿದ್ದಾರೆ.

ಅಧಿಕೃತ ಅಂಕಿಅಂಶದ ಪ್ರಕಾರವೇ ಈಗ ರಾಜ್ಯದ 2,424 ಗ್ರಾಮಗಳಲ್ಲಿ ನೀರಿಗೆ ತತ್ವಾರವಿದೆ. ಯಾವೊಬ್ಬ ರಾಜಕೀಯ ನಾಯಕನೂ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಬಿಜೆಪಿಗೆ ಹೇಗಾದರೂ ಮಾಡಿ ಅಧಿಕಾರವನ್ನು ಕೊಂಡುಕೊಳ್ಳುವ ಕನಸು… ಅದು ಮತ್ತೆ ಮತ್ತೆ ವಿಫಲವಾಗಿದ್ದು ಗೊತ್ತಿದ್ದೂ, ಭಯ ಬಿದ್ದು ಸರ್ಕಾರ ಉಳಿಸಿ ‘ಕೊಳ್ಳಲು’ ಮೈತ್ರಿ ಪಕ್ಷಗಳ ಸೆಣಸು..

ಬೀಳಿಸಲ್ವಂತೆ, ಬೀಳುತ್ತಂತೆ!
ಲೋಕಸಭೆ ಚುನಾವಣೆ ಫಲಿತಾಂಶದ ನಂತರ ಸರ್ಕಾರ ತಾನಾಗೇ ಬೀಳಲಿದೆ ಎನ್ನುತ್ತಿದ್ದ ಬಿಜೆಪಿ ನಾಯಕರು ಫಲಿತಾಂಶ ಬರುವ ಮೊದಲೇ ‘ಸಕ್ರಿಯ’ರಾಗಿರುವ ಸೂಚನೆಗಳಿಗೆ ಸಾಕ್ಷಿಯಾಗಿ ಗೋಕಾಕಿನ ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿ ನಿಂತಿದ್ದಾರೆ. ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರುವ ಮೊದಲೇ ಉರುಳಿಸುವ ಆಟಕ್ಕೆ ಇಳಿದ ಬಿಜೆಪಿಗೆ ಕಳೆದ ಅಗಸ್ಟ್‍ನಲ್ಲಿ ಒಬ್ಬ ‘ಪ್ರಬಲ’ ಆಟಗಾರ ಸಿಕ್ಕ. ಮೈತ್ರಿ ಸರ್ಕಾರದಲ್ಲಿ ಪೌರಾಡಳಿತ ಸಚಿವರಾಗಿದ್ದ ರಮೇಶ ಜಾರಕಿಹೊಳಿನೇ ಈ ಚಂಚಲಚಿತ್ತ ಪ್ಲೇಯರ್. ಬೆಳಗಾವಿ ಪಿಎಲ್‍ಡಿ ಬ್ಯಾಂಕ್ ಚುನಾವಣೆ ವಿಚಾರದಲ್ಲಿ ಈ ಕುರಿತು ಕೊಂಯ್ ಕೊಂಯ್ ಅಂದ ರಮೇಶ್‍ರನ್ನು ಬಿಜೆಪಿ ಬುಟ್ಟಿಗೆ ಹಾಕಿಕೊಂಡಿತು-ಡಿಸಿಎಂ ಮಾಡ್ತೀವಿ ಅಂತಾ!

ಈಗಲೂ ಬೀಳಿಸುವ, ಉಳಿಸಿಕೊಳ್ಳುವ ಅಥವಾ ಕೊಡವಿಕೊಂಡು ಏಳುವ- ಮೂರೂ ಯತ್ನಗಳ ಕೇಂದ್ರಬಿಂದು ಈ ಹುಂಬಾತಿಹುಂಬ ರಮೇಶ ಜಾರಕಿಹೊಳಿ. ಎರಡನೇ ಹಂತದ ಮತದಾನದ ದಿನ (ಏ. 23) ಗೋಕಾಕಿನಲ್ಲಿ ಪ್ರತ್ಯಕ್ಷವಾದ ಈ ಮಹಾಶಯ, ರಾಜಿನಾಮೆ ಕೊಡ್ತೇನೆ, ಒಬ್ಬನೇ ಅಲ್ಲ ನನ್ ಜೊತೆ ಹಲವರಿದ್ದಾರೆ ಎಂದರು. ಅಲ್ಲಿವರೆಗೂ ಬೆಳಗಾವಿ-ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡದ ಈ ಶಾಸಕ, ಮತದಾನಕ್ಕೆ ಮೊದಲೇ ಏಪ್ರಿಲ್ 17ರಂದು ಗೋಕಾಕದ ತಮ್ಮ ನಿವಾಸದಲ್ಲಿ ಅಲ್ಲಿನ ಎಲ್ಲ ಪುರಸಭೆ ಸದಸ್ಯರನ್ನು ಕರೆದು ತಾನು ಕಾಂಗ್ರೆಸ್ ಪರ ಪ್ರಚಾರ ಮಾಡಲ್ಲ ಎನ್ನುತ್ತಾರೆ! (ಎಲ್ಲ ಪುರಸಭೆ ಸದಸ್ಯರು! ಹೇಗೆ ಗೊತ್ತಾ? ಗೋಕಾಕಿನ ಪುರಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕ್ಯಾಂಡಿಡೇಟೇ ಇರಲ್ಲ! ಗೆದ್ದವರೆಲ್ಲರೂ ಜಾರಕಿಹೊಳಿ!)

