Homeಚಳವಳಿಪ್ರಜ್ಞಾಹೀನ ಭೈರಪ್ಪನ ಹೇಳಿಕೆಗೆ ಪ್ರಜ್ಞಾವಂತ ಮಹಿಳೆಯರು ಕೊಟ್ಟ ಪ್ರತಿಕ್ರಿಯೆ

ಪ್ರಜ್ಞಾಹೀನ ಭೈರಪ್ಪನ ಹೇಳಿಕೆಗೆ ಪ್ರಜ್ಞಾವಂತ ಮಹಿಳೆಯರು ಕೊಟ್ಟ ಪ್ರತಿಕ್ರಿಯೆ

- Advertisement -
- Advertisement -

ಬಲಪಂಥೀಯ ಕಾದಂಬರಿಕಾರ ಎಸ್.ಎಲ್.ಭೈರಪ್ಪನವರು ಕಾರ್ಯಕ್ರಮವೊಂದರಲ್ಲಿ ‘ಧರ್ಮಗ್ರಂಥಗಳೇ ನಮ್ಮ ಸಂವಿಧಾನ’ (ಈ ರೀತಿ ಕಾನೂನುಗಳು ಬರುತ್ತಾ ಹೋದಲ್ಲಿ) ‘ಇನ್ನು ಮುಂದೆ ಹೆಂಡತಿಯನ್ನು ಮುಟ್ಟುವುದಕ್ಕೆ ಮುಂಚೆ ರಿಜಿಸ್ಟರ್ ಒಂದರಲ್ಲಿ ಸಹಿ ಮಾಡಿಸಿ ಕೊಳ್ಳಬೇಕಾಗುತ್ತದೆ’ ಇತ್ಯಾದಿ ಮಾತುಗಳನ್ನು ಆಡಿದ್ದಾರೆ. ಅವರ ಈ ಅನಿಸಿಕೆಗಳು ಹೊಸದೇನಲ್ಲ. ಆದರೆ, ಮತ್ತೆ ಮತ್ತೆ ದೇಶವನ್ನು ಹಾಗೂ ನಿರ್ದಿಷ್ಟವಾಗಿ ಮಹಿಳೆಯರನ್ನು ಹಿಂದಕ್ಕೆ ತಳ್ಳುವ ಮಾತುಗಳು ಇವಾಗಿವೆ ಎಂಬ ಕಾರಣಕ್ಕೆ ಹಲವರು ಪ್ರತಿಭಟಿಸಿದ್ದಾರೆ. ಕನ್ನಡದ ಹಲವು ಚಿಂತನಶೀಲ ಬರಹಗಾರ್ತಿಯರು ‘ಗೌರಿ ಪತ್ರಿಕೆ’ಯ ಮೂಲಕ ಅದಕ್ಕೆ ಕೊಟ್ಟಿರುವ ಪ್ರತಿಕ್ರಿಯೆಗಳು ಇಲ್ಲಿವೆ.

ನಮ್ಮ ಜೀವಪರ ಪರಂಪರೆಯ ಅರಿವು ಅವರಿಗಿಲ್ಲ

|ಡಾ.ಪಿ.ಭಾರತೀದೇವಿ|

ನಮ್ಮ ದೇಶದಲ್ಲೊಂದು ವಿಚಿತ್ರ ವಿದ್ಯಮಾನ ಆಗಾಗ ನಡೆಯುತ್ತಿರುತ್ತದೆ. ಮಹಿಳೆಯರು, ದಲಿತರು, ಇನ್ನಿತರ ದಮನಿತ ಸಮುದಾಯಗಳಿಗೆ ಒಂದಿಷ್ಟು ಬಿಡುಗಡೆಯ ದಾರಿ ಕಂಡರೂ ಅದನ್ನು ಬೇರೆ ಬೇರೆ ಹೆಸರುಗಳಿಂದ ಅಡಿಗೆ ಹಾಕುವ ಕೆಲಸ ಮಾಡಲಾಗುತ್ತದೆ. ಒಂದೋ ಇದು ನಮ್ಮ ಸಂಸ್ಕೃತಿಗೆ ವಿರುದ್ಧ, ಧರ್ಮಶಾಸ್ತ್ರಕ್ಕೆ ವಿರುದ್ಧ ಎಂದು ಕೂಗು ಹಾಕಲಾಗುತ್ತದೆ, ಇಲ್ಲವೇ ಇದು ಪಾಶ್ಚಾತ್ಯ ಚಿಂತನೆಯಿಂದ ಪ್ರೇರಣೆ ಪಡೆದದ್ದು ಎಂದು ಸಾರಲಾಗುತ್ತದೆ. ಇವೆರಡೂ ಒಂದೇ ನಾಣ್ಯದ ಎರಡು ಮುಖಗಳು. ಇವರು ಭಾರತದ ಜನಸಮುದಾಯವನ್ನು ಜಾತಿಸಮಾಜವಾಗಿ ಗುರುತಿಸುವುದೇ ವಸಾಹತುಶಾಹಿ ದೃಷ್ಟಿಕೋನ ಎಂದರೆ ಸ್ತ್ರೀವಾದ ಎಂಬುದು ಪಾಶ್ಚಾತ್ಯರ ಬಳುವಳಿ ಎನ್ನುತ್ತಾರೆ. ಜಾತ್ಯತೀತ ಎಂಬುದು ಎರವಲು ಪದವಾಗಿ ಇವರಿಗೆ ಕಾಣುತ್ತದೆ.

ಹೀಗೆ ಮೌಢ್ಯದ ವಿರುದ್ಧ, ದಮನದ ವಿರುದ್ಧ ಮಾತಾಡುವುದು ಸಂಸ್ಕೃತಿ ವಿರೋಧಿ, ಧರ್ಮ ವಿರೋಧಿ ಎನ್ನುವ ಮೂಲಕ ಮುಂದೆ ಸಾಗಲು ಅಡಿ ಇಟ್ಟವರನ್ನು ಮತ್ತೆ ಹಿಂದಕ್ಕೆ ತಳ್ಳಿ ಯಥಾಸ್ಥಿತಿ ಕಾಪಾಡಲಾಗುತ್ತದೆ. ಲೇಖಕ ಎಸ್.ಎಲ್.ಭೈರಪ್ಪನವರು ಇನ್ನೊಬ್ಬ ಹಿರಿಯ ಲೇಖಕರಾದ ಸುಮತೀಂದ್ರ ನಾಡಿಗ ಅವರ ಪುಸ್ತಕ ಬಿಡುಗಡೆ ಮಾಡುತ್ತಾ ಆಡಿದ ಮಾತುಗಳನ್ನು ಈ ಹಿನ್ನೆಲೆಯಲ್ಲಿ ಗಮನಿಸಬೇಕು. ಮೀಸಲಾತಿಯ ವಿರುದ್ಧದ ಅಸಹನೆಯ ನುಡಿಗಳು, ಬಿಸಿಯೂಟದ ಬಗೆಗಿನ ಅಪಸ್ವರ, ವಿದ್ಯಾವಂತ, ದುಡಿಯುವ ಮಹಿಳೆಯ ಸ್ವಂತಿಕೆಯ ಕುರಿತಾದ ಅಸಮಾಧಾನ ಇವೆಲ್ಲವನ್ನೂ ಜೋಡಿಸಿ ನೋಡಿದಾಗ ಇವರ ಧೋರಣೆ ಸ್ಪಷ್ಟವಾಗುತ್ತದೆ. ಅದು ದಮನಿತ ವರ್ಗಗಳು ಹೋರಾಟದ ಮೂಲಕ ಗಳಿಸಿಕೊಂಡ ಒಂದು ಸಣ್ಣ ಅವಕಾಶವನ್ನೂ, ಹಕ್ಕನ್ನೂ ಅರಗಿಸಿಕೊಳ್ಳಲಾಗದ ಮನಸ್ಥಿತಿ.

