Homeಮುಖಪುಟದೊಸ್ತೊಯೆವ್‌ಸ್ಕಿ 200; ದ್ವಂದ್ವಗಳ ಜಗತ್ತಿನ ಮಾನವೀಯ ಲೇಖಕ

ದೊಸ್ತೊಯೆವ್‌ಸ್ಕಿ 200; ದ್ವಂದ್ವಗಳ ಜಗತ್ತಿನ ಮಾನವೀಯ ಲೇಖಕ

- Advertisement -
- Advertisement -

[ದಾಸ್ತೋವ್‌ಸ್ಕಿಯವರ ಹೆಸರಿನ ಉಚ್ಛಾರಣೆಗೆ ಸಂಬಂಧಿಸಿದಂತೆ ಹಲವು ವ್ಯತ್ಯಾಸಗಳಿದ್ದು, ನಾನುಗೌರಿಯಲ್ಲಿ ವಿವಿಧ ಲೇಖಕರು ಉಪಯೋಗಿಸಿರುವ ಉಚ್ಛಾರಣೆಯು ವಿಭಿನ್ನವಾಗಿದ್ದು ಅದನ್ನು ಹಾಗೆಯೇ ಉಳಿಸಿಕೊಂಡಿದ್ದೇವೆ. ಹಾಗೆಯೇ ದಾಸ್ತೋವ್‌ಸ್ಕಿ ಹುಟ್ಟಿದ ದಿನ ಆಧುನಿಕ ಕ್ಯಾಲೆಂಡರ್ ಪ್ರಕಾರ ನವೆಂಬರ್ ೧೧ ಮತ್ತು ರಶ್ಯನ್ ಕ್ಯಾಲೆಂಡರ್ ಪ್ರಕಾರ ಅಕ್ಟೋಬರ್ ೩೦. ಈ ವ್ಯತ್ಯಾಸವನ್ನು ಕೂಡ ನಾವು ಪ್ರಕಟಿಸಿರುವ ಎರಡು ಲೇಖನಗಳಲ್ಲಿ ಓದುಗರು ಕಾಣಬಹುದಾಗಿದೆ.

-ಸಂ]

ಅಪಾರ ಜನಪ್ರಿಯತೆ, ಜಗತ್ತಿನ ಶ್ರೇಷ್ಠ ಚಿಂತಕರ ಮೆಚ್ಚುಗೆ ಇರುವಂತೆ ಕಟುವಾದ ಟೀಕೆ, ವಿವಾದಗಳೂ ಸಹ ರಷ್ಯನ್ ಭಾಷೆಯ ಮೇರು ಸಾಹಿತಿಗಳಲ್ಲೊಬ್ಬನಾದ ಫ್ಯೋದೊರ್ ದೊಸ್ತೊಯೆವ್‌ಸ್ಕಿಯ ಸುತ್ತಲೂ ಇವೆ. ಮಾನವನ ವ್ಯಕ್ತಿತ್ವದಲ್ಲಿರುವ ದ್ವಂದ್ವಗಳ ಬಗ್ಗಯೇ ತಲೆಕೆಡಿಸಿಕೊಂಡ ದೊಸ್ತೊಯೆವ್‌ಸ್ಕಿಯ ಮೌಲ್ಯಮಾಪನದ ಬಗ್ಗೆ ಸಹ ದ್ವಂದ್ವಗಳಿರುವುದಕ್ಕೆ ಚಾರಿತ್ರಿಕ ಕಾರಣಗಳಿವೆ. ಇದೀಗ ಈ ಮಹಾನ್ ಲೇಖಕನ 200ನೇ ಹುಟ್ಟುಹಬ್ಬ ಎದುರಾಗಿರುವಾಗ ಈತನ ಕುರಿತು ಎಲ್ಲೆಡೆ ಚರ್ಚೆಯಾಗುವುದು ಸಹಜವೇ.

11 ನವೆಂಬರ್ 1821ರಲ್ಲಿ ದೊಸ್ತೊಯೆವ್‌ಸ್ಕಿ ಜನಿಸಿದಾಗ ರಷ್ಯಾ ಜ್ಹಾರ್ ಚಕ್ರವರ್ತಿಗಳ ನಿರಂಕುಶಾಧಿಕಾರದಲ್ಲಿತ್ತು. ಯೂರೋಪಿನ ಅನೇಕ ರಾಷ್ಟ್ರಗಳು ಆಗಲೇ ಜನತಂತ್ರಕ್ಕೆ ತೆರೆದುಕೊಂಡಿದ್ದವು. ಆದರೆ ರಷ್ಯಾ ಇನ್ನೂ ಕಗ್ಗತ್ತಲಿನಲ್ಲಿತ್ತು. ಯೂರೋಪಿನ ಮುಂದುವರೆದ ಉದಾರ ಮಾನವತಾವಾದಿ ಚಿಂತನೆ, ಸಾಹಿತ್ಯ, ಕಲೆ, ರಾಜಕೀಯ ಇವೆಲ್ಲಾ ರಷ್ಯಾದ ಜನಜೀವನವನ್ನು ಪ್ರಭಾವಿಸಲಾರಂಭಿಸಿದ್ದವು. ಕಡೆಯಪಕ್ಷ ವಿದ್ಯಾವಂತ ಶ್ರೀಮಂತ ಕುಟುಂಬಗಳಂತೂ ಅಂತಹ ವಾತಾವರಣಕ್ಕೆ, ಶಿಕ್ಷಣಕ್ಕೆ ಹಂಬಲಿಸುತ್ತಿದ್ದವು. ಆದರೆ ಅದೇ ಶ್ರೀಮಂತರು ತಮ್ಮ ಸವಲತ್ತು, ದೌಲತ್ತುಗಳನ್ನು ಬಿಟ್ಟುಕೊಡಲು ತಯಾರಿರಲಿಲ್ಲ. ಉನ್ನತ ಆದರ್ಶಗಳು ಹಾಗೂ ಕ್ರೂರ ವಾಸ್ತವ ಅಂದಿನ ರಷ್ಯಾದಲ್ಲಿನ ಚಿಂತಕರನ್ನು ಹಾಗೂ ಲೇಖಕರನ್ನು ಏಕಕಾಲದಲ್ಲಿ ಕಾಡುತ್ತಿತ್ತು.