ಉಲ್ಟಾ ಹೊಡೆದರೇ ‘ಸಹಚರರು’?
ಏ. 23ರಂದು ಈತ ಬಾಂಬ್ ಸ್ಫೋಟಿಸಿದ ನಂತರ ಅವರ ಸಹೋದರ ಸಚಿವ ಸತೀಶ್ ಜಾರಕಿಹೊಳಿ ಇದನ್ನೆಲ್ಲ ಹುಚ್ಚಾಟ ಎಂದರು. ಆಗ ತಮ್ಮ ಸತೀಶ್ ಮೇಲೇ ತಿರುಗಿಬಿದ್ದರು. ಬೆಂಗಳೂರಿಗೆ ಹೋಗಿ, ನನ್ನ ಜೊತೆ ಹಲವರ ರಾಜಿನಾಮೆ ಕೊಡಿಸಿ, ನನ್ನ ಶಕ್ತಿ ತೋರಿಸ್ತೀನಿ ಎಂದರು.

ಆದರೆ ರಮೇಶ್ ನಂಬಿದ್ದ ಕಾಂಗ್ರೆಸ್ ಶಾಸಕರಾರು ಅವರ ಜತೆ ಇರಲೇ ಇಲ್ಲ! ಅಥಣಿ ಶಾಸಕ ಮಹೇಶ ಕುಮಟಳ್ಳಿ, ಕಾಗವಾಡ ಶಾಸಕ ಶ್ರೀಮಂತ್ ಪಾಟೀಲ್, ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ್, ಹೊಸಪೇಟೆ ಶಾಸಕ ಆನಂದಸಿಂಗ್, ಕಂಪ್ಲಿ ಶಾಸಕ ಗಣೇಶ- ಈ ಯಾರೂ ರಮೇಶನ ಉತ್ಸಾಹಕ್ಕೆ ಸ್ಪಂದಿಸಲೇ ಇಲ್ಲ…

ಸಿದ್ದು ಆಸೆ, ಕುಮಾರ್ ಪ್ರತಿತಂತ್ರ!
ಈ ಅತಂತ್ರ ಸ್ಥಿತಿ ಬಳಸಿಕೊಂಡು ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಲು ಯತ್ನಿಸುತ್ತಿದ್ದಾರೆ ಎಂಬ ಸುದ್ದಿಯೂ ಹರಡಿತು. ಇದಕ್ಕೆ ಪೂರಕ ಎಂಬಂತೆ ಬೆಂಗಳೂರು ಶಾಸಕರಾದ ಎಸ್‍ಟಿ ಸೋಮಶೇಖರ್, ಭೈರತಿ ಸೋಮಶೇಖರ್, ಮುನಿರತ್ನರು ಆಗಾಗ ಹಲವು ಶಾಸಕರ ಸಭೆ ಸೇರಿಸುತ್ತಿದ್ದಾರೆ. ಅವರ ನಾಯಕ ಸಿದ್ದರಾಮಯ್ಯ ಹೊರತು ಇನ್ನಾರೂ ಅಲ್ಲ!

ಈ ನಡುವೆ ಸರ್ಕಾರ ಉಳಿಸಿಕೊಳ್ಳಲು ಕುಮಾರಸ್ವಾಮಿ ಒಂದು ತಂತ್ರ-ಕುತಂತ್ರ ಮಾಡಿದ್ದಾರಂತೆ. ಬಿಜೆಪಿ ಸೇರಬಹುದಾದ ಶಾಸಕರ ಹಗರಣಗಳ, ಲೋಪಗಳ ವಿವರಗಳನ್ನೆಲ್ಲ ಪಡೆದಿರುವ ಅವರು, ತಮ್ಮ ಆಟ ಶುರು ಮಾಡಿದ್ದಾರಂತೆ!
ಭೀಕರ ಬರದ ತೀವ್ರ ಪರಿಣಾಮ ಗೋಚರಿಸುವುದು ಮೇ ತಿಂಗಳಲ್ಲೇ..ಈಗಲೇ ನೀರಿನ ದಾಹ… ಜನಪ್ರತಿನಿಧಿಗಳಿಗೆ ಮಾತ್ರ ಅಧಿಕಾರದ ದಾಹ!

