Homeಮುಖಪುಟಬಿಜೆಪಿ ಆರ್‌.ಎಸ್‌.ಎಸ್‌ ಮುಖಂಡರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಶಾಸಕ ಯತ್ನಾಳ್

ಬಿಜೆಪಿ ಆರ್‌.ಎಸ್‌.ಎಸ್‌ ಮುಖಂಡರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಶಾಸಕ ಯತ್ನಾಳ್

- Advertisement -
- Advertisement -

ಪ್ರವಾಹ ಪರಿಹಾರ ನೀಡದ ಕೇಂದ್ರ ಸರ್ಕಾರದ ವಿರುದ್ಧ ಬಿಜೆಪಿಯೊಳಗೆ ಹುಟ್ಟಿಕೊಂಡ ಅಸಮಾಧಾನದ ಹೊಗೆ ಬೆಂಕಿಯಾಗುವ ಲಕ್ಷಣಗಳು ದಟ್ಟವಾಗುತ್ತಿವೆ. ದಿನಕ್ಕೊಬ್ಬರಂತೆ ಬಿಜೆಪಿಯ ಒಳಗಿನಿಂದಲೇ ಪಕ್ಷದ ಮುಖಂಡರ ವಿರುದ್ಧ ಅಪಸ್ವರಗಳು ಕೇಳಿಬರುತ್ತಿದ್ದು ಇದು ಮುಖಂಡರಿಗೆ ನುಂಗಲಾರದ ಬಿಸಿತುಪ್ಪವಾಗಿ ಪರಿಣಮಿಸಿದೆ.

ಮೊನ್ನೆಯಷ್ಟೇ ಮೋದಿ ವಿರುದ್ಧ ಗುಡುಗಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇಂದು ಒಂದೇ ದಿನಕ್ಕೆ ನಾಲ್ಕೈದು ಪ್ರಭಾವಿ ವ್ಯಕ್ತಿಗಳ ಮೇಲೆ ದಾಳಿ ನಡೆಸಿದ್ದಾರೆ. ಬೆಳಿಗ್ಗೆ ಸದಾನಂದಗೌಡ, ಜಗದೀಶ್ ಶೆಟ್ಟರ್‌ ಮತ್ತು ಪ್ರಹ್ಲಾದ್ ಜೋಶಿ ವಿರುದ್ಧ ವಾಗ್ದಾಳಿ ನಡೆಸಿದ್ದ ಅವರು ಈಗ ಆರ್‌.ಎಸ್‌.ಎಸ್‌ ಮುಖಂಡ ಬಿ.ಎಲ್ ಸಂತೋಷ್‌ ವಿರುದ್ಧ ಮುರಿದುಕೊಂಡು ಬಿದ್ದಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿರುವ ಅವರು ಬಿ.ಎಸ್ ಸಂತೋಷ್‌ರವರನ್ನು ಅವರ ಜಾತಿಯ ಕಾರಣಕ್ಕೆ ಮಾತ್ರ ನಮ್ಮ ಮಾಧ್ಯಮಗಳು ಎತ್ತಿ ಆಡಿಸುತ್ತಿವೆ. ಅವರಿಗೆ ಇಂದ್ರ ಚಂದ್ರ ಎಂದೆಲ್ಲಾ ಬಿರುದು ಬಾವಲಿಗಳನ್ನು ನೀಡುತ್ತಿದ್ದಾರೆ. ಆದರೆ ಸಂತೋಷ್‌ಗೆ ಚುನಾವಣೆ ಗೆಲ್ಲಿಸುವ ಛಾತಿ ಇಲ್ಲ ಎಂದು ಟೀಕಿಸಿದ್ದಾರೆ.

