ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಯ ಸಂದರ್ಭದಲ್ಲಿ ಪ್ರಚೋದನಾಕಾರಿ ಹೇಳಿಕೆ ನೀಡಿದ ಆರೋಪದಡಿ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧನಕ್ಕೊಳಗಾಗಿರುವ ಡಾ.ಕಫೀಲ್ ಖಾನ್ ಅವರಿಗೆ ಭದ್ರತೆ ನೀಡಬೇಕೆಂದು ಖಾನ್ ಪತ್ನಿ ಉತ್ತರಪ್ರದೇಶದ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದಾರೆ.
ತಮ್ಮ ಪತಿಯನ್ನು ಮಥುರಾ ಜೈಲಿನಲ್ಲಿ ಭೇಟಿಯಾದ ನಂತರ ಶಬಿಸ್ಟಾ ಖಾನ್ “ತನ್ನ ಗಂಡನ ಜೀವವು ಅಪಾಯದಲ್ಲಿದೆ” ಎಂದು ಹೇಳಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಪ್ರತಿಭಟನೆ ವೇಳೆ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಕ್ಕಾಗಿ ಡಾ.ಕಫೀಲ್ ಖಾನ್ ಅವರನ್ನು ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ ಮುಂಬೈನಲ್ಲಿ ಬಂಧಿಸಿದೆ.
“ನಾವು ಅವರನ್ನು ಮಥುರಾ ಜೈಲಿನಲ್ಲಿ ಭೇಟಿಯಾಗಲು ಹೋದೆವು. ಬಂಧನಕ್ಕೊಳಗಾದ ನಂತರ ಅವರನ್ನು ಜೈಲಿಗೆ ಕರೆತಂದಾಗ, ಐದು ದಿನಗಳ ಕಾಲ ಅವರಿಗೆ ಆಹಾರವನ್ನು ನೀಡಲ್ಲ ಎಂದು ಅವರು ನನಗೆ ಹೇಳಿದರು. ಅವರು ತಂಗಿರುವ ಬ್ಯಾರಕ್ ತುಂಬಾ ಚಿಕ್ಕದಾಗಿದ್ದು, ಸುಮಾರು 100-150 ಜನರನ್ನು ಅಲ್ಲಿ ದಾಖಲಿಸಲಾಗಿದೆ. ಹಾಗಾಗಿ ಅವರ ಜೀವವು ಅಲ್ಲಿ ಅಪಾಯದಲ್ಲಿರಬಹುದು” ಎಂದು ಅವರು ತಮ್ಮ ಪತ್ರದಲ್ಲಿ ಹೇಳಿದ್ದಾರೆ.
ಹಾಗಾಗಿ ವಿಷಯದಲ್ಲಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು ಮಧ್ಯಪ್ರವೇಶಿಸಿ ತಮ್ಮ ಪತಿಗೆ ರಕ್ಷಣೆ ಒದಗಿಸಬೇಕೆಂದು ಅವರು ಮನವಿ ಮಾಡಿದ್ದಾರೆ.


