ರೈತರ ಭಾರಿ ಪ್ರತಿಭಟನೆಗೆ ಮಂಡಿಯೂರಿ ಒಕ್ಕೂಟ ಸರ್ಕರ ಇತ್ತೀಚೆಗೆ ಮೂರು ಕೃಷಿ ಕಾನೂನುಗಳನ್ನು ರದ್ದು ಮಾಡಿತ್ತು. ಈ ಕೃಷಿ ಕಾನೂನು ಮತ್ತು ಪ್ರಧಾನಿ ನರೇಂದ್ರ ಮೋದಿಯ ಬಗ್ಗೆ ಆಗಾಗ್ಗೆ ಟೀಕೆಗಳನ್ನು ಮಾಡುತ್ತಿದ್ದ ಮೇಘಾಲಯದ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ಇದೀಗ ಮತ್ತೇ ಒಕ್ಕೂಟ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದು, “ರೈತರ ತಂಟೆಗೆ ಹೋಗಬೇಡಿ” ಎಂದು ಹೇಳಿದ್ದಾರೆ.
ಶುಕ್ರವಾರದಂದು ರಾಜಸ್ಥಾನದ ಜೋಧಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸತ್ಯಪಾಲ್ ಮಲಿಕ್, “ದೆಹಲಿ ಸರ್ಕಾರವು ರೈತರ ತಂಟೆಗೆ ಹೋಗಬಾರದು ಎಂಬುವುದು ನನ್ನ ಸಲಹೆ. ರೈತರು ಅಪಾಯಕಾರಿ ಜನರಾಗಿದ್ದು, ತಮಗೆ ಬೇಕಾದುದನ್ನು ಮಾತುಕತೆ ಅಥವಾ ಹೋರಾಟದ ಮೂಲಕ ಪಡೆಯುತ್ತಾರೆ. ಒಂದು ವೇಳೆ ಅಗತ್ಯವಿದ್ದರೆ, ಅವರು ಹಿಂಸಾತ್ಮಕವಾಗಿ ತಾವು ಬಯಸಿದ್ದನ್ನು ಸಾಧಿಸುತ್ತಾರೆ” ಎಂದು ಹೇಳಿದ್ದಾರೆ.
ಬಿಹಾರ, ಗೋವಾ ಮತ್ತು ಜಮ್ಮು ಕಾಶ್ಮೀರ ರಾಜ್ಯಗಳಲ್ಲಿ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ್ದ ಅವರು ರೈತರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿದ್ದಕ್ಕಾಗಿ ತಾನು ಹುದ್ದೆಯನ್ನು ಕಳೆದುಕೊಳ್ಳಬಹುದಾದರೂ, ಅದಕ್ಕೆ ಹೆದರುವುದಿಲ್ಲ ಎಂದು ಅವರು ಈ ಹಿಂದೆ ಹೇಳಿದ್ದರು.
ಇದನ್ನೂ ಓದಿ: ‘ದೇಶದಲ್ಲಿ ರಾಜ್ಯಪಾಲರು ದುರ್ಬಲರಾಗಿದ್ದು, ಮಾತನಾಡಲಾಗದ ಸ್ಥಿತಿಯಿದೆ’: ರಾಜ್ಯಪಾಲ ಸತ್ಯಪಾಲ್ ಮಲಿಕ್
ಕಳೆದ ವರ್ಷ ಡಿಸೆಂಬರ್‌ನಲ್ಲಿ ರೈತರಿಗೆ ನೀಡಿದ ಭರವಸೆಗಳನ್ನು ಈಡೇರಿಸುವಂತೆ ಮಲಿಕ್ ಅವರು ಒಕ್ಕೂಟ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಕೃಷಿ ಕಾನೂನುಗಳನ್ನು ವಾಪಾಸು ಪಡೆದು ರೈತರ ಬೇಡಿಕೆಗಳನ್ನು ಈಡೇರಿಸುವುದಾಗಿ ಒಕ್ಕೂಟ ಸರ್ಕಾರ ಭರವಸೆ ನೀಡಿತ್ತು. ಹೀಗಾಗಿ ರೈತರು ತಮ್ಮ ಒಂದು ವರ್ಷಗಳ ಸುಧೀರ್ಘ ಪ್ರತಿಭಟನೆಯನ್ನು ಕೊನೆಗೊಳಿಸಿದ್ದರು.
