Homeಮುಖಪುಟಕನ್ನಡಿಗರು ಎಂದೂ ಮರೆಯದ ಡಾ.ರಾಜ್‌ ಅವರ ಟಾಪ್‌-5 ಚಿತ್ರಗಳು!

ಕನ್ನಡಿಗರು ಎಂದೂ ಮರೆಯದ ಡಾ.ರಾಜ್‌ ಅವರ ಟಾಪ್‌-5 ಚಿತ್ರಗಳು!

- Advertisement -
- Advertisement -

‘ಡಾ. ರಾಜ್‌ಕುಮಾರ್‌’ ಕನ್ನಡ ಮತ್ತು ಕನ್ನಡಿಗರ ಮಟ್ಟಿಗೆ ಇದೊಂದು ಮಾಂತ್ರಿಕ ಶಬ್ಧವೇ ಸರಿ. ಕನ್ನಡಿಗರು ಮತ್ತು ಇಡೀ ಕನ್ನಡದ ಚಿತ್ರರಂಗದ ಪಾಲಿಗೆ ದಶಕಗಳ ಕಾಲ ಅಜಾತಶತೃವಿನಂತೆ ಮಿಂಚಿದ್ದ ರಾಜ್‌ಕುಮಾರ್‌ ಸಿನಿಮಾ ಆಚೆಗೂ ಮೇರು ವ್ಯಕ್ತಿತ್ವ. ಕನ್ನಡ ಚಳುವಳಿಗಳಲ್ಲಿ ಇಂದಿಗೂ ಸಹ ಅಳಿಸಿ ಹಾಕಲಾಗದ ಹೆಸರು-ವ್ಯಕ್ತಿತ್ವವಾಗಿದ್ದಾರೆ.

50ರ ದಶಕದಿಂದ ಕಳೆದ ಶತಮಾನದ ಕೊನೆಯ ದಶಕದವರೆಗೂ ರಾಜ್‌ಕುಮಾರ್‌ ನಾಯಕ ನಟನಾಗಿಯೇ ನಟಿಸಿದ್ದರು. ಈ ಅವಧಿಯಲ್ಲಿ ಸುಮಾರು 208 ಚಿತ್ರಗಳಲ್ಲಿ ನಟಿಸಿದ್ದ ಅವರ ಒಂದೊಂದು ಚಿತ್ರವೂ ಅವರ ಅಭಿಮಾನಿಗಳ ಪಾಲಿಗೆ ಪಾಠವೇ ಆಗಿ ಹೋಗಿದೆ. ಓರ್ವ ಮಗನಾಗಿ, ತಂದೆಯಾಗಿ, ಪ್ರಿಯತಮನಾಗಿ, ಸಮಾಜ ಸುಧಾರಕನಾಗಿ, ದೇಶ ಕಾಯುವ ಸೈನಿಕನಾಗಿ, ಸರ್ಕಾರಿ ಅಧಿಕಾರಿಯಾಗಿ, ಶಿಕ್ಷಕನಾಗಿ ಹೀಗೆ ಅವರು ನಿರ್ವಹಿಸಿದ ಎಲ್ಲಾ ಪಾತ್ರದಲ್ಲೂ ಒಂದು ಸಮಾಜಿಕ ಕಳಕಳಿಯನ್ನು ಈ ನಾಡಿಗೆ ಕೊಟ್ಟು ಹೋಗಿದ್ದಾರೆ.

