ಫ್ಯೊದೋರ್ ಮಿಖಾಯ್ಲೊವಿಚ್ ದಾಸ್ತಯೆವ್‌ಸ್ಕಿ ಹುಟ್ಟಿ ಇದೇ ಅಕ್ಟೋಬರ್ ಮೂವತ್ತಕ್ಕೆ ಇನ್ನೂರು. (ರಶಿಯದ ಕ್ಯಾಲೆಂಡರ್ ಪ್ರಕಾರ 30 ಅಕ್ಟೋಬರ್ 1821 ರಿಂದ 28 ಜನವರಿ 1881). ಆಧುನಿಕ ಕ್ಯಾಲೆಂಡರ್‌ನಲ್ಲಿ ನವೆಂಬರ್ 11. ಇನ್ನೊಬ್ಬ ಮಹಾ ಲೇಖಕ ಲಿಯೊ ಟಾಲ್ಸ್ಟಾಯ್ (1828-1910)ಗಿಂತ ಏಳು ವರ್ಷ ದೊಡ್ಡವನು. ಈ ಇಬ್ಬರೂ ಕಾದಂಬರಿಕಾರರು ನಿಜವಾದ ಮಹಾನ್ ಲೇಖಕರು. ಗಮನವಿಟ್ಟು ಓದುವವರ ಚಿಂತನೆ, ಜೀವನದೃಷ್ಟಿ, ಬದುಕನ್ನು ಕಾಣುವ ರೀತಿ ಎಲ್ಲವನ್ನೂ ಬದಲಾಯಿಸಬಲ್ಲಷ್ಟು ಸಮರ್ಥ ಲೇಖಕರು. ಕಳೆದ ಇನ್ನೂರು ವರ್ಷಗಳಲ್ಲಿ ಇವರಿಬ್ಬರನ್ನು ಮೀರಿಸುವ ಕಾದಂಬರಿಕಾರರು ಬಂದಿಲ್ಲವೆಂದರೆ ಅದು ಅತಿಶಯೋಕ್ತಿಯಂತೆ ಕಂಡರೂ ಸತ್ಯವಾದ ಮಾತು.
ಈ ಇಬ್ಬರೂ ಸಮಕಾಲೀನರಾದರೂ ಉತ್ತರಧ್ರುವ ದಕ್ಷಿಣಧ್ರುವದಷ್ಟು ಅಂತರ ಅವರಿಬ್ಬರ ನಡುವೆ. ದಾಸ್ತಯೆವ್‌ಸ್ಕಿಯ ’ಕ್ರೈಮ್ ಅಂಡ್ ಪನಿಶ್ಮೆಂಟ್’ ಹಾಗೂ ಟಾಲ್ಸ್ಟಾಯ್‌ನ ’ವಾರ್ ಅಂಡ್ ಪೀಸ್’ ಕಾದಂಬರಿಗಳು ಏಕಕಾಲದಲ್ಲಿ ಧಾರಾವಾಹಿಯಾಗಿ ಪ್ರಕಟವಾದವು. ಮನುಷ್ಯರ ಬದುಕನ್ನು ಬದಲಿಸಬಲ್ಲ ಸಾಮರ್ಥ್ಯವಿರುವ ನಾಯಕ ಯಾವ ಅಪರಾಧವನ್ನಾದರೂ ಮಾಡಿ ಜಯಿಸಬಲ್ಲನೋ ಅಥವಾ ಅಗಾಧ ಅನಂತ ಬದುಕಿನಲ್ಲಿ ಯಾರೊಬ್ಬರೂ ನಿರ್ಣಾಯಕರಲ್ಲ, ಮುಖ್ಯರಲ್ಲ, ಅಮುಖ್ಯರೂ ಅಲ್ಲ ಅನ್ನುವುದು ನಿಜವೋ ಅನ್ನುವುದನ್ನು ಈ ಎರಡೂ ಕಾದಂಬರಿಗಳು ಪರಿಶೀಲಿಸಿವೆ. ಈ ಹೊತ್ತಿಗೂ ಓದುಗರಲ್ಲಿ ಟಾಲ್ಸ್ಟಾಯ್ ಅಥವಾ ದಾಸ್ತಯೆವ್‌ಸ್ಕಿ ಇಬ್ಬರಲ್ಲಿ ಯಾರು ಹೆಚ್ಚು ಅನ್ನುವ ಚರ್ಚೆ ನಡೆದೇ ಇದೆ.