ನಮ್ಮ ಕನ್ನಡದ ಮಹತ್ವದ ಲೇಖಕರೊಬ್ಬರು ಒಮ್ಮೆ, ರಷ್ಯಾದಲ್ಲಿ 19ನೆಯ ಶತಮಾನದಲ್ಲಿ ಅನೇಕ ಅಂತಹ ಮಹಾನ್ ಸಾಹಿತಿಗಳ ಮೆರವಣಿಗೆಯೇ ಕಂಡುಬಂದಿತಲ್ಲ ಎಂದು ಉದ್ಗರಿಸಿದ್ದರು. ಪುಷ್ಕಿನ್‌ನಿಂದ ಆರಂಭವಾಗುವ ಈ ಸಾಲು ಗಾರ್ಕಿಯವರೆಗೂ ಮುಂದುವರೆಯುತ್ತದೆ. ಮಧ್ಯದಲ್ಲಿ ಲರ್ಮಾಂತೋವ್, ನೆಕ್ರಸೋವ್, ಗೊಗೊಲ್, ತುರ್ಗೆನೆವ್, ಟಾಲ್‌ಸ್ಟಾಯ್, ಚೆರ್ನಿಶ್ಯೆವ್‌ಸ್ಕಿ, ಹರ್ಜೆನ್, ಚೆಖಾವ್ ಎಲ್ಲರೂ ಬಂದುಹೋಗುತ್ತಾರೆ. ಇದರಲ್ಲಿ ನಮ್ಮ ದೊಸ್ತೊಯೆವ್‌ಸ್ಕಿ, ಟಾಲ್‌ಸ್ಟಾಯ್ ಮತ್ತು ತುರ್ಗೆನೆವ್‌ರ ಸಮಕಾಲೀನ. ಈ ಮೂವರ ಮಧ್ಯದ ಸಂಬಂಧವೂ ಬಹಳ ಸಂಕೀರ್ಣವಾದದ್ದು. ಆ ಸಂಕೀರ್ಣತೆಯೇ ಅನೇಕ ಐತಿಹಾಸಿಕ ದ್ವಂದ್ವಗಳನ್ನು ಪ್ರತಿಫಲಿಸುತ್ತದೆ.

ಟಾಲ್‌ಸ್ಟಾಯ್

ದೊಸ್ತೊಯೆವ್‌ಸ್ಕಿ ಮಧ್ಯಮ ವರ್ಗದಲ್ಲಿ ಹುಟ್ಟಿ ಬೆಳೆದು ತೀವ್ರವಾದ ಬಡತನ, ಹತಾಶೆ, ಅಪಮಾನವನ್ನು ಅನುಭವಿಸಿದವನು. ಟಾಲ್‌ಸ್ಟಾಯ್ ಮತ್ತು ತುರ್ಗೆನೆವ್‌ರಂತೆ ’ಬಾಯಲ್ಲಿ ಬೆಳ್ಳಿ ಚಮಚ ಇಟ್ಟುಕೊಂಡು ಹುಟ್ಟಿದವನು’ ಅಲ್ಲ. ತಂದೆ ವೈದ್ಯನಾಗಿದ್ದ ನಿಜ. ಮನೆಯಲ್ಲಿ ತಕ್ಕಮಟ್ಟಿಗೆ ಕೆಲವೊಮ್ಮೆ ಅನುಕೂಲ ಇದ್ದದ್ದು ನಿಜ. ಅದೇನೇ ಇರಲಿ ದೊಸ್ತೊಯೆವ್‌ಸ್ಕಿ ವೈಯಕ್ತಿಕ ಬದುಕಿನಲ್ಲಿ ವಿಪರೀತ ನೋವು, ಕ್ರೌರ್ಯ, ಯಾತನೆಯನ್ನು ಅನುಭವಿಸಿದವನು. ತಂದೆ ಕಠೋರ ವ್ಯಕ್ತಿತ್ವದವನು, ಜಿಪುಣ, ಜಗಳಗಂಟ. ಅವನಿಗೆ ಹೆದರುತ್ತಿದ್ದ ಅಮ್ಮ ವಿಪರೀತ ತಾಳ್ಮೆಯ ವಾತ್ಸಲ್ಯಮಯಿ ಹೆಣ್ಣು. ದೊಸ್ತೊಯೆವ್‌ಸ್ಕಿಗೆ ಹದಿನಾರು ವರ್ಷ ತುಂಬುವ ವೇಳೆಗೆ ಅಮ್ಮ ಸತ್ತುಹೋದಳು. ಅದು ಇವನ ಮೇಲೆ ವಿಪರೀತ ಆಘಾತವನ್ನು ಉಂಟುಮಾಡಿದ ಘಟನೆ. ಮೊದಲ ಬಾರಿಗೆ ಅವನಿಗೆ ಅಪಸ್ಮಾರ (ಮೂರ್ಛೆರೋಗ) ಕಾಣಿಸಿಕೊಂಡದ್ದು ಆಗಲೇ. ಮತ್ತೆ ಎರಡು ವರ್ಷ ಕಳೆಯುವಷ್ಟರಲ್ಲಿ ಅಪ್ಪ ತನ್ನ ಕ್ರೂರ ನಡವಳಿಕೆಯಿಂದಲೇ ಜೀತದಾಳುಗಳಿಂದ ಕೊಲೆಯಾದ. ಇವೆರಡೂ ಎಳೆಯ ದೊಸ್ತೊಯೆವ್‌ಸ್ಕಿಯ ಮೇಲೆ ತೀವ್ರ ಪರಿಣಾಮ ಬೀರಿದ ಘಟನೆಗಳು.