ನೆನಪಿರಲಿ ರಾಜ್‌ಕುಮಾರ್ ನಿಜ ಜೀವನದಲ್ಲಿ ಸಿಗರೇಟ್‌ ಸೇದುತ್ತಿದ್ದರು. ಆದರೆ, ಅದು ತನ್ನ ಅಭಿಮಾನಿಗಳಿಗೆ ಕೆಟ್ಟ ಅನುಕರಣೆಯಾಗಬಾರದು ಎಂಬ ಏಕೈಕ ಕಾರಣಕ್ಕೆ ಅವರು ತೆರೆಯ ಮೇಲೆ ಎಂದಿಗೂ ಸಿಗರೇಟ್‌ ಸೇದುವ ಹಾಗೂ ಮದ್ಯಪಾನ ಮಾಡುವ ದೃಶ್ಯಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಇದು ಅವರ ಸಾಮಾಜಿಕ ಬದ್ಧತೆಯನ್ನು ತೋರಿಸುತ್ತದೆ. ಇಂದು ಅವರ ಜನ್ಮದಿನ. ಆ ನೆಪದಲ್ಲಿ ಡಾ.ರಾಜ್‌ಕುಮಾರ್‌ ಅವರ ಟಾಪ್‌-5 ಅತ್ಯುತ್ತಮ ಚಲನ ಚಿತ್ರಗಳ ಪಟ್ಟಿ ಇಲ್ಲದೆ.

1. ಕಸ್ತೂರಿ ನಿವಾಸ (1971)
ನಿರ್ದೇಶಕ – ದೊರೈ-ಭಗವಾನ್
ಸಂಗೀತ – ಜಿ.ಕೆ.ವೆಂಕಟೇಶ್
ನಿರ್ಮಾಪಕ – ಕೆ.ಸಿ.ಎನ್.ಗೌಡ
ತಾರಾಗಣ – ಡಾ.ರಾಜ್‌ಕುಮಾರ್, ಕೆ.ಎಸ್.ಅಶ್ವತ್, ಜಯಂತಿ, ಭಾರತಿ.

ಕನ್ನಡಿಗರು ಎಂದೂ ಮರೆಯದ ಚಿತ್ರ “ಕಸ್ತೂರಿ ನಿವಾಸ”. ಈ ಚಿತ್ರಕ್ಕಿಂತಲೂ ಹಿಂದೆ ಡಾ.ರಾಜ್‌ಕುಮಾರ್, ಬೇಡರ ಕಣ್ಣಪ್ಪ, ಸತ್ಯ ಹರಿಶ್ಚಂದ್ರ ನಂತಹ ಅದ್ಭುತವಾದ ಪೌರಾಣಿಕ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ರೂ ಸಹ ಕಸ್ತೂರಿ ನಿವಾಸ ಸಿನಿಮಾ ಸೃಷ್ಠಿ ಮಾಡಿದಷ್ಟು ಭಾವನಾತ್ಮಕ ಅಲೆಯನ್ನು ಭಾಗಶಃ ಆ ಕಾಲಘಟ್ಟದಲ್ಲಿ ಯಾವ ಚಿತ್ರವೂ ಸೃಷ್ಠಿಸಿರಲಾರದು.

ಅಣ್ಣಾವ್ರ ಅದ್ಭುತವಾದ ನಟನೆಗೆ ಪ್ರೇಕ್ಷಕರ ಕಣ್ಣಂಚಲ್ಲಿ ನೀರು ಜಿನುಗಿತ್ತು. ಆ ಕಾಲದಲ್ಲೇ ಈ ಚಿತ್ರ ದಾಖಲೆಯ ಗಳಿಕೆ ಕಂಡಿತ್ತು. ಕನ್ನಡ ಚಿತ್ರೋದ್ಯಮದ ಪಾಲಿಗೆ ಈ ಚಿತ್ರ ಈಗಲೂ ಮೈಲುಗಲ್ಲಾದ್ರೆ, ಕನ್ನಡಿಗರು ಹಾಗೂ ಅಣ್ಣಾವ್ರ ಅಭಿಮಾನಿಗಳ ಪಾಲಿಗೆ ಕಸ್ತೂರಿ ನಿವಾಸ ಎಂದೂ ಮರೆಯಲಾರದ ಚಿತ್ರವೇ ಸರಿ.