ತಮಗೆ ಅನುಕೂಲವಾಗುವಂತೆ ಆಧುನಿಕತೆ ಕೊಡಮಾಡಿದ ಸವಲತ್ತುಗಳ ಪ್ರಯೋಜನ ಪಡೆಯುತ್ತಾ ಬಂದ ವರ್ಗಗಳಿಗೆ ಅವ್ಯಾವುವೂ ಪಾಶ್ಚಾತ್ಯರಿಂದ ಸ್ವೀಕರಿಸಿದ್ದು ಎನಿಸುವುದಿಲ್ಲ, ಸಂಸ್ಕೃತಿ ವಿರೋಧಿ ಎನಿಸುವುದಿಲ್ಲ. ಪುರುಷರು ಪಾಶ್ಚಾತ್ಯ ಉಡುಗೆ ಪ್ಯಾಂಟು ಹಾಕಿದರೆ ಏಳದ ಪ್ರಶ್ನೆ ಇಲ್ಲಿನದೇ ಉಡುಗೆ ಚೂಡಿದಾರ್ ಹಾಕಿದರೆ ಏಳುತ್ತದೆ. ಅವರು ಕ್ರಾಪ್ ಬಿಟ್ಟಾಗ ಏಳದ ಅಸಮಾಧಾನ, ಮಹಿಳೆ ವಿವಿಧ ಕೇಶಾಲಂಕಾರಗಳನ್ನು ಮಾಡಿಕೊಂಡಾಗ ಉಂಟಾಗುತ್ತದೆ. ಇದೇ ಜನವರ್ಗ ದೇವದಾಸಿ ಪದ್ಧತಿ, ಬಾಲ್ಯವಿವಾಹ, ವಿಧವಾ ಪದ್ಧತಿಯನ್ನು ಸಂಸ್ಕೃತಿಯ ಹೆಸರಿನಲ್ಲಿ, ಶಾಸ್ತ್ರಗಳನ್ನು ಉದ್ಧರಿಸುತ್ತಾ ಸಮರ್ಥಿಸುತ್ತಾ ಬಂದಿದೆ. ಹೆಣ್ಣನ್ನು ದೇವಿಯೆಂದು ಹಾಡಿಹೊಗಳುತ್ತಾ ಮನೆಯೊಳಗೆ ಬಂಧಿಯಾಗಿಸಿ, ಭೋಗಸಾಧನವಾಗಿ, ವಂಶ ಮುಂದುವರಿಕೆಗೆ ಮಕ್ಕಳನ್ನು ಹೆರುವ ಸಾಧನವಾಗಿ ಮಾಡಿಕೊಂಡಿದೆ. ಅವಳಿಗೆ ಗೃಹಿಣಿ, ಮಾತೆ, ಗೃಹಲಕ್ಷ್ಮಿ ಮುಂತಾದ ಸುಂದರ ಹೆಸರುಗಳನ್ನು ನೀಡುತ್ತಾ ಬಂದಿದೆ. ಇದು ಪುರುಷ ಪ್ರಧಾನ ಮನಸ್ಥಿತಿಯ ದ್ವಿಮುಖ ನೀತಿ. ಅಲ್ಲ ಸ್ವಾಮೀ, ಮಹಿಳೆಯರ ಮೇಲೆ ದೌರ್ಜನ್ಯ, ದಮನಿತರ ಮೇಲೆ ಹಲ್ಲೆ ಆದಾಗ ನಿಮ್ಮ ಧರ್ಮಶಾಸ್ತ್ರ ಏನು ಹೇಳುತ್ತದೆ? ಇಂದಿನ ಎಚ್ಚೆತ್ತ ಮಹಿಳೆಯರು ದ್ವಿಮುಖ ನೀತಿ ಹೊಂದಿದ ಈ ಪರಂಪರೆಯನ್ನು ಪ್ರಶ್ನಿಸುತ್ತಿದ್ದಾರೆ. ಅವರ ಮಾತುಗಳನ್ನು ಕಿವಿ ತೆರೆದು ಕೇಳಬೇಕಾದ ಈ ಸಂದರ್ಭವಿದು.

ಯಾವುದೇ ವಿಚಾರದಲ್ಲಾಗಲೀ ಎದುರಿಗಿರವವರ ಸಮ್ಮತಿ ಇಲ್ಲದೇ ಅವರ ಅವಕಾಶವನ್ನು (ಸ್ಪೇಸ್) ಅತಿಕ್ರಮಿಸುವುದು ಆ ವ್ಯಕ್ತಿಗೆ ಮಾಡುವ ಅವಮಾನ. ಇದನ್ನು ಅರ್ಥ ಮಾಡಿಕೊಳ್ಳಲು ಯಾವ ಶಾಸ್ತ್ರವೂ ಅಗತ್ಯವಿಲ್ಲ, ಸಣ್ಣ ಸೂಕ್ಷ್ಮತೆ ಇದ್ದರೆ ಸಾಕು. ಹೀಗಿರುವಾಗ ವಿವಾಹದ ಚೌಕಟ್ಟಿನೊಳಗಾಗಲೀ, ಹೊರಗಾಗಲೀ ಹೆಣ್ಣಿನ ದೇಹವನ್ನು ಮುಟ್ಟುವಾಗ ಆಕೆಯ ಸಮ್ಮತಿ ಅಗತ್ಯ ಎನ್ನುವ ಮಾತಿನಲ್ಲಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗದಿರುವುದು ಅಥವಾ ವಿರೋಧಿಸುವಂಥದ್ದು ಏನಿದೆ? ಹೆಣ್ಣಿನ ಸಮ್ಮತಿಯ ಪ್ರಶ್ನೆಯನ್ನು ಘನತೆಯಿಂದ ಮನ್ನಿಸದೇ ವ್ಯಂಗ್ಯವಾಗಿ ನೋಡುವ ಮನಸ್ಥಿತಿ ಭೈರಪ್ಪನವರು ಹೇಳುವ ಸೋ ಕಾಲ್ಡ್ ‘ಪರಂಪರೆ’ಯಿಂದ ರೂಪುಗೊಂಡದ್ದು. ಅದು ಕಟ್ಟಿಕೊಂಡ ಹೆಣ್ಣನ್ನು ತನ್ನ ಆಸ್ತಿಯೆಂದು ನೋಡುವ ಧೋರಣೆ ಅಷ್ಟೇ. ಅದರಾಚೆಗೆ ಇನ್ನೇನೂ ಅಲ್ಲ. ಮಹಿಳೆಯರು ಇವರು ಹೇಳಿದ್ದೆಲ್ಲವನ್ನೂ ಒಪ್ಪಿಕೊಂಡು, ಯಾವುದಕ್ಕೂ ಎದುರಾಡದಿದ್ದರೆ ಅದು ಆದರ್ಶ ಸಂಸಾರ. ಒಂದಿಷ್ಟು ಸ್ವಂತಿಕೆ ಇದ್ದರೆ ಆಕೆ ಅಹಂಕಾರದಿಂದ ಸಂಸಾರವನ್ನು ಒಡೆಯುವವಳು, ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋದವಳು ಎಂಬ ಸರಳ ರೇಖೆಯಲ್ಲಿ ಇಲ್ಲಿನ ಚಿಂತನೆ ಇದೆ.