ಮುಂದೆ ಅವನು ಮಿಲಿಟರಿ ಎಂಜಿನಿಯರಿಂಗ್ ಸ್ಕೂಲ್‌ಗೆ ಸೇರಿ ಅಲ್ಲಿ ನಾಲ್ಕು ವರ್ಷ ಕಲಿತ. ಅವು ಮತ್ತು ನಂತರ ಅವನು ಸಂಪಾದನೆ ಮಾಡಲಾರಂಭಿಸಿದ ಯೌವನದ ದಿನಗಳು ಕೊಂಚ ಆರಾಮದ ಖುಷಿಯ ದಿನಗಳು.
ಆದರೂ ಅಪಸ್ಮಾರದ ಭಯ, ಆತಂಕಗಳು ಅವನನ್ನು ಎಂದಿಗೂ ಬಿಟ್ಟಿರಲಿಲ್ಲ.

ಇದೇ ಸಮಯದಲ್ಲಿ ಅವನು ಅಂದಿನ ಖ್ಯಾತ ಕ್ರಾಂತಿಕಾರಿ ಜನತಂತ್ರವಾದಿ ಮತ್ತು ವಿಮರ್ಶಕ ಬೆಲಿನ್‌ಸ್ಕಿಯ ಸ್ನೇಹದಲ್ಲಿ ಸಿಲುಕಿಕೊಂಡ. ಅದರಿಂದಾಗಿ ಇವನಲ್ಲೂ ಕ್ರಾಂತಿ ಮತ್ತು ಸಮಾಜವಾದದ ಕುರಿತು ಗಾಢವಾದ ಆಕರ್ಷಣೆ ಬೆಳೆಯಿತು. ಫ್ರೆಂಚ್ ಕಾಲ್ಪನಿಕ ಸಮಾಜವಾದಿಗಳ ಅಭಿಮಾನಿಯೂ ಅದ. ನಂತರ ಇನ್ನೂ ತೀವ್ರವಾದಿಗಳ ಗುಂಪಿನಲ್ಲಿ ಸೇರಿಕೊಂಡ. ಅದು ಕ್ರಿಯಾಶೀಲ ರಾಜಕೀಯ ಗುಂಪು. ಇದರಿಂದಾಗಿ ಅವನು ತನ್ನ 28ನೆಯ ವಯಸ್ಸಿನಲ್ಲಿ ಬಂಧನಕ್ಕೊಳಗಾಗಿ ಎಂಟು ತಿಂಗಳಷ್ಟು ದೀರ್ಘಕಾಲ ಏಕಾಂತ ಕಾರಾಗೃಹ ವಾಸದಲ್ಲಿರಬೇಕಾಯಿತು. ಅಷ್ಟು ಹೊತ್ತಿಗೆ ಲೇಖಕನೂ ಆಗಿದ್ದ ಸೂಕ್ಷ್ಮ ಮನಸ್ಸಿನ ದೊಸ್ತೊಯೆವ್‌ಸ್ಕಿಯ ಮೇಲೆ ಇದು ತೀವ್ರವಾದ ಪರಿಣಾಮವನ್ನು ಬೀರಿತು. ಆ ನಂತರ ವಿಚಾರಣೆಯಲ್ಲಿ ಅವನಿಗೆ ಮತ್ತು ಗೆಳೆಯರಿಗೆ ಮರಣದಂಡನೆಯನ್ನು ಘೋಷಿಸಲಾಯಿತು. ಫೈರಿಂಗ್ ಸ್ಕ್ವಾಡ್‌ನ ಗುಂಡು ಇವನ ಎದೆಯನ್ನು ಸೀಳಲು ಕೇವಲ ಒಂದು ನಿಮಿಷವಿದ್ದಾಗ ಅತ್ಯಂತ ನಾಟಕೀಯ ರೀತಿಯಲ್ಲಿ ಅವರೆಲ್ಲರಿಗೂ ಜ್ಹಾರ್ ಕ್ಷಮಾದಾನ ನೀಡಿದ. ಆಮೇಲೆ ಸೈಬೀರಿಯಾದಲ್ಲಿ ನಾಲ್ಕು ವರ್ಷ ಕಠಿಣ ಶಿಕ್ಷೆ. ಆ ಇಡೀ ಅವಧಿಯಲ್ಲಿ ಅವನಿಗೆ ಸ್ನಾನದ ಸಮಯದಲ್ಲಿ ಸೇರಿದಂತೆ, ಅಸ್ಪತ್ರೆಗೆ ಸೇರಿದಾಗಲೂ ಸಹ ಕಾಲಿನಿಂದ ಸರಪಳಿ ತೆಗೆದಿರಲಿಲ್ಲ. ಕೊರೆಯುವ ಚಳಿಯಲ್ಲಿ ಅವನು ಇಟ್ಟಿಗೆ ಮಾಡಿದ್ದ, ಮಣ್ಣು ಹೊತ್ತಿದ್ದ, ಹಡಗುಗಳ ಬಳಿ ಹಮಾಲಿಯಾಗಿದ್ದ. ಇವೆಲ್ಲಾ ಅನುಭವಗಳು ಅವನನ್ನು ಜರ್ಝರಿತಗೊಳಿಸಿದ್ದವು. ಪಾಪಿಷ್ಟರು, ಕುಡುಕರು, ಸಿನಿಕರು, ಹಿಂಸಾನಂದ ಪ್ರವೃತ್ತಿಯವರು, ಕನಸುಗಾರರು ಎಲ್ಲರನ್ನು ಅವನು ನೋಡಿದ್ದ. ಇವರು ಮುಂದೆ ಅವನ ಸಾಹಿತ್ಯದಲ್ಲಿ ಢಾಳಾಗಿ ಕಾಣಿಸಿಕೊಂಡರು.