2 . ಬಂಗಾರದ ಮನುಷ್ಯ (1972)
ನಿರ್ದೇಶನ – ಸಿದ್ದಲಿಂಗಯ್ಯ
ನಿರ್ಮಾಪಕ – ಆರ್.ಲಕ್ಷ್ಮಣ ಗೋಪಾಲ್
ಸಂಗೀತ – ಜಿ.ಕೆ.ವೆಂಕಟೇಶ್
ತಾರಾಗಣ – ಡಾ.ರಾಜ್‌ಕುಮಾರ್, ಭಾರತಿ, ಎಂ.ಎನ್.ಲಕ್ಷ್ಮೀದೇವಿ

“ಬಂಗಾರದ ಮನುಷ್ಯ” ಕನ್ನಡ ಚಿತ್ರರಂಗದ ಪಾಲಿಗೆ ಮೈಲುಗಲ್ಲಾದ ಚಿತ್ರ. ಡಾ.ರಾಜ್‌ಕುಮಾರ್‌ರವರಿಗೆ ಬಂಗಾರದ ಮನುಷ್ಯ ಎಂಬ ಬಿರುದು ತಂದುಕೊಟ್ಟ ಚಿತ್ರ. ನಿರ್ದೇಶಕ ಸಿದ್ದಲಿಂಗಯ್ಯನವರ ಕಲ್ಪನೆಯಲ್ಲಿ ಮೂಡಿಬಂದಿದ್ದ ಬಂಗಾರದ ಮನುಷ್ಯ ಕೃಷಿ ಹಾಗೂ ಅದರ ಮಹತ್ವವನ್ನು ಸಾರುವ ಚಿತ್ರವಾಗಿದ್ದು, ಆ ಕಾಲಕ್ಕೆ ಭಾರೀ ಜನಪ್ರಿಯತೆ ಗಳಿಸಿತ್ತು.

ಈ ಚಿತ್ರವನ್ನು ವೀಕ್ಷಿಸಿದ ಅಸಂಖ್ಯಾತ ಯುವಕರು ಮತ್ತೆ ಹಳ್ಳಿಗಳಿಗೆ ಮರಳಿ ಕೃಷಿಯಲ್ಲಿ ತೊಡಗಿಕೊಂಡರು ಎಂಬುದು ಇತಿಹಾಸ. ಹೀಗೆ ಒಂದು ಚಿತ್ರದ ಮೂಲಕ ಸಾಮಾಜಿಕ ಕ್ರಾಂತಿ ಸಾಧ್ಯ ಎಂಬ ಸಾಧ್ಯತೆಯನ್ನು ಕನ್ನಡಿಗರ ಪಾಲಿಗೆ ಸಾಧಿಸಿ ತೋರಿಸಿದ ಕೀರ್ತಿ ಈ ಚಿತ್ರಕ್ಕೆ ಮತ್ತು ಡಾ.ರಾಜ್‌ಕುಮಾರ್‌ ಎಂಬ ಎರಡು ಶಬ್ಧದ ಶಕ್ತಿಗೆ ಸಲ್ಲುತ್ತದೆ.

3. ಗಂಧದಗುಡಿ (1973)
ನಿರ್ದೇಶಕ – ವಿಜಯ್
ನಿರ್ಮಾಪಕ – ಎಂ.ಪಿ.ಶಂಕರ್
ಸಂಗೀತ – ರಾಜನ್-ನಾಗೇಂದ್ರ
ತಾರಾಗಣ – ಡಾ.ರಾಜ್‌ಕುಮಾರ್, ಡಾ.ವಿಷ್ಣುವರ್ಧನ್, ಕಲ್ಪನಾ.