ಭೈರಪ್ಪನವರ ನಿಲುವು, ಈ ಮಾತುಗಳ ಮೂಲಕ ಅನಾವರಣಗೊಂಡಿದೆ. ಇದುವರೆಗೆ ಜ್ಯೋತಿ ಬಾ ಫುಲೆಯವರಾಗಲೀ, ಅಂಬೇಡ್ಕರ್ ಆಗಲೀ, ಇತ್ತೀಚಿನ ಕಾಂಚ ಐಲಯ್ಯ ಅವರಾಗಲೀ ಹೇಳುತ್ತಾ ಬಂದದ್ದನ್ನು ಖಚಿತಪಡಿಸುವ ಬಗೆಯಲ್ಲಿ ಇಲ್ಲಿನ ಮಾತುಗಳಿವೆ. “ನಮ್ಮ ಧರ್ಮಶಾಸ್ತ್ರವೇ ನಮ್ಮ ಸಂವಿಧಾನ, ನಮ್ಮ ಸಂವಿಧಾನದಲ್ಲಿ ಪರಂಪರೆ ಒಳಗೊಂಡಿದೆಯೇ, ಇಲ್ಲ” ಎನ್ನುವಾಗ ಇವರು ಹೇಳುತ್ತಿರುವುದು ಸಾವಿರಾರು ವರ್ಷಗಳಿಂದ ದಲಿತರು, ಹೆಣ್ಣುಮಕ್ಕಳನ್ನು ವ್ಯಕ್ತಿಗಳೇ ಅಲ್ಲ ಎಂದು ನೋಡುತ್ತಾ ಬಂದಿರುವ ಪರಂಪರೆಯ ಬಗೆಗೆ. ಇದು ಶ್ರೇಣೀಕರಣವನ್ನು ಪ್ರತಿಪಾದಿಸುವ, ಮನುಷ್ಯ ಸಮಾನತೆಯನ್ನು ಪುರಸ್ಕರಿಸದ ಪರಂಪರೆ. ನಮ್ಮ ನೆಲದಲ್ಲಿ ಇರುವುದು ಇದೊಂದೇ ಪರಂಪರೆ ಅಲ್ಲ. ಜೀವಕಾರುಣ್ಯವನ್ನು ಸಾರಿದ ಬುದ್ಧನ ಪರಂಪರೆ, ಸಮಾನತೆ, ಸೌಹಾರ್ದವನ್ನು ಸಾರುವ ಶರಣರ, ಅವಧೂತರ, ಸೂಫಿ ಸಂತರ ಪರಂಪರೆಯೂ ಇದೆ. ಆದರೆ ಇವರು ಹೇಳುವ ಧರ್ಮಶಾಸ್ತ್ರದೊಳಗೆ ಇವ್ಯಾವುದೂ ಇಲ್ಲ. ಅದಕ್ಕೆ ಸಂವಿಧಾನ ಇವರಿಗೆ ಪರಂಪರೆಯನ್ನು ಒಳಗುಮಾಡಿಕೊಳ್ಳದ ಧರ್ಮಶಾಸ್ತ್ರಕ್ಕೆ ವಿರುದ್ಧವಾದ ಗ್ರಂಥವಾಗಿ ಕಾಣುತ್ತದೆ. ಈ ನೆಲೆಯಲ್ಲಿ ಭೈರಪ್ಪನವರು ಬಹಳ ಸ್ಪಷ್ಟವಾಗಿದ್ದಾರೆ. ಇವರು ಹೇಳುವ ಪರಂಪರೆ ನಮ್ಮ ನೆಲದ ಸಮಾನತೆ, ಸಾಮರಸ್ಯದ ಪರಂಪರೆಯನ್ನು ಕೆಡಹುತ್ತಾ, ಆಪೋಶನ ತೆಗೆದುಕೊಳ್ಳುತ್ತಾ ಎಲ್ಲವನ್ನೂ ಏಕರೂಪಿಯಾಗಿಸಿ ನುಗ್ಗುತ್ತಿದೆ. ಇಂತಹ ಪರಂಪರೆಯನ್ನೇ ನಾವು ಪ್ರಶ್ನಿಸುತ್ತೇವೆ, ನಾವು ಸಂವಿಧಾನ ಪಂಥಿಗಳು ಎಂದು ಮತ್ತೆ ಮತ್ತೆ ಸಾರುತ್ತೇವೆ.

ಮಹಿಳೆಯರಿಗೆ ಶಕ್ತಿ ಕೊಡುತ್ತಿರುವುದು ಸಂವಿಧಾನ: ಅದೇ ಭೈರಪ್ಪನವರ ಕೊರಗು

|ಡಾ.ಎಂ.ಎಸ್.ಆಶಾದೇವಿ |

ಭೈರಪ್ಪನವರು ಠಕ್ಕತನದ ವಕಾಲತ್ತು ವಹಿಸಿದ್ದಾರೆ. ಭೈರಪ್ಪನವರ ಹೇಳಿಕೆ ಕುವೆಂಪು ಅವರ ಬಹು ಮುಖ್ಯವಾದ ಮಾತೊಂದನ್ನು ನೆನಪಿಗೆ ತರುತ್ತದೆ “ಮೊದಲ ಠಕ್ಕ ಮೊದಲ ಬೆಪ್ಪನನ್ನು ಕಂಡಾಗ ಹುಟ್ಟಿದ್ದು ಧರ್ಮ”. ಎಂದಿನಂತೆ ಇವರು ಈಗಲೂ ಠಕ್ಕತನದ ವಕಾಲತ್ತನ್ನೇ ವಹಿಸಿದ್ದಾರೆ. ಸಾಮಾಜಿಕ ನ್ಯಾಯದ ಹೋರಾಟಗಳು ಪಡೆಯುತ್ತಿರುವ ಪ್ರಾಮುಖ್ಯತೆಯನ್ನು ನೋಡಿ, ಮತ್ತು ಕೊನೆಗೂ ಜನತಾಂತ್ರಿಕ ವ್ಯವಸ್ಥೆಯು ಸಾಮಾಜಿಕ ನ್ಯಾಯದ ಪರವಾಗಿರುವುದನ್ನು ಒಪ್ಪುವುದಾಗಲಿ ಸಹಿಸುವುದಾಗಲೀ ಇವರಿಗೆ ಸಾಧ್ಯವೇ ಇಲ್ಲ. ಕಣ್ಣೆದುರಿಗೆ ಇಷ್ಟೆಲ್ಲಾ ಅಬದ್ದಗಳು ನಡೆಯುತ್ತಿದ್ದರೂ ಯಾವ ಮುಖ ಇಟ್ಟುಕೊಂಡು ಇಂತಹ ಅಮಾನವೀಯ ನಿಲುವುಗಳನ್ನು ಸಾರ್ವಜನಿಕವಾಗಿ ತಳೆಯುತ್ತಾರೆ? ಈ ಆಂಶವೇ ನಮ್ಮ ಕಾಲದ ದುರಂತ ಮತ್ತು ಆತಂಕಗಳನ್ನು ಹೇಳುತ್ತದೆ. ಜೊತೆಯ ಮನುಷ್ಯರನ್ನು ಮನುಷ್ಯರಾಗಿ ನೋಡದ್ದು ಧರ್ಮ, ಧರ್ಮ ಶಾಸ್ತ್ರ ಹೇಗಾದೀತು?

ಜಗತ್ತೇ ಒಪ್ಪಿ ಗೌರವಿಸುತ್ತಿರುವ, ಅತ್ಯಂತ ನಾಗರಿಕ ಮತ್ತು ಮಾನವೀಯ ಮೌಲ್ಯಗಳನ್ನು ಹಾಗೂ ಹಕ್ಕುಗಳನ್ನು ಎತ್ತಿ ಹಿಡಿದಿರುವ ಸಂವಿಧಾನ ನಮ್ಮದು. ನಮ್ಮ ಸಂವಿಧಾನ ನಮ್ಮ ಹೆಮ್ಮೆ.

ಇಂಗುವುದಿಲ್ಲ ಹೆಣ್ಣು ದನಿ

| ಅಕ್ಷತಾ ಹುಂಚದಕಟ್ಟೆ |

ಭೈರಪ್ಪನವರ ಈ ಮಾತುಗಳು ಅನಿರೀಕ್ಷಿತವೇನಲ್ಲ… ಹೊಸತು ಅಲ್ಲ… ಬಹುಕಾಲದಿಂದ ಅವರು ಈ ಪ್ರತಿಗಾಮಿ ಧೋರಣೆಗಳನ್ನು ಬಿತ್ತರಿಸುತ್ತಲೇ ಬಂದಿದ್ದಾರೆ. ಅವರ ಕಾದಂಬರಿಗಳ ಒಟ್ಟು ನೋಟವೂ ಇದೇ ಆಗಿದೆ. ಸುಮತೀಂದ್ರ ನಾಡಿಗರ ಕೊನೆಯ ಕೃತಿ ಬಿಡುಗಡೆ ಮಾಡಿ ಈ ರೀತಿ ಅವರು ಮಾತನಾಡಿರುವುದು ಕೂಡಾ ತುಂಬ ಸಹಜ. ಏಕೆಂದರೆ ಸ್ವತಃ ಸುಮತೀಂದ್ರ ನಾಡಿಗರು ಇದೇ ರೀತಿಯ ಮನಃಸ್ಥಿತಿ ಹೊಂದಿದ್ದ ಮತ್ತು ಸನಾತನವಾದಿ ಎಂದು ತನ್ನನ್ನು ಹೆಮ್ಮೆಯಿಂದ ಕರೆದುಕೊಂಡ ಲೇಖಕರಾಗಿದ್ದರು. ಅವರ ಕೃತಿಯನ್ನು ಭೈರಪ್ಪನವರು ಬಿಡುಗಡೆ ಮಾಡುವುದು ಮತ್ತು ಬಿಡುಗಡೆ ಮಾಡಿ ಈ ರೀತಿ ಮಾತನಾಡುವುದು ಎಲ್ಲವೂ ನಿರೀಕ್ಷಿತವೇ. ಇಂಥ ಸುದ್ದಿಗೆ ಆ ಪಾಟಿ ಜಾಗೆ ಕೊಟ್ಟು ಮಾಧ್ಯಮಗಳು ಪ್ರಚಾರ ಮಾಡುವ ಅಗತ್ಯದ ಬಗ್ಗೆ ಮಾತ್ರ ಪ್ರಶ್ನೆಗಳೇಳುತ್ತವೆ. ಏಕೆಂದರೆ ಎಷ್ಟೊ ಮಹತ್ವದ ಸಂಗತಿಗಳು ಪತ್ರಿಕೆಗಳ ಕಣ್ಣಿಗೂ ಬೀಳದೆ ಮರೆಯಾಗುವ ಸಂದರ್ಭಗಳು ಮತ್ತೆ ಮತ್ತೆ ಸೃಷ್ಟಿಯಾಗುತ್ತಿರುವ ಹೊತ್ತಲ್ಲಿ, ಭೈರಪ್ಪನವರು ತಮ್ಮ ಪ್ರತಿಗಾಮಿ ಧೋರಣೆಗಳನ್ನು ಪ್ರತಿಬಾರಿ ಬಿತ್ತರಿಸಿದಾಗಲೂ ಅದನ್ನು ಎಲ್ಲಿಲ್ಲದ ಮಹತ್ವದ ಸುದ್ದಿ ಎಂದು ಬಿತ್ತರಿಸುತ್ತವೆ. ಮಾಧ್ಯಮಗಳು ಆ ಮೂಲಕ ನಮಗೆ ಅವರ ಧೋರಣೆಯ ಬಗ್ಗೆ ಸ್ಪಷ್ಟ ಚಿತ್ರಣ ನೀಡುತ್ತವೆ ಎಂದೂ ಹೇಳಬಹುದೇನೋ…