ಹೊರಗೆ ಬಂದ ಮೇಲೆ ಲೇಖಕನಾಗಿ ತಕ್ಕಮಟ್ಟಿಗೆ ಜನಪ್ರಿಯತೆ ಬಂದರೂ, ದುಃಖ, ಅಪಮಾನ, ಬಡತನ ಅವನ ಬದುಕಿನ ಸಂಗಾತಿಗಳೇ ಆಗಿದ್ದವು. ಮೊದಲ ಹೆಂಡತಿ ವಿಪರೀತ ಉನ್ಮಾದವಿದ್ದ ಮತ್ತು ರೋಗಕ್ಕೆ ಒಳಗಾಗಿದ್ದ ಹೆಣ್ಣು. ಇವನಿಗಿಂತ ಇಪ್ಪತ್ತು ವರ್ಷ ಚಿಕ್ಕವಳಾಗಿದ್ದ ಎರಡನೆಯ ಹೆಂಡತಿಯೊಂದಿಗೆ ಕಡೆಯ ಹದಿನಾರು ವರ್ಷಗಳ ಕಾಲ ಅವನಿಗೆ ತಕ್ಕ ಮಟ್ಟಿಗೆ ಸುಖವಾದ ದಾಂಪತ್ಯವಿತ್ತು.

ಅಂದಿನ ರಷ್ಯಾದಲ್ಲಿ ಐತಿಹಾಸಿಕವಾಗಿ ವಿಪರೀತ ಪ್ರತಿಗಾಮಿಯಾಗಿದ್ದ ವಾತಾವರಣ ಮತ್ತು ದೊಸ್ತೊಯೆವ್‌ಸ್ಕಿ ಅನುಭವಿಸಿದ ಬದುಕಿನ ಯಾತನೆಗಳು, ಇವುಗಳ ಕುರಿತಾದ ಅರಿವು ನಮಗೆ ಅವನನ್ನು, ಅವನ ಸಾಹಿತ್ಯವನ್ನು ಅರ್ಥಮಾಡಿಕೊಳ್ಳಲು ಬೇಕಾದ ಹಿನ್ನೆಲೆಯನ್ನು ಒದಗಿಸುತ್ತವೆ.

