ಸುಪ್ರೀಂ ಕೋರ್ಟ್ ವಿವಾದಾತ್ಮಕ ಚುನಾವಣಾ ಬಾಂಡ್‌ಗಳನ್ನು ರದ್ದುಗೊಳಿಸಿದ ನಂತರ 2024-25ರಲ್ಲಿ ಚುನಾವಣಾ ಟ್ರಸ್ಟ್‌ಗಳ ಮೂಲಕ ರಾಜಕೀಯ ಪಕ್ಷಗಳಿಗೆ ಕಾರ್ಪೊರೇಟ್ ದೇಣಿಗೆಗಳು ಮೂರು ಪಟ್ಟು ಹೆಚ್ಚಾಗಿದ್ದು, 3,811 ಕೋಟಿ ರೂ.ಗಳಿಗೆ ತಲುಪಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಭಾರತದ ಚುನಾವಣಾ ಆಯೋಗಕ್ಕೆ (ಇಸಿಐ) ಸಲ್ಲಿಸಿದ ದೇಣಿಗೆ ವರದಿಗಳ ಪ್ರಕಾರ, ಒಂಬತ್ತು ಚುನಾವಣಾ ಟ್ರಸ್ಟ್‌ಗಳು ರಾಜಕೀಯ ಪಕ್ಷಗಳಿಗೆ ಒಟ್ಟು 3,811.37 ಕೋಟಿ ರೂ.ಗಳನ್ನು ದೇಣಿಗೆ ನೀಡಿವೆ. ಅದರಲ್ಲಿ, ಕೇಂದ್ರ ಸರ್ಕಾರವನ್ನು ಮುನ್ನಡೆಸುವ ಭಾರತೀಯ ಜನತಾ ಪಕ್ಷ (ಬಿಜೆಪಿ) 3,112.50 ಕೋಟಿ ರೂ.ಗಳನ್ನು ಪಡೆದುಕೊಂಡಿದೆ. ಇದು ಒಟ್ಟು ನಿಧಿಯ ಸುಮಾರು ಶೇಕಡ 82 ಆಗಿದೆ.
ಕಾಂಗ್ರೆಸ್ ಪಕ್ಷವು ಸರಿಸುಮಾರು 298.77 ಕೋಟಿ ರೂ.ಗಳನ್ನು ಪಡೆದಿದ್ದು, ಇದು ಒಟ್ಟು ದೇಣಿಗೆಯ ಶೇಕಡ 8ರಷ್ಟಿದೆ. ಇತರ ಪಕ್ಷಗಳು ಒಟ್ಟಾರೆಯಾಗಿ ಸುಮಾರು 400 ಕೋಟಿ ರೂ.ಗಳನ್ನು ಪಡೆದಿವೆ.
ಸುಪ್ರೀಂ ಕೋರ್ಟ್ ಅನಾಮಧೇಯ ಚುನಾವಣಾ ಬಾಂಡ್ ಯೋಜನೆಯನ್ನು ಅಸಾಂವಿಧಾನಿಕ ಎಂದು ಘೋಷಿಸಿದ ನಂತರ, ಟ್ರಸ್ಟ್ ಆಧಾರಿತ ನಿಧಿಯಲ್ಲಿನ ಈ ಹೆಚ್ಚಳವು ಗಮನಾರ್ಹ ಬದಲಾವಣೆಯನ್ನು ಸೂಚಿಸುತ್ತದೆ. ಹಿಂದಿನ ಹಣಕಾಸು ವರ್ಷದಲ್ಲಿ (2023-24), ಟ್ರಸ್ಟ್‌ಗಳ ಒಟ್ಟು ಕೊಡುಗೆಗಳು 1,218 ಕೋಟಿ ರೂ.ಗಳಷ್ಟಿತ್ತು.
ಪ್ರಮುಖ ದಾನಿಗಳು ಯಾರು?
ಪ್ರುಡೆಂಟ್ ಎಲೆಕ್ಟೋರಲ್ ಟ್ರಸ್ಟ್ ಅತಿ ದೊಡ್ಡ ದಾನಿಯಾಗಿ ಹೊರಹೊಮ್ಮಿದ್ದು, ಒಟ್ಟು 2,668.46 ಕೋಟಿ ರೂ.ಗಳನ್ನು ರಾಜಕೀಯ ಪಕ್ಷಗಳಿಗೆ ವಿತರಿಸಿದೆ. ಅದರಲ್ಲಿ 2,180.71 ಕೋಟಿ ರೂ.ಗಳು ಬಿಜೆಪಿಗೆ ಹೋಗಿವೆ.
