Homeಚಳವಳಿಟ್ರ್ಯಾಕ್ಟರ್ ರ್‍ಯಾಲಿ ವೇಳೆ ಬಂಧಿತರಾಗಿದ್ದ 83 ಮಂದಿಗೆ ತಲಾ 2 ಲಕ್ಷ ರೂ. ಪರಿಹಾರ: ಪಂಜಾಬ್‌...

ಟ್ರ್ಯಾಕ್ಟರ್ ರ್‍ಯಾಲಿ ವೇಳೆ ಬಂಧಿತರಾಗಿದ್ದ 83 ಮಂದಿಗೆ ತಲಾ 2 ಲಕ್ಷ ರೂ. ಪರಿಹಾರ: ಪಂಜಾಬ್‌ ಸರ್ಕಾರ

- Advertisement -
- Advertisement -

ಕಳೆದ ಗಣರಾಜ್ಯೋತ್ಸವದಂದು ರೈತರು ದೆಹಲಿಯಲ್ಲಿ ಟ್ರ್ಯಾಕ್ಟರ್ ರ್‍ಯಾಲಿ ಹಮ್ಮಿಕೊಂಡಿದ್ದರು. ಕೆಲವು ಕಿಡಿಗೇಡಿಗಳಿಂದಾಗಿ ಹಿಂಸಾಚಾರ ಸಂಭವಿಸಿದ ನಂತರ ದೆಹಲಿ ಪೊಲೀಸರು 83 ಮಂದಿಯನ್ನು ಬಂಧಿಸಿದ್ದರು. ಅಂದು ಬಂಧಿತರಾಗಿದ್ದವರಿಗೆ ಪಂಜಾಬ್ ಸರ್ಕಾರ ಆರ್ಥಿಕ ಸಹಾಯವನ್ನು ಘೋಷಿಸಿದೆ. ಈ ಮೂಲಕ ಕೇಂದ್ರದ ವಿರುದ್ಧ ಪಂಜಾಬ್‌ನಲ್ಲಿರುವ ಕಾಂಗ್ರೆಸ್ ಸರ್ಕಾರ ಹೊಸ ಹೋರಾಟಕ್ಕೆ ಮುನ್ನುಡಿ ಬರೆದಿದೆ.

ಖಾಸಗಿಯವರ ಹಿಡಿತಕ್ಕೆ ಕೃಷಿ ವಲಯವನ್ನು ದೂಡುವ ಮೂರು ಹೊಸ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸಿ ಒಂದು ವರ್ಷದಿಂದ ದೆಹಲಿಯಲ್ಲಿ ಪಂಜಾಬ್‌ ಹಾಗೂ ಹರಿಯಾಣ ರೈತರು ಹೋರಾಟ ನಡೆಸುತ್ತಿದ್ದಾರೆ. ವಿವಾದಿತ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಪಟ್ಟು ಹಿಡಿದಿದ್ದಾರೆ.

ದೆಹಲಿ ಪೊಲೀಸರು ಮತ್ತು ರೈತ ಮುಖಂಡರ ನಡುವಿನ ಮಾತುಕತೆಯ ನಂತರ ಕಳೆದ ಜನವರಿ 26ರಂದು ರೈತರಿಂದ ಟ್ರ್ಯಾಕ್ಟರ್ ರ್‍ಯಾಲಿ ನಡೆಯಲು ಅನುಮತಿ ದೊರೆಯಿತು. ಪ್ರಭುತ್ವದೊಂದಿಗೆ ಗುರುತಿಸಿಕೊಂಡಿದ್ದ ಕೆಲವು ಕಿಡಿಗೇಡಿಗಳು ರೈತ ಚಳವಳಿಗೆ ಕೆಟ್ಟ ಹೆಸರು ತರುವ ಪ್ರಯತ್ನವನ್ನು ಟ್ರ್ಯಾಕ್ಟರ್ ರ್‍ಯಾಲಿಯಂದು ಮಾಡಿದ್ದರು.

