ನಾನು ಮೊದಲು ನಕ್ಸಲನಾಗಿದ್ದೆ. ನಂತರ ನಾನು ಆರ್‌ಎಸ್‍ಎಸ್ ಸೇರಿಕೊಂಡಿದ್ದು, ನೀವು ಮತ್ತೆ ನನ್ನ ನಕ್ಸಲನನ್ನಾಗಿ ಮಾಡಬೇಡಿ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಇಂದು ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಕೇರಳದ ಹೆದ್ದಾರಿ ಯೋಜನೆಯು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಪದೇ ಪದೇ ತಡವಾಗಿರುವುದರಿಂದ ಇದರ ಕುರಿತು ಚರ್ಚಿಸಲು ಇಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಿತಿನ್ ಗಡ್ಕರಿಯನ್ನು ಭೇಟಿಯಾಗಿದ್ದರು. ಆಗ ಗಡ್ಕರಿಯವರು, ಇದೇ ವಿಚಾರಕ್ಕೆ ಪಿಣರಾಯಿ ವಿಜಯನ್ ಅವರು ಐದು ಬಾರಿ ನನ್ನ ಬಳಿ ಬಂದಿದ್ದಾರೆ. ನೀವು ಮಾಡಿದ ಕೆಲಸಕ್ಕೆ ನನಗೆ ನಾಚಿಕೆಯಾಗುತ್ತಿದೆ. ಈ ವಿಚಾರದಲ್ಲಿ ನಿಮಗೆ ತೊಂದರೆ ಕೊಡುವವರು ಯಾರು ಎಂದು ನನಗೆ ಗೊತ್ತಿದೆ. ಈ ಇಲಾಖೆಗೆ ನಾನು ಮುಖ್ಯಸ್ಥ. ಇಂದು ಸಂಜೆಯೊಳಗೆ ಆ ಕೆಲಸ ಆಗಬೇಕು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ಕೊಟ್ಟಿದ್ದಾರೆ.
ನಿತಿನ್ ಗಡ್ಕರಿಯವರ ಕೋಪವನ್ನು ಅರಿತ ತಕ್ಷಣ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು ಕೇರಳದ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೆ ಭೂಸ್ವಾಧೀನಕ್ಕೆ ಇದ್ದ ಅಡೆತಡೆಗಳನ್ನು ತೆಗೆದುಹಾಕಿದ್ದಾರೆ.
ನಕ್ಸಲರು ಯಾರು? ಗಡ್ಕರಿ ಹೀಗೆ ಹೇಳಿದ್ದೇಕೆ?
ಸಮಾಜದಲ್ಲಿ ಮೂಲಭೂತ ಬದಲಾವಣೆ ಬಯಸುವವರು ನಕ್ಸಲರಾಗಿದ್ದಾರೆ. ಅದಕ್ಕಾಗಿ ಹಿಂಸಾಮಾರ್ಗವಾದರು ಸರಿಯೇ ಸೈನ್ಯಕಟ್ಟಿ ಕ್ರಾಂತಿ ಮಾಡಬೇಕೆಂಬುದು ಅವರ ಗುರಿ. ಅವರು ಸದಾ ವ್ಯವಸ್ಥೆಯ ವಿರುದ್ಧವಿರುತ್ತಾರೆ. ಏಕೆಂದರೆ ಅವರು ಈ ವ್ಯವಸ್ಥೇಯನ್ನು ಅಸಮಾನತೆಯಿಂದ ಕೂಡಿದೆ ಎಂದು ಭಾವಿಸುತ್ತಾರೆ. ಹಾಗಾಗಿ ಅವರು ಸದಾ ಸಮಾನತೆಯ ಪರವಾಗಿ ಮತ್ತು ಶೋಷಣೆಯ ವಿರುದ್ಧದ ಚಟುವಟಿಕೆಗಳಲ್ಲಿ ತೊಡಗಿರುತ್ತಾರೆ. ಅಷ್ಟೇ ಮುಖ್ಯವಾಗಿ ಅವರು ಸಂಘಪರಿವಾರ ಮತ್ತು ಎಲ್ಲಾ ರಾಜಕೀಯ ಪಕ್ಷಗಳನ್ನು ತೀವ್ರವಾಗಿ ವಿರೋಧಿಸುತ್ತಾರೆ. ನಕ್ಸಲರ ಪ್ರಕಾರ ಸಂಘಪರಿವಾರವೂ ಸಮಾನತೆಯ ವಿರೋಧಿ ಮತ್ತು ವರ್ಣ ವ್ಯವಸ್ಥೆಯನ್ನು ಜಾರಿಗೆ ತರಲು ಶ್ರಮಿಸುತ್ತದೆ ಎಂಬುದಾಗಿದೆ.
ಸದ್ಯಕ್ಕೆ ಅಭಿವೃದ್ದಿ ಕಾರ್ಯಗಳಿಗೆ ಅಡ್ಡಿಯಾಗಿರುವ ಅಧಿಕಾರಿಗಳಿಗೆ ಬಿಸಿಮುಟ್ಟಿಸಲು ನಿತಿನ್ ಗಡ್ಕರಿ ನಾನು ನಕ್ಸಲನಾಗಿದ್ದೆ ಎಂದು ಹೇಳಿಕೆ ನೀಡಿದ್ದಾರೆ. ಹಾಗಾಗಿ ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡದಿದ್ದರೆ ಮತ್ತೆ ನಕ್ಸಲನಾಗಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ. ಇವರ ಈ ಹೇಳಿಕೆಯು ಒಂದು ರೀತಿಯಲ್ಲಿ ನಕ್ಸಲರ ಪರ ಇರುವಂತೆಯೂ ಕಾಣುತ್ತದೆ.
ಆದರೆ ನಿತಿನ್ ಗಡ್ಕರಿ ಪ್ರತಿನಿಧಿಸುವ ಬಿಜೆಪಿ ಪಕ್ಷ ಮತ್ತು ಆರ್.ಎಸ್.ಎಸ್ ಸಂಘಟನೆಯು ನಕ್ಸಲರನ್ನು ನಖಾಶಿಖಾಂತ ವಿರೋಧಿಸುತ್ತಾರೆ. ಅಷ್ಟೇ ಏಕೆ ಜನಪರ ಹೋರಾಟಗಾರರನ್ನು ಸಹ ಅವರು ಅರ್ಬನ್ ನಕ್ಸಲ್ ಎಂದು ಕರೆಯುತ್ತಾರೆ. ಅಂತಹ ಪಕ್ಷದ ನಿತಿನ್ ಗಡ್ಕರಿಯವರು ನಾನು ನಕ್ಸಲನಾಗಬೇಕಾಗುತ್ತದೆ ಎಂದಿರುವುದು ಆಶ್ಚರ್‍ಯಕರವಾಗಿದೆ.