ಕನ್ನಡ ರಾಜ್ಯೋತ್ಸವ ಸಮಾರಂಭಗಳಲ್ಲಿ ಈಗಲೂ ಕಡ್ಡಾಯ ಹಾಡಾಗಿರುವ “ನಾವಾಡುವ ನುಡಿಯೇ ಕನ್ನಡ ನುಡಿ” ಎಂಬ ಹಾಡು ಎಲ್ಲಿಯವರೆಗೆ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿರುತ್ತದೆಯೋ ಅಲ್ಲಿಯ ವರೆಗೆ “ಗಂಧದಗುಡಿ” ಎಂಬ ಚಿತ್ರ ಜನರ ಸ್ಮೃತಿ ಪಟಲದಿಂದ ಮರೆಯಾಗಲು ಸಾಧ್ಯವೇ ಇಲ್ಲ.

ಇದು ಸ್ಯಾಂಡಲ್‌ವುಡ್ ಇತಿಹಾಸದಲ್ಲಿ ಎರಡು ಮೇರು ಪರ್ವತಗಳಾಗಿರುವ ಡಾ.ರಾಜ್‌ಕುಮಾರ್ ಹಾಗೂ ಡಾ.ವಿಷ್ಣುವರ್ಧನ್ ಒಟ್ಟಿಗೆ ನಟಿಸಿದ ಏಕೈಕ ಚಿತ್ರವೂ ಹೌದು. ಅರಣ್ಯ ಸಂರಕ್ಷಣೆ ಕುರಿತು ಜನರಲ್ಲಿ ಪ್ರಜ್ಞೆ ಮೂಡಿಸಿದ ಈ ಚಿತ್ರ ಆ ಕಾಲದಲ್ಲಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು. ಹಿರಿಯ ನಿರ್ದೇಶಕ ವಿಜಯ್ ವೃತ್ತಿ ಬದುಕಿನ ಅತ್ಯಂತ ಶ್ರೇಷ್ಠ ಚಿತ್ರಗಳ ಪೈಕಿ ಇದಕ್ಕೆ ಅಗ್ರಸ್ಥಾನ. ಆದರೆ ಭವಿಷ್ಯದಲ್ಲಿ ಡಾ.ರಾಜ್‌ಕುಮಾರ್ ಹಾಗೂ ಡಾ.ವಿಷ್ಣುವರ್ಧನ್ ಮತ್ತೊಮ್ಮೆ ಜತೆಯಾಗಿ ನಟಿಸದಿರುವುದು ಕನ್ನಡಿಗರ ಪಾಲಿಗೆ ದುರಾದೃಷ್ಟವೇ ಸರಿ.

4. ಒಂದು ಮುತ್ತಿನ ಕಥೆ (1987)
ನಿರ್ದೇಶಕ – ಶಂಕರ್‌ನಾಗ್
ನಿರ್ಮಾಪಕ – ಎ.ದ್ವಾರಕಾನಾಥ್
ಸಂಗೀತ – ಎಲ್.ವೈದ್ಯನಾಥ್
ತಾರಾಗಣ – ಡಾ.ರಾಜ್, ಅರ್ಚನಾ

ಒಂದು ಮುತ್ತಿನ ಕಥೆ” ಶಂಕರ್‌ನಾಗ್ ನಿರ್ದೇಶನದ ಕೊನೆಯ ಚಿತ್ರ. ಅನೇಕ ಕಾರಣಗಳಿಗಾಗಿ ಇದು ಕನ್ನಡದ ಮಹತ್ವದ ಚಿತ್ರಗಳಲ್ಲೊಂದು. ಕನ್ನಡದ ಕ್ರಿಯಾಶೀಲ ಕಲಾವಿದ ಹಾಗೂ ನಿರ್ದೇಶಕ ಎಂದೇ ಹೆಸರಾದ ಶಂಕರ್‌ನಾಗ್ ಈ ಚಿತ್ರದ ಮೂಲಕ ಕನ್ನಡದ ಚಿತ್ರರಂಗವನ್ನು ತಾಂತ್ರಿಕವಾಗಿ ಉನ್ನತ ಮಟ್ಟಕ್ಕೆ ಏರಿಸಿದ್ದರು.