ಟಾಲ್ಸ್ಟಾಯ್ ಕಂಡ ಮಹಾನಗರದಾಸ್ತಯೆವ್‌ಸ್ಕಿಗೆ ಕಾಣುವ ರೀತಿ ಬೇರೆ. ಟಾಲ್ಸ್ಟಾಯ್‌ಗೆ ಕಂಡ ಸಮೃದ್ಧ ಶ್ರೀಮಂತಿಕೆಯ ಬದುಕಿಗೆ ಬದಲಾಗಿ, ದಾರುಣ, ವೇದನಾಪೂರ್ಣ, ಕಂಗಾಲು ಜನ ದಾಸ್ತಯೆವ್‌ಸ್ಕಿಯ ಲೋಕದ ಮುಖ್ಯ ಪಾಲುದಾರರು. ಟಾಲ್ಸ್ಟಾಯ್ ವಿಸ್ತಾರ ನಿರೂಪಣೆಯಲ್ಲಿ ಬದುಕಿನ ಹರಿವನ್ನು ಚಿತ್ರಿಸಿದರೆ ದಾಸ್ತಯೆವ್‌ಸ್ಕಿ ಇಕ್ಕಟ್ಟಿನ ಕಿರು ವಿಸ್ತಾರದ ಸ್ಥಳದಲ್ಲಿ ಮನೋಲೋಕದ ಅನಂತ ವೈವಿಧ್ಯಗಳನ್ನು ಇನ್ನಿಲ್ಲದ ಹಾಗೆ ಚಿತ್ರಿಸುತ್ತಾನೆ. ಕೆಡುಕಿನ ಪ್ರಶ್ನೆ, ಕೆಡುಕಿನ ಮೂಲ, ಕೆಡುಕನ್ನು ಮೀರುವ ದಾರಿ ದಾಸ್ತಯೆವ್‌ಸ್ಕಿಯ ಮುಖ್ಯ ಹುಡುಕಾಟಗಳು. ಹಾಗೆಯೇ ಅತ್ಯಂತ ತೀವ್ರವಾಗಿ ನಾಸ್ತಿಕತೆಯನ್ನೂ ಧರ್ಮನಿಷ್ಠತೆಯನ್ನೂ ಪರೀಕ್ಷೆಗೆ ಒಡ್ಡುತ್ತಾನೆ. ಇಬ್ಬರೂ ಲೇಖಕರು ಬದುಕಿನ ತಳಹದಿ ಏನು ಅನ್ನುವುದನ್ನು ಬಗೆದು ನೋಡುವವರು.
ದಾಸ್ತಯೆವ್‌ಸ್ಕಿ ಧರ್ಮನಿಷ್ಠ ಕುಟುಂಬದ ಮಗು. ಅವರಪ್ಪ ಮಾತ್ರ ಅಸಮಾನ ಕ್ರೂರಿ, ಅಮ್ಮ ಅಪಾರ ಕರುಣೆಯವಳು. ಅವನ ಹತ್ತು ಹನ್ನೊಂದನೆಯ ವಯಸಿನ ಹೊತ್ತಿಗೆ ಅಮ್ಮ ತೀರಿಕೊಂಡಳು. ದಾಸ್ತಯೆವ್‌ಸ್ಕಿಗೆ ಹತ್ತೊಂಬತ್ತು ಆಗುವ ಹೊತ್ತಿಗೆ ಅಪ್ಪನ ಕೊಲೆಯಾಯಿತು. ಶ್ರೀಮಂತಿಕೆಯೇನೂ ಇರದಿದ್ದ ದಾಸ್ತಯೆವ್‌ಸ್ಕಿಯ ಮನಸ್ಸು ದೇಹ ಎರಡೂ ಅಸ್ಥಿರವಾಗಿದ್ದವು, ಮೂರ್ಛೆ ರೋಗಕ್ಕೆ ತುತ್ತಾಗಿದ್ದ ಅನ್ನುವ ವಿವರಗಳು ದೊರೆಯುತ್ತವೆ. ಅವನು ಓದಿದ್ದು ಮಿಲಿಟರಿ ಎಂಜಿನಿಯರಿಂಗ್, ಆದರೆ ಆಯ್ಕೆ ಮಾಡಿಕೊಂಡದ್ದು ಬರಹಗಾರನ ವೃತ್ತಿ. ಹೆಂಡತಿಯ ಜೊತೆಗೆ ಹೊಂದಾಣಿಕೆಯಾಗಲಿಲ್ಲ, ಹಲವು ಮಹಿಳೆಯರ ಗೆಳೆತನವೂ ಇತ್ತು, ಅನಾರೋಗ್ಯದ, ಅನಿಶ್ಚಿತತೆಯ, ಅಭದ್ರತೆಯ ದಿನಗಳೇ ಅವನ ಪಾಲಿಗೆ ಹೆಚ್ಚಾಗಿದ್ದವು. ಪತ್ರಿಕೆಯ ಸಂಪಾದಕನಾಗಿ, ಕಥೆಗಾರ, ಕಾದಂಬರಿಕಾರನಾಗಿ ಬೆಳೆಯುತ್ತಿದ್ದ ಹಾಗೇ ಸಾಮಾಜಿಕ ಬದಲಾವಣೆಯಲ್ಲೂ ಆಸಕ್ತಿ ತೋರುತ್ತ, ನಿಷಿದ್ಧ ಕ್ರಾಂತಿಕಾರೀ ಸಾಹಿತ್ಯ ಓದಿದ, ಆಡಳಿತ ವಿರೋಧೀ ಚಟುವಟಿಕೆಯಲ್ಲಿ ತೊಡಗಿದ್ದ ಎಂದು ಮರಣದಂಡನೆಗೂ ಗುರಿಯಾದ. ಕೊನೆಯ ಗಳಿಗೆಯಲ್ಲಿ ಅದು ಗಡೀಪಾರು ಶಿಕ್ಷೆಯಾಗಿ ಬದಲಾಯಿತು. ಮೂರ್ಛೆಯ ರೋಗವೇ ಕಾರಣವಾಗಿ ಅವನು ಅರವತ್ತೊಂದನೆಯ ವಯಸಿನಲ್ಲಿ ತೀರಿಕೊಂಡ.
ದಾಸ್ತಯೆವ್‌ಸ್ಕಿ ಹನ್ನೆರಡು ಕಾದಂಬರಿ, ಹದಿನೆಂಟು ಸಣ್ಣಕಥೆ, ನಾಲ್ಕು ಕಿರು ಕಾದಂಬರಿಗಳನ್ನು, ಇನ್ನೂರಕ್ಕೂ ಹೆಚ್ಚು ಲೇಖನ, ಮೂರು ನಾಟಕಗಳನ್ನು ಪ್ರಕಟಿಸಿದ. ಇವಲ್ಲದೆ ಅವನ ಪತ್ರಗಳು, ಡೈರಿ ಕೂಡ ಪ್ರಸಿದ್ಧವಾಗಿವೆ. ನೋಟ್ಸ್ ಫ್ರಂ ಅಂಡಗ್ರೌಂಡ್ (1864), ಕ್ರೈಂ ಅಂಡ್ ಪನಿಶ್ಮೆಂಟ್ (1866), ದಿ ಈಡಿಯಟ್ (1899), ದಿ ಬ್ರದರ್ಸ್ ಕರಮಝೋವ್ (1880) ಅವನ ಪ್ರಸಿದ್ಧ ಕಾದಂಬರಿ, ಕಿರುಕಾದಂಬರಿಗಳು.
ಕನ್ನಡದಲ್ಲಿ ನನಗೆ ತಿಳಿದಿರುವಂತೆ ಕ್ರೈಂ ಅಂಡ್ ಪನಿಶ್ಮೆಂಟ್ ಕಾದಂಬರಿಯ ಎರಡು ಅನುವಾದಗಳಿವೆ. ಎಸ್.ಎಂ. ಅಂಗಡಿಯವರು ಮತ್ತು ಗೋಪಾಲಕೃಷ್ಣರಾಯರು ಅನುವಾದಿಸಿದ್ದಾರೆ. ದಾಸ್ತಯೆವ್‌ಸ್ಕಿಯ ಆಯ್ದ ಐದು ಕಥೆಗಳನ್ನು ಗೋಪಾಲಕೃಷ್ಣರಾಯರು ಅನುವಾದಿಸಿದ್ದಾರೆ. ಗೌತಂ ಜೋತ್ಸ್ನಾ ಅವರು ’ನೋಟ್ಸ್ ಫ್ರಂ ಅಂಡಗ್ರೌಂಡ್’ಅನ್ನು ’ಅಧೋಲೋಕದ ಟಿಪ್ಪಣಿಗಳು’ ಎಂದು ಅನುವಾದಿಸಿದ್ದಾರೆ. ಬ್ರದರ್ಸ್ ಕರಮಜೋವ್ ಕಾದಂಬರಿಯನ್ನು ಕೆ. ಶ್ರೀನಾಥ್ ’ಕರಮಜೋವ್ ಸಹೋದರರು’ ಎಂದು ಅನುವಾದಿಸಿದ್ದಾರೆ. ಇದೇ ಕಾದಂಬರಿಯನ್ನು ರಘುನಾಥ್ ಅನುವಾದಿಸಿದ್ದು ಅದೂ ಸದ್ಯದಲ್ಲೇ ಪ್ರಕಟವಾಗಲಿದೆ ಎಂಬ ಮಾಹಿತಿ ಇದೆ.
