ರಷ್ಯಾ-ಉಕ್ರೇನ್ ನಡುವಣ ಯುದ್ದ ಕೊನೆಗಾಣಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ದ್ವಿತೀಯ ಸುಂಕ ಸೇರಿದಂತೆ ಹಲವಾರು ಕ್ರಮಗಳನ್ನು ತೆಗೆದುಕೊಂಡರು ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಹೇಳಿದ್ದಾರೆ.
ಶ್ವೇತಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಕ್ಯಾರೋಲೀನ್, “ಈ ಯುದ್ಧವನ್ನು ಕೊನೆಗಾಣಿಸಲು ಸಾರ್ವಜನಿಕರಿಂದ ಭಾರೀ ಒತ್ತಡವಿತ್ತು. ನೀವು ನೋಡಿರುವಂತೆಯೇ ಭಾರತದ ಮೇಲಿನ ನಿರ್ಬಂಧ ಹಾಗೂ ಇತರೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಈ ಯುದ್ಧವನ್ನು ಕೊನೆಗಾಣಿಸಲು ಬಯಸುತ್ತೇವೆ ಎಂದು ಸ್ವತಃ ಟ್ರಂಪ್ ಅವರೇ ನುಡಿದಿದ್ದಾರೆ” ಎಂದು ಹೇಳಿದ್ದಾರೆ.
“ಯಾವುದೇ ಸಭೆ ನಡೆಯುವುದಕ್ಕೂ ಮುನ್ನ ಇನ್ನೊಂದು ತಿಂಗಳು ಕಾಯಬೇಕು ಎಂಬ ಇತರರ ಸಲಹೆಗಳನ್ನು ಅಧ್ಯಕ್ಷರು ತಿರಸ್ಕರಿಸಿದ್ದಾರೆ. ಆದಷ್ಟು ಬೇಗ ಈ ಯುದ್ಧವನ್ನು ಕೊನೆಗಾಣಿಸಲು ಬಯಸಿದ್ದಾರೆ” ಎಂದು ಕ್ಯಾರೋಲೀನ್ ತಿಳಿಸಿದ್ದಾರೆ.
ಭಾರತ-ಪಾಕ್ ಯುದ್ಧ ನಿಲ್ಲಿಸಿದ್ದು ಟ್ರಂಪ್
ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧ ಕೊನೆಗೊಳಿಸಿದ್ದು ನಾನು ಎಂಬ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯನ್ನು ಕ್ಯಾರೋಲಿನ್ ಪುನರುಚ್ಚರಿಸಿದ್ದಾರೆ.
“ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷದ ಅಂತ್ಯಗೊಳಿಸಿರುವುದನ್ನು ನಾವು ನೋಡಿದ್ದೇವೆ. ಇಲ್ಲದಿದ್ದರೆ ಪರಮಾಣು ಯುದ್ಧಕ್ಕೆ ಕಾರಣವಾಗುತ್ತಿತ್ತು” ಎಂದು ಹೇಳಿದ್ದಾರೆ.


