ರಾಷ್ಟ್ರೀಯ ಸ್ವಯುಂ ಸೇವಕ ಸಂಘದ (ಆರ್‌ಎಸ್‌ಎಸ್) ಪಥಸಂಚಲನದಲ್ಲಿ ಗಣವಸ್ತ್ರ ಧರಿಸಿ ಭಾಗಿಯಾಗಿದ್ದ ತಿಪಟೂರಿನ ವೈದ್ಯ ಶ್ರೀಧರ್ ಹೆಸರನ್ನು ಸರ್ಕಾರದ ‘ಯಶಸ್ವಿನಿ ಟ್ರಸ್ಟ್’ನಿಂದ ತೆಗೆದುಹಾಕಲಾಗಿದೆ. ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಭಾಗಿಯಾಗಿದ್ದ ವೈದ್ಯರಿಗೆ ಟ್ರಸ್ಟಿಯಾಗಿ ನೇಮಿಸಲಾಗಿತ್ತು; ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು.
ಇದು ಕಾಂಗ್ರೆಸ್ ಪಕ್ಷವು ಹೊಂದಿರುವ ಕೋಮುವಾದಿ ವಿರೋಧಿ ಮತ್ತು ಸಾಮರಸ್ಯ ನೀತಿಗೆ ವಿರುದ್ಧವಾಗಿದೆ. ತಕ್ಷಣವೇ ಡಾ. ಶ್ರೀಧರ್ ಅವರನ್ನು ಟ್ರಸ್ಟಿಯಾಗಿ ನೇಮಿಸಿ ಹೊರಡಿಸಿರುವ ಸುತ್ತೋಲೆಯನ್ನು ಹಿಂಪಡೆಯಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸಿ.ಬಿ ಶಶಿಧರ್ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಒತ್ತಾಯಿಸಿದ್ದರು.
ತೀವ್ರ ವಿರೋಧಗಳ ಬೆನ್ನಲ್ಲೇ ಯಶಸ್ವಿನಿ ಟ್ರಸ್ಟ್‌ನ ಟ್ರಸ್ಟಿ ಸ್ಥಾನದಿಂದ ವೈದ್ಯ ಶ್ರೀಧರ್ ಹೆಸರನ್ನು ಕೈಬಿಡಲಾಗಿದೆ. ಈ ಸಂಬಂಧ ಸರ್ಕಾರ ಆದೇಶವನ್ನು ಹೊರಡಿಸಿದ್ದು, “ಆಡಳಿತಾತ್ಮಕ ದೃಷ್ಟಿಯಿಂದ ಈ ಹಿಂದಿನ ಆದೇಶವನ್ನು ಮಾರ್ಪಡಿಸಿ, ಡಾ. ಶೀಧರ್ ಅವರ ಹೆಸರನ್ನು ಕೈಬಿಡಲಾಗಿದೆ” ಎಂದು ತಿಳಿಸಿದೆ.
ಈ ಹಿಂದಿನ ಆದೇಶ ಖಂಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಶಶಿಧರ್, “ಅಕ್ಟೋಬರ್ 12ರಂದು ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ಆರ್‌ಎಸ್‌ಎಸ್ ಪಥಸಂಚಲನ ಆಯೋಜಿಸಿತ್ತು. ಆ ಕಾರ್ಯಕ್ರಮದಲ್ಲಿ ಕುಮಾರ್ ಆಸ್ಪತ್ರೆಯ ಡಾ. ಶ್ರೀಧರ್ ಅವರು ಗಣವೇಶ ಧರಿಸಿ ಭಾಗಿಯಾಗಿದ್ದರು. ಮಾತ್ರವಲ್ಲದೆ, ಆ್ಯಂಬುಲೆನ್ಸ್‌ಅನ್ನೂ ಕೊಂಡೊಯ್ದಿದ್ದರು. ಅವರನ್ನು ಸರ್ಕಾರದ ‘ಯಶಸ್ವಿನಿ ಟ್ರಸ್ಟ್’ಗೆ ಟ್ರಸ್ಟಿಯಾಗಿ ನೇಮಿಸುವಂತೆ ಕಾಂಗ್ರೆಸ್ ಶಾಸಕ ಪಡಕ್ಷರಿ ಅವರು ಶಿಫಾರಸು ಮಾಡಿದ್ದರು. ಅವರ ಶಿಫಾರಸಿನಂತೆ ಸರ್ಕಾರವು ಡಾ. ಶ್ರೀಧರ್ ಅವರನ್ನು ಟ್ರಸ್ಟಿಯಾಗಿ ನೇಮಿಸಿದೆ. ಇದು, ಕಾಂಗ್ರೆಸ್ ಕಾರ್ಯಕರ್ತರಲ್ಲಿ ಕಳವಳ ಹುಟ್ಟುಹಾಕಿದೆ” ಎಂದು ತಿಳಿಸಿದ್ದರು.