’ಕ್ರೈಂ ಅಂಡ್ ಪನಿಶ್ಮೆಂಟ್’ನ ನನ್ನ ಅನುವಾದವು ವಿಸ್ತಾರವಾದ ಪ್ರಸ್ತಾವನೆ, ಪೂರಕ ಮಾಹಿತಿ, ಕಿರು ವಿಶ್ಲೇಷಣೆಗಳೊಡನೆ ಸದ್ಯದಲ್ಲೇ ಮೈಸೂರಿನ ಅಭಿರುಚಿ ಪ್ರಕಾಶನದಿಂದ ಪ್ರಕಟಗೊಳ್ಳಲಿದೆ.
ದಾಸ್ತಯೆವ್‌ಸ್ಕಿ ಭಾವ ತುಂಬಿದ ಚಿತ್ರಗಳ ಚಾದರವನ್ನು ನೇಯುವವನು ಅನಿಸುತ್ತದೆ. ಈ ಕಾದಂಬರಿಯಲ್ಲಿ ಹಲವು ಥೀಮು, ಹಲವು ಸಾಹಿತ್ಯ ಪ್ರಕಾರ, ಹಲವು ಶೈಲಿಗಳ ನೇಯ್ಗೆ ಇದೆ. ರಾಸ್ಕೋಲ್ನಿಕೋವ್‌ನ ನಾಸ್ತಿಕ ಮಾನವತಾವಾದ, ಸೋನಿಯಾಳ ಅಚಲ ಧರ್ಮಶ್ರದ್ಧೆಗಳ ಮುಖಾಮುಖಿ ಧರ್ಮದ ಪ್ರಶ್ನೆಯನ್ನು ನಾಟಕಗೊಳಿಸಿದ ಹಾಗಿದೆ. ಮಾರ್ಮೆಲಡೋವ್‌ನ ಸಂಸಾರದ ಕಥೆ ನ್ಯಾಚುರಲಿಸಿಂನ ಮಾದರಿಯನ್ನು ನಮ್ಮ ಮುಂದಿಡುತ್ತದೆ. ಸ್ವಿದ್ರಿಗೈಲೋವ್‌ನ ಕಥೆ ಭೀಕರತೆ ತುಂಬಿದ ಮೆಲೊಡ್ರಾಮ. ಓದುಗರಿಗೆ ತಿಳಿದಿರುವ ಕೊಲೆಗಾರನನ್ನು ಮನಸಿನ ಆಟದ ಮೂಲಕ ಹಿಡಿಯುವ ಪತ್ತೇದಾರಿಕೆಯ ಕಥೆಯೂ ಇದೆ. ಕಾದಂಬರಿಯ ಉದ್ದಕ್ಕೂ ಆದರ್ಶಮಯ ತತ್ವದ ಚಿಂತನೆಯ ಸಂಭಾಷಣೆಯೋ ತುಣಕುಗಳೋ ಇವೆ, ಗಾದೆ ಪಡಿನುಡಿಗಳಿವೆ, ಅವೆಲ್ಲವೂ ಈ ಕಾದಂಬರಿ ರಚನೆಗೊಂಡ 1860ರ ಅವಧಿಯ ಸಾಮಾಜಿಕ ಚರ್ಚೆಗಳ ಪ್ರತಿಧ್ವನಿಯಾಗಿಯೂ ಕೇಳುತ್ತವೆ. ವಿಡಂಬನೆಯಂತೂ ಕಾದಂಬರಿಯುದ್ದಕ್ಕೂ ಇದೆ. ಉದಾಹರಣೆಗೆ ಸಮಾಜವಾದಿಯಾದ ಲೆಬಿಸ್ಯಾತ್ನಿಕೋವ್‌ನ ಪಾತ್ರ, ತಿರಸ್ಕಾರಕ್ಕೆ ಯೋಗ್ಯರಾದ ಜರ್ಮನ್ ಓನರಮ್ಮಗಳು, ಅಸಹ್ಯ ಹುಟ್ಟಿಸುವ ತಲೆಹಿಡುಕಿಯರು ಹೀಗೆ.