“ಕೃಷಿಕರನ್ನು ದಾರಿ ತಪ್ಪಿಸಲು ಆಗುವುದಿಲ್ಲ. ತಮ್ಮ ಬೇಡಿಕೆಗಳನ್ನು ಈಡೇರಿಸುವುದು ಹೇಗೆ ಎಂದು ಅವರಿಗೆ ತಿಳಿದಿದೆ. ಅವರಿಗೆ ನೀಡಿದ ಭರವಸೆಗಳನ್ನು ಈಡೇರಿಸದಿದ್ದರೆ, ಅವರು ತಮ್ಮ ಪ್ರತಿಭಟನೆಯನ್ನು ಮತ್ತೆ ಪ್ರಾರಂಭಿಸುತ್ತಾರೆ” ಎಂದು ಮಲಿಕ್ ಹೇಳಿದ್ದಾರೆ.
ತನಗೆ ಒಕ್ಕೂಟ ಸರ್ಕಾರ ವಿರುದ್ದ ಯಾವುದೇ ‘ಹಗೆತನ’ ಹೊಂದಿಲ್ಲ ಎಂದು ಸ್ಪಷ್ಟಪಡಿಸಿರುವ ಮಲಿಕ್ ಅವರು, “ನಾನು ದೆಹಲಿಯಲ್ಲಿ ಒಂದೂವರೆ ಕೋಣೆಯ ಮನೆಯಲ್ಲಿ ವಾಸಿಸುತ್ತಿದ್ದೇನೆ. ಹಾಗಾಗಿಯೆ ಪ್ರಧಾನಿ ಮೋದಿಯನ್ನು ಎದುರಿಸಿ ರೈತರ ಸಮಸ್ಯೆಯ ಬಗ್ಗೆ ಮಾತನಾಡಲು ಸಾಧ್ಯವಾಯಿತು” ಎಂದು ಹೇಳಿದ್ದಾರೆ.
ಕಳೆದ ಜನವರಿಯಲ್ಲಿ ಹೇಳಿಕೆ ನೀಡಿದ್ದ ಮಲಿಕ್ ಅವರು, ರೈತರ ಸಮಸ್ಯೆಗೆ ಸಂಬಂಧಿಸಿದಂತೆ ಇಬ್ಬರ ನಡುವೆ ನಡೆದ ಮಾತುಕತೆಯಲ್ಲಿ ಪ್ರಧಾನಿ ‘ಅಹಂಕಾರದಿಂದ’ ವರ್ತಿಸಿದರು ಎಂದು ಹೇಳಿದ್ದರು. ಅಲ್ಲದೆ, ಅಮಿತ್ ಶಾ ಅವರೊಂದಿಗೆ ಪ್ರಧಾನಿ ಮೋದಿಯ ವರ್ತನೆಯ ಬಗ್ಗೆ ಕೇಳಿದ್ದಾಗ, ಅಮಿತ್ ಶಾ ಅವರು, ‘ಪ್ರಧಾನಿ ಮೋದಿ ತನ್ನ ಮಾನಸಿಕ ಸ್ಥಿಮಿತತೆ ಕಳೆದುಕೊಂಡಿದ್ದಾರೆ’ ಎಂದು ಟೀಕಿಸಿದ್ದರು ಎಂದು ಮಲಿಕ್ ಹೇಳಿದ್ದರು.
ಇದನ್ನೂ ಓದಿ: ಮೋದಿ ಸ್ಥಿಮಿತತೆ ಕಳೆದುಕೊಂಡಿದ್ದಾರೆ ಎಂದು ಅಮಿತ್ ಶಾ ಹೇಳಿದ್ದರು: ಮೇಘಾಲಯ ರಾಜ್ಯಪಾಲರ ಸ್ಫೋಟಕ ಹೇಳಿಕೆ