ಭೈರಪ್ಪನವರು ಮತ್ತೆ ಮತ್ತೆ ಏಕೆ ಸಂವಿಧಾನದ ಮೇಲೆ ಗುರಾಣಿ ಬೀಸುತ್ತಾರೆ ಎನ್ನುವುದಕ್ಕೆ ಉತ್ತರ ಬಹಳ ಸ್ಪಷ್ಟವಾಗಿದೆ. ಸ್ತ್ರೀಯರು, ದಮನಿತರು ಸೇರಿದಂತೆ ಎಲ್ಲರಿಗೂ ಮೂಲಭೂತ ಹಕ್ಕುಗಳನ್ನು ಕೊಟ್ಟು ಸಂವಿಧಾನ ಸಮಾನ ನಾಗರೀಕ ಮಾನ್ಯತೆಯನ್ನು ನೀಡಿದೆ. ಅವರಿಗೆ ಇದರ ಬಗ್ಗೆಯೆ ಸಮಾಧಾನವಿಲ್ಲ. ಅವರಿಗೆ ಸ್ತ್ರೀಯನ್ನು ಜೀವ ಎಂದು ನೋಡುವುದಕ್ಕೆ ಸಮ್ಮತಿ ಇಲ್ಲ. ಮಹಿಳೆಯರು ಇವರು ಯಾವುದನ್ನು ಪರಂಪರೆ ಎನ್ನುತ್ತಾರೋ, ಸಂಪ್ರದಾಯ ಎನ್ನುತ್ತಾರೋ ಅದನ್ನು ಆಚರಿಸಲು ಇರುವ ತೊಗಲು ಬೊಂಬೆಗಳಷ್ಟೆ. ಹಾಗೆ ನೋಡಿದರೆ ಇವರು ಯಾವುದನ್ನು ಸಂಪ್ರದಾಯ, ಪರಂಪರೆ ಎನ್ನುತ್ತಾರೋ ಅದರಲ್ಲಿರುವ ಕೆಲವು ಮೌಲ್ಯಗಳ ಬಗ್ಗೆ ಇವರು ಮಾತಾಡುವುದೆ ಇಲ್ಲ. ಏಕೆಂದರೆ ಅದನ್ನು ಗಂಡಸು ಆಚರಿಸಬೇಕಾಗುತ್ತದೆ. ಅದರ ಬಗ್ಗೆ ಇವರದು ಚಕಾರವಿಲ್ಲ. ಉದಾಃ- ವಾನಪ್ರಸ್ಥಾಶ್ರಮದ ಕುರಿತು… ವಯಸ್ಸಾದ ಕಾಲದಲ್ಲಿ ಮಕ್ಕಳು ಪ್ರವರ್ಧಮಾನಕ್ಕೆ ಬಂದ ಸಂದರ್ಭದಲ್ಲಿ ಅವರಿಗೆ ಮನೆಯ ಜವಾಬ್ದಾರಿಯನ್ನು ಹೊರೆಸಿ ತಾನು ಎಲ್ಲ ತ್ಯಾಗ ಮಾಡಿ ಗೃಹಸ್ಥನು ದಟ್ಟಡವಿಗೆ ತೆರಳಿ ಸರಳ ಜೀವನ ನಡೆಸಬೇಕು. ಅಂತದ್ದರ ಬಗ್ಗೆ ಚಕಾರವಿಲ್ಲ. ಆದರೆ ಸ್ತ್ರೀಯರು ಮತ್ತು ದಮನಿತರು ಇವರು ಹೇಳಿದ್ದನ್ನು ಕಣ್ಣುಮುಚ್ಚಿ ನಡೆಸಬೇಕೆಂದು ಆಗ್ರಹಿಸುತ್ತಾರೆ. ಆ ಆಗ್ರಹಗಳು ಇತ್ತೀಚೆಗೆ ಒಂದು ರೀತಿಯಲ್ಲಿ ಆತಂಕದ ದನಿಯಲ್ಲೂ ಹೊಮ್ಮುತ್ತಿವೆ. ಏಕೆಂದರೆ ಎಷ್ಟೇ ಮೂಲಭೂತವಾದವನ್ನು ಗಟ್ಟಿಗೊಳಿಸಲು ಹೋದರೂ ಅದರ ಕಬಂಧ ಬಾಹುಗಳನ್ನು ಬೇಧಿಸಿ ಬಿಡುಗಡೆಯ ದಾರಿಯನ್ನು ಕಂಡುಕೊಳ್ಳುವ ಹೆಣ್ಣುಮಕ್ಕಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೆ ಇದೆ. ಜೊತೆಗೆ ಈ ಹೋರಾಟದ ಕಣದಲ್ಲಿ ಹೆಣ್ಣು ಏಕಾಂಗಿಯಲ್ಲ. ಹೆಣ್ಣು ಮಕ್ಕಳು ಹೆಚ್ಚು ಹೆಚ್ಚು ಸಂಘಟಿತರಾಗುತ್ತಿದ್ದಾರೆ. ಇದೇ ಇವರ ಆತಂಕಕ್ಕೆ ಕಾರಣ. ಸಮಾನತೆಯನ್ನು ಪೋಷಿಸುತ್ತಿರುವ ಸಮಾನ ಹಕ್ಕುಗಳ ರಕ್ಷಣೆಗೆ ಕಟಿಬದ್ಧವಾಗಿರುವ ಸಂವಿಧಾನ ಹೆಣ್ಣುಮಕ್ಕಳ ರಕ್ಷಣೆಗಿರುವುದೇ ಇವರ ಸಮಸ್ಯೆ. ಇವರ ಧರ್ಮಶಾಸ್ತ್ರದಂತೆ ಸಂವಿಧಾನವೇನಾದರೂ ರಚಿತವಾಗಿದ್ದರೆ…. ಇಂಥದಕ್ಕೆಲ್ಲ ಅವಕಾಶ ಕೊಡದೆ ತಾವಂದುಕೊಂಡ ಧರ್ಮ ಮತ್ತು ಅದರ ರಕ್ಷಣೆಯನ್ನು ಸ್ತ್ರೀ ಸಮುದಾಯವನ್ನು ಅಡಿಯಾಳಾಗಿಸಿ ಅವಳಿಗೆ ದನಿಯಿಲ್ಲವಾಗಿಸಿ ಸಾಧಿಸುತ್ತಿದ್ದರು. ಅದಕ್ಕೆ ಅಡ್ಡಗಾಲು ನಮ್ಮ ಸಂವಿಧಾನ.

