ಹೊಸ ಮಾಹಿತಿ ತಂತ್ರಜ್ಞಾನ ನಿಯಮಗಳು-2021 ರ ಅಡಿಯಲ್ಲಿ ಡಿಜಿಟಲ್ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳ ವಿರುದ್ಧ ಯಾವುದೇ ಬಲವಂತದ ಕ್ರಮ ತೆಗೆದುಕೊಳ್ಳಬಾರದು ಎಂದು ಮದ್ರಾಸ್ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ಬಂಧ ಹೇರಿದೆ.
ಕೇಂದ್ರವು ಹೊಸ ಐಟಿ ನಿಯಮಗಳ ಅಡಿಯಲ್ಲಿ ಡಿಜಿಟಲ್ ಮಾಧ್ಯಮಗಳನ್ನು ನಿಯಂತ್ರಿಸಲು ಮುಂದಾಗಿದೆ. ಈ ಕ್ರಮದ ವಿರುದ್ದ ಮದ್ರಾಸ್ ಹೈಕೋರ್ಟ್‌ನಲ್ಲಿ ಇಂಡಿಯನ್ ಬ್ರಾಡ್‌ಕಾಸ್ಟರ್ಸ್ ಮತ್ತು ಡಿಜಿಟಲ್ ಫೌಂಡೇಶನ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು.
ಡಿಸೆಂಬರ್ 6ರ ಸೋಮವಾರ ಅರ್ಜಿಯ ವಿಚಾರಣೆ ನಡೆಸಿರುವ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಂಎನ್ ಭಂಡಾರಿ ಮತ್ತು ನ್ಯಾಯಮೂರ್ತಿ ಪಿಡಿ ಆದಿಕೇಶವಲು ಅವರಿದ್ದ ಪೀಠವು, ಹೊಸ ನಿಯಮಗಳಿಗೆ ತಡೆಯಾಜ್ಞೆ ನೀಡಿದೆ. ಅಲ್ಲದೆ, ಹೊಸ ನಿಯಮಗಳಲ್ಲಿರುವ ನಿಬಂಧನೆಗಳನ್ನು ಪ್ರಶ್ನಿಸಿದೆ.
ವಿಚಾರಣೆಯ ಸಂದರ್ಭದಲ್ಲಿ ಪೀಠವು, “ಪ್ರತಿವಾದಿಗಳು (ಕೇಂದ್ರ ಸರ್ಕಾರ) ನ್ಯಾಯಾಲಯದ ಅನುಮತಿಯಿಲ್ಲದೆ ಯಾವುದೇ ಬಲವಂತದ ಕ್ರಮವನ್ನು ತೆಗೆದುಕೊಳ್ಳದಂತೆ ನಿರ್ಬಂಧಿಸಲಾಗಿದೆ” ಎಂದು ಹೇಳಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಜನವರಿ 25ಕ್ಕೆ ಮುಂದೂಡಲಾಗಿದೆ.
ಹೊಸ ಐಟಿ ನಿಯಮಗಳಿಗೆ ಬಾಂಬೆ ಹೈಕೋರ್ಟ್ ಕೆಲವು ತಿಂಗಳ ಹಿಂದೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು. ಆದರೂ, ನಿಯಮಗಳ ನಿಬಂಧನೆಗಳ ಪ್ರಕಾರ ಕೇಂದ್ರ ಸರ್ಕಾರ ದಂಡದ ಕ್ರಮವನ್ನು ಪ್ರಾರಂಭಿಸುತ್ತಿದೆ ಎಂದು ಅರ್ಜಿದಾರರ ಪರ ಹಿರಿಯ ವಕೀಲರು ಆರೋಪಿಸಿದ್ದಾರೆ. ಈ ವರ್ಷದ ಆರಂಭದಲ್ಲಿ ಕೇರಳ ಹೈಕೋರ್ಟ್ ಕೂಡ ಇದೇ ರೀತಿಯ ಆದೇಶವನ್ನು ನೀಡಿದೆ.
ಇದನ್ನೂ ಓದಿ: ಡೀಫಾಲ್ಟ್ ಜಾಮೀನು ಪ್ರಶ್ನಿಸಿದ್ದ ಎನ್‌ಐಎ ಅರ್ಜಿ ವಜಾಗೊಳಿಸಿದ ಸುಪ್ರೀಂ: ನಾಳೆ ಸುಧಾ ಭಾರದ್ವಾಜ್ ಬಿಡುಗಡೆ


