Homeಕರ್ನಾಟಕ’ನಿಮ್ಮ ಸಭ್ಯತೆ, ನನ್ನ ಘನತೆ’: ನ.20ಕ್ಕೆ ಗೃಹ ಕಾರ್ಮಿಕರಿಂದ ಮಹಿಳಾ ಚಲೋ

’ನಿಮ್ಮ ಸಭ್ಯತೆ, ನನ್ನ ಘನತೆ’: ನ.20ಕ್ಕೆ ಗೃಹ ಕಾರ್ಮಿಕರಿಂದ ಮಹಿಳಾ ಚಲೋ

- Advertisement -
- Advertisement -

ಘನತೆ, ಮನ್ನಣೆ, ಸಾಮಾಜಿಕ ಭದ್ರತೆಗೆ ಆಗ್ರಹಿಸಿರುವ ಗೃಹ ಕಾರ್ಮಿಕರು ನವೆಂಬರ್‌ 20 ರಂದು ಮೂರು ಜಿಲ್ಲೆಗಳ ಕಾರ್ಮಿಕರ ಭವನದ ಬಳಿ ಮಹಿಳಾ ಚಲೋ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಗೃಹ ಕಾರ್ಮಿಕ ಹಕ್ಕುಗಳ ಯೂನಿಯನ್ (DWRU) ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ.

“ನಾವು ನಿಮ್ಮಂತೆಯೇ ಮನುಷ್ಯರು. ನಿಮ್ಮಂತೆಯೆ ದುಡಿದು ತಿನ್ನುವ ನೈತಿಕ ಜವಾಬ್ದಾರಿ ಹೊತ್ತಿರುವ ಕಾರ್ಮಿಕರು. ಬದುಕಿನುದ್ದಕ್ಕೂ ಅನೇಕ ಸವಾಲುಗಳನ್ನೆದುರಿಸಿ ಪ್ರತಿ ದಿನವನ್ನು ಹೋರಾಟದ ಬದುಕನ್ನಾಗಿಸಿಕೊಂಡು ಯಶಸ್ಸು ಕಾಣಬಯಸಿರುವ ಕನಸಿಗರು. ಕಟ್ಟಡ ನಿರ್ಮಾಣ ಕೆಲಸದಲ್ಲಿ, ಬೀದಿ ವ್ಯಾಪಾರದಲ್ಲಿ, ರಸ್ತೆ ನಿರ್ಮಾಣ, ಮನೆಗೆಲಸ, ಕಂಪನಿ, ಹೋಟೆಲ್‌ಗಳಲ್ಲಿ ಸ್ವಚ್ಛ ಮಾಡಿ ಗುಡಿಸಿ ಚೆಂದ ಮಾಡುವ ಇನ್ನೂ ಅನೇಕ ಅಸಂಘಟಿತ ವಲಯದ ಕೆಲಸಗಳಲ್ಲಿ ಭಾಗಿಯಾಗಿದ್ದೇವೆ. ಇಂತಹ ನಮ್ಮ ಬದುಕಿನ ಪ್ರಶ್ನೆಗಳಿಗೆ ಸರ್ಕಾರವೇ ಉತ್ತರ ಕೊಡಬೇಕು” ಎಂದು ಕಾರ್ಮಿಕರು ಆಗ್ರಹಿಸಿದ್ದಾರೆ.

ಬೆಂಗಳೂರು, ಮಂಗಳೂರು ಮತ್ತು ಬೆಳಗಾವಿ ಜಿಲ್ಲೆಗಳ ಕಾರ್ಮಿಕರ ಭವನದ ಬಳಿ Domestic Workers Rights Union (DWRU) ನೇತೃತ್ವದಲ್ಲಿ ಏಕಕಾಲಕ್ಕೆ ಕಾರ್ಮಿಕರು ಪ್ರತಿಭಟನೆ ನಡೆಸಿ, ತಮ್ಮ ಹಕ್ಕುಗಳಿಗೆ ಆಗ್ರಹಿಸಲಿದ್ದಾರೆ.