ಇದು ಮನಸಿನ ಲೋಕದ ಚಿತ್ರಣವಿರುವ ಹಾಗೆಯೇ ಬೇರೆಬೇರೆ ಲೋಕದೃಷ್ಟಿಗಳ ಸೆಣೆಸಾಟದ ಕಥೆ ಕೂಡ. ಕಾದಂಬರಿಯ ಕ್ರಿಯೆಗೆ ಮೂರು ಪದರಗಳಿವೆ. ಘಟನೆ ಮತ್ತು ಸಂಭಾಷಣೆಗಳ ಪದರದ ಮೂಲಕ ಓದುಗರಿಗೆ ದೊರೆಯುವ ಕಥೆ; ಪಾತ್ರಗಳ ಮನೋಲೋಕದ ವ್ಯವಹಾರಗಳನ್ನು ಅರಿಯುವುದರಿಂದ ದೊರೆಯುವ ಕಥೆ; ಜೊತೆಗೆ ತಾತ್ವಿಕ ವಾದ ವಿವಾದಗಳ ಕಥೆ. ಈ ಎಲ್ಲ ಪದರಗಳನ್ನು ಒಟ್ಟುಗೂಡಿಸಿ ಹಿಡಿದಿಟ್ಟಿರುವುದು ’ಒಳ್ಳೆಯದು ಎಂದರೇನು, ಯಾವುದು ಒಳ್ಳೆಯದು’ ಅಥವಾ ಕೆಡುಕನ್ನು ಅರ್ಥಮಾಡಿಕೊಳ್ಳುವುದು, ನಿವಾರಿಸುವುದು ಹೇಗೆ ಅನ್ನುವ ಪ್ರಶ್ನೆ. ಸೋನ್ಯಾಳ ಅಚಲ ಧರ್ಮಶ್ರದ್ಧೆ ಮತ್ತು ವಿನಯ, ಸ್ವಿದ್ರಿಗೈಲೋವ್‌ನ ಸ್ಚಚ್ಛಂದ ದೇಹ ಸುಖದ ಅಪೇಕ್ಷೆ, ವ್ಯಾವಹಾರಿಕ ಲಾಭವೇ ನೀತಿಯೆಂದು ಬಾಳುವ ಪೀಟರ್ ಪೆಟ್ರೊವಿಚ್ ಲುಶಿನ್, ಅಧಿಕಾರವಿದ್ದರೆ ಬದಲಾವಣೆ ಸಾಧ್ಯ, ಬದಲಾವಣೆಯಿಂದ ಮನುಷ್ಯ ಕುಲಕ್ಕೆ ಒಳಿತು ಎಂದು ನಂಬುವ ನಾಸ್ತಿಕ ನಾಯಕ ರಾಸ್ಕೋಲ್ನಿಕೋವ್ ಇವರೆಲ್ಲರ ಬದುಕಿನ ಹೆಣಿಗೆಯಲ್ಲಿ ಒಳಿತು-ಕೆಡುಕುಗಳ ಪ್ರಶ್ನೆ ಪರಿಶೀಲನೆಗೊಂಡಿದೆ. ತಾವು ಒಳಿತು ಎಂದು ನಂಬಿದ್ದನ್ನು ಕಾರ್ಯರೂಪಕ್ಕೆ ತರಲು ಹೊರಟ್ಟದ್ದೆಲ್ಲ ಉಲ್ಲಂಘನೆಯಾಗಿ, ಅಪರಾಧವಾಗಿ, ಪ್ರತಿಯೊಂದು ಉಲ್ಲಂಘನೆಗೂ, ಅಪರಾಧಕ್ಕೂ ಎಲ್ಲ ಪಾತ್ರಗಳೂ ಶಿಕ್ಷೆಯನ್ನು ಅನುಭವಿಸುವುದಿದೆ. ಇದು ಏಕಕಾಲದಲ್ಲಿ ಪತ್ತೇದಾರಿ ಕಥೆಯೂ ಹೌದು ಮಹಾನ್ ತಾತ್ವಿಕ ಪರಿಶೀಲನೆಯೂ ಹೌದು.