ಪುರುಷ ಪರವಾದ ಆಳದ ಏಕಮುಖಿ ಧೋರಣೆ ಹೊಂದಿರುವ (ಸಮಾನ ನೆಲೆಯಲ್ಲಿ ಪುರುಷರ ಪರ ಅಲ್ಲ. ಅಲ್ಲಿಯು ಜಾತಿ ಶ್ರೇಣಿಕರಣ ಕೆಲಸ ಮಾಡುತ್ತದೆ) ಭೈರಪ್ಪನವರ ಚಿಂತನೆಗಳು ಆ ಕಾರಣಕ್ಕಾಗಿ ಮಹಿಳೆಯರು ಸ್ವತಂತ್ರರಾಗಿರುವುದು ಮತ್ತು ಘನತೆಯ ಬದುಕು ಬದುಕುವುದನ್ನು ಒಪ್ಪದೆ ಹೋಗಿವೆ. ಮಹಿಳೆಯರು ನಾಲ್ಕು ಗೋಡೆಗಳ ಮಧ್ಯೆ ಇದ್ದು ಇವರು ಹೇಳುವ ಶಾಸ್ತ್ರಾಚಾರಗಳಿಗೆ ಕೊರಳೊಡ್ಡಿ ಅಡಿಯಾಳಾಗಿ ಬದುಕುವುದನ್ನು ಬೇಕಾದರೆ ಹಾಡಿ ಹೊಗಳುತ್ತವೆ. ಅದೇ ಆಕೆ ಸ್ವಂತಿಕೆಯ ಬದುಕನ್ನು ನಡೆಸಲು ಹೊರಟ ಕೂಡಲೇ ವಿರುದ್ಧ ಬೀಳುತ್ತಾರೆ. ಈಗಾಗಿರುವುದು ಅದೇ; ದಾಂಪತ್ಯದಲ್ಲಿ ಹೆಣ್ಣಿಗೆ ಸರಿ ಸಮಾನವಾದ ಸ್ಥಾನಮಾನಗಳು ಸಿಕ್ಕಿದರೆ, ಶಬರಿಮಲೆ ದೇಗುಲವು ಸೇರಿದಂತೆ ಹೆಣ್ಣನ್ನು ಅಸ್ಪೃಶ್ಯಳಾಗಿ ಪರಿಗಣಿಸಿರುವ ಜಾಗಗಳಲ್ಲಿ ಪ್ರವೇಶ ದೊರಕಿದರೆ.. ಈ ಎಲ್ಲ ವಿದ್ಯಮಾನಗಳು ಇವರು ನಂಬಿಕೊಂಡ ಸಂಪ್ರದಾಯವನ್ನು ಬುಡಮೇಲು ಮಾಡಿ ಸಮಾನತೆಯ ಸಮಾಜವನ್ನು ಪೋಷಿಸುವಂತವು. ಇನ್ನೆಷ್ಟು ವರುಷ ಬೇಕೋ ಇಲ್ಲಿ ಸಮಾನತೆಯ ಸಮಾಜ ನಿರ್ಮಾಣಗೊಳ್ಳಲು? ಆದರೆ ಅದಕ್ಕೆ ಅಡಿಗಲ್ಲು ಪ್ರತಿಷ್ಠಾಪನೆ ಆಗುತ್ತಿದೆ ಎಂದು ಕಂಡ ಕೂಡಲೆ ಬುಡದಲ್ಲೆ ಅದನ್ನು ಅಲ್ಲಾಡಿಸುವ ಶಕ್ತಿಗಳು ಕಾರ್ಯೋನ್ಮುಖವಾಗುತ್ತವೆ ಎಂಬುದು ಅಷ್ಟೇ ಸತ್ಯ. ಅದಕ್ಕೆ ಬೇಕಾದರೆ ಬೇರೆ ಧರ್ಮವನ್ನು ಎದುರು ತಂದು ನಿಲ್ಲಿಸಿ ಅಲ್ಲಿಲ್ಲದ್ದು ಇಲ್ಯಾಕೆ ಎಂದು ಕೇಳುವ ಮಟ್ಟಕ್ಕೂ ತಲುಪುತ್ತಾರೆ. ಅಂತವರ ದನಿಯಾಗಿ ಲೇಖಕ ಭೈರಪ್ಪನವರು ಮಾತಾಡುತ್ತಲೇ ಬಂದಿದ್ದಾರೆ. ಈ ಮಾತುಗಳು ಅದಕ್ಕೆ ಸೇರ್ಪಡೆಗಳಷ್ಟೆ…. ಈ ಎಲ್ಲ ವಿದ್ಯಮಾನಗಳನ್ನು ನೋಡುತ್ತಿದ್ದರೆ ನಮ್ಮ ಸಂವಿಧಾನದ ಬಗ್ಗೆ ನಮ್ಮ ಗೌರವ ಹೆಚ್ಚುತ್ತದೆ. ಸಂವಿಧಾನವು ನಮಗೆ ಕೊಟ್ಟಿದ್ದರ ಮತ್ತು ಕೊಡುತ್ತಿರುವ ಘನತೆಯ ಬದುಕಿನ ಬಗ್ಗೆ ಹೆಣ್ಣು ಸಮೂಹಕ್ಕೆ ದಿನೇ ದಿನೇ ಆದರ ಮತ್ತು ನಂಬಿಕೆ ಹೆಚ್ಚಬೇಕು. ಮತ್ತು ಅದು ನೀಡಿದ ಹಕ್ಕುಗಳನ್ನು ಘನತೆಯ ಬದುಕಿಗಾಗಿ ಸಂಘಟಿತರಾಗಿ ಪ್ರತಿಪಾದಿಸಬೇಕು. ಅದೇ ಹಿರಿಯ ಲೇಖಕ ಭೈರಪ್ಪನವರ ಮಾತಿಗೆ ಮಹಿಳಾ ಸಮೂಹ ತೋರಿಸಬೇಕಾದ ಶಕ್ತ ಪ್ರತಿಕ್ರಿಯೆ ಎಂದು ಅನಿಸುತ್ತದೆ.

ನಮ್ಮ ಸಮಾಜವನ್ನು ಒಡೆಯುತ್ತಿರುವುದು ವ್ಯಾಟಿಕನ್ ಅಲ್ಲ; ಇಲ್ಲಿನ ಅಸಮಾನತೆಯ ಆಯುಧಗಳೇ

| ಡಾ.ಸುಮಾ ಎಂಬಾರ್ |

ಭೈರಪ್ಪ ಅವರ ಸೈದ್ದಾಂತಿಕ ನಿಲುವುಗಳ ಪರಿಚಯವಿರುವವರಿಗೆ, ಅವರ ಹೇಳಿಕೆ ಅನಿರೀಕ್ಷಿತವೇನಲ್ಲ. ಆದರೂ, ಪರಂಪರೆ ಮತ್ತು ಸಂವಿಧಾನ ಕುರಿತ ಅವರ ಹೇಳಿಕೆ, ಕೆಲವು ಅರ್ಧಸತ್ಯಗಳನ್ನು ಒಳಗೊಂಡಿರುವುದರಿಂದ, ಅದನ್ನು ನೋಡೋಣ.

ನಮ್ಮ ಲಿಖಿತ ಧರ್ಮಶಾಸ್ತ್ರಗಳು ಒಳಗೊಂಡಿದ್ದ ಜಾತಿ/ಲಿಂಗ ಮತ್ತಿತರ ಅಸಮಾನತೆಗಳನ್ನು ಮನಗಂಡೇ, ಅವುಗಳನ್ನು ತೊಡೆದುಹಾಕುವ ನಿಟ್ಟಿನಲ್ಲಿ, ಸಮಾನತೆ, ಸ್ವಾತಂತ್ರ್ಯ, ನ್ಯಾಯ, ಸೋದರತ್ವಗಳು ಈ ದೇಶವನ್ನು ಮುನ್ನಡೆಸಬೇಕು ಎಂಬ ಕ್ರಾಂತಿಕಾರಕ ಉದ್ದೇಶ ಮತ್ತು ಮುನ್ನೋಟದೊಂದಿಗೆ ರಚಿತವಾದ ಸಂವಿಧಾನ ನಮ್ಮದು. ಏಕಾಕೃತಿಯ ಧರ್ಮದ ಮೇಲೆ ನಮ್ಮ ಸಮಾಜ ನಿಂತಿಲ್ಲ: ಬದಲಾಗಿ, ಬಹುತ್ವ ಮತ್ತು ಬಹುಧರ್ಮಗಳ ಕೊಡುಕೊಳ್ಳುವಿಕೆಯಿಂದ ಇನ್ನಷ್ಟು ಗಟ್ಟಿಯಾಗಿದೆ ಎನ್ಮುವ ಅರಿವಿನೊಂದಿಗೆ ರಚಿತವಾದದ್ದು. ಯಾವ ಪರಂಪರೆ ಅಥವ ಧರ್ಮಶಾಸ್ತ್ರಗಳಲ್ಲಿ ಅಡಗಿರುವ ಅಥವ ನೇರವಾಗಿ ಪ್ರತಿಪಾದಿಸಲ್ಪಡುವ ಅಸಮಾನತೆಯ ಅರಿವಿಲ್ಲದೆಯೆ, ಯಾವ ಶಾಸ್ತ್ರ ಪರಂಪರೆಯ ಜ್ಞಾನವಿಲ್ಲದೆಯೇ, ಇತಿಹಾಸ ಪ್ರಜ್ಞೆ ಇಲ್ಲದೆಯೇ ಡಾ.ಅಂಬೇಡ್ಕರ್ ಮತ್ತಿತರರು ಸಂವಿಧಾನ ಕರಡು ತಯಾರಿಸಿದರು ಎಂದು ಭೈರಪ್ಪನವರ ಅಭಿಪ್ರಾಯವೇ?! ಇದಕ್ಕೆ ನಗಬೇಕೊ ಅಳಬೇಕೊ ತಿಳಿಯುತ್ತಿಲ್ಲ.