“ಕೋಮುವಾದಿ ಸಂಘ ಪರಿವಾರದ (ಆರ್ ಎಸ್ ಎಸ್) ವಿರುದ್ಧ ಕಾಂಗ್ರೆಸ್ ನಾಯಕತ್ವ ರಾಜ್ಯ ಮತ್ತು ದೇಶವ್ಯಾಪಿ ಸಮರ ಸಾರಿರುವ ಸಂದರ್ಭದಲ್ಲಿ ತಿಪಟೂರು ಕಾಂಗ್ರೆಸ್ ಶಾಸಕ ಷಡಕ್ಷರಿಯವರು ಪಕ್ಷದ ಸಿದ್ಧಾಂತಗಳಿಗೆ ವ್ಯತಿರಿಕ್ತ ಎನ್ನಿಸುವ ನಡೆಗಳನ್ನು ಅನುಸರಿಸುತ್ತಿರುವುದು ಆಘಾತಕಾರಿ” ಎಂದು ಅವರು ಬೇಸರ ವ್ಯಕ್ತಪಡಿಸಿದ್ದರು.
“ಇತ್ತೀಚೆಗೆ (ಅಕ್ಟೋಬರ್ 12 ರಂದು) ತಿಪಟೂರು ಪಟ್ಟಣದಲ್ಲಿ ಆರ್ ಎಸ್ ಎಸ್ ಗಣವೇಶಧಾರಿಯಾಗಿ ಪಥಸಂಚಲನದ ಮುಂಚೂಣಿಯಲ್ಲಿ ಭಾಗವಹಿಸಿದ ಡಾ. ಶ್ರೀಧರ್ ಅವರಿಗೆ ರಾಜ್ಯ ಸರ್ಕಾರದ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯ ಯಶಸ್ವಿ ಅನುಷ್ಟಾನಕ್ಕಾಗಿ ರೂಪಿಸಿದ ಸಹಕಾರ ಇಲಾಖೆಯ ಯಶಸ್ವಿನಿ ಟ್ರಸ್ಟ್ ನ ಟ್ರಸ್ಟಿಯಾಗಿ ನೇಮಕ ಮಾಡಿದ್ದು, ಅವರ ಹೆಸರು ಶಿಫಾರಸ್ಸು ಮಾಡಿದ ಶಾಸಕ ಷಡಕ್ಷರಿ ಅವರ ಕ್ರಮದಿಂದ ಕಾಂಗ್ರೆಸ್ ಕಾರ್ಯಕರ್ತರಿಗೆ ತೀವ್ರ ಮುಜುಗರ ಉಂಟಾಗಿದೆ” ಎಂದು ಅವರು ಹೇಳಿದ್ದರು.