ಇದನ್ನೂ ಓದಿ: ಗೌರವದಿಂದ ವರ್ತಿಸಿ; ಘನತೆಯುತ್ತ ಕೆಲಸದ ವಾತಾವರಣ ನಿರ್ಮಿಸಿ: ಬೆಂಗಳೂರು ಪೌರ ಕಾರ್ಮಿಕರ ಆಕ್ರೋಶ

“ದೇಶದಾದ್ಯಂತ ಸಾವಿರಾರು ಹುಡುಗಿಯರು ಜೀವನೋಪಾಯದ ಹುಡುಕಾಟದಲ್ಲಿ ಪ್ಲೇಸ್‌ ಮೆಂಟ್‌ ಎಜೆನ್ಸಿಗಳ ಜಾಲಕ್ಕೆ ಸಿಲುಕಿ ಕಳ್ಳಸಾಗಾಣಿಕೆಗೆ ಬಲಿಯಾಗುತ್ತಿದ್ದಾರೆ, ದುಡಿತಕ್ಕೆ ತಕ್ಕ ಸಂಬಳ ಸಿಗುವುದಿಲ್ಲ. ಕೆಲಸದ ಸ್ಥಳಗಳಲ್ಲಿ ಲೈಂಗಿಕ ಕಿರುಕುಳವನ್ನು ಅನುಭವಿಸುತ್ತಿದ್ದಾರೆ. ಅಸ್ಪೃಶ್ಯತೆ ಮತ್ತು ಅನಾರೋಗ್ಯವನ್ನು ಎದುರಿಸುತ್ತಿದ್ದಾರೆ. ಎಲ್ಲಾ ಬೃಹತ್‌ ನಗರ ಮತ್ತು ನಗರ, ಮನೆಗಳಲ್ಲಿ ಕಂಡುಬರುವ ಸಾವಿರಾರು ಮನೆಕೆಲಸಗಾರರು ಅದೃಶ್ಯರಾಗಿದ್ದಾರೆ, ಆರ್ಥಿಕತೆ, ಸಮಾಜ ಮತ್ತು ಕುಟುಂಬಕ್ಕೆ ಕೊಡುಗೆ ನೀಡುತ್ತಾ ಬಂದಿದ್ದಾರೆ”.

“ಈ ಪಾರ್ಟ್‌ಟೈಮರ್‌ಗಳಲ್ಲಿ ಅನೇಕರು ಮುಂಜಾನೆ 5 ಗಂಟೆಗೆ ಮನೆ ಕೆಲಸಕ್ಕೆ ತೆರಳುತ್ತಾರೆ. ಅನೇಕ ಮನೆಗಳಲ್ಲಿ, ಜಾತಿ ತಾರತಮ್ಯವನ್ನು ಎದುರಿಸುತ್ತಾರೆ. ಅವರ ಘನತೆಯ ಮೇಲೆ ಹಲ್ಲೆ ನಡೆಸಲಾಗುತ್ತದೆ. ಇವರಿಗೆ ಸಾಮಾಜಿಕ ಭದ್ರತೆ ಇಲ್ಲ, ರಜೆ ಇಲ್ಲ, ರಕ್ಷಣೆ ಇಲ್ಲ, ಇತರ ಕಾರ್ಮಿಕರಂತೆ ಯಾವುದೇ ಹಕ್ಕುಗಳಿಲ್ಲ. ಆದ್ದರಿಂದ ಬಹುಪಾಲು ಮಹಿಳೆಯರು, ಬಾಲಕಿಯರು ಅದೃಶ್ಯರಾಗಿದ್ದಾರೆ. ಜೊತೆಗೆ ಗುಲಾಮಗಿರಿಯಂತಹ ಪರಿಸ್ಥಿತಿಗಳಲ್ಲಿ ಉಳಿದಿದ್ದಾರೆ” ಎಂದು ಗೃಹ ಕಾರ್ಮಿಕರ ಸಂಘಟನೆ ತಿಳಿಸಿದೆ.