ಕೇರಳದ ಜವಾಬ್ದಾರಿ ಹೊತ್ತಿಕೊಂಡಿದ್ದ ಅವರು ಶಬರಿಮಲೆ ವಿವಾದ ಇಟ್ಟುಕೊಂಡು ೫ ಸೀಟುಗಳನ್ನು ಗೆಲ್ಲಿಸುತ್ತೇನೆ ಎಂದಿದ್ದರು. ಒಂದನ್ನು ಗೆಲ್ಲಸಲಾಗಲಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ದಿವಂಗತ ಅನಂತ್‌ ಕುಮಾರ್‌ ಮತ್ತು ಸಿಎಂ ಯಡಿಯುರಪ್ಪನವರ ಗುಣಗಾನ ಮಾಡಿರುವ ಬಸನಗೌಡ ಯತ್ನಾಳ್‌ ರಾಜ್ಯದಿಂದ ಆಯ್ಕೆಯಾಗಿರುವ ಕೇಂದ್ರ ಸಚಿವರ ವಿರುದ್ಧವೂ ತಿರುಗಿಬಿದ್ದಿದ್ದಾರೆ. ಒಬ್ಬರು ಬೆಂಗಳೂರಿನಲ್ಲಿ ಕುಳಿತು, ಇನ್ನೊಬ್ಬರು ಹುಬ್ಬಳ್ಳಿಯಲ್ಲಿ ಕುಳಿತು ಆಟವಾಡುತ್ತಿದ್ದೀರಾ? ಧೈರ್ಯವಿದ್ದರೆ ಮೋದಿ ಬಳಿ ಮಾತನಾಡಿ ೧೦ ಸಾವಿರ ಕೋಟಿ ಪ್ರವಾಹ ಪರಿಹಾರ ತನ್ನಿ ಎಂದು ಸವಾಲು ಹಾಕಿದ್ದಾರೆ.

ದಿವಂಗತ ಅನಂತ್‌ ಕುಮಾರ್‌ರವರು ಬದುಕಿದ್ದರೆ ರಾಜ್ಯಕ್ಕೆ ಇಂತಹ ಕೆಟ್ಟ ಪರಿಸ್ಥಿತಿ ಬರುತ್ತಿರಲಿಲ್ಲ ಎಂದಿರುವ ಅವರು ಅನಂತ್‌ ಕುಮಾರ್‌‌ ಮತ್ತು ಯಡಿಯೂರಪ್ಪನವರು ಸೈಕಲ್‌ ತುಳಿದು ಕಟ್ಟಿದ ಪಕ್ಷದಲ್ಲಿ ನೀವೆಲ್ಲಾ ಅಧಿಕಾರ ಅನುಭವಿಸುತ್ತಿದ್ದೀರಿ ಎಂಬುದನ್ನು ಮರೆಯಬೇಡಿ ಎಂದು ತಿಳಿಸಿದ್ದಾರೆ.

ನಾನು ಅಟಲ್ ಬಿಹಾರಿ ವಾಜಪೇಯಿರವರು ಪ್ರಧಾನಿಯಾಗಿದ್ದಾಗ ಸಚಿವನಾಗಿದ್ದೆ. ನಿಮ್ಮ ಹಾಗೆ ಕೈಕಟ್ಟಿ ಕುಳಿತುಕೊಳ್ಳುವ ಬದಲು ಪ್ರಧಾನಿಯೊಂದಿಗೆ ಮಾತನಾಡಿ ಸಾಕಷ್ಟು ಅನುದಾನ ತಂದಿದ್ದೆ ಎಂದು ಅವರು ಹೇಳಿದ್ದಾರೆ. ಪ್ರವಾಹ ಪರಿಹಾರಕ್ಕೆ ಕೇಂದ್ರದ ನೆರವು ಬೇಡವೆಂದಿದ್ದ ಸಂಸದ ತೇಜಸ್ವಿ ಸೂರ್ಯನ ವಿರುದ್ದವೂ ಹರಿಹಾಯ್ದಿದ್ದರು.