ಮೂರು ಮುಖ್ಯ ಅಂಶಗಳು

ನಾವು ಈಗಾಗಲೇ ಹೇಳಿದಂತೆ ದೊಸ್ತೊಯೆವ್‌ಸ್ಕಿ ಯೌವನದಲ್ಲಿ ಸಮಾಜವಾದಿಯಾಗಿದ್ದವನು. ಆದರೆ ಅದರಲ್ಲಿ ಆಳವಾದ ಸೈದ್ಧಾಂತಿಕ ಸ್ಪಷ್ಟತೆ ಇರಲಿಲ್ಲ. ಅಂತಹ ತಾತ್ವಿಕ ಪ್ರಬುದ್ಧತೆಯನ್ನು ಸಮಾಜದಲ್ಲಿ ವಿಶಾಲವಾಗಿ ಹರಡಬಲ್ಲ ಹೋರಾಟವೂ ಆಗ ಬೆಳೆದಿರಲಿಲ್ಲ ಎಂಬುದು ನಿಜ. ಅದೇನೇ ಇರಲಿ ಈ ಪ್ರೇರಣೆಯಿಂದಲೇ ಅವನ ಮೊದಲ ಕೃತಿಗಳು ಸೃಷ್ಟಿಸಲ್ಪಟ್ಟವು. ’ಪೂರ್ ಫೋಕ್ಸ್’, ’ಇನ್‌ಸಲ್ಟ್ ಅಂಡ್ ಹ್ಯುಮಿಲಿಯೇಟಡ್’ ಮುಂತಾದ ಕೃತಿಗಳಲ್ಲಿ ಬಡತನ, ಬಡಬಗ್ಗರ ಯಾತನೆ, ಅವರ ವ್ಯಕ್ತಿತ್ವದಲ್ಲಿನ ನೈತಿಕತೆ, ಸರಳತೆ ಇವೆಲ್ಲಾ ಪ್ರತಿಬಿಂಬಿತವಾಗಿವೆ. ಇಂದಿಗೂ ಅನೇಕ ಮಾನವೀಯ ಸಂವೇದನೆಯುಳ್ಳ ಓದುಗರನ್ನು, ಹೋರಾಟಗಾರರನ್ನು ಇವು ಗಾಢವಾಗಿ ಆಕರ್ಷಿಸುತ್ತವೆ. ಮುಂದೆ ಬಂದ ಅವನ ಅತ್ಯಂತ ಸಂಕೀರ್ಣ, ಪ್ರೌಢ ಕಾದಂಬರಿಗಳಲ್ಲೂ ಇಂತಹ ಪಾತ್ರಗಳು ಕಾಣಿಸಿಕೊಳ್ಳುತ್ತಲೇ ಇರುತ್ತವೆ. ಸಮಾಜ ಬದಲಾವಣೆಯ ತುಡಿತ ಅವನ ಬರೆಹದ ಮೊದಲೆನಯ ಮುಖ್ಯ ಅಂಶ.

ಮನಃಶಾಸ್ತ್ರೀಯ ಕಾದಂಬರಿಗಳು

ಮಾನವನ ಮನಸ್ಸಿನ ಅತ್ಯಂತ ಕತ್ತಲಿನ ಮೂಲೆಗಳನ್ನು ಹುಡುಕಬಲ್ಲ, ತಟ್ಟಬಲ್ಲ ಲೇಖಕ ಎಂದೇ ದೊಸ್ತೊಯೆವ್‌ಸ್ಕಿ ಹೆಸರುವಾಸಿಯಾಗಿದ್ದಾನೆ. ಅನೇಕ ರಮ್ಯವಾದಿ ಹಾಗೂ ಕೆಲವೊಮ್ಮೆ ವಾಸ್ತವವಾದಿ ಲೇಖಕರಿಗೂ ಕೂಡ ಮನುಷ್ಯನ ಮನಸ್ಸಿನೊಳಗಿನ ಒಳಿತು-ಕೆಡಕುಗಳ ನಡುವಿನ ಸಂಘರ್ಷವನ್ನು ಇಷ್ಟು ನಗ್ನವಾಗಿ, ಹಸಿಹಸಿಯಾಗಿ ಯಾವುದೇ ಭ್ರಮೆಗಳಿಲ್ಲದೆ ಬಿಡಿಸಿಡಲು ಸಾಧ್ಯವಾಗಿಲ್ಲ ಎಂದು ವಿಮರ್ಶಕರು ಇವನನ್ನು ಹೊಗಳಿದ್ದಾರೆ. ಮನುಷ್ಯನಲ್ಲಿ ಕೆಡಕು ವಿಪರೀತವಾಗಿ ವಿಜೃಂಭಿಸುತ್ತದೆ; ಮೇಲ್ನೋಟಕ್ಕೆ ಮನುಷ್ಯರು ಒಳ್ಳೆಯವರು, ಸದುದ್ದೇಶದವರು ಎಂದು ಕಂಡಾಗಲೂ ಅಂತರಂಗದಲ್ಲಿ ಅವರು ಕೆಡಕರಾಗಿರುತ್ತಾರೆ; ಒಬ್ಬ ಮನುಷ್ಯ ತನ್ನ ನೆರೆಹೊರೆಯವರ, ಬಂಧುಗಳ ಗಾಢ ದುರಂತದಲ್ಲಿ ಸಹ ಒಂದು ರೀತಿಯ ಕೆಟ್ಟ ಸುಖವನ್ನು ಕಾಣುತ್ತಾನೆ ಎಂಬ ಅಭಿಪ್ರಾಯವನ್ನು ದೊಸ್ತೊಯೆವ್‌ಸ್ಕಿ ವ್ಯಕ್ತಪಡಿಸಿದ್ದಾನೆ. ಆದರೂ ಅದೇ ಸಮಯದಲ್ಲಿ ಅವನು ಆದರ್ಶಗಳತ್ತ ಕೈಚಾಚುತ್ತಾನೆ ಒಂದು ಕ್ಷಣದಲ್ಲಿ ಎಲ್ಲವನ್ನೂ ತೊರೆಯಬಲ್ಲ ಆದರ್ಶವನ್ನೂ ಒಬ್ಬ ಸಾಧಾರಣ ಮನುಷ್ಯ ಪ್ರದರ್ಶಿಸಬಹುದು, ಇದೇ ಮಾನವನ ಅಂತರಂಗದ ದ್ವಂದ್ವತೆ ಎಂಬುದು ಅವನ ಪ್ರತಿಪಾದನೆ. ಮನುಷ್ಯ ಮೂಲತಃ ಒಳ್ಳೆಯವನು ಎಂಬ ವಾಸ್ತವವಾದಿ, ಸಮಾಜವಾದಿ, ಕ್ರಾಂತಿಕಾರಿ ಜನತಂತ್ರವಾದಿ ಲೇಖಕರ ನಿಲುವಿಗೆ ಇದು ವಿರುದ್ಧ.