 ಪ್ರಶ್ನೆಗಳು ಮತ್ತು ಹಕ್ಕೊತ್ತಾಯಗಳು: 
1. ಗೃಹ ಕಾರ್ಮಿಕರನ್ನು ಗುರುತಿಸುವ ಮತ್ತು ಅವರನ್ನು ಘನತೆಯಿಂದ ನಡೆಸಿಕೊಳ್ಳುವ ಉದ್ದೇಶದ ಬಗ್ಗೆ ಸರ್ಕಾರವು ಗಂಭೀರವಾಗಿದೆಯೇ..? ಅಸಂಘಟಿತ ಕಾರ್ಮಿಕ ವಲಕ್ಕೆ ಸರ್ಕಾರವು ನಿಗದಿ ಪಡಿಸಿದ ಹಣಕಾಸಿನ(ಬಜೆಟ್) ಹಂಚಿಕೆಯ ಬಗೆಗಿನ ವಿವರದ ಮಾಹಿತಿ ಜನರಿಗೆ ಯಾಕೆ ತಲುಪುವುದಿಲ್ಲ..?

2. ಯೋಜನೆಯಿಲ್ಲದ, ಯಾವುದೇ ಪ್ರಯೋಜನಗಳಿಲ್ಲದ, ಕೇವಲ ಪ್ಲಾಸ್ಟಿಕ್ ಪೇಪರ್ ಕಾರ್ಡ್ ಏನು ಸೇವೆ ನೀಡುತ್ತದೆ..?

3. 2016 ರಿಂದ 2021ರ ಈ ನಾಲ್ಕು ವರ್ಷಗಳು ಕಳೆದರು ಸರ್ಕಾರವು ತೀವ್ರ ಮಂದಗತಿಯಲ್ಲಿ ಗೃಹ ಕಾರ್ಮಿಕರನ್ನು ತಲುಪಿರುವುದಾದರು ಯಾಕೆ..? ಗೃಹ ಕಾರ್ಮಿಕರು ಬಹುತೇಕರು ದಲಿತರು ಮತ್ತು ಮುಸ್ಲಿಮರು ಎಂಬ ಕಾರಣಕ್ಕೆ ಸರ್ಕಾರದ ಕಣ್ಣಿಗೆ ಕಾಣಿಸುತ್ತಿಲ್ಲವೆ..?

4.2020-2021ರ ಈ ಎರಡು ವರ್ಷಗಳ ಭೀಕರ ಕೊರೊನಾ ಪರಿಸ್ಥಿತಿಯಲ್ಲಿ ಕೆಲಸಗಳಿಲ್ಲದೆ, ಯಾವುದೇ ಆದಾಯವಿಲ್ಲದೆ, ಸರ್ಕಾರದ ಯಾವ ಸೌಲಭ್ಯಗಳಿಲ್ಲದೆ, ಕಡಿಮೆ ವೈದ್ಯಕೀಯ ಸೌಲಭ್ಯಗಳ ಪರಿಸ್ಥಿತಿಯಲ್ಲಿ ಸ್ಮಾರ್ಟ್ ಕಾರ್ಡ್ ನೋಂದಾವಣಿಯನ್ನು ಏಕೆ ನಿಲ್ಲಿಸಲಾಯಿತು..?

5. ವಲಸೆ ಗೃಹ ಕಾರ್ಮಿಕರನ್ನು ಸ್ಮಾರ್ಟ್ ಕಾರ್ಡ್ ಯೋಜನೆಯಿಂದ ಏಕೆ ಹೊರಗಿಡಲಾಗಿದೆ..? ಮಾಲೀಕರ ಮನೆಯಲ್ಲೇ ಉಳಿದುಕೊಂಡು ಕೆಲಸ ಮಾಡುವ ಮಹಿಳಾ ಕಾರ್ಮಿಕರು ಒಂದು ರೀತಿಯ ಜೀತವನ್ನು ಪ್ರತಿ ದಿನವೂ ಅನುಭವಿಸುತ್ತಿದ್ದಾರೆ ಇವರ ಬಗೆಗೆ ನಿಮ್ಮ ನಿಲುವೇನು..?

6. ಮಾಲೀಕರ ವಿವರಗಳನ್ನು ಮಂಡಳಿಯಲ್ಲಿ ಏಕೆ ನೋಂದಾಯಿಸಲಾಗಿಲ್ಲ..?