“ಪ್ರತಿಭಟನಾಕಾರರ ಗುಂಪುಗಳು ಪೂರ್ವ ನಿಯೋಜಿತ ಮಾರ್ಗವನ್ನು ಅನುಸರಿಸಲಿಲ್ಲ. ದೆಹಲಿ ಪ್ರವೇಶಿಸಲು ಬ್ಯಾರಿಕೇಡ್‌ಗಳನ್ನು ದ್ವಂಸ ಮಾಡಿದರು. ಕೆಂಪು ಕೋಟೆಯನ್ನು ಪ್ರವೇಶಿಸಿ, ಅನಪೇಕ್ಷಿತ ಬಾವುಟವನ್ನು ಹಾರಿಸಿದರು” ಎಂದು ಪೊಲೀಸರು ಆರೋಪಿಸಿದ್ದರು.

ಹೊಸ ಬೆಳವಣಿಗೆಯಲ್ಲಿ ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಟ್ವೀಟ್‌ ಮಾಡಿದ್ದು, “ದೆಹಲಿ ಪೊಲೀಸರಿಂದ ಬಂಧಿಸಲ್ಪಟ್ಟವರಿಗೆ ತಮ್ಮ ಸರ್ಕಾರ ಪರಿಹಾರವನ್ನು ನೀಡಲಿದೆ” ಎಂದು ಘೋಷಿಸಿದ್ದಾರೆ.

“ಮೂರು ಕರಾಳ ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಬೆಂಬಲಿಸುವ ನನ್ನ ಸರ್ಕಾರದ ನಿಲುವನ್ನು ಪುನರುಚ್ಚರಿಸುತ್ತೇನೆ. ಜನವರಿ 26, 2021ರಂದು ರಾಷ್ಟ್ರದ ರಾಜಧಾನಿಯಲ್ಲಿ ಟ್ರ್ಯಾಕ್ಟರ್ ರ್‍ಯಾಲಿ ನಡೆಸಿದಕ್ಕಾಗಿ ದೆಹಲಿ ಪೊಲೀಸರು ಬಂಧಿಸಿದ 83 ಜನರಿಗೆ ತಲಾ 2 ಲಕ್ಷ ರೂ. ಪರಿಹಾರವನ್ನು ನೀಡಲು ನಿರ್ಧರಿಸಿದ್ದೇವೆ” ಎಂದು ಮುಖ್ಯಮಂತ್ರಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿರಿ: ರೈತ ಹೋರಾಟ: ಸಿಂಘು ಗಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ರೈತರ ಮೃತದೇಹ ಪತ್ತೆ

ಅಷ್ಟೇ ಅಲ್ಲದೆ ಒಕ್ಕೂಟ ಸರ್ಕಾರದ ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ಪಂಜಾಬ್ ವಿಧಾನಸಭೆ ಗುರುವಾರ ನಿರ್ಣಯ ಅಂಗೀಕರಿಸಿದೆ. ಕೇಂದ್ರ ಸರ್ಕಾರ ಕಾನೂನುಬಾಹಿರವಾಗಿ ರಾಜ್ಯ ಸರ್ಕಾರದ ವಿಷಯಗಳಲ್ಲಿ ಪ್ರವೇಶಿಸಿದೆ ಎಂದು ಪಂಜಾಬ್ ಸರ್ಕಾರ ತಿಳಿಸಿದೆ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕ್ಯಾಪ್ಟನ್‌ ಅಮರಿಂದರ್ ಸಿಂಗ್ ಪಂಜಾಬ್ ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರದ ಮೂರು ಕೃಷಿ ಕಾನೂನುಗಳ ವಿರುದ್ಧ ವಿಧಾನಸಭೆ ನಿರ್ಣಯ ಅಂಗೀಕರಿಸಿತ್ತು. ಈಗ ಎರಡನೇ ಬಾರಿ  ಸಿಎಂ ಚರಣ್‌ಜಿತ್ ಸಿಂಗ್ ಚನ್ನಿ ನೇತೃತ್ವದಲ್ಲಿ ನಿರ್ಣಯ ಅಂಗೀಕರಿಸಲಾಗಿದೆ.