ಚೆರ್ನಿಶ್ಯೇವ್‌ಸ್ಕಿ

ದೊಸ್ತೊಯೆವ್‌ಸ್ಕಿ ರಷ್ಯನ್ ಸಮಾಜದ ’ಅಂಡರ್‌ಗ್ರೌಂಡ್’ಅನ್ನು ಚಿತ್ರಿಸುತ್ತಾ ಹೋಗುತ್ತಾನೆ ಎಂದರೆ ಇಲ್ಲಿ ಮನುಷ್ಯತ್ವ ನೆಲಮಟ್ಟಕ್ಕೆ ಕುಸಿದಿದೆ.

ಇಲ್ಲಿ ವಿಜೃಂಭಿಸಿರುವುದು ಕೆಟ್ಟ ಸ್ವಾರ್ಥ, ಕೀಳು ಕಾಮನೆಗಳು, ಮೋಸ, ದ್ರೋಹ, ಪಾತಕ, ವಿಕೃತಿ ಎಂದು ಅವನು ಸಾರುತ್ತಾನೆ. ಈ ದ್ವಂದ್ವ ಮತ್ತು ಅಧೋಲೋಕ ಅವನ ಸಾಹಿತ್ಯದ ಮರುಕಳಿಸುವ ವಸ್ತು. ಇದು ಎರಡನೆಯ ಮುಖ್ಯ ಅಂಶ.

ತಾತ್ವಿಕ ನಿಲುವು

ಆದರೆ ದೊಸ್ತೊಯೆವ್‌ಸ್ಕಿ ಮೌಲ್ಯಗಳಲ್ಲಿ ನಂಬಿಕೆ ಇಲ್ಲದವನಲ್ಲ. ಎಲ್ಲ ರೀತಿಯ ಮಾನವೀಯ ವಿಶ್ವಾಸವನ್ನು ಅವನು ತೊರೆದಿಲ್ಲ. ಅವನಂತೆಯೇ ಅಪಸ್ಮಾರದಿಂದ ನರಳುವ ಪ್ರಿನ್ಸ್ ಮೈಶ್ಕಿನ್, ’ಈಡಿಯಟ್’ ಕಾದಂಬರಿಯ ನಾಯಕ. ಅವನು ಹೋಲಿಕೆಯಲ್ಲೂ ಗುಣದಲ್ಲೂ ಕ್ರೈಸ್ತನಂಥವನು. ಆದರೆ ಈ ಜಗತ್ತು ಅಂತಹ ಮುಗ್ಧರಿಗಲ್ಲ, ತೀರಾ ಒಳ್ಳೆಯವರಿಗೆ ತಲೆಕೆಡುವುದು ಬಿಟ್ಟು ಬೇರೆ
ದಾರಿಯೇ ಇಲ್ಲವೇನೋ ಎನಿಸುತ್ತದೆ.

ದೊಸ್ತೊಯೆವ್‌ಸ್ಕಿ ತನ್ನ ಸುತ್ತಲಿನ ಜಗತ್ತಿನ ವಿರುದ್ಧ ಬಂಡೆದ್ದ. ಆದರೆ ಅವನು ಮನುಷ್ಯನ ಕ್ಷುದ್ರತೆ, ಆದರ್ಶಹೀನತೆ ಇವುಗಳ ಕಾರಣವನ್ನು ಅಂದಿನ ಸಮಾಜದ ವಾಸ್ತವಿಕ ಆರ್ಥಿಕ ಸಾಮಾಜಿಕ ದ್ವಂದ್ವಗಳಲ್ಲಿ ಹುಡುಕುವುದನ್ನು ಪ್ರಜ್ಞಾಪೂರ್ವಕವಾಗಿ ನಿಲ್ಲಿಸಿಬಿಟ್ಟ. ಬದಲಿಗೆ ಕೆಡುಕಿನ ಕಾರಣಗಳನ್ನು ಮನುಷ್ಯನ ಅಂತರಂಗದಲ್ಲಿ ಹುಡುಕಿದ. ಅದರಿಂದ ಸಿಕ್ಕಿದ ಸತ್ಯಗಳೇನೂ ಮೌಲ್ಯ ಇಲ್ಲದಂಥವಿಲ್ಲ.