ಇನ್ನು ಪತ್ನಿಯ ‘ಅನುಮತಿ’ ಪಡೆಯುವ ವಿಚಾರ:
‘ಹೆಂಡತಿಯು ಗಂಡನ ಆಸ್ತಿ’ ಎಂಬ ಗ್ರಹಿಕೆಯಿದ್ದ ಕಾಲದ ಸಮಾಜಕ್ಕೆ ಇವರ ಹೇಳಿಕೆ ಸರಿಯೆನಿಸುತ್ತದೆ. ಯಾವ ಹೆಣ್ಣಿಗೂ ಅವಳ ದೇಹದ ಮೇಲೆ, ಅದರ ಬೇಕುಬೇಡಗಳ ಮೇಲೆ ನಿರ್ಧಾರ ತೆಗೆದುಕೊಳ್ಳುವ ಹಕ್ಕಿದೆ ಎಂಬುದನ್ನೇ ಒಪ್ಪಲಾರದ ಪುರುಷಪ್ರಧಾನ ಸಮಾಜವೊಂದು ಎತ್ತಿ ಹಿಡಿವ ಧಾರ್ಮಿಕ ಪರಂಪರೆಯು, ಎಲ್ಲರ ಹಕ್ಕುಗಳನ್ನು ಒಳಗೊಳ್ಳುವ ಧರ್ಮ ಅಥವ ದೈವಸನ್ನಿಧಿ ಆಗಲು ಹೇಗೆ ಸಾಧ್ಯ?

ಮೂರನೆಯದಾಗಿ, ಭೈರಪ್ಪನವರು ಹೇಳುವ ವ್ಯಾಟಿಕನ್ನಲ್ಲಿ ಸಿದ್ಧವಾಗುವ ಯೋಜನೆಗಳು. ಇದಂತೂ ತೀರ ಬಾಲಿಶವಾದ ಹೇಳಿಕೆ. ನಮ್ಮ ಸಮಾಜವನ್ನು ಒಡೆಯುತ್ತಿರುವುದು, ವ್ಯಾಟಿಕನ್ನಲ್ಲಿ ಸಿದ್ದವಾಗಬೇಕಿಲ್ಲ; ನಮ್ಮ ಧರ್ಮಶಾಸ್ರ್ತಗಳ ಕುಲುಮೆಯಲ್ಲೇ ತಯಾರಾದ ಅಸಮಾನತೆಯ ಆಯುಧಗಳಿಂದಲೇ, ನಮ್ಮ ಚಾರಿತ್ರಿಕ ತಪ್ಪುಗಳನ್ನೇ ಮತ್ತೆ ಮತ್ತೆ ಮಾಡಿ, ಅದಕ್ಕೆ ಧರ್ಮಸಮ್ಮತವೆಂಬ ಸಾಮಾಜಿಕ ಮನ್ನಣೆ ಪಡೆಯುವ ಪ್ರಯತ್ನದ ಯೋಜನೆಗಳೇ ಸಮಾಜವನ್ನು ಒಡೆಯುತ್ತಿರುವುದು!

ಯಜಮಾನ ಪರಂಪರೆಯನ್ನು ಮುರಿದು ಜನಪರ ಪರಂಪರೆಯನ್ನು ಕಟ್ಟುವ ಕ್ರಾಂತಿಯೇ ನಮ್ಮ ಸಂವಿಧಾನದ ಆಶಯ. ನಮ್ಮ ನೆಲ ಸಮುದಾಯಗಳು ಮೂಲೆಗುಂಪು ಮಾಡಿದ ಯಜಮಾನ ಪರಂಪರೆಯ ಹತಾಶ ಪ್ರತಿನಿಧಿಯೇ ಭೈರಪ್ಪ. ಒಂದರ್ಥದಲ್ಲಿ ಅವರೇ ಪಾಶ್ಚಿಮಾತ್ಯ ವೈಟ್ ಸುಪ್ರಿಮೆಸಿಸ್ಟ್ ಪರಿಕಲ್ಪನೆಗೆ ಹೊಂದಿಕೆಯಾಗುವ ನಮ್ಮ ಸ್ಥಳೀಯ ಮಾದರಿ!

ಮಹಿಳಾ ವಿರೋಧಿ ಮನುವಾದ ಮತ್ತು ಭೈರಪ್ಪ ಎಂಬ ವಿಕೃತಿ

| ರಾಜಲಕ್ಷ್ಮಿ ಅಂಕಲಗಿ |

ಸನಾತನಿಯೊಬ್ಬನ ಮನದಾಳದ ವಿಕೃತಿಗಳು ಬಾಯಿಂದ ಬಡಬಡಿಕೆಗಳಾಗಿ ಬಂದರೆ ಹೇಗಿರುತ್ತದೆ ಎಂದು ಭೈರಪ್ಪ ಎಂಬ ಚೆಡ್ಡಿ ಗ್ಯಾಂಗ್ ಬರಹಗಾರನ ಮಾತಲ್ಲಿ ನೋಡಬಹುದು. ಈ ವೈದಿಕ ಮುದುಕ ನರೇಂದ್ರ ಮೋದಿ ಪರ ತನ್ನ ಓಲ್ಡ್ ಏಜ್ ಕ್ರಷ್ ಅನ್ನು ವ್ಯಕ್ತಪಡಿಸಲು ಶುರುಮಾಡಿದಂದಿನಿಂದ ಮಾನಸಿಕ ಸ್ಥಿಮಿತ ಕಳೆದುಕೊಂಡಂತೆ ವರ್ತಿಸುತ್ತಿದ್ದಾನೆ. ಮೊದಲು ತನ್ನ ಸಮಕಾಲೀನ ಸಾಹಿತಿಗಳು, ಚಿಂತಕರ ವಿರುದ್ಧ ತನ್ನ ಅಸಹನೆ ತೋರಿಸುತ್ತಿದ್ದ ಈತ ಬರಬರುತ್ತ ತನ್ನ ಅಸಹನೆಯನ್ನು ದಲಿತ, ದಮನಿತ ಹಾಗೂ ಮಹಿಳೆಯರ ವಿರುದ್ಧ ಡಣ ಡಂಗುರವಾಗಿ ವ್ಯಕ್ತಪಡಿಸಲು ಪ್ರಾರಂಭಿಸಿದ್ದಾನೆ. ಭೈರಪ್ಪನ ಒಡಲಾಳದ ಬ್ರಾಹ್ಮಣ್ಯತ್ವದ ಬೀಜ ರೆಂಬೆ, ಕೊಂಬೆ ಹಾಗೂ ಬೇರುಗಳಾಗಿ ಆತನ ನವರಂದ್ರಗಳಿಂದಲೂ ಹೊರಗೆ ಬರತೊಡಗಿವೆ.