ಬೀಳಿಸುವುದರ ಹಿಂದಿದೆಯಾ ಸಿದ್ದು ಗುದ್ದು?
ಯಾಕೆ ಈ ಪ್ರಶ್ನೆ ಎಂದರೆ, ರಮೇಶ ಜಾರಕಿಹೊಳಿ ಬಹಿರಂಗವಾಗಿ ಬಿಜೆಪಿ ಸೇರುತ್ತೇನೆ ಎಂದಿದ್ದು ರಾಜ್ಯದ ಎರಡನೇ ಹಂತದ ಮತದಾನ ನಡೆದ ದಿನ ಏ. 23ರಂದು. ಆದರೆ ಅದಕ್ಕೂ ಮೊದಲಾಗಲೇ ಅವರು ಗೋಕಾಕ್ ಪುರಸಭೆಯ ಸದಸ್ಯರನ್ನು ಸೇರಿಸಿ ಮಾತಾಡಿದ್ದನ್ನು ಮುಖ್ಯ ವರದಿಯಲ್ಲಿ ಬರೆಯಲಾಗಿದೆ.

ಇಲ್ಲಿ ಸಿದ್ದರಾಮಯ್ಯರ ಆಟ ಏನೂ ಇಲ್ಲವಾ? ಅವರು ಮತ್ತು ಅವರ ಅಭಿಮಾನಿ ಪ್ರಗತಿಪರರು ಇಲ್ಲವೆನ್ನಬಹುದು… ಆದರೆ ಸಿದ್ದರಾಮಯ್ಯ ಎಷ್ಟೇ ಪ್ರಗತಿಪರ ಮನಸ್ಸು ಹೊಂದಿದ್ದರೂ, ಅವರೊಬ್ಬ ವೃತ್ತಿ ರಾಜಕಾರಣಿ.

ಈ ನಿಟ್ಟಿನಲ್ಲಿ ಕೆದಕುತ್ತ ಹೋದರೆ, ಈ ಚುನಾವಣೆ ಹೊತ್ತಲ್ಲಿ ರಮೇಶ್ ಜಾರಕಿಹೊಳಿಗೂ ಮೊದಲೇ ಸರ್ಕಾರ ‘ಬೀಳುವ, ಏಳುವ’ ಮಾತಾಡಿದ್ದೇ ಅವರು. ಚುನಾವಣಾ ಸಭೆಯೊಂದರಲ್ಲಿ ಸರ್ಕಾರ ಬೀಳುತ್ತೆ ಎಂದು ಸಿಗ್ನಲ್ ಕೊಟ್ಟ ಅವರು, ನಂತರ ಪತ್ರಕರ್ತರ ಮುಂದೆ, ಸರ್ಕಾರ ಬೀಳುತ್ತೆ ಎಂದಿಲ್ಲ, ಸರ್ಕಾರ ಬೀಳಿಸಲು ಬಿಜೆಪಿ ಯತ್ನ ಮಾಡುತ್ತಿದೆ ಎಂದೆ ಅಷ್ಟೇ ಎಂದು ಸಬೂಬು ಹೇಳಿದರು-ಅವತ್ತು ಏಪ್ರಿಲ್ 15, ರಮೇಶ್ ಜಾರಕಿಹೊಳಿ ಅಸಮಾಧಾನ ಹಾಕುವ ಮೊದಲು, ಎರಡನೇ ಹಂತದ ಮತದಾನ ಮುಗಿಯುವ ಮೊದಲು!

ಅಂದರೆ, ಒಟ್ಟಲ್ಲಿ, ಸಿದ್ದರಾಮಯ್ಯರಿಗೆ ಈ ಸರ್ಕಾರ ಬೇಡವಾಗಿದೆ. ಹಾಗಂತ ಕುಮಾರಸ್ವಾಮಿ ಮತ್ತು ದೇವೇಗೌಡರಿಗೂ ಮನಸ್ಸಿನಾಳದಲ್ಲಿ ಗೊತ್ತಿದೆ! ಹಾಗಾದರೆ ಸಿದ್ದರಾಮಯ್ಯ ಯೋಜನೆ ಏನು ಇರಬಹುದು?