ಭಾರ್ತಿ ಏರ್‌ಟೆಲ್‌ನ ಮಾತೃ ಕಂಪನಿಯಾದ ಭಾರ್ತಿ ಎಂಟರ್‌ಪ್ರೈಸಸ್ ಬೆಂಬಲಿತ ಈ ಟ್ರಸ್ಟ್, ಜಿಂದಾಲ್ ಸ್ಟೀಲ್ ಮತ್ತು ಪವರ್, ಮೇಘಾ ಎಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್, ಭಾರ್ತಿ ಏರ್‌ಟೆಲ್, ಅರಬಿಂದೋ ಫಾರ್ಮಾ ಮತ್ತು ಟೊರೆಂಟ್ ಫಾರ್ಮಾಸ್ಯುಟಿಕಲ್ಸ್ ಸೇರಿದಂತೆ ಪ್ರಮುಖ ಕಾರ್ಪೊರೇಟ್‌ಗಳಿಂದ ಹಣವನ್ನು ಪಡೆದುಕೊಂಡಿದೆ.
ಟಾಟಾ ಸನ್ಸ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್), ಮತ್ತು ಟಾಟಾ ಸ್ಟೀಲ್ ಸೇರಿದಂತೆ ಟಾಟಾ ಗ್ರೂಪ್ ಕಂಪನಿಗಳಿಂದ ನಿಧಿಯನ್ನು ಸಂಗ್ರಹಿಸಿದ ಪ್ರೋಗ್ರೆಸ್ಸಿವ್ ಎಲೆಕ್ಟೋರಲ್ ಟ್ರಸ್ಟ್, 914.97 ಕೋಟಿ ರೂ.ಗಳನ್ನು ದೇಣಿಗೆ ನೀಡುವ ಮೂಲಕ ಮತ್ತೊಂದು ಪ್ರಮುಖ ದಾನಿಯಾಗಿದೆ ಗುರುತಿಸಿಕೊಂಡಿದೆ. ಈ ಮೊತ್ತದ ಸರಿಸುಮಾರು 81 ಶೇಕಡ ಬಿಜೆಪಿಗೆ ಹೋಗಿದೆ.
ಇತರ ಗಮನಾರ್ಹ ಕೊಡುಗೆಗಳು
ಮಹೀಂದ್ರಾ ಗ್ರೂಪ್ (ಮಹೀಂದ್ರಾ & ಮಹೀಂದ್ರಾ, ಟೆಕ್ ಮಹೀಂದ್ರಾ) ನಿಂದ ನಿಧಿಯನ್ನು ಪಡೆದ ನ್ಯೂ ಡೆಮಾಕ್ರಟಿಕ್ ಎಲೆಕ್ಟೋರಲ್ ಟ್ರಸ್ಟ್, ಒಟ್ಟು 160 ಕೋಟಿ ರೂಪಾಯಿಗಳನ್ನು ರಾಜಕೀಯ ಪಕ್ಷಗಳಿಗೆ ನೀಡಿದೆ. ಇದರಲ್ಲಿ 150 ಕೋಟಿ ರೂಪಾಯಿ ಬಿಜೆಪಿಗೆ ಹೋಗಿದೆ.
ಸಿಜಿ ಪವರ್ ಮತ್ತು ಇಂಡಸ್ಟ್ರಿಯಲ್ ಸೊಲ್ಯೂಷನ್ಸ್ ಲಿಮಿಟೆಡ್ ಅನ್ನು ಅತಿದೊಡ್ಡ ಕೊಡುಗೆದಾರನನ್ನಾಗಿ ಹೊಂದಿರುವ ಟ್ರಯಂಫ್ ಎಲೆಕ್ಟೋರಲ್ ಟ್ರಸ್ಟ್, ಒಟ್ಟು 25 ಕೋಟಿ ರೂ.ಗಳನ್ನು ನೀಡಿದ್ದು, ಇದರಲ್ಲಿ 21 ಕೋಟಿ ರೂ. ಬಿಜೆಪಿಗೆ ದೊರೆತಿದೆ.
ಶಿವಸೇನೆ (ಯುಬಿಟಿ) ಗೆ ದೇಣಿಗೆ ನೀಡಿದ ಏಕೈಕ ಸಂಸ್ಥೆ ಜನಪ್ರಗತಿ ಎಲೆಕ್ಟೋರಲ್ ಟ್ರಸ್ಟ್, ಕೆಇಸಿ ಇಂಟರ್ನ್ಯಾಷನಲ್ ಲಿಮಿಟೆಡ್‌ನಿಂದ ಹೆಚ್ಚು ನಿಧಿ ಪಡೆದ ಈ ಸಂಸ್ಥೆ, 1 ಕೋಟಿ ರೂಪಾಯಿಯನ್ನು ಕೊಡುಗೆಯಾಗಿ ನೀಡಿದೆ.
ಜನಕಲ್ಯಾಣ್ ಎಲೆಕ್ಟೋರಲ್ ಟ್ರಸ್ಟ್ ತನ್ನ ಒಟ್ಟು ದೇಣಿಗೆಯಾದ 19 ಲಕ್ಷ ರೂ.ಗಳನ್ನು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಸಮಾನವಾಗಿ ಹಂಚಿದೆ.