ಮೊನ್ನೆ ನಡೆದ ಸಮಾರಂಭವೊಂದರಲ್ಲಿ ಭೈರಪ್ಪ ಧರ್ಮಶಾಸ್ತ್ರಗಳೇ ನಮ್ಮ ನಿಜವಾದ ಸಂವಿಧಾನ ಎಂದು ಒತ್ತಿ ಹೇಳುವ ಮೂಲಕ ಭಾರತೀಯ ಸಂವಿಧಾನಕ್ಕೆ ಅವಹೇಳನ ಮಾಡಿದ್ದಾರೆ. ಸಂವಿಧಾನದ ಬಗ್ಗೆ ಭೈರಪ್ಪನವರಲ್ಲಿ ಆಳವಾದ ಮನುವಾದದ ಅಸಹನೆ ಅವರಾಡಿದ ಪ್ರತಿಮಾತಿನಲ್ಲೂ ಪ್ರತಿಧ್ವನಿಸುತ್ತದೆ. ಅವರ ಮಾತುಗಳು ಹಿಂದು ವಿವಾಹ ಕಾಯ್ದೆ ಹಾಗೂ ಅದರ ಕ್ರೋಢಿಕರಣ ಪ್ರಕ್ರಿಯೆಯ ವಿರುದ್ಧವೂ ತೀವ್ರವಾಗಿ ಎದ್ದುಕಾಣುತ್ತದೆ. ಅಷ್ಟಕ್ಕೆ ನಿಲ್ಲದ ಈ ಕುಚೋದ್ಯ ಭಾರತೀಯ ನ್ಯಾಯಾಂಗವನ್ನು ಅಣಕಿಸುತ್ತದೆ. ‘ಪ್ರತಿರಾತ್ರಿ ಹೆಂಡತಿಯ ಸಹಿ ಪಡೆದು ಮುಂದುವರೆಯಬೇಕಾಗಬಹುದು’ ಎಂಬ ಅವರ ಮಾತು ವಿವಾಹ, ವಿಚ್ಛೇದನ ಮತ್ತು ಮದುವೆಗೆ ಸಂಬಂಧಪಟ್ಟ ಭಾರತೀಯ ಕಾನೂನುಗಳ ಬಗ್ಗೆ ಅವರಿಗೆ ಇರುವ ಅಸಡ್ಡೆಯನ್ನು ಎತ್ತಿ ತೋರಿಸುತ್ತವೆ.

ಶತಮಾನಗಳ ಕಾಲ ನಡೆದ ದಲಿತ, ದಮನಿತ ಹಾಗೂ ಮಹಿಳೆಯರ ಸಮಾನತೆಯ ಹೋರಾಟಗಳ ಬಗ್ಗೆ ಪುರೋಹಿತಶಾಹಿಗೆ ಇರುವ ತಿರಸ್ಕಾರಗಳು ಪ್ರಜಾಪ್ರಭುತ್ವಕ್ಕೆ ಪ್ರತಿಕೂಲವಾದ ಪ್ರತಿಯೊಬ್ಬ ನಾಯಕನ ಅವಧಿಯಲ್ಲಿಯೂ ಮುಖ್ಯವಾಹಿನಿಯಲ್ಲಿ ಅತಿ ಸಾಮಾನ್ಯ ಎನ್ನುವಂತೆ ನಡೆಯುತ್ತಿರುತ್ತದೆ. ವಿಪರ್ಯಾಸವೆಂದರೆ ಯಾರ ವಿರುದ್ಧ ಈ ಷಡ್ಯಂತ್ರಗಳು ನಡೆಯುತ್ತಿವೆಯೋ ಅವರು ಬಲಪಂಥೀಯರ ತಾಳಕ್ಕೆ ತಕ್ಕಂತೆ ಕುಣಿದ ಭಸ್ಮಾಸುರರಂತೆ ಬೂದಿಯಾಗುತ್ತಿರುವುದು.

ಭೈರಪ್ಪನ ಮಾತು ಹಾಗೂ ಆಶಯಗಳು ಆರ್‍ಎಸ್‍ಎಸ್‍ನ ಅಜೆಂಡಾಗಳನ್ನು ಅಧಿಕೃತಗೊಳಿಸುವ ಹುನ್ನಾರವಾಗಿವೆ. ಭೈರಪ್ಪ ಹೇಳುವ ಧರ್ಮಶಾಸ್ತ್ರಗಳ ಪ್ರಕಾರ ಬ್ರಾಹ್ಮಣರಲ್ಲದವರ್ಯಾರು ಮನುಷ್ಯರೇ ಅಲ್ಲ. ಸಹಜವಾಗಿಯೇ ಮಾನವತೆಯನ್ನು ಆಧರಿಸಿದ ಸಂವಿಧಾನ ಇವರಿಗೆ ಮಗ್ಗುಲ ಮುಳ್ಳಾಗಿ ಕಾಡುತ್ತದೆ. ಭೈರಪ್ಪನಂತಹ ಪ್ರಭೃತಿಗಳು ತಮ್ಮ ಜ್ಞಾನ ಹಾಗೂ ಭಾಷೆಗಳನ್ನು ಬಳಸಿ ಸಮಾಜದಲ್ಲಿ ಸೌಹಾರ್ದ ಕೆಡಿಸುತ್ತಿರುವುದು ಸಾಮಾನ್ಯವಾಗಿ ಭೈರಪ್ಪನವರ ಬಹುತೇಕ ಕೃತಿಗಳಲ್ಲಿ ಬ್ರಾಹ್ಮಣ್ಯತ್ವ ಹಾಗೂ ಸಂಪ್ರದಾಯಗಳನ್ನು ಪ್ರಶ್ನಿಸುವ ಅದರ ನಾಯಕರೇ ಅದಕ್ಕೆ ತಲೆಬಾಗುತ್ತವೆ. ಭೈರಪ್ಪನಂತಹ ಲೇಖಕರು ಬ್ರಾಹ್ಮಣ್ಯತ್ವದ ಬ್ರ್ಯಾಂಡ್ ಅಂಬಾಸಿಡರ್‍ಗಳಾಗಿ ಜಾತಿ ವಿಷಬೀಜವನ್ನು ಸಮಾಜದಲ್ಲಿ ಬಿತ್ತುತ್ತಿದ್ದಾರೆ. ಸಂವಿಧಾನ ರಚನಾ ಸಮಿತಿ ಸದಸ್ಯರ ಪರಿಚಯವೂ ಇಲ್ಲದ ಸಂವಿಧಾನ ಸಭೆಯಲ್ಲಿ ನಡೆದ ಒಂದು ಚರ್ಚೆಯನ್ನು ಓದದ ಪಾಮರರೆಲ್ಲ ಇವತ್ತು ಭೈರಪ್ಪನ ಅಭಿಪ್ರಾಯಗಳನ್ನು ಸಮಾಜದಲ್ಲಿ ಹರಡುವ ಕೀಟಾಣುಗಳಂತೆ ವರ್ತಿಸುತ್ತಿದ್ದಾರೆ.

ದಲಿತ ದಮನಿತರನ್ನು ಎಂದೂ ತನ್ನ ಸರಿಸಮನಾದ ಜಾಗದಲ್ಲಿ ನೋಡಲು ಇಚ್ಛಿಸದ ಆರ್‍ಎಸ್‍ಎಸ್ ಭೈರಪ್ಪನಂತವರಿಗೆ ಸಂವಿಧಾನದ ಸುಪಾರಿ ನೀಡಿದೆ. ಅವಕಾಶ ಸಿಕ್ಕಾಗಲೆಲ್ಲ ಸಂವಿಧಾನದ ಅವಮಾನ ಮಾಡುವುದು ಅದನ್ನು ತರುವ ಪ್ರಸ್ತಾಪ ಮಾಡುವುದು ಇಂತಹ ಕುಚೋದ್ಯಗಳನ್ನು ಮಾಡುತ್ತಲೇ ಇರುತ್ತವೆ. ಭೈರಪ್ಪನಂತಹವರು ಬಾಯಿಗೆ ಬಂದಂತೆ ಮಾತಾಡಿ ಕಾನೂನಿನ ಅಪಹಾಸ್ಯ ಮತ್ತು ಸಂವಿಧಾನದ ಅಪಮಾನ ಮಾಡುತ್ತಾರೆ. ಆದರೆ ಅದಕ್ಕೆ ತೀವ್ರವಾದ ವಿರೋಧಗಳೇನಾದರು ವ್ಯಕ್ತವಾದರೆ ಇದೇ ಸಂವಿಧಾನ ನೀಡಿದ ವಾಕ್ ಸ್ವಾತಂತ್ರ್ಯದ ಅಡಿಯಲ್ಲಿ ಡೊಗ್ಗಿಕೊಳ್ಳುತ್ತಾರೆ.