ಎರಡು ದಿನಗಳ ವಿಧಾನಸಭೆ ಅಧಿವೇಶನದ ಮುಕ್ತಾಯದ ದಿನದಂದು ರಾಜ್ಯ ಕೃಷಿ ಸಚಿವ ರಣದೀಪ್ ಸಿಂಗ್ ನಾಭಾ ಅವರು ನಿರ್ಣಯ ಮಂಡಿಸಿದರು. ಸದನದಲ್ಲಿ ಚರ್ಚೆಯ ನಂತರ ಇಬ್ಬರು ಬಿಜೆಪಿ ಶಾಸಕರ ಅನುಪಸ್ಥಿತಿಯಲ್ಲಿ ನಿರ್ಣಯವನ್ನು ಅಂಗೀಕರಿಸಲಾಗಿದೆ.

“ನವೆಂಬರ್ 11, 2021ರಂದು ನಡೆದ ಈ ವಿಧಾನ ಸಭೆಯ ವಿಶೇಷ ಅಧಿವೇಶನದಲ್ಲಿ ಪಂಜಾಬ್ ಕೃಷಿ ಸಚಿವರು ಮಂಡಿಸಿದ ನಿರ್ಣಯ ಸದನದಲ್ಲಿ ಅಂಗೀಕರಿಸಲ್ಪಟ್ಟಿದೆ. ಕೇಂದ್ರ ಸರ್ಕಾರವು ಯಾವುದೇ ಅರ್ಹತೆ ಇಲ್ಲದೆ ರಾಜ್ಯಗಳ ಪಟ್ಟಿಯಲ್ಲಿನ ವಿಷಯದಲ್ಲಿ ಕಾನೂನುಬಾಹಿರವಾಗಿ ಜಾರಿಗೆ ತಂದ ಮೂರು ವಿವಾದಾತ್ಮಕ ಕಾನೂನುಗಳನ್ನು ಮತ್ತೊಮ್ಮೆ ತಿರಸ್ಕರಿಸುತ್ತದೆ” ಎಂದು ಹೇಳಿದೆ.

ಮೂರು ಕೃಷಿ ಕಾನೂನುಗಳನ್ನು “ಫೆಡರಲ್ ರಚನೆಯ ಮೇಲಿನ ದಾಳಿ” ಎಂದು ವಿವರಿಸಿರುವ ರಾಜ್ಯ ಕೃಷಿ ಸಚಿವ ರಣದೀಪ್ ಸಿಂಗ್ ನಾಭಾ, ಪಂಜಾಬ್ ಸರ್ಕಾರವು ಇವುಗಳನ್ನು ಜಾರಿಗೆ ತರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ನಿರ್ಣಯದ ಪ್ರಕಾರ, ವಿಧಾನ ಸಭೆಯು “ರೈತ ಸ್ನೇಹಿ ನಿಯಂತ್ರಿತ ಎಪಿಎಂಸಿ ಮಂಡಿಗಳನ್ನು ವ್ಯವಸ್ಥಿತವಾಗಿ ಕಿತ್ತುಹಾಕುವ ಮತ್ತು ಕಾರ್ಪೋರೇಟ್ ಸ್ನೇಹಿ ಮಂಡಿಗಳನ್ನು ಸ್ಥಾಪಿಸುವ” ಗುರಿಯನ್ನು ಹೊಂದಿರುವ ಕೇಂದ್ರ ಸರ್ಕಾರದ ಪ್ರಯತ್ನಗಳನ್ನು ಬಲವಾಗಿ ಖಂಡಿಸುತ್ತದೆ” ಎಂದಿದೆ.
ಇದನ್ನೂ ಓದಿರಿ: ‘ಕನ್ನಡ ಮಾತಾಡಿ’ ಎಂದ ರೈತನಿಗೆ ಧಮಕಿ ಹಾಕಿದ ಹಿಂದಿ ಭಾಷಿಗ ಬ್ಯಾಂಕ್‌ ಸಿಬ್ಬಂದಿ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...