ಆದರೂ ಮುಖ್ಯವಾಗಿ ಈ ಕಾದಂಬರಿಯೊಂದು ’ನಾಟಕ’. ಶೇಕ್ಸ್ಪಿಯರನು ಟ್ರಾಜಿಡಿಯ ಪ್ರಕಾರದಲ್ಲಿ ಯಾವ ಸಾಧನೆ ಮಾಡಿದನೋ ಅಂಥದೇ ಸಾಧನೆಯನ್ನು ದಾಸ್ತಯೆವ್‌ಸ್ಕಿ ಕಾದಂಬರಿಯಲ್ಲಿ ಮಾಡಿದ; ಹೋಮರನ ಮಹಾಕಾವ್ಯ ಯಾವ ಸಾಧನೆಯನ್ನು ಮಾಡಿತೋ ಅಂಥದೇ ಸಾಧನೆಯನ್ನು ಕಾದಂಬರಿಯ ಪ್ರಕಾರದಲ್ಲಿ ಟಾಲ್ಸ್ಟಾಯ್ ಮಾಡಿದ; ಇವರಿಬ್ಬರೂ ಅತ್ಯಂತ ಪ್ರಾಚೀನ ಪ್ರಕಾರಗಳಾದ ಮಹಾಕಾವ್ಯ, ಟ್ರಾಜಿಡಿಗಳಿಗೆ ಹೊಸ ಮೈ, ಹೊಸ ರೂಪಕೊಟ್ಟು ಆಧುನಿಕ ಸಾಹಿತ್ಯ ಎಷ್ಟು ಉನ್ನತವಾಗಬಲ್ಲದು ಅನ್ನುವುದನ್ನು ತೋರಿಸಿಕೊಟ್ಟವರು. ಇವರಿಬ್ಬರೂ ರಶಿಯನ್ ಅನ್ನುವುದು ಮುಖ್ಯವಲ್ಲ, ಮನುಷ್ಯ ಮನಸ್ಸು ಭಾಷೆಯಲ್ಲಿ ಎಂಥ ಜೀವಂತ ಲೋಕವನ್ನು ಕಟ್ಟಬಹುದು ಅನ್ನುವುದನ್ನು ತೋರಿಸಿ, ಮನುಷ್ಯಕುಲಕ್ಕೇ ಸಲ್ಲುವ ಕೃತಿಗಳನ್ನು ರಚನೆ ಮಾಡಿದ ಚೇತನಗಳು. ಇನ್ನೂ ಮುಖ್ಯವಾದ ಮಾತೆಂದರೆ ಗ್ರೀಕ್ ಮಹಾಕಾವ್ಯ, ಎಲಿಜ಼ಬತ್ ಯುಗದ ಟ್ರಾಜಿಡಿ ಇವೆಲ್ಲ ಯೂರೋಪಿನ ಸೃಷ್ಟಿಗಳು ಅನ್ನುವುದಾದರೆ, ಏಶಿಯಾ ಮತ್ತು ಯೂರೋಪು ಎರಡೂ ಆಗಿರುವ ರಶಿಯಾದ ಈ ಚೇತನಗಳು ಯೂರೋಪಿನ ಸಾಧನೆಗಳನ್ನು ಅರಗಿಸಿಕೊಂಡು ಮರು ರೂಪನೀಡಿ ಏಶಿಯದ ಚಿಂತನೆ, ಬಣ್ಣ, ದರ್ಶನ ಎಲ್ಲ ಸೇರಿ ಮನುಕುಲದ ಕಥೆಗಳನ್ನು ರಚಿಸಿದವು.