ತನ್ನ ಸುತ್ತಲಿನ ಸಮಾಜದ ಅನ್ಯಾಯಗಳಿಗೆ ಉತ್ತರವನ್ನು ಹುಡುಕಲು ದೊಸ್ತೊಯೆವ್‌ಸ್ಕಿ ಚಾರಿತ್ರಿಕವಾಗಿ ಮುಂದಕ್ಕೆ ಚಲಿಸಬೇಕಿತ್ತು. ಆದರೆ ಕೆಲವು ಅತಿರೇಕದ ’ಉಗ್ರ ಸಮಾಜವಾದಿ’ಗಳನ್ನು ಕಂಡು ಬೇಸರಿಸಿಕೊಂಡಿದ್ದ ಅವನು ಪರಿಹಾರಕ್ಕಾಗಿ ಹಿಮ್ಮುಖವಾಗಿ ನಡೆದು ಧರ್ಮವನ್ನು, ಕ್ರಿಶ್ಚಿಯನ್ ಸಿದ್ಧಾಂತವನ್ನು ಸ್ವೀಕರಿಸಿಕೊಂಡ. ಅಲ್ಲದೆ ಚರ್ಚ್ ಮತ್ತು ಜ್ಹಾರ್‌ನ ಆಡಳಿತದಡಿಯಲ್ಲೇ ಸ್ವಸ್ಥ ಸಮಾಜವನ್ನು ಕಟ್ಟಬೇಕು ಎಂದುಬಿಟ್ಟ. ಇದು ಮೂರನೆಯ ಅಂಶ. ಇದರಿಂದಲೇ ಅಂದು ಸಕ್ರಿಯವಾಗಿದ್ದ ಕ್ರಾಂತಿಕಾರಿ ಜನತಂತ್ರವಾದಿ ಲೇಖಕರಾದ ಚೆರ್ನಿಶ್ಯೇವ್‌ಸ್ಕಿಯಂಥವರ ದಾರಿಗೆ ಅವನದ್ದು ವಿರುದ್ಧವಾಯಿತು. ಟಾಲ್‌ಸ್ಟಾಯ್ ಕೂಡ ಅವನ ಮೊದಲ ಕೆಲವು ಕೃತಿಗಳನ್ನು ತೀವ್ರವಾಗಿ ಮೆಚ್ಚಿಕೊಂಡರೂ ನಂತರ ಅವನನ್ನು ಕಟುವಾಗಿ ಟೀಕಿಸಿದ. ಗಾರ್ಕಿಯಂತೂ ಈತ ನಿರಾಶಾವಾದವನ್ನು ಪೋಷಿಸುವ ಮಾನವ ಸೌಂದರ್ಯವನ್ನು ಗ್ರಹಿಸದ ಲೇಖಕ ಎಂದು ವಿರೋಧಿಸಿದ. ಮನುಷ್ಯ ಏನಾಗಿದ್ದಾನೆ ಎಂದರೆ ಸಾಲದು, ಅವನು ಏನಾಗಬೇಕು, ಜೀವನದಲ್ಲಿ ಯಾವ ಸಾಧ್ಯತೆಗಳಿವೆ ಎಂಬುದನ್ನು ಹೇಳಲಿಲ್ಲ ಎಂದು ಖಂಡಿಸಿದ. ಆದರೂ ದೊಸ್ತೊಯೆವ್‌ಸ್ಕಿ ಬಿಟ್ಟು ಹೋಗಿರುವ ಸಾಹಿತ್ಯ ಅದ್ಭುತವಾದದ್ದು. ಐನ್‌ಸ್ಟೈನ್‌ನಂಥ ವಿಜ್ಞಾನಿ ಅವನ ಕಾದಂಬರಿಗಳ ಪ್ರಗಾಢತೆಯನ್ನು ಮೆಚ್ಚಿಕೊಂಡರು. ರಷ್ಯಾದ ಸಮಾಜದಲ್ಲಿನ ಅನ್ಯಾಯ, ಅಸಮಾನತೆ ಮಾತ್ರವಲ್ಲದೆ ಅನುಭವಿಸುವ ಅನಾಥಪ್ರಜ್ಞೆ ಪರಕೀಯ ಪ್ರಜ್ಞೆಗಳನ್ನು ಅವನಂತೆ ಚಿತ್ರಿಸುವುದು ಇನ್ಯಾರಿಗೂ ಸಾಧ್ಯವಿಲ್ಲ.