“ಸ್ವತಃ ಮುಖ್ಯಮಂತ್ರಿಗಳಾದ ತಾವು ಪ್ರಧಾನ ಪೋಷಕರಾಗಿರುವ ಈ ಟ್ರಸ್ಟ್ ಗೆ ಸಂಘ ಪರಿವಾರದ ಕಟ್ಟಾ ಕಾರ್ಯಕರ್ತ ಡಾ ಶ್ರೀಧರ್ ಅವರನ್ನು ಟ್ರಸ್ಟಿಯಾಗಿಸಿ ಹೊರಡಿಸಿದ ಇತ್ತೀಚಿನ ಸುತ್ತೋಲೆಯನ್ನು ಮುಖ್ಯಮಂತ್ರಿಗಳಾದ ತಾವು ಹಾಗೂ ಕೆಪಿಸಿಸಿ ಅಧ್ಯಕ್ಷ ಹಾಗು ಉಪ ಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ್ ಅವರು ಗಮನಿಸಿಲ್ಲವೇ ಎನ್ನುವುದು ತಿಪಟೂರು ಮತ್ತು ತುಮಕೂರು ಜಿಲ್ಲೆಯ ನಿಷ್ಠಾವಂತ ಕಾಂಗ್ರೆಸ್ ಧುರೀಣರಲ್ಲಿ ಹಾಗೂ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಿದೆ” ಎಂದು ಪತ್ರದಲ್ಲಿ ಬರೆದಿದ್ದಾರೆ.
“ತಿಪಟೂರು ಕಾಂಗ್ರೆಸ್ ಶಾಸಕ ಷಡಕ್ಷರಿ ಮುತುವರ್ಜಿ ವಹಿಸಿ ಸಂಘ ಪರಿವಾರಕ್ಕೆ ಸೇರಿದ ತಿಪಟೂರಿನ ಕುಮಾರ್ ಆಸ್ಪತ್ರೆಯ ಡಾ. ಶ್ರೀಧರ್ ಹೆಸರನ್ನು ಯಶಸ್ವಿನಿ ಟ್ರಸ್ಟ್ ಗೆ ಶಿಫಾರಸ್ಸು ಮಾಡಿದ್ದು ಈಗ ಗುಟ್ಟಾಗಿ ಉಳಿದಿಲ್ಲ. ಕೋಮುವಾದಿಗಳ ಪರ ಎನ್ನಿಸುವ ಶಾಸಕರ ಇಂಥ ಧೋರಣೆಯನ್ನು ಸಹಿಸಲು ಅಸಾಧ್ಯ ಎಂದು ಕಾಂಗ್ರೆಸ್ ಕಾರ್ಯಕರ್ತರು ನನ್ನ ಬಳಿ ದೂರಿ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿಯೂ ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇದರಿಂದ ಕಾಂಗ್ರೆಸ್ ಪಕ್ಷದ ಕೋಮುವಾದ ವಿರೋಧಿ ನಿಲುವಿಗೆ, ಸಾಮರಸ್ಯ ನೀತಿಗೆ ಮತ್ತು ಘನತೆಗೆ ಚ್ಯುತಿ ಬಂದಂತಾಗಿದೆ. ತಿಪಟೂರು ತಾಲ್ಲೂಕಿನ ಹಾಗೂ ತುಮಕೂರು ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರ ಇಂಥ ಆಕ್ರೋಶ ಮತ್ತು ಅಸಮಾಧಾನಗಳನ್ನು ಕೆಪಿಸಿಸಿಯ ಒಬ್ಬ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷದ ಹೈಕಮಾಂಡ್ ಗಮನಕ್ಕೆ ತರುವುದು ನನ್ನ ನೈತಿಕ ಹೊಣೆಗಾರಿಕೆ ಎಂದು ಭಾವಿಸಿದ್ದೇನೆ” ಎಂದು ಅವರು ಹೇಳಿದ್ದಾರೆ.
“ಕೂಡಲೇ ಈ ಸುತ್ತೋಲೆ ವಾಪಸ್ ಪಡೆದು ಕ್ಷೇತ್ರದ ಕಾರ್ಯಕರ್ತರನ್ನು ತೀವ್ರ ಮುಜುಗರದಿಂದ ಪಾರು ಮಾಡುವಂತೆ ತಮ್ಮಲ್ಲಿ ಕಳಕಳಿಯ ಮನವಿ ಮಾಡುತ್ತಿದ್ದೇನೆ” ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.