ಕೆಳಜಾತಿಗಳಿಗೆ ಸಿಗುವ ಸಂವಿಧಾನದ ಸವಲತ್ತುಗಳ ಬಗ್ಗೆ ಜನರಲ್ಲಿ ತಪ್ಪುಕಲ್ಪನೆ ಹರಡುತ್ತ ಜನರ ನಡುವೆ ಜಾತಿ ವೈಷಮ್ಯ ಬಿತ್ತುತ್ತಾರೆ. ಇನ್ನೂ ದಲಿತರ ನಂತರ ಜಾತಿ ಮತಗಳೆನ್ನದೆ ಎಲ್ಲರ ಕೆಂಗಣ್ಣಿಗೆ ಗುರಿ ಆಗುವವರೆಂದರೆ ಮಹಿಳೆಯರು. ಹೆಂಗಸರು ಎಂದರೆ ಅವರು ಗಂಡಸರ ಅಧಿಪತ್ಯದಲ್ಲಿ ಅವರಿಗೆ ಅಡಿಯಾಳಾಗಿ ಇರಬೇಕಾದ, ಸ್ವಂತ ವ್ಯಕ್ತಿತ್ವವೇ ಇಲ್ಲದ ಜೀವಿಗಳಿದ್ದಂತೆ. ಸಂವಿಧಾನದ ರೀತಿಯಲ್ಲೇ ಹಿಂದೂ ವಿವಾಹ ಕಾಯ್ದೆ ಹಾಗೂ ಹಿಂದೂ ವಾರಸುದಾರ ಕಾಯ್ದೆಗಳು ರೂಪುಗೊಳ್ಳುವ ಸಮಯದಲ್ಲೂ ಸನಾತನಿಗಳು ತೀವ್ರ ವಿರೋಧ ಒಡ್ಡಿದರು. ಆದರೆ ಚಲನಶೀಲ ಸಮಾಜ ಹಾಗೂ ಸಮಾನತೆಯಲ್ಲಿ ನಂಬಿಕೆ ಇರುವ ಚಿಂತಕರಿಂದಾಗಿ ಮಹಿಳೆಯರ ಸ್ಥಿತಿ ನಿಧಾನವಾಗಿಯಾದರೂ ಬದಲಾಗಲು ಶುರುವಾಯಿತು. ಹೆಣ್ಣು ತನ್ನ ಇಚ್ಛೆಯಿಂದ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಬೇಡವಾದರೆ ಸಂಬಂಧದಿಂದ ಹೊರಹೋಗಬಹುದು ಎನ್ನುವ ವಿಚಾರವೇ ಭೈರಪ್ಪನಂತಹ ಗಂಡಸರಲ್ಲಿ ಅಭದ್ರತೆಯ ಭಾವನೆಗಳನ್ನು ಹುಟ್ಟುಹಾಕುತ್ತದೆ. ಸಂಸ್ಕಾರಗಳ ಹೆಸರಿನಲ್ಲಿ ಅವರನ್ನು ಮತ್ತೆ ಕಟ್ಟಿಹಾಕಲು ನೋಡುತ್ತದೆ. ಸಂಸ್ಕಾರಗಳ ಹೆಸರಿನಲ್ಲಿ ಗಂಡನೊಂದಿಗೆ ಎಳೆ ವಯಸ್ಸಿನ ಹೆಣ್ಣು ಮಕ್ಕಳನ್ನು ಶತಮಾನಗಟ್ಟಲೆ ಬೆಂಕಿಗೆ ನೂಕಿದವರು, ವಿಧವೆಯ ಅಂದಗೆಡಿಸಿ ವಿಕೃತಿ ಮೆರೆದವರು, ವಯಸ್ಸಾದ ವಿಧವೆಯರನ್ನು ದನಗಳ ಹಾಗೆ ಧಾರ್ಮಿಕ ಕ್ಷೇತ್ರಗಳಲ್ಲಿ ಬಿಟ್ಟುಬಂದವರು ಮಹಿಳೆಯರ ನೋವು ಅಥವಾ ಅಗತ್ಯಗಳನ್ನು ಅರ್ಥಮಾಡಿಕೊಳ್ಳುತ್ತಾರೆ.

ಮದುವೆ ಆಗಿದೆ ಅಂದ ಮಾತ್ರಕ್ಕೆ ಹೆಣ್ಣಿನ ಮೇಲೆ ಅಧಿಕಾರ ಚಲಾಯಿಸುತ್ತ ಪಶುಗಳಂತೆ ದೌರ್ಜನ್ಯ ಎಸಗುವುದು ಈ ಮನಸುಗಳಿಗೆ ಗಂಡು ಹೆಣ್ಣಿನ ದೈಹಿಕ ಸಂಬಂಧ ಒಂದು ಸಂಭ್ರಮವಾಗಿರಬೇಕು. ಇಲ್ಲದಿದ್ದರೆ ಅದು ಪಶುತ್ವವಾಗುತ್ತದೆ ಎನ್ನುವ ಪರಿಜ್ಞಾನವೂ ಇಲ್ಲ. ಇಂಥ ಒಂದು ಕಾನೂನನ್ನ ತರಲು ಕೌಟುಂಬಿಕ ದೌರ್ಜನ್ಯಗಳನ್ನು ತಡೆಯಲು ಮಹಿಳೆಯರು ನಡೆಸಿದ ಹಾಗೂ ನಡೆಸುತ್ತಿರುವ ಹೋರಾಟಗಳನ್ನು ಅಣಕಿಸುವ ಮೂಲಕ ಭೈರಪ್ಪ ತಮ್ಮ ವೈದಾಂತ ವೈಕಲ್ಯವನ್ನು ತೋರಿಸಿದ್ದಾರೆ.

ಶಬರಿಮಲೆಗೆ ಮಹಿಳೆಯರ ಪ್ರವೇಶ ನಿಷೇಧವನ್ನು ಸಮರ್ಥಿಸುವ ಇವರು ಸೃಷ್ಟಿಕ್ರಿಯೆಯನ್ನು ಅವಮಾನಿಸುತ್ತ, ಮುಟ್ಟು ಎಂಬ ದೈಹಿಕ ಬದಲಾವಣಾ ಕ್ರಿಯೆಯನ್ನು ಮಡಿ ಮೈಲಿಗೆ ಎಂಬ ಧಾರ್ಮಿಕ ಕ್ರಿಯೆಯಾಗಿ ಬದಲಾಯಿಸಿ ಅದರ ಮೇಲೆ ರಾಜಕೀಯವನ್ನು ಮಾಡುತ್ತಾರೆ. ಭೈರಪ್ಪನಂತಹವರಿಗೆ ಇಷ್ಟೊಂದು ವಿಕೃತ ಮಾತುಗಳನ್ನಾಡಿಯೂ ನಾಚಿಕೆಬಿಟ್ಟು ಸಮಾಜದಲ್ಲಿ ಮುಖ ಎತ್ತಿ ತಿರುಗಾಡಲು ಸಾಧ್ಯವಾಗುವುದಕ್ಕೆ ಕಾರಣ ನಮ್ಮ ಬೇರು ಕಳೆದುಕೊಳ್ಳುತ್ತಿರುವ ಚಳವಳಿಗಳು. ಪ್ರಜ್ಞಾವಂತರೆನಿಸಿಕೊಂಡವರು ಪ್ರತಿಕ್ರಿಯಿಸದಿದ್ದರೆ ಬ್ರಾಹ್ಮಣ್ಯತ್ವದ ಗುಲಾಮಗಿರಿ ತಪ್ಪಿದ್ದಲ್ಲ.

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೇವಾಲಯ ಪ್ರವೇಶಿಸಿದ ದಲಿತ ಯುವಕನಿಗೆ ಡಿಎಂಕೆ ಮುಖಂಡನಿಂದ ಬೆದರಿಕೆ; ವಿಡಿಯೊ ವೈರಲ್‌

0
ಹಿಂದೂ ಮತ್ತು ಧಾರ್ಮಿಕ ದತ್ತಿ ಇಲಾಖೆ (ಎಚ್‌ಆರ್ ಮತ್ತು ಸಿಇ) ನಿರ್ವಹಿಸುತ್ತಿರುವ ದೇವಸ್ಥಾನಕ್ಕೆ ಪ್ರವೇಶಿಸಿದ್ದಕ್ಕಾಗಿ ದಲಿತ ಯುವಕನನ್ನು ಡಿಎಂಕೆ ಒಕ್ಕೂಟದ ಕಾರ್ಯದರ್ಶಿಯೊಬ್ಬರು ನಿಂದಿಸಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಪೊಲೀಸರ ಪ್ರಕಾರ, ತಮಿಳುನಾಡಿನ ತಿರುಮಲೈಗಿರಿ (ಸೇಲಂ ಜಿಲ್ಲೆ)ಯಲ್ಲಿರುವ...