ಅಪರಾಧ ಮತ್ತು ಶಿಕ್ಷೆಯಲ್ಲೇ ನೋಡಿ ಎಷ್ಟೊಂದು ಸಾಹಿತ್ಯ ಪ್ರಕಾರಗಳನ್ನು ಒಟ್ಟಿಗೆ ಸೇರಿಸಿ ಹೆಣೆದಿದ್ದಾನೆ ಲೇಖಕ. ಈ ಕಾದಂಬರಿಯ ಒಂದೊಂದು ಅಧ್ಯಾಯವೂ ನಾಟಕದ ಒಂದೊಂದು ದೃಶ್ಯದ ಹಾಗೆ ರಚನೆಗೊಂಡಿದೆ. ಒಂದೊಂದು ದೃಶ್ಯದಲ್ಲೂ ಪಾತ್ರಗಳ ಸಂಭಾಷಣೆಯ ದ್ವಂದ್ವಯುದ್ಧ ನಡೆಯುತ್ತದೆ, ಜನಸಮೂಹದ ಮಧ್ಯೆ ನಡೆಯುವ ’ಕ್ರೌಡ್ ಸೀನ್’ಗಳಿವೆ, ಕನಸು, ಸ್ವಗತಗಳಿವೆ, ನೇರವಾದ ನಿರೂಪಣೆ ಇದೆ, ನಿರೂಪಕ ಮಾಡುವ ವ್ಯಾಖ್ಯಾನಗಳಿವೆ, ಕಥೆಯ ಘಟನೆಗಳು ನಡೆಯುವ ಸ್ಥಳಗಳಿಗೆ (ಉದಾಹರಣೆಗೆ ಮಾರ್ಮೆಲಡೋವ್ ತನ್ನ ಕಥೆ ಹೇಳುವ ಹೆಂಡದಂಗಡಿ, ಸೋನ್ಯಾಳ ವಸತಿ ಇರುವ ವಕ್ರ ಆಕಾರದ ರೂಮು ಇತ್ಯಾದಿ) ಸಾಂಕೇತಿಕ ಅರ್ಥ ದೊರೆಯುವುದೂ ಇದೆ, ಸಮಾನುಕ್ರಮದ ತರ್ಕದ ಪರಿಪಾಲನೆಯಿದೆ, ಪ್ರತಿಯೊಂದು ಪ್ರಮುಖ ಪಾತ್ರವೂ ತನ್ನದಲ್ಲ ವ್ಯಕ್ತಿತ್ವವನ್ನು ಆರೋಪಿಸಿಕೊಂಡು ಬೇರೆಯ ಥರ ವರ್ತಿಸುವುದಿದೆ, ಗ್ರೀಕ್ ನಾಟಕದ ಮೇಳದ ಹಾಗೆ ನಿರೂಪಕನು ಕಾದಂಬರಿಯ ಕ್ರಿಯೆಯ ಬಗ್ಗೆ ವ್ಯಾಖ್ಯಾನ ಮಾಡುವುದಿದೆ, ಕೊಲೆಗಾರನ ಎದುರಿಗೇ ಕೊನೆಯ ವಿವರಗಳನ್ನು ಪೊಲೀಸರು ಚರ್ಚಿಸುವಾಗ ಓದುಗರನ್ನು ವಿಚಲಿತಗೊಳಿಸುವ ವ್ಯಂಗ್ಯವಿದೆ, ಪಾತ್ರಗಳು ಹೇಳುವ ಮಾತಿಗೂ ನಡೆದುಕೊಳ್ಳುವ ರೀತಿಗೂ ವ್ಯತ್ಯಾಸ ಏರ್ಪಟ್ಟು ಬದುಕಿನಲ್ಲಿ ಇರುವಂಥದೇ ಸಂದಿಗ್ಧ ಓದುಗರಿಗೂ ಎದುರಾಗುವುದಿದೆ-ಇದನ್ನೆಲ್ಲ ಭಾಷೆಯಲ್ಲಿ ಕಟ್ಟಿಕೊಡುವ ಕಲ್ಪನಾಶೀಲತೆ, ಬಗೆಬಗೆಯ ಭಾಷೆಯ ಬಳಕೆ ಬೆರಗು ಮೂಡಿಸುತ್ತದೆ. ದಾಸ್ತಯೆವ್‌ಸ್ಕಿ ವಾಸ್ತವತಾವಾದಕ್ಕೆ ಹೊಸ ರೂಪಕೊಟ್ಟ, ಅದು ಟಾಲ್ಸ್ಟಾಯ್ ಕೊಟ್ಟ ರೂಪಕ್ಕಿಂತ ಎಷ್ಟು ಭಿನ್ನ ಅನ್ನುವ ಅಚ್ಚರಿಯೂ ಮೂಡುತ್ತದೆ.