7. ಸೆಪ್ಟೆಂಬರ್ 2021 ರಿಂದ ಸ್ಮಾರ್ಟ್ ಕಾರ್ಡ್ ನೋಂದಾವಣೆಯಲ್ಲಿ BPL/PPH ಕಾರ್ಡ್‌ಗಳನ್ನು ಏಕೆ ಹೊಸದಾಗಿ ಪರಿಚಯಿಸಬೇಕು.? ಸರ್ಕಾರ ಗೃಹ ಕಾರ್ಮಿಕರ ಕಲ್ಯಾಣವನ್ನು ಬಯಸುವುದಾದರೆ ಕಲ್ಯಾಣ ಯೋಜನೆಗಳಲ್ಲಿ ತಾರತಮ್ಯ ಏಕೆ..?

8. ಸಮತೆಯ ಹರಿಕಾರ ಡಾ. ಬಿ. ಆರ್ ಅಂಬೇಡ್ಕರ್ ಅವರ ಹೆಸರನ್ನು ಹೊಂದಿರುವ ಯೋಜನೆಯಡಿಯಲ್ಲಿ ಸಂವಿಧಾನದಲ್ಲಿನ ಎಲ್ಲಾ ತತ್ವಗಳನ್ನು ಉಲ್ಲಂಘಿಸಲಾಗಿದ್ದು ಇದು ನಿರ್ಲಜ್ಜವಾಗಿ ನಡೆಯುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.

9. ಕೋವಿಡ್ ತಂದೊಡ್ಡಿದ್ದ ಭೀಕರ ಪರಿಸ್ಥಿತಿಯಲ್ಲಿ ಕಾರ್ಮಿಕಾ ಕೋಡ್ ಅನ್ನು ಕಾರ್ಮಿಕರ ಹಿತಾಸಕ್ತಿ ಇಲ್ಲದೆ, ನ್ಯಾಯ ಸಮ್ಮತ ಇಲ್ಲದೆ ಅಂಗೀಕರಿಸಿರುವುದು ಸರ್ಕಾರದ ಕಾರ್ಮಿಕ ವಿರೋಧಿ ಧೋರಣೆ ತೋರಿಸುವುದಿಲ್ಲವೇ..?

10. “ರೈತರು ಮತ್ತು ಕಾರ್ಮಿಕರನ್ನು” ದ್ರೋಹ ಬಗೆದವರು ಎಂಬ ರೀತಿಯಲ್ಲಿ ಕಾಣುವ ರಾಜ್ಯದಲ್ಲಿ ಯಾವುದೇ ಗೌರವ ಇಲ್ಲದೇ ಗೃಹ ಕಾರ್ಮಿಕರನ್ನು ಪ್ರತ್ಯೇಕವಾಗಿ ಕಾಣುತ್ತಿರುವುದಾದರೂ ಯಾಕೆ..? ಪ್ರತಿ ಸಲ ನಾವು “ರಾಷ್ಟ್ರ ವಿರೋಧಿಗಳು” ಎಂಬ ಪದವನ್ನು ಕೇಳಿಸಿಕೊಳ್ಳುತ್ತಿದ್ದೇವೆ. ಹಾಗಾದರೆ ಯಾರು ನಿಮ್ಮ ಪ್ರಕಾರ ರಾಷ್ಟ್ರ ವಿರೋಧಿಗಳು..?

ಎಂಬ 10 ಪ್ರಶ್ನೆಗಳನ್ನು ಇಟ್ಟುಕೊಂಡು, ಘನತೆ, ಮನ್ನಣೆ ಮತ್ತು ಸಾಮಾಜಿಕ ಭದ್ರತೆಗೆ ಆಗ್ರಹಿಸಿ ಮಹಿಳಾ ಚಲೋ ನಡೆಸಲು ನಿರ್ಧರಿಸಲಾಗಿದೆ.


ಇದನ್ನೂ ಓದಿ: ಟ್ರ್ಯಾಕ್ಟರ್ ರ್‍ಯಾಲಿ ವೇಳೆ ಬಂಧಿತರಾಗಿದ್ದ 83 ಮಂದಿಗೆ ತಲಾ 2 ಲಕ್ಷ ರೂ. ಪರಿಹಾರ:ಪಂಜಾಬ್ ಸರ್ಕಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read