ನಮಗೆ ಸಿಕ್ಕ ನಂಬಲರ್ಹ ಮಾಹಿತಿಗಳು ಮತ್ತು ರಾಜಕೀಯ ವಿಶ್ಲೇಷಕರ ಮಾತಿನ ಪ್ರಕಾರ, ಲೋಕಸಭಾ ಚುನಾವಣೆ ನಂತರ ವಿಧಾನಸಭೆಗೆ ಈಗಲೇ ಚುನಾವಣೆ ನಡೆದರೆ ಕಾಂಗ್ರೆಸ್ ಮತ್ತು ತಮಗೂ ಒಳಿತು ಎಂದು ಅವರು ಬಯಸಿದ್ದಾರೆ. ಜೆಡಿಎಸ್ ತೊರೆದು ಈಗಲೇ ಅಸೆಂಬ್ಲಿ ಚುನಾವಣೆಗೆ ಹೋದರೆ, ಗೆಲುವು ಸುಲಭವಷ್ಟೇ ಅಲ್ಲ, ಮೈತ್ರಿ ಹೆಸರಲ್ಲಿ ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್‍ನ್ನು ಜೆಡಿಎಸ್ ನಾಶ ಮಾಡಲಿದೆ ಎಂಬ ಅಭಿಪ್ರಾಯ ಅವರಲ್ಲಿದೆಯಂತೆ. ಇದಕ್ಕೆ ಹಳೆ ಮೈಸೂರು ಭಾಗದ ಕಾಂಗ್ರೆಸ್ ಜನಪ್ರತಿನಿಧಿಗಳ ಬೆಂಬಲವೂ ಇದೆ. ಈಗಾಗಲೇ ಎಂಪಿ ಚುನಾವಣೆಯಲ್ಲೇ ತಮ್ಮ ಬುದ್ಧಿ ತೋರಿಸಿದ ಜೆಡಿಎಸ್ ಎಂಎಲ್‍ಎ, ಜಿಲ್ಲಾ ಪಂಚಾಯತ್ ಸ್ಥಾನಗಳಲ್ಲೂ ವಿಪರೀತ ಪಾಲು ಕೇಳಿ ನಮ್ಮನ್ನು ನಾಶ ಮಾಡಲಿದೆ ಎಂಬುದು ಹಳೆ ಮೈಸೂರಿನ ಕಾಂಗ್ರೆಸ್‍ನ ನಿಷ್ಠಾವಂತ ಮತ್ತು ಸಿದ್ದು ಅಭಿಮಾನಿಗಳ ಅಭಿಪ್ರಾಯ.

ಅದನ್ನೇ ಆಧಾರವಾಗಿ ಇಟ್ಟಕೊಂಡಿರುವ ಸಿದ್ದರಾಮಯ್ಯ, ಮೈಸೂರು ಜೊತೆಗೆ ಉತ್ತರ ಕರ್ನಾಟಕದಲ್ಲಿ ತಮ್ಮ ಮತ್ತು ಕಾಂಗ್ರೆಸ್ ನೆಲೆಯನ್ನು ಇನ್ನಷ್ಟು ವಿಸ್ತರಿಸಲು ಯತ್ನಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ಉತ್ತರ ಕರ್ನಾಟಕದ ಬಾದಾಮಿಯ ಶಾಸಕರೂ ಆಗಿರುವ ಅವರು, ಈ ಸಲದ ಚುನಾವಣೆಯಲ್ಲಿ ಬಾಗಲಕೋಟೆ, ಕೊಪ್ಪಳಗಳಲ್ಲಿ ಕಾಂಗ್ರೆsಸ್ ಗೆಲ್ಲಲು ಬೇಕಾದ ಎಲ್ಲ ಪ್ರಾಮಾಣಿಕ ಯತ್ನ ಮಾಡಿದ್ದಾರೆ.

ಬೆಂಗಳೂರಲ್ಲಿ ಕಾಂಗ್ರೆಸ್‍ಗಿಂತ ಬಿಜೆಪಿಗೆ ಹೆಚ್ಚು ಬೆಂಬಲ ಎನ್ನುವುದನ್ನು ಅರಿತಿರುವ ಸಿದ್ದರಾಮಯ್ಯ, ಮೈಸೂರು, ಅದಕ್ಕೂ ಮುಖ್ಯವಾಗಿ ಉತ್ತರ ಕರ್ನಾಟಕವನ್ನು ಬೇಸ್ ಮಾಡಿಕೊಂಡು ಹೊಸ ರಾಜಕಾರಣ ಶುರು ಮಾಡಿರಬಹುದೇ? ಸದ್ಯ ಕರ್ನಾಟಕ ಕಾಂಗ್ರೆಸ್‍ನಲ್ಲಿ ಸಿದ್ದರಾಮಯ್ಯ ಬಿಟ್ಟರೆ ಬೇರೆ ಯಾವುದೇ ಮಾಸ್ ಲೀಡರ್ ಇಲ್ಲ. ಉತ್ತರ ಕರ್ನಾಟಕದ ಬಹುಪಾಲು ನಾಯಕರು ಸಿದ್ದು ಪರವಾಗಿಯೇ ಇದ್ದಾರೆ…
ಮತ್ತೆ ಚುನಾವಣೆಗೆ ತಯಾರಾಗಿ ಅಂತಿದ್ದಾರೆಯೇ ಸಿದ್ದರಾಮಯ್ಯ?

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here