ಡಾ.ರಾಜ್‌ಕುಮಾರ್ ಅಭಿನಯದ ಈ ಚಿತ್ರದಲ್ಲಿ ಮೊದಲ ಬಾರಿಗೆ ನೀರಿನ ಆಳದಲ್ಲಿ ಚಿತ್ರಿಸಲಾಗಿತ್ತು. ಸಮುದ್ರದಾಳದಲ್ಲಿ ನಾಯಕ ಕೃತಕ ಆಕ್ಟೋಪಸ್ ಜತೆಗೆ ಸಾಹಸ ಮಾಡುವ ಹಲವು ದೃಶ್ಯಗಳನ್ನು ಸೆರೆ ಹಿಡಿಯಲಾಗಿತ್ತು. ಆ ಕಾಲಕ್ಕೆ ಇದು ಕನ್ನಡ ಚಿತ್ರರಂಗಕ್ಕೆ ತಾಂತ್ರಿಕವಾಗಿ ಹೊಸ ಭಾಷ್ಯ ಬರೆದ ಚಿತ್ರವಾಗಿತ್ತು.

ತಾಂತ್ರಿಕವಾಗಿ ಮಾತ್ರವಲ್ಲದೆ ಚಿತ್ರದ ಕಥೆಯನ್ನೂ ಸಹ ಶಂಕರ್‌ನಾಗ್ ಮನೋಜ್ಞವಾಗಿ ಚಿತ್ರಿಸಿದ್ದರು. ಮುತ್ತಿನ ಶಿಕಾರಿಗೆ ಹೋಗುವ ನಾಯಕನಿಗೆ ದೊಡ್ಡ ಗಾತ್ರದ ಅಪರೂಪದ ಮುತ್ತು ಸಿಗುತ್ತಿದೆ. ಆದರೆ ಅನಕ್ಷರಸ್ಥರಾದ ಈ ಬುಡಕಟ್ಟು ಸಮಾಜದವರನ್ನು ವ್ಯಾಪಾರಿಗಳು ಹೇಗೆಲ್ಲ ಮೋಸ ಮಾಡಿ ಕೊಳ್ಳೆ ಹೊಡೆಯಲು ಪ್ರಯತ್ನಿಸುತ್ತಾರೆ. ಕೊನೆಗೆ ನಾಯಕ ಆ ಮುತ್ತನ್ನು ಏನು ಮಾಡುತ್ತಾನೆ ಎಂಬ ಅಂಶವನ್ನು ಮನಮುಟ್ಟುವಂತೆ ಚಿತ್ರಿಸಲಾಗಿತ್ತು.

ಚಿತ್ರ ಬಿಡುಗಡೆಯಾದಾಗ ಡಾ.ರಾಜ್ ನಟನೆ ಹಾಗೂ ಶಂಕರ್‌ನಾಗ್ ಕ್ರಿಯಾಶೀಲತೆಗೆ ವಿಮರ್ಶಕರಿಂದ ಬಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಆದ್ರೆ ಡಾ.ರಾಜ್‌ಕುಮಾರ್ ರಂತಹ ಘಟಾನುಘಟಿ ನಟಿಸಿಯೂ ಸಹ ಈ ಚಿತ್ರ ನಿರೀಕ್ಷಿತ ಗೆಲುವು ಸಾಧಿಸುವಲ್ಲಿ ವಿಫಲವಾಗಿತ್ತು. ಒಟ್ಟಾರೆ ಕನ್ನಡಿಗರು ನೋಡಲೇಬೇಕಿದ್ದ ಗೆಲ್ಲಿಸಲೇಬೇಕಿದ್ದ ಅಪರೂಪದ ಚಿತ್ರವೊಂದು ಸೋಲಿನ ರುಚಿ ಕಂಡಿದ್ದು ಮಾತ್ರ ವಿಪರ್ಯಾಸ.