ನಿನ್ನೆ ಬಿಜೆಪಿ ಬೆಂಬಲಿಗ ಚಕ್ರವರ್ತಿ ಸೂಲಿಬೆಲೆ ಕೇಂದ್ರ ಸಚಿವ ಡಿ.ವಿ ಸದಾನಂದಗೌಡರ ವಿರುದ್ಧ ತೀವ್ರ ಟೀಕೆಗಳ ಸುರಿಮಳೆಗೈದಿದ್ದರು. ಇದಕ್ಕೆ ಸದಾನಂದಗೌಡರು ಸಹ ತಿರುಗೇಟು ನೀಡಿದ್ದರು. ಇವರಿಬ್ಬರ ನಡುವೆ ಟ್ವಿಟ್ಟರ್‌ನಲ್ಲಿ ವಾದ ವಿವಾದ ನಡೆದು ಕೊನೆಗೆ ಸದಾನಂದಾಗೌಡರು ಸೂಲಿಬೆಲೆಯನ್ನು ಬ್ಲಾಕ್‌ ಮಾಡುವ ಮೂಲಕ ಅಂತ್ಯ ಹಾಡಿದ್ದರು.

ಮೂರು ದಿನದ ಹಿಂದೆ ಚಕ್ರವರ್ತಿ ಸೂಲಿಬೆಲೆ ಪ್ರವಾಹ ಪರಿಹಾರ ತರದ ೨೫ ಸಂಸದರು ಬದುಕಿದ್ದಾರೆಯೇ? ಮೋದಿಗೆ ಉತ್ತರ ಕರ್ನಾಟಕದ ಕಷ್ಟ ಕಾಣುತ್ತಿಲ್ಲವೇ ಎಂದು ಟೀಕಿಸಿದ್ದರು. ಸಂಸದ ಪ್ರತಾಪ ಸಿಂಹ ಅಜ್ಞಾನಿ ಎಂದಿದ್ದರು. ಸದಾನಂದಗೌಡರದು ದಾರ್ಷ್ಟ್ಯ, ದುರಹಂಕಾರ ಎಂದು ಹೇಳಿದ್ದರು. ಇದಕ್ಕೆ ಪ್ರತಿಯಾಗಿ ಸದಾನಂದಗೌಡರು ಚಕ್ರವರ್ತಿ ಸೂಲಿಬೆಲೆ ದೇಶದ್ರೋಹಿ ಎಂದಿದ್ದರು.

ಬಿಜೆಪಿಯಲ್ಲಿ ನಡೆಯುತ್ತಿರುವ ಈ ಕಚ್ಚಾಟವೂ ಸೋಷಿಯಲ್ ಮೀಡಿಯಾದಲ್ಲಿ ಎಲ್ಲರ ಬಾಯಿಗೆ ಆಹಾರ ಸಿಕ್ಕಂತಾಗಿದೆ. ಬಹುತೇಕರ ಈ ಬಿಜೆಪಿಯ ಜಗಳವನ್ನು ಎಲ್ಲಾ ಕಡೆ ಹಂಚಿಕೊಳ್ಳುತ್ತಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ಯಾಲೆಸ್ತೀನ್‌ ಪರ ಪ್ರತಿಭಟನಾಕಾರರ ಮೇಲೆ ಅಮೆರಿಕ ಪೊಲೀಸರಿಂದ ದೌರ್ಜನ್ಯ

0
ಗಾಝಾದಲ್ಲಿ ಇಸ್ರೇಲ್‌ ಹತ್ಯಾಕಾಂಡವನ್ನು ಮುಂದುವರಿಸಿದ್ದು, ಇದನ್ನು ಖಂಡಿಸಿ ಅಮೆರಿಕದಲ್ಲಿ ಹಲವು ದಿನಗಳಿಂದ ಪ್ರತಿಭಟನೆ ನಡೆಯುತ್ತಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿ ಪ್ಯಾಲೆಸ್ತೀನ್‌ ಪರ ಪ್ರತಿಭಟನಾಕಾರರನ್ನು ಥಳಿಸಿ ಪೊಲೀಸರು ದೌರ್ಜನ್ಯ ನಡೆಸಿರುವ ಬಗ್ಗೆ ಅಲ್‌ಜಝೀರಾ ವರದಿ ಮಾಡಿದೆ. ಗಾಝಾದಲ್ಲಿ...