ಓದುಗರು ಸಾಮಾನ್ಯವಾಗಿ ಕೇಳುವ ಪ್ರಶ್ನೆ: ಇಷ್ಟು ದೊಡ್ಡ ಕಾದಂಬರಿ ಓದುವುದು ಕಷ್ಟ, ಹೆಸರು, ಊರು ಎಲ್ಲ ಅಪರಿಚಿತ, ಬೋರಾಗುತ್ತದೆ, ಹೇಗೆ ಓದೋಣ? ನಾವು ಬದುಕುತ್ತಿರುವ ಈ ಕಾಲದಲ್ಲಿ ಕೆಲವು ಕ್ಷಣಗಳಿಗಿಂತ ಯಾವ ಸಂಗತಿಯ ಮೇಲೂ ಗಮನ ಇರಿಸುವುದಕ್ಕೆ ಸಾಧ್ಯವೇ ಆಗುವುದಿಲ್ಲ. ಏಕಾಗ್ರತೆಯನ್ನು ಮಿಲಿಸೆಕೆಂಡುಗಳಲ್ಲಿ ಅಳತೆ ಮಾಡಲು ತೊಡಗಿದ್ದೇವೆ. ಈ ವೇಗದಲ್ಲಿ ಕಳೆದುಹೋಗುವುದು ನಮ್ಮ ಬದುಕು, ಭಾವನೆ ಎಲ್ಲವೂ. ಅವಕಾಶ, ಸಾವಧಾನ ಇವು ಇರದಿದ್ದರೆ ಮನುಷ್ಯ ಸಂಬಂಧವೂ, ಬದುಕಿನ ಪ್ರಶ್ನೆಗಳೂ ನಮ್ಮನ್ನು ಸೋಕುವುದೇ ಇಲ್ಲ. ಟಾಲ್ಸ್ಟಾಯ್ ಮತ್ತು ದಾಸ್ತಯೆವ್‌ಸ್ಕಿ ನಮಗೆ ಸಾವಧಾನದ ಓದನ್ನು ಕಲಿಸುತ್ತಾರೆ, ನಮ್ಮ ಸುತ್ತಲೂ ಇರುವ, ನಮ್ಮೊಳಗಿನ ಲೋಕದ ವಿವರಗಳನ್ನು ಗಮನಿಸಲು ಕಲಿಸುತ್ತಾರೆ. ಸಾಹಿತ್ಯ ಕಲಿಸಬಹುದಾದ ಬಲು ದೊಡ್ಡ ಪಾಠವೇ ಇದು. ನಮಗೆ ನಾವೇ ಬೋರ್ ಆಗಿರುವುದರಿಂದ ಬದುಕೂ ಬೋರ್ ಆಗುತ್ತದೆ. ಮಹಾ ಕೃತಿಗಳನ್ನು ಓದುತ್ತ ನಮ್ಮ ಬಗ್ಗೆ ನಮಗೆ, ನಮ್ಮ ಬದುಕಿನ ಬಗ್ಗೆ ನಮಗೆ ಪ್ರೀತಿ ಹುಟ್ಟುತ್ತದೆ, ಉತ್ಸಾಹ ಹುಟ್ಟುತ್ತದೆ.

ಪ್ರೊ. ಓ ಎಲ್ ನಾಗಭೂಷಣಸ್ವಾಮಿ
ನಾಗಭೂಷಣಸ್ವಾಮಿ ಖ್ಯಾತ ಬರಹಗಾರರು. ’ನನ್ನ ಹಿಮಾಲಯ’, ’ಯುದ್ಧ ಮತ್ತು ಶಾಂತಿ’ (ವಾರ್ ಅಂಡ್ ಪೀಸ್), ನೆರೂಡ ನೆನಪುಗಳು (ಪಾಬ್ಲೋ ನೆರೂಡ ಆತ್ಮಕತೆ), ’ಬೆಂಕಿಗೆ ಬಿದ್ದ ಬಯಲು ಮತ್ತು ಪೆದ್ರೋ ಪರಾಮೋ’ (ಹ್ವಾನ್ ರುಲ್ಫೋನ ಕಥೆಗಳು ಮತ್ತು ಕಾದಂಬರಿ) ಅವರ ಪ್ರಕಟಿತ ಪುಸ್ತಗಳಲ್ಲಿ ಕೆಲವು. ’ಕ್ರೈಂ ಅಂಡ್ ಫನಿಶ್ಮೆಂಟ್’ ಅನುವಾದ ಪ್ರಕಟಣೆಗೆ ಸಿದ್ಧವಾಗಿದೆ.
ಇದನ್ನೂ ಓದಿ: ಅತ್ಯಂತ ಕೆಟ್ಟ ಮನುಷ್ಯನೂ ಕೆಲವು ಬಾರಿ ನಾವು ತಿಳಿದುಕೊಂಡಿರುವುದಕ್ಕಿಂತ ಜಾಸ್ತಿಯೇ ಹೃದಯವಂತನಾಗಿರುತ್ತಾನೆ



ಅವರ ಪುಸ್ತಕ ಗಳು ಕಳುಹಿಸಿ ಸಾರ್