5. ಜೀವನ ಚೈತ್ರ (1992)
ನಿರ್ದೇಶಕ – ದೊರೆ-ಭಗವಾನ್
ನಿರ್ಮಾಪಕರು – ಪಾರ್ವತಮ್ಮ ರಾಜ್‌ಕುಮಾರ್
ಸಂಗೀತ – ಉಪೇಂದ್ರ ಕುಮಾರ್
ತಾರಾಗಣ – ಡಾ.ರಾಜ್, ಮಾಧವಿ, ಸುಧಾರಾಣಿ

ಕನ್ನಡ ಚಿತ್ರರಂಗದಲ್ಲಿ ಸಾಮಾಜಿಕ ಕಳಕಳಿಯನ್ನು ಪರಿಣಾಮಕಾರಿಯಾಗಿ ಜನರಿಗೆ ಮುಟ್ಟಿಸಿದ ಹಾಗೂ ಆ ಮೂಲಕ ಕೆಲವು ಪರಿಣಾಮಕಾರಿ ಸಾಮಾಜಿಕ ಬದಲಾವಣೆಗೆ ಕಾರಣವಾದ ಕೆಲವೇ ಕೆಲವು ಚಿತ್ರಗಳ ಪೈಕಿ ಜೀವನ ಚೈತ್ರ ಸಹ ಒಂದು.

ಈ ಚಿತ್ರದಲ್ಲಿ ಡಾ.ರಾಜ್‌ಕುಮಾರ್ ಮದ್ಯ ಸೇವನೆಯ ವಿರುದ್ಧ ಹೋರಾಡುವ ಪಾತ್ರದಲ್ಲಿಅಭಿನಯಿಸಿದ್ದರು. ಚಿತ್ರದ ನಾಯಕಿ ಮಾಧವಿ. ಸತತ ಮೂರು ವರ್ಷ ಯಾವುದೇ ಸಿನಿಮಾದಲ್ಲಿ ನಟಿಸದ ರಾಜ್‌ಕುಮಾರ್‌ ಈ ಚಿತ್ರದ ಮೂಲಕ ತೆರೆಗೆ ಮರಳಿದ್ದರು. ಅಲ್ಲದೆ, ಈ ಚಿತ್ರ ವರ್ಷಗಳ ಕಾಲ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣುವ ಮೂಲಕ ದಾಖಲೆ ಬರೆದಿತ್ತು.

ಈ ಚಿತ್ರ ವಿಶಾಲಾಕ್ಷಿ ದಕ್ಷಿಣಾಮೂರ್ತಿ ಅವರ ಇದೇ ಹೆಸರಿನ ಕಾದಂಬರಿ ಆಧಾರಿತ ಚಲನಚಿತ್ರ ಎಂಬುದು ವಿಶೇಷ. ಈ ಚಿತ್ರದ ಪರಿಣಾಮವಾಗಿ ಕರ್ನಾಟಕದಲ್ಲಿ ಹಲವಾರು ಹೆಂಡದಂಗಡಿಗಳು ಮುಚ್ಚಲ್ಪಟ್ಟವು ಹಾಗೂ ಡಾ.ರಾಜ್ ಹಲವು ಅಭಿಮಾನಿಗಳು ಮದ್ಯಪಾನ ತ್ಯಜಿಸಿದರೆಂದು ಅಂದಿನ ದಿನಪತ್ರಿಕೆಗಳಲ್ಲಿ ಪ್ರಕಟವಾಗಿತ್ತು.

ಈ ಚಿತ್ರದ “ನಾದಮಯ” ಗೀತೆಗಾಗಿ ರಾಜ್ ಕುಮಾರ್ 40ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿಗೆ ಭಾಜನರಾದರು.


ಇದನ್ನೂ ಓದಿ: ಸಿನೆಮಾದ ಮೂಲಕ ಜಾತಿ ಮುಕ್ತ ಸಮಾಜ ಕಟ್ಟಲೊರಟ ಅಂಬೇಡ್ಕರ್‌ವಾದಿ ನಿರ್ದೇಶಕ ಪ.ರಂಜಿತ್‌…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...