ರಷ್ಯಾದ ಕ್ರಾಂತಿಕಾರಿ ನಾಯಕ ಲೆನಿನ್ ಒಮ್ಮೆ ಟಾಲ್‌ಸ್ಟಾಯ್‌ರನ್ನು ರಷ್ಯನ್ ಕ್ರಾಂತಿಯ ಕನ್ನಡಿ ಎಂದು ಕರೆದಿದ್ದರು. ಏಕೆಂದರೆ ರಷ್ಯಾದ ವಾಸ್ತವವನ್ನು ಅದರಲ್ಲಿನ ತೀವ್ರ ಸಂಘರ್ಷಗಳನ್ನು ಟಾಲ್‌ಸ್ಟಾಯ್‌ಅಷ್ಟು ಚೆನ್ನಾಗಿ ದಾಖಲಿಸಿದ್ದರು. ಆದರೆ ಅವರ ಪರಿಹಾರಗಳೂ ಕಾಲ್ಪನಿಕ. ಇಷ್ಟಾಗಿ ಟಾಲ್‌ಸ್ಟಾಯ್ ಅವರನ್ನು ಲೆನಿನ್ ಅಗಲೀ ಸಮಾಜವಾದಿಗಳಾಗಲೀ ನಿರಾಕರಿಸಲಿಲ್ಲ. ದೊಸ್ತೊಯೆವ್‌ಸ್ಕಿ ಸಹ ಹತ್ತೊಂಬತ್ತನೇ ಶತಮಾನದ ರಷ್ಯಾದ ಬದುಕಿಗೆ ಸ್ಪಷ್ಟವಾದ ಕನ್ನಡಿಯೇ. ಅವನ ತೀರ್ಮಾನಗಳು ಟಾಲ್‌ಸ್ಟಾಯ್ ತೀರ್ಮಾನಗಳಿಗಿಂತ ಹೆಚ್ಚು ಯಥಾಸ್ಥಿತಿವಾದಿ ಅಷ್ಟೇ.

ಆದರೆ ಎಂಗೆಲ್ಸ್ ಹೇಳುತ್ತಿದ್ದರು, ಅನೇಕ ಬಾರಿ ಒಬ್ಬ ಮಹತ್ವದ ಲೇಖಕ ಸೈದ್ಧಾಂತಿಕ ತೀರ್ಮಾನಗಳನ್ನೇ ನಿರಾಕರಿಸುವಷ್ಟು ಚೆನ್ನಾಗಿ ವಾಸ್ತವವನ್ನು ಗ್ರಹಿಸುತ್ತಾನೆ ಮತ್ತು ಬರೆಹದಲ್ಲಿ ಪ್ರತಿಫಲಿಸುತ್ತಾನೆ; ಅದಕ್ಕೆ ಕಾರಣ ಅವನ ಕಲಾನಿಷ್ಠೆ! ಇದಕ್ಕೆ ಅವರು ಬಾಲ್ಜಾಕ್‌ನನ್ನು ಉದಾಹರಣೆಯಾಗಿ ನೀಡಿದ್ದರು. ಫ್ರೆಂಚ್ ರಾಜಪ್ರಭುತ್ವವನ್ನು ತಾತ್ವಿಕವಾಗಿ ಸಮರ್ಥಿಸಿದ್ದ ಬಾಲ್ಜಾಕ್ ತನ್ನ ಸಾಹಿತ್ಯದಲ್ಲಿ ಮಾತ್ರ ರಾಜರನ್ನು, ಊಳಿಗಮಾನ್ಯ ಪದ್ಧತಿಯನ್ನು, ಧರ್ಮಗುರುಗಳನ್ನು ಲೇವಡಿಮಾಡಿ ನಗ್ನವಾಗಿ ನಿಲ್ಲಿಸಿದ್ದ!

ಬಾಲ್ಜಾಕ್‌ನನ್ನು ತೀವ್ರವಾಗಿ ಮೆಚ್ಚಿ ಅನುವಾದಿಸಿದ್ದ ದೊಸ್ತೊಯೆವ್‌ಸ್ಕಿ ಸಹ ಒಂದು ಮಟ್ಟದಲ್ಲಿ ಅವನನ್ನೇ ಅನುಸರಿಸಿದ್ದಾನೆ ಎನಿಸುತ್ತದೆ.

ಈ ಎಲ್ಲ ಕಾರಣಗಳಿಂದಲೂ ಮತ್ತೆ ನಾವು ಈ ಮಹಾನ್ ಲೇಖನವನ್ನು ಓದೋಣ, ಚರ್ಚಿಸೋಣ.

ಡಾ. ಬಿ ಆರ್ ಮಂಜುನಾಥ್

ಡಾ. ಬಿ ಆರ್ ಮಂಜುನಾಥ್
ವೃತ್ತಿಯಲ್ಲಿ ವೈದ್ಯರಾಗಿರುವ ಮಂಜುನಾಥ್ ಅವರು ಸಾಮಾಜಿಕ ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವವರು. ’ಕಥನ ಕಣಜದ ಗಟ್ಟಿ ಕಾಳು’, ’ಎಂಟು ದಿಕ್ಕು ನೂರೆಂಟು ಕಥೆ’ ವಿಶ್ವದ ಸಾಹಿತ್ಯ ಕೃತಿಗಳ ಬಗ್ಗೆ ಚರ್ಚಿಸಿರುವ ಅವರ ಎರಡು ಪುಸ್ತಕಗಳು.


ಇದನ್ನೂ ಓದಿ: ಶ್ರೀಕೃಷ್ಣ ತಂದ ಬಿಟ್‌ಕಾಯಿನ್ ಬಿರುಗಾಳಿ! ಬ್ಲಾಕ್ ಚೈನ್ ಮತ್ತು ಬಿಟ್‌ಕಾಯಿನ್ ಬಗ್ಗೆ ಒಂದಿಷ್